ಬೆಳಿಗ್ಗೆ ಎದ್ದು ಕಣ್ಣು ಬಿಡುವ ಮುನ್ನವೇ ಜಂಗಮವಾಣಿಯ ಹುಡುಕಾಟ ಅದರಲ್ಲಿ ಇಷ್ಟದೇವರ ಫೋಟೋ ನೋಡಿಯೇ ಮುಂದಿನ ಹೆಜ್ಜೆ.ಫೋನ್ ಲಾಕ್ ಮಾಡಿದರೆ ಚೆಂದದ ಫ್ಯಾಮಿಲಿ ಫೋಟೋ ಲಾಕ್ ಸ್ಕ್ರೀನ್ ವಾಲ್ ಪೇಪರ್ ನಲ್ಲಿದೆ, ಪಕ್ಕಕ್ಕೆ ತಿರುಗಿದರೆ ಮುದ್ದಾದ ಮಕ್ಕಳು, ಪ್ರೀತಿಯ ಯಜಮಾನರು. ಅವರಿಗೆ ಎಚ್ಚರವಾಗದಂತೆ ಎಚ್ಚರ ವಹಿಸಿ ರೂಮಿನಿಂದಾಚೆ ಬಂದು ನಿತ್ಯದ ಕೆಲಸದಲ್ಲಿ ತೊಡಗುತ್ತಾಳೆ. ಸ್ವಲ್ಪ ಹೊತ್ತಿಗಾಗಲೇ ಎದ್ದು ಬಂದು ಗುಡ್ ಮಾರ್ನಿಂಗ್ ಎಂಬ ದನಿ ಗಂಡನಿಂದ ಕೇಳಿ ಬರುತ್ತದೆ. ಮದುವೆಯಾಗಿ ಹತ್ತತಿರ ಹತ್ತು ವರುಷ ಏನೆಲ್ಲಾ ಬದಲಾದರು ಗುಡ್ ಮಾರ್ನಿಂಗ್ನಾ ಮುಗುಳು ನಗೆ ಮಾತ್ರ ಸದಾ ಹೊಸತು ಎನರ್ಜಿ ಬೂಸ್ಟರ್ ತರ ಎನಿಸುವುದವಳಿಗೆ.
ತುಸು ಬೇಗ ಎದ್ದ ಮಾತ್ರಕ್ಕೆ ಇಲ್ಲಿ ಎಲ್ಲ ಕೆಲಸ ಅವಳೇ ಮಾಡುತ್ತಿಲ್ಲ, ಮಕ್ಕಳ ಊಟದ ಡಬ್ಬಿ ಕಟ್ಟಲು, ಮಕ್ಕಳ ಯುನಿಫಾರ್ಮನ ಟೈ ಬೆಲ್ಟ್ ಕಟ್ಟಲು ಇನ್ನಿತರ ಕೆಲಸದಲ್ಲಿ ಪಾಲುದಾರರಾಗಿದ್ದಾರೆ ಪತಿರಾಯರು.. ಯಾಕೆಂದರೆ ಬೋತ್ ಆರ್ ವರ್ಕಿಂಗ್ ಪೇರೆಂಟ್ಸ್.
ಅಡುಗೆ ಮನೆಯಲ್ಲಿ ಕಾಡುವ ದನಿಯ ಕೀಟಲೆ ಮಾಡಿ ಅವಳು ರೀ.... ಎಂದು ರೇಗಿ ಸೊಂಟದ ಮೇಲೆ ಕೈಯಿಟ್ಟು ಕೈಯಲ್ಲಿ ಸೌಟು ಹಿಡಿದು ಆಚೆ ಬರುವಷ್ಟರಲ್ಲಿ ಅವನು ಮಕ್ಕಳೊಂದಿಗೆ ಮಕ್ಕಳಾಗಿ ಆಟವಾಡುತ್ತಿದ್ದಾನೆ.. ಮಕ್ಕಳ ನಿಮ್ಮ ಮಮ್ಮಿ ಮುಂಚೆ ತರ ಸ್ಲಿಮ್ ಇಲ್ಲ ಚೂರು ಡುಮ್ಮು ಆಗ್ಬಿಟ್ಟಿದಾಳೆ ಎಂದು ಹೇಳಿ ಕಣ್ಣು ಹೊಡೆಯುತ್ತಾನೆ, ಅದಕ್ಕವಳು ಹೌದೌದು ಲಾಸ್ಟ ಸಂಡೆ ನಿಮ್ಮ ತಲೆಗೆ ನಾನೆ ಹೇರ್ ಕಲರ್ ಮಾಡಿದು ಸಿಲ್ವರ್ ಕೂದಲು ಕಾಣಬಾರದು ಅಂತ ನೆನಪಿರಲಿ ಎಂದು ಕಾಳೆಯುತ್ತಾಳೆ..
ಈ ಪ್ರೀತಿ ಯ ಕೋಳಿ ಜಗಳಕ್ಕೆ ಮಕ್ಕಳು ನಗುತ್ತಾರೆ ಇವರಿಬ್ಬರು ನಗುತ್ತಾರೆ..ತಾಯಿ ಮಾಡಿದ ಪ್ರೀತಿ ಅಡುಗೆಯನ್ನು ಅಷ್ಟೇ ಪ್ರೀತಿಯಿಂದ ಮಕ್ಕಳಿಗೆ ತುತ್ತು ಮಾಡಿ ತಿನ್ನಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾನೆ.
ಒಲವಿನ ಸಂಸಾರ ಸೊಗಸಾಗಿ ಕಾಣುತ್ತದೆ..

ಮೂರು ಗಂಟಿನ ಬಂಧನದಲ್ಲಿ ಒಂದಾದ ಎರಡು ಜೀವಗಳು ಮಕ್ಕಳಂತೆ ಆಡುತ್ತಿದ್ದ ಇವರಿಗೀಗ ಇಬ್ಬರು ಮಕ್ಕಳು..
ಇವರಿಬ್ಬರು ಜೊತೆ ಸಾಗಿದ ಹಾದಿಯಲ್ಲಿ ಒಂದಷ್ಟು ಚಿಂತನೆಗಳಿವೆ.. ದೊಡ್ಡದೊಡ್ಡ ಕನಸುಗಳಿವೆ.. ಇಲ್ಲಿ ಎರಡು ಕುಟುಂಬಗಳ ಕಷ್ಟ ಸುಖಗಳಿವೆ. ಯಾವುದೇ ಒಂದು ದುಃಖಕ್ಕೆ ಮುಗಿಯದ ಮರುಕವಾ ನೆನೆದು ದುಃಖಿಸುತ್ತಾರೆ. ಮತ್ತೆ ಒಬ್ಬರಿಗೊಬ್ಬರು ಸಂತೈಸುತ್ತಾರೆ..
ವಿಭಿನ್ನ ಅಭಿರುಚಿಗಳು ಹಾಗೆ ಇವೆ ಪರಸ್ಪರ ಪ್ರೀತಿ ಗೌರವ ಕಾಳಜಿ ಹೆಚ್ಚಾಗಿದೆ.. ಅದೆಷ್ಟು ಕೋಪ ತಾಪ, ಕೂಗಾಟ ಜಗಳ ಮನಸ್ತಾಪಗಳು ಬಂದು ಹಾಗೆ ಬಂದ ದಾರಿಯಲ್ಲಿ ವಿಳಾಸವಿಲ್ಲದೆ ಹೊರಟು ಹೋಗಿವೆ.. ಮತ್ತೆಂದೂ ಬಾರದಿರಲಿ ಎನಿಸುತ್ತದೆ. ಅರೆ ಅದೇಗೆ ಬರದಿರಲು ಸಾಧ್ಯ ಇದು ಜೀವನ.. ಬಂದರೆ ಬಂದು ಹೋಗಲಿ ಬಿಡಿ ಏನೇ ಬಂದರೂ ಇಲ್ಲಿ ನಮ್ಮ ಬದಲಾಗದ ಒಲವಿದೆ ಎಂದು ಮನದಲ್ಲಿಯೇ ಬೀಗುತ್ತಾಳೆ..
ತರಾತುರಿಯಲ್ಲಿ ತಿಂಡಿ ಮುಗಿಸಿ ಇಬ್ಬರು ಕೆಲಸಕ್ಕೆ ಹೊರಟು ನಿಂತಿದ್ದಾರೆ.. ಹೊರಗೆ ಬರುವಾಗ ಅದ್ಯಾಕೋ ಅವಳ ಕೆನ್ನೆಯ ಮೇಲಿನ ಅರಿಶಿನ ಅವನ ಮೀಸೆಯಂಚಲ್ಲಿ ನಗುತಿದೆ.. ಅವಳು ತನ್ನ ಸೀರೆ ಸೆರಗಿನಿಂದ ಒರೆಸಿದ್ದಾಳೆ.ಒಬ್ಬರಿಗೊಬ್ಬರು ಬೈ ಬೈ ಟೇಕ್ ಕೇರ್ ಎಂದು ತುಂಬು ಪ್ರೀತಿಯಿಂದ ಒಬ್ಬರಿಗೊಬ್ಬರು ಹೇಳಿ ಕಳುಸಿಕೊಡುತ್ತಾರೆ..
ಇವರಿಬ್ಬರಂತೆ ಬಹುತೇಕರು ಎಡಬಿಡದೆ ದುಡಿಯುವ ಧಾವಂತದ ಬದುಕಲ್ಲಿ ಸಾಧನೆಯ ಹಾದಿಯಲ್ಲಿ, ಜಂಜಾಟದಲ್ಲಿ ಆಚೆಯ ವೃತ್ತಿ ಬದುಕಿನ ಒತ್ತಡದಲ್ಲಿರುತ್ತಾರೆ.. ಆದರೆ ಮನೆ ಎಂಬ ಪ್ರೀತಿ ಗೂಡಲ್ಲಿ ಈ ರೀತಿಯ ಚಿಕ್ಕಪುಟ್ಟ ಕಾಳಜಿ,ಪರಸ್ಪರ ಗೌರವ, ಪ್ರೀತಿ ತುಂಟಾಟ ಎಲ್ಲವು ಬದುಕನ್ನು ಸುಂದರಗೊಳಿಸಲು ಅತ್ಯಗತ್ಯ...
ಎಂದಿಗೂ ಬದಲಾಗದ ಒಲವಿದ್ದಲ್ಲಿ ಜೀವನದಲ್ಲಿ ಗೆಲುವಾಗುವುದು..
- ಶೃತಿ ಸಿರಿ
ಶಿವಮೊಗ್ಗ