ಮಮ್ಮುಟ್ಟಿ ಎಂಬ ನಟ ರಾಕ್ಷಸನ ಅನಾವರಣಗೊಳಿಸುವ ಎರಡು ವಿಭಿನ್ನ ಕಾಲಘಟ್ಟದ ಸಿನಿಮಾಗಳು

    2024 ರಲ್ಲಿ ತೆರೆಕಂಡ ಮಾಲಿವುಡ್ ನ ಚಿರ ಯೌವ್ವನದ ನಟ ಮುಮ್ಮುಟಿ  ಅವರ ಅಭಿನಯದ ಮೊನೋಕ್ರೋಮ್ ಮಲಯಾಳಂ ಚಿತ್ರ ‘ಭ್ರಮಾಯುಗಮ್’ ಸಿನಿಮಾದ ಕೆಲವೊಂದು ಫ್ರೇಮ್‌ಗಳು ಮುಮ್ಮೂಟಿಯವರದ್ದೇ ಅಭಿನಯದ 1994 ರಲ್ಲಿ ತೆರೆಕಂಡ ‘ವಿಧೇಯನ್’ ಚಲನಚಿತ್ರದಿಂದ ಸಾಕಷ್ಟು ಪ್ರೇರಿತವಾಗಿದೆ. ಕೆಲವು ದಿನಗಳ ಹಿಂದೆ ನಮ್ಮ ಪ್ರಾಧ್ಯಾಪಕರಾದ ರಕ್ಷಿತ್ ರೈ ಸರ್, ‘ವಿಧೇಯನ್’ ಸಿನಿಮಾದ ಕೆಲವೊಂದು ತುಣುಕುಗಳನ್ನು ಸ್ಟುಡಿಯೋದಲ್ಲಿ ನಮಗೆ ತೋರಿಸಿ ‘ಭ್ರಮಾಯುಗಮ್’ ನೋಡಿದವರು ಒಮ್ಮೆ ಈ ಸಿನಿಮಾ ಕೂಡ ನೋಡಿ ಎಂದು ಸಲಹೆ ನೀಡಿದ್ದರು. ಹಾಗಾಗಿಯೇ ಅವರು ಹೇಳಿದ ದಿನವೇ ನೋಡಿ ಮುಗಿಸಿದ್ದು ಮಲಯಾಳಂನ ಖ್ಯಾತ ನಿರ್ದೇಶಕ ಅಡೂರ್ ಗೋಪಾಲ್ ಕೃಷ್ಣನ್‌ರವರ ನಿರ್ದೇಶನದ ‘ವಿಧೇಯನ್’
ಮೊದಲಿಗೆ ‘ಭ್ರಮಾಯುಗಮ್’ ಬಗ್ಗೆ ಮಾತನಾಡುವುದಾದರೆ ಇದೊಂದು ‘ಟೆಕ್ನಿಕಲಿ ಬ್ರಿಲಿಯಂಟ್’ ಅನ್ನಿಸಿಕೊಳ್ಳೋ‌ ಸಿನಿಮಾ. ಇಡೀ ಸಿನಿಮಾವನ್ನು ಮೊನೊಕ್ರೋಮ್‌ನಲ್ಲಿ ಚಿತ್ರಿಸಿ ಬಿಡುಗಡೆ ಮಾಡಿದ ಚಿತ್ರತಂಡದ ಧೈರ್ಯ ಮೆಚ್ಚಲೇ ಬೇಕಾದದ್ದು...! ಇನ್ನೂ ಇಡೀ ಚಿತ್ರವನ್ನು ‘ಅಯ್ಯೋ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದೇ ತಪ್ಪು ಮಾಡಿಬಿಟ್ಟೆ’ ಎಂಬಂತೆ ಉದ್ಘರಿಸುವಂತೆ ಮಾಡುವುದು ಚಿತ್ರದ ಸಂಗೀತ ಹಾಗೂ ವಿಷುವಲ್ಸ್...! 
ಇಡೀ ಭ್ರಮಾಯುಗಮ್ ಸಿನಿಮಾದ 90 ಕ್ಕೂ ಹೆಚ್ಚು ಭಾಗ ಕಾಣಿಸಿಕೊಳ್ಳೊದು ಮೂರೇ ಪಾತ್ರಗಳು. ಒಂದು ಮುಮ್ಮೂಟಿ ಅವರು ನಿರ್ವಹಿಸಿದ ಕುಡುಮನ್ ಪೋಟ್ಟಿ, ನಿರಾಶ್ರಿತನಾದ ತೇವನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅರ್ಜುನ್ ಅಶೋಕನ್ ಹಾಗೂ ಅಡುಗೆ ಕೆಲಸದವನ ಪಾತ್ರ ನಿರ್ವಹಿಸಿರುವ ಸಿದ್ಧಾರ್ಥ್. ಆದರೆ ಚಿತ್ರದುದ್ದಕ್ಕೂ ಸುರಿಯುವ ಮಳೆಯಂತೆಯೇ, ಇಡೀ ಚಿತ್ರದುದ್ದಕ್ಕೂ ಈ ಮೂವರು ಒಬ್ಬರಿಗೊಬ್ಬರು ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಸ್ಫರ್ಧಿಸುತ್ತಿದ್ದಾರೋ ಎಂಬಂತೆ ವೈಟ್ ಆ್ಯಂಡ್ ಬ್ಲಾಕ್ ಸಿನಿಮಾದಲ್ಲೂ ಎದ್ದು ಕಾಣೋ ಬೆಳಕಿನಂತೆ ನಟಿಸಿಬಿಟ್ಟಿದ್ದಾರೆ.
    ಕೇರಳ ಪ್ರಾಂತ್ಯದಲ್ಲಿ ಇರುವ ಮಾಂತ್ರಿಕ ಶಕ್ತಿಗಳಾದ ಚಾತನ್, ಯಕ್ಷಿಗಳ ಉಲ್ಲೇಖ ಈ  ಚಿತ್ರದುದ್ದಕ್ಕೂ ಕಾಣಬಹುದು. ಹಾಗಾಗಿಯೇ ಇವುಗಳ ಇರುವಿಕೆಯ ಮೂಲಕವೇ ಈ ಚಿತ್ರವು ‘ಕಲಿಯುಗದ ಅಪಭ್ರಂಶವಾದ ಭ್ರಮಾಯುಗ’ವನ್ನೇ ಸೃಷ್ಟಿಸಿ ಬಿಡುತ್ತದೆ ಎನ್ನುವುದು ಅತಿಶಯೋಕ್ತಿಯಲ್ಲ. ಇನ್ನು1994 ರ ‘ವಿಧೇಯನ್’ ಚಿತ್ರದಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಕಾಡುಗಳಿಗೆ ಕೇರಳದಿಂದ ವಲಸೆ ಬಂದು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರೋ ತೋಮಿ ಎಂಬಾತನು, ಕ್ರೂರಿ ಹಾಗೂ ತನ್ನ ಊರಿನಲ್ಲಿ ತನ್ನ ದುಷ್ಟ ಸ್ವಭಾವದಿಂದಾಗಿ ಧ್ವೇಷ ಕಟ್ಟಿಕೊಂಡಿರೋ ಭಾಸ್ಕರ್ ಪಟೇಲ್ ಎಂಬಾತನ ಬಳಿ ಸೇರಿಕೊಂಡು ಅವನ ಆಜ್ಞೆಗಳಿಗೆಲ್ಲಾ ‘ಊಹ್ಹೂ’ ಅನ್ನುವುದಕ್ಕೂ ಸ್ವಾತಂತ್ರ್ಯವಿಲ್ಲದಂತೆ ಅವನು ಹೇಳಿದ ಕೆಲಸಕ್ಕೆಲ್ಲಾ ‘ಹ್ಹೂ’ ಎಂದು ಆಜ್ಞೆ ಪಾಲಿಸಿಕೊಂಡು ಹೋಗುವ ಕಥೆ...! ಅವನು ಏನೆಲ್ಲಾ ಆಜ್ಞೆಗಳನ್ನು ಪಾಲಿಸಬೇಕಾಗುತ್ತದೆ ಎಂಬುದನ್ನು ನೀವೇ ಸಿನಿಮಾದಲ್ಲಿ ನೋಡುವುದು ವಉತ್ತಮ...! ಇಡೀ ‘ವಿಧೇಯನ್’ ಸಿನಿಮಾದಲ್ಲಿ ಕೇಪಿನ ಕೋವಿ ಹಿಡಿದು ತಿರುಗುವ ಮುಮ್ಮೂಟಿ ನಿಜವಾಗಿಯೂ ನಟ ರಾಕ್ಷಸನಂತೆ ರಾರಾಜಿಸುತ್ತಾರೆ‌. ಇನ್ನು ತೋಮಿಯ ಪಾತ್ರ ಮಾಡಿರುವ ಗೋಪಕುಮಾರ್ ಮಾತ್ರ ‘ಯಜಮಾನರೇ’ ಎನ್ನುವಾಗಲೆಲ್ಲಾ ‘ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎಂಬ ಗಾದೆ ಮಾತನ್ನು’ ನೆನಪಿಸುತ್ತದೆ...! ಮತ್ತೊಂದು ವಿಷಯ ‘ವಿಧೇಯನ್’ ಸಿನಿಮಾದ ಕಥೆಯು ಸಂಪೂರ್ಣವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಒಂದು ಬಾರಿ ಮಾತ್ರ ಕೊಡಗಿನ ಕಡೆ ಸಾಗುತ್ತದೆ) ನಡೆಯುವುದರಿಂದ ಈ ಚಿತ್ರದ ಭಾಷಾ ಬಳಕೆಯು ಶುದ್ಧ ಮಲಯಾಳಂನಲ್ಲಿರದೇ ಸ್ಥಳೀಯರು ಮಾತನಾಡುವ ಮಲಯಾಳಂ ಭಾಷೆಯ ಶೈಲಿಯಲ್ಲಿದೆ. ಹಾಗೆಯೇ ಚಿತ್ರದುದ್ದಕ್ಕೂ ಕನ್ನಡ ಸಂಭಾಷಣೆಗಳು ಕೂಡ ಯಥೇಚ್ಛವಾಗಿವೆ. ಮುಮ್ಮೂಟಿ ಸ್ವತಃ ಕನ್ನಡದಲ್ಲಿಯೂ ಡೈಲಾಗ್ ಹೇಳಿರುವುದು ವಿಶೇಷ. ಹಾಗೆಯೇ ಸುತ್ತಮುತ್ತಲಿನ ಊರುಗಳಾದ ಇಚ್ಲಂಪಾಡಿ, ಅರಿಶಿನಮಕ್ಕಿ ಸೇರಿದಂತೆ ಹಲವಾರು ಊರುಗಳ ಹೆಸರುಗಳ ಉಲ್ಲೇಖಗಳನ್ನು, ಹಾಗೂ ಶಿಶಿಲ ಮತ್ಸ್ಯ ಕ್ಷೇತ್ರದ ಮೀನುಗಳನ್ನೂ ಕೂಡ ಗಮನಿಸಬಹುದು..! ಕೊನೆಯದಾಗಿ ಹೇಳುವುದಾದರೆ ಈ ಎರಡೂ ಸಿನಿಮಾಗಳಿಗೂ ಕಥೆಯ ದೃಷ್ಟಿಯಿಂದ ಒಂದಕ್ಕೊಂದು ಸಂಬಂಧವಿಲ್ಲ. ಆದರೆ ಪಾತ್ರ ಪೋಷಣೆಗೆ ಒಂದಿಷ್ಟು ದೃಶ್ಯಾವಳಿಗಳನ್ನು ಎರಡೂ ಚಲನಚಿತ್ರಗಳಲ್ಲಿ ಒಂದೇ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ಹಾಗಾಗಿಯೇ ಈ ಎರಡೂ ಸಿನಿಮಾಗಳ ಚಿತ್ರಗಳಲ್ಲಿರುವ ದೃಶ್ಯಗಳು ಪ್ರೇಕ್ಷಕರು ಪರದೆಯಿಂದ ಕಣ್ಣು ಹೊರಳಿಸದಂತೆ ಮಾಡಲು ಯಶಸ್ವಿಯಾಗಿವೆ. ಈ ಎರಡೂ ಚಿತ್ರಗಳು ತಮ್ಮ ವಿಭಿನ್ನ ಕಥಾ ನಿರೂಪಣಾ ಶೈಲಿ ಹಾಗೂ ವಿಭಿನ್ನ ಚಿತ್ರ ನಿರ್ಮಾಣ ತಂತ್ರಗಳಿಂದಲೇ ಚಿತ್ರ ಪ್ರೇಮಿಗಳ ಮನ ಗೆದ್ದಿರುವುದರಲ್ಲಿ ಯಾವುದೇ ಸಂಶಯವಿಲ್ಲ ...!!!  

 

ಅನುರಾಗ್ ಗೌಡ
ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್‌ಡಿಎಂ ಕಾಲೇಜು, ಉಜಿರೆ