ನಮ್ಮ ಕಥಾ ನಾಯಕನ ಹೆಸರು ಸುಮಂತ್. ಬಾಲ್ಯದಿಂದಲೇ ಅನೇಕ ಕನಸುಗಳನ್ನು ಮನಸ್ಸಿನ ಅಂಗಳದಲ್ಲಿ ಬೆಳೆಸಿಕೊಂಡಿದ್ದ ಈ ಹುಡುಗ, ಇಂದು ತನ್ನ ವಿದ್ಯಾಭ್ಯಾಸದ ಪಯಣ ಯಾವಾಗ ಮುಗಿಯುತ್ತದೋ ಎಂದು ಕಾದು ಕುಳಿತಿದ್ದಾನೆ. ಒಮ್ಮೆ ಭವಿಷ್ಯವನ್ನು ಬಣ್ಣ ಬಣ್ಣದ ಕನಸುಗಳಿಂದ ಕಟ್ಟಿಕೊಂಡಿದ್ದ ಮನಸ್ಸು, ಈಗ ದಿನಗಳನ್ನು ಲೆಕ್ಕ ಹಾಕುವ ಮೌನದಲ್ಲಿದೆ.
ಪ್ರತಿ ವಿದ್ಯಾರ್ಥಿಯಂತೆ ಸುಮಂತ್‌ಗೂ SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕೆಂಬ ಅಪಾರ ಆಸೆ ಇತ್ತು. ಅದಕ್ಕಾಗಿ ಆತ ರಾತ್ರಿ-ಹಗಲೆನ್ನದೆ ತಿಂಗಳುಗಳ ಕಾಲ ಪರಿಶ್ರಮ ಪಟ್ಟ. ಆ ಪರಿಶ್ರಮದ ಫಲವಾಗಿ ಬಂದದ್ದು 93% ಅಂಕ. ಆ ದಿನ ಅವನ ಮನೆ ತುಂಬ ಸಂತೋಷದ ವಾತಾವರಣ. ಮನೆಯವರ ಮೆಚ್ಚುಗೆ, ಶಿಕ್ಷಕರ ಅಭಿನಂದನೆ, ಬಂಧುಬಳಗದ ಪ್ರಶಂಸೆ ಎಲ್ಲವೂ ಒಂದೇ ಕ್ಷಣದಲ್ಲಿ ಅವನ ಸುತ್ತ ನೆರೆದವು. ಕೆಲ ದಿನಗಳ ಕಾಲ ಆತ ತನ್ನ ಪರಿಶ್ರಮಕ್ಕೆ ದೊರೆತ ಫಲವನ್ನು ನೋಡಿ ತೃಪ್ತನಾಗಿದ್ದ.
ಆದರೆ ಕಾಲ ಕಳೆಯುತ್ತಾ ಹೋದಂತೆ, ಒಂದು ಪ್ರಶ್ನೆ ಅವನ ಮನಸ್ಸನ್ನು ಮಿಡಿಯತೊಡಗಿತು “ಗಳಿಸಿದ ಅಂಕವೇ ಎನಗೆ ಮುಳುವಾಯಿತೇ?” ಈ ಪ್ರಶ್ನೆ ಕೇವಲ ಅಂಕಗಳ ಬಗ್ಗೆ ಅಲ್ಲ; ಅದು ಒಂದು ವಿದ್ಯಾರ್ಥಿಯ ಆಯ್ಕೆಯ ಹಕ್ಕು, ಕನಸು ಮತ್ತು ಒಳಮನಸ್ಸಿನ ಹೋರಾಟದ ಬಗ್ಗೆ.
ಸುಮಂತ್ ಬಾಲ್ಯದಿಂದಲೇ ಚುರುಕಿನ ಹುಡುಗ. ಗೆಳೆಯರ ಜೊತೆ ಬೆರೆತು ನಗುವು, ತಂಟೆ, ತರಲೆ ಇವೆಲ್ಲವೂ ಅವನ ದಿನಚರಿಯ ಭಾಗವಾಗಿದ್ದವು. ಆದರೆ ಉತ್ತಮ ಅಂಕ ಗಳಿಸಿದ ಕ್ಷಣದಿಂದ ಅವನ ಬದುಕಿನ ಮೇಲೆ ಇತರರ ನಿರೀಕ್ಷೆಗಳ ನೆರಳು ಬೀಳತೊಡಗಿತು. ಅಂಕಗಳ ಜೊತೆ ಅವನ ಮೇಲೆ ನಿರ್ಧಾರಗಳೂ ಹೇರಲ್ಪಟ್ಟವು. ಕೆಲ ಕನಸುಗಳನ್ನು ಆತ ಮೌನವಾಗಿ ಕೈಬಿಡಬೇಕಾಯಿತು.
ಅವನು ಗಳಿಸಿದ ಅಂಕಗಳಿಂದ ದೊರೆತದ್ದು ಕೆಲವು ದಿನಗಳ ಮೆಚ್ಚುಗೆ, ₹1,000 ವಿದ್ಯಾರ್ಥಿವೇತನ ಮತ್ತು "ಮೇಧಾವಿ ವಿದ್ಯಾರ್ಥಿ" ಎಂಬ ಗುರುತು. ಆದರೆ ಕಳೆದುಹೋದದ್ದು ತಾನು ಇಚ್ಛಿಸಿದ ದಾರಿಯಲ್ಲಿ ನಡೆಯುವ ಅವಕಾಶ. ಏಕೆಂದರೆ ಸುಮಂತ್‌ಗೆ Arts ಮೇಲೆ ಅಪಾರ ಆಸಕ್ತಿ ಇತ್ತು. ಸಮಾಜ, ಇತಿಹಾಸ, ಸಾಹಿತ್ಯ, ಬದುಕಿನ ಕಥೆಗಳು ಇವು ಅವನ ಮನಸ್ಸಿಗೆ ಹತ್ತಿರವಾಗಿದ್ದವು. ಆದರೆ ಆತ ಆರ್ಟ್ಸ್ ತೆಗೆದುಕೊಳ್ಳಬೇಕು ಎಂದು ಹೇಳಿದಾಗ ಪ್ರತಿಕ್ರಿಯೆ ಒಂದೇ ಇಷ್ಟು ಅಂಕ ಗಳಿಸಿದ್ದೀಯಲ್ಲ, Science ತೆಗೆದುಕೊಳ್ಳಬೇಕು. ಒಳ್ಳೆಯ ಕಾಲೇಜಿನಲ್ಲಿ ಸೀಟ್ ಸಿಗುತ್ತದೆ." ಅವನ ಆಸಕ್ತಿಯನ್ನು ಯಾರೂ ಕೇಳಲಿಲ್ಲ; ಅವನ ