ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತದಂತರ್ಯವನ್ನು ಹೊಕ್ಕುನೋಡಿದಾಗ ದೊರೆವುದೇ ಸಂವಿಧಾನ. ಈ ಸಂವಿಧಾನದ ಒಳಹೊಕ್ಕು ನೋಡಿದಾಗ ಸಿಗುವ ವ್ಯಕ್ತಿಯೇ ಡಾ.ಬಿ.ಆರ್.ಅಂಬೇಡ್ಕರ್. ಬಾಬಾ ಸಾಹೇಬ್ ಡಾ. ಭೀಮ್ ರಾವ್ ಅಂಬೇಡ್ಕರ್ ಅವರು ಏಪ್ರಿಲ್ 14, 1891 ರಂದು ಜನಿಸಿದರು. ಪಾಲಕರಿಗೆ 14 ನೇ ಮತ್ತು ಕೊನೆಯ ಮಗುವಾಗಿದ್ದರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸುಬೇದಾರ್ ರಾಮ್ಜಿ ಮಾಲೋಜಿ ಸಕ್ಪಾಲ್ ಅವರ ಮಗ. ಸಕ್ಪಾಲರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರ್ ಆಗಿದ್ದರು. ಜೊತೆಗೆ ಸಂತ ಕಬೀರನ ಕಟ್ಟಾ ಅನುಯಾಯಿಗಳಾಗಿದ್ದರು. ಸಕ್ಪಾಲರು ಸೇವೆಯಿಂದ ನಿವೃತ್ತರಾದಾಗ ಅಂಬೇಡ್ಕರ್ ಅವರಿಗೆ ಎರಡು ವರ್ಷ ವಯಸ್ಸಾಗಿತ್ತು. ಅವರು ಕೇವಲ ಆರು ವರ್ಷದವರಾಗಿದ್ದಾಗ ಅವರ ತಾಯಿ ನಿಧನರಾದರು. ಬಾಬಾಸಾಹೇಬರು ತಮ್ಮ ಆರಂಭಿಕ ಶಿಕ್ಷಣವನ್ನು ಬಾಂಬೆಯಲ್ಲಿ ಪಡೆದರು. ತಮ್ಮ ಶಾಲಾ ದಿನಗಳಿಂದಲೂ ಭಾರತದಲ್ಲಿನ ಸಾಮಾಜಿಕ ಸಮಸ್ಯೆಗಳ ಕುರಿತು ವಿಶೇಷ ಗಮನ ಹರಿಸಿದ್ದು ಕಂಡುಬರುತ್ತದೆ. ಅಂಬೇಡ್ಕರ್ ಅವರು ಬಾಂಬೆಯ ಎಲ್ಫಿನ್ಸ್ಟನ್ ಕಾಲೇಜಿನಲ್ಲಿ ತಮ್ಮ ಪದವಿಯನ್ನುಪೂರ್ಣಗೊಳಿಸಿದರು, ಅದಕ್ಕಾಗಿ ಅವರು ಬರೋಡಾದ ಹಿಸ್ ಹೈನೆಸ್ ಸಯಾಜಿರಾವ್ ಗಾಯಕವಾಡರಿಂದ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದರು. ಪದವಿ ಮುಗಿದ ನಂತರ ಬಾಂಡ್ ಪ್ರಕಾರ ಬರೋಡಾ ಸಂಸ್ಥಾನಕ್ಕೆಸೇರಬೇಕಿತ್ತು. ಅವರು ಬರೋಡಾದಲ್ಲಿದ್ದಾಗ ತಮ್ಮ ತಂದೆಯನ್ನು ಕಳೆದುಕೊಂಡರು, 1913 ರಲ್ಲಿ ಡಾ. ಅಂಬೇಡ್ಕರ್ ಉನ್ನತ ಶಿಕ್ಷಣಕ್ಕಾಗಿ USA ಗೆ ಹೋಗಲು ವಿದ್ವಾಂಸರಾಗಿ ಆಯ್ಕೆಯಾದ ವರ್ಷ. ಇದು ಅವರ ಶೈಕ್ಷಣಿಕ ವೃತ್ತಿಜೀವನದ ಮಹತ್ವದ ತಿರುವು ಕೂಡ ಆಗಿತ್ತು. 