ಜಾಗತಿಕ ಮಟ್ಟದಲ್ಲಿ ಕೇವಲ ಒಂದೇ ಒಂದು ದೇಶದ ಪ್ರಧಾನ ಭಾಷೆಯಾದ ಇಂಗ್ಲಿಷ್ ಅನ್ನು ಆಧುನಿಕತೆ , ಪ್ರಗತಿ, ಗ್ಲೋಬಲೈಸೇಶನ್ ಪ್ರತೀಕವೆಂದು ಹೊಗಳಿ ಅಟ್ಟಕ್ಕೇರಿಸಲಾಯ್ತು . ಅದರಲ್ಲೂ ವಸಾಹತುಶಾಹಿತ್ವದಿಂದ ವಿಶ್ವದ ನೂರಾರು ದೇಶಗಳ ಮೇಲೆ ದಬ್ಬಾಳಿಕೆ ನಡೆಸಿ ಆಯಾ ದೇಶಗಳ ಮೂಲ ಸಂಸ್ಕೃತಿ ಮತ್ತು ಚಿಂತನಾ ಲಹರಿಯನ್ನೇ ಬದಲಾಯಿಸಿದ ಇಂಗ್ಲೆಂಡ್ ದೇಶದ ಒಂದು ಭಾಷೆಗೆ ಇಲ್ಲಿಲ್ಲದ ಪ್ರಾಮುಖ್ಯತೆಯನ್ನು ಜಗವು ನೀಡಿದೆ.
ವಾಸ್ತವಿಕವಾಗಿ ಜಗತ್ತಿನ ೧೯೭(197) ದೇಶಗಳ ಪೈಕಿ , ಕೇವಲ ೬೦(60) ದೇಶಗಳಲ್ಲಿ ಆಂಗ್ಲ ಭಾಷೆಯ ಸಾಮಾನ್ಯ ಪರಿಚಯವಿರುವುದು ಕಂಡುಬರುತ್ತದೆ . ಈ ಪೈಕಿ ಆಂಗ್ಲ ಭಾಷೆಯನ್ನೇ ಮಾತೃಭಾಷೆಯನ್ನಾಗಿ ಹೊಂದಿರುವ ದೇಶಗಳು ಕೇವಲ ೧೬(16)! ಆದರೂ , ಈ ವಾಸ್ತವ ಮುಚ್ಚಿಟ್ಟು ಆಂಗ್ಲಗತಪ್ರಾಣರಾದ ನಮ್ಮವರೆ ಆಗಿರುವ ಶಾಲೆ-ಕಾಲೇಜು-ಚಿತ್ರ-ಮಾಧ್ಯಮ ಲೋಕದ ಜನರ ಮೇಲೆ ಬರುತ್ತಿರುವ ಅಪನಂಬಿಕೆ ಏನೆಂದರೆ 'ಜಗತ್ತಿನಾದ್ಯಂತ ಮುಂದುವರಿದ ದೇಶಗಳು ಪ್ರತಿನಿಧಿಸಿ ನಿತ್ಯಬದುಕಲ್ಲಿ ಅಂತರ್ಗತವಾಗಿಸಿಕೊಂಡಿಹ ಈ ಭಾಷೆಯನ್ನು ಬಿಟ್ಟು ಭಾರತಕ್ಕೆ ಬೇರಾವ ಗತಿಯೇ ಇಲ್ಲವೆಂಬುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಜೊತೆಗೆ ಆ ಭಾಷೆಯ ಸ್ವಯಂ ಘೋಷಿತ ರಾಯಭಾರಿಗಳಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದಾರೆ.
ಆದರೆ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಾದ ಜಪಾನ್, ಚೀನ, ಫ್ರಾನ್ಸ್ , ಜರ್ಮನಿಗಳಲ್ಲೂ ಆಂಗ್ಲ ಭಾಷೆಯು ಕೇವಲ ವಿದೇಶಿ ವ್ಯವಹಾರಕ್ಕಷ್ಟೇ ಸೀಮಿತ ಎನ್ನುವುದನ್ನು ನಾವು ಮರೆಯಬಾರದು.
ಆಂಗ್ಲ ಭಾಷೆಯನ್ನು ಕಲಿಯುವುದು ಬೇಡವೆಂದಲ್ಲ, ಆದರೆ ಅದೊಂದು ವಿದೇಶಿ ವ್ಯವಹಾರದ ಮಾಧ್ಯಮವಾಗಿರಲಿ ಸಾಕು. ನಮ್ಮ ಆಲೋಚನೆ,
ಅಧ್ಯಯನ, ಜೀವನಶೈಲಿಗಳನ್ನು ಆ ಭಾಷೆ ಸಂಕ್ರಮಿಸಲು ಅವಕಾಶವನ್ನೇಕೆ ಕೊಡಬೇಕು? ಮನೆಯಲ್ಲಿ ಅಂಬೆಗಾಲಿನ ಶಿಶುವಿಗೆ ಕಮ್- ಗೋ , ಸಿಟ್-ಸ್ಟ್ಯಾಂಡ್, ಈಟ್-ಡ್ರಿಂಕ್ ಎಂದೇ ಮಾತನಾಡಿಸುವ ರೂಢಿ ನಮ್ಮಲ್ಲೇಕೆ ಬೆಳೆಯುತ್ತಿದೆ? ನಮ್ಮ ಟಿ.ವಿ ನಿರೂಪಕ-ನಿರೂಪಕಿಯರ ಕನ್ನಡದಲ್ಲಂತೂ ಕನ್ನಡವನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾಗಿದೆ . ಹಾಯ್ ಫ್ರೆಂಡ್ಸ್ !
ಹೌ ಆರ್ ಯು? ಗುಡ್ ಮಾರ್ನಿಂಗ್ ! ಥ್ಯಾಡ್ಟ್ಸ ಗ್ರೇಟ್.... ಬೀದಿಗಳಲ್ಲಿ , ವಿದ್ಯಾಲಯಗಳ ಬದಿಯಲ್ಲಿ ನಿಂತು ಹರಟುವ ಮಕ್ಕಳ ಮಾತುಗಳಲ್ಲೂ ಆಂಗ್ಲ ಭಾಷೆಯ ಗುಂಗೇ ಆವರಿಸಿಕೊಂಡಿದೆ . ತಾವು ನಿಂತಿರುವ ಜಾಗ, ಅನ್ನಕೊಟ್ಟ ಭೂಮಿ, ರಂಗ ಮತ್ತು ಕೈ ಹಿಡಿದ ಜನಮಾನಸದ ನಾಡಿಮಿಡಿತವನ್ನು ಅರಿಯದ ಇಂತವರನ್ನು ನಾವು ಆದರ್ಶವೆಂದು ಪರಿಗಣಿಸಬೇಕೇ?
ಇದೆಲ್ಲ ʼಕಾಲಕ್ಕೆ ತಕ್ಕಂತೆ ಬದಲಾಗುವ ವಿಷಯʼ ಎಂದು ತಳ್ಳಿಹಾಕದಿರಿ . ಇದು ವಾಸ್ತವಿಕವಾಗಿ ನಮ್ಮ ಭಾಷೆಯ ಕೊಲೆ, ನಮ್ಮ ಗಮನಕ್ಕೆ ಬಾರದಂತೆ ವ್ಯವಸ್ಥಿತವಾಗಿ ನಮ್ಮದೇ ಮಾತೃ ಭಾಷೆಯನ್ನು ನಮ್ಮ ಕೈಯಲ್ಲೇ ಕೊಲ್ಲುವಂತಹ ಪ್ರಸಂಗಗಳನ್ನು ಸೃಷ್ಟಿಸಲಾಗುತ್ತಿದೆ.
ಮನೆಯಲ್ಲಿ ಕನ್ನಡದ ಪದಗಳ ಬಳಕೆ ಹೆಚ್ಚಿಸಿಕೊಳ್ಳುತ್ತ , ಶಾಲೆ- ಮಹಾವಿದ್ಯಾಲಯಗಳಲ್ಲೂ ಕನಿಷ್ಠ ವಿರಾಮ ಕಾಲದಲ್ಲಾದರೂ ಕನ್ನಡೇತರ ಪದಗಳನ್ನು, ಮುಖ್ಯವಾಗಿ ಆಂಗ್ಲಭಾಷೆಯ ಪಿಡುಗನ್ನು ಹಠತೊಟ್ಟು ನಿವಾರಿಸುತ್ತ , ನಮ್ಮ ಸಹಪಾಠಿಗಳು , ಅಣ್ಣಂದಿರು - ಅಕ್ಕಂದಿರು , ಓದುಗರು ಸೇರಿ ಶ್ರಮಿಸಬೇಕು.
ಇಷ್ಟೂ ಮಾಡದಿದ್ದರೇ ನವೆಂಬರ್ ೧ ರಂದು ಮಾತ್ರ ಕನ್ನಡಾಂಬೆಯ ಎದುರು ನಿಂತು ಕನ್ನಡತನದ ನಾಟಕವಾಡುವುದು ನಮ್ಮ ಸ್ವಾಭಿಮಾನಕ್ಕೆ ಮಾಡುವ ದ್ರೋಹವೆನಿಸುವುದಿಲ್ಲವೇ?
- ಅಖಿಲೇಶ್ . ಜೈನ್