1927 ರ ಜೂನ್ 8 ರಂದು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅವರು ಜಾತಿ ತಾರತಮ್ಯ ಮತ್ತು ಅಸ್ಪರ್ಶತೆಯ ಬಗ್ಗೆ ಹೋರಾಟವನ್ನು ಪ್ರಬಲವಾಗಿ ಆರಂಭಿಸಿದರು. ಸ್ವತಂತ್ರಭಾರತದ ಮೊದಲ ಕಾನೂನು ಸಚಿವರಾಗಿ ನೇಮಕಗೊಂಡಿದ್ದರು. ಅಂಬೇಂಡ್ಕರ್ ಅವರು ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಭಾರತದ ಬೃಹತ್ ಸಂವಿಧಾನಕ್ಕೆಅಪಾರ ಕೊಡುಗೆ, ಶ್ರಮ ಹಾಕಿದ್ದ ಇವರನ್ನು ಭಾರತೀಯ ಸಂವಿಧಾನ ಶಿಲ್ಪಿಎಂದೇ ಕರೆಯಲಾಗುತ್ತದೆ. ಇನ್ನು ಜಾತಿಪದ್ಧತಿಯ ಕುರಿತು ಅಂಬೇಡ್ಕರ್ ಅವರಿಗಿದ್ದ ದೃಷ್ಟಿಕೋನವನ್ನು ಪತ್ರಕರ್ತರಾದ ಹರಿಪ್ರಕಾಶ್ ಕೋಣೆಮನೆಯವರು ತಮ್ಮ ಲೇಖನದಲ್ಲಿ ವಿವರಿಸಿದ್ದು ಇಂತಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಾಮಾನ್ಯವಾಗಿ, ‘ಸಂವಿಧಾನ ಶಿಲ್ಪಿ’, ‘ದಲಿತ ಸೂರ್ಯ’, ‘ಸಾಮಾಜಿಕ ಕ್ರಾಂತಿ ಸೂರ್ಯ ಎಂಬ ಇತ್ಯಾದಿ ನಾಮಧೇಯಗಳಿಂದ ಸಂಬೋಧಿಸಲಾಗುತ್ತದೆ. ಬಾಬಾಸಾಹೇಬ್ ಅಂಬೇಡ್ಕರರು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಪ್ರತಿಯೊಂದು ಅನುಚ್ಛೇದವನ್ನು ಸೇರಿಸುವಲ್ಲೂ ಪರಿಶ್ರಮ ಹಾಕಿದರು. ದೇಶದ ಮುನ್ನಡೆಗೆ ತೊಡಕಾಗಬಹುದಾದ ಅನೇಕ ವಿಚಾರಗಳನ್ನುಸಂವಿಧಾನದಲ್ಲಿ ಸೇರಿಸದಿರುವಂತೆ ಪ್ರಜ್ಞಾ ಪೂರ್ವಕವಾಗಿ ನೋಡಿಕೊಂಡರು. ಅದಕ್ಕಾಗಿಯೇ, ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಭಾರತ ಹೊಂದುವಂತಾಯಿತು. ಈ ನಿಟ್ಟಿನಲ್ಲಿ ಅಂಬೇಡ್ಕರರು ಸಂವಿಧಾನ ಶಿಲ್ಪಿ. ಕಾಯಕದ ಆಧಾರದಲ್ಲಿದ್ದ ವರ್ಣ ವ್ಯವಸ್ಥೆಯು ನೂರಾರು ವರ್ಷ ಈ ಸಮಾಜವನ್ನುಮುನ್ನಡೆಸಿಕೊಂಡೇಬಂದಿತು. ಚಾತುರ್ವಣ್ಯ ಎನ್ನುವುದು ತಾನೇ ಸೃಷ್ಟಿ ಮಾಡಿದ್ದುಎಂದು ಸ್ವತಃ ಭಗವಾನ್ ಶ್ರೀಕೃಷ್ಣ ಹೇಳುತ್ತಾನೆ. ಆದರೆ ಅದು ‘ಗುಣ ಹಾಗೂ ಕರ್ಮ’ದ ಆಧಾರದಲ್ಲಿತ್ತು. ಯಾವುದೇ ವ್ಯಕ್ತಿ ತನ್ನ ಈ ಜನ್ಮದ ಗುಣ ಹಾಗೂ ಕರ್ಮದ (ಅಂದರೆ ಕಾಯಕದ) ಆಧಾರದಲ್ಲಿ ವರ್ಣವನ್ನು ಹೊಂದುತ್ತಿದ್ದರು. ಆದರೆ, ಕೆಲವು ವರ್ಣಗಳು ಒಟ್ಟಾಗಿ ಸೇರಿಕೊಂಡು ತಮ್ಮ ಸ್ಥಾನಗಳನ್ನು ಮುಂದಿನ ಪೀಳಿಗೆಗೂ ಹಾಗೆಯೇ ಉಳಿಸಿಕೊಳ್ಳಲು ಬಯಸಿದವು. ಇದರಿಂದ ಜನ್ಮದ ಆಧಾರದಲ್ಲಿ ವರ್ಣವನ್ನು ನಿರ್ಧರಿಸುವ ‘ಅವ್ಯವಸ್ಥೆ’ ಆರಂಭವಾಯಿತು. ಅದಿಷ್ಟೇ ಆಗಿದ್ದರೂ ಅಷ್ಟೇನೂ ತೊಂದರೆ ಆಗುತ್ತಿರಲಿಲ್ಲವೇನೊ. ಆದರೆ ಒಂದು ವರ್ಣವನ್ನುಸಮಾಜದ ಮುಖ್ಯವಾಹಿನಿಯಿಂದ ದೂರವಿಟ್ಟುಅವರಲ್ಲಿ ಕೀಳರಿಮೆ ಮೂಡಿಸಲು ಆರಂಭಿಸಿದವು. ಜಾತಿವ್ಯವಸ್ಥೆ ಎನ್ನುವುದರಲ್ಲಿ ತನ್ನ ಗುಣ ಹಾಗೂ ಕರ್ಮಕ್ಕೆ ಅನುಗುಣವಾಗಿ ಮೇಲೇರುವ ಅಥವಾ ಕೆಳಗಿಳಿಯುವ ಸಲುವಾಗಿ ಇದ್ದ ‘ಏಣಿ’ಯನ್ನುಕಿತ್ತುಹಾಕಿದ್ದರಿಂದ ಉಂಟಾದದ್ದು ಅಸಪೃಶ್ ್ಯತೆ ಎಂಬ ಪಿಡುಗು. ಈ ಪಿಡುಗನ್ನು ಕಿತ್ತೆಸೆಯಲು ಅಂಬೇಡ್ಕರರೂ ಮುಂದಾದರು. ದಲಿತರಲ್ಲಿದ್ದ ಕೀಳರಿಮೆಯನ್ನು ಕಿತ್ತೊಗೆಯಲು ಪ್ರೇರೇಪಿಸಿ ಹೊಸ ಉದಯವನ್ನು ತೋರಿಸಿಕೊಟ್ಟಅಂಬೇಡ್ಕರರನ್ನು ‘ದಲಿತ ಸೂರ್ಯ’ ಎನ್ನಲಾಗುತ್ತದೆ. ಅಂತೆಯೇ ನಾವು ನೀವೆಲ್ಲತಿಳಿದಿರುವಂತೆ ಈ ಸಂವಿಧಾನದ ಆಶಯಗಳಲ್ಲಿ ಸಾಮಾಜಿಕ ನ್ಯಾಯವನ್ನು ನೀಡಲು ಸಮಾನತೆಯ ಪರಿಕಲ್ಪನೆಯನ್ನು ಕೂಡ ನೀಡಲಾಗಿದೆ. ಈ ಸಮಾನತೆಯ ಪರಿಕಲ್ಪನೆಭಾರತದ ಎಲ್ಲ ಮತಪಂಥಗಳಿಗೂ ಸಿಗುವಂತಾಗಲಿ.
- ಸೋಮೇಶ್ವರ ಗುರುಮಠ











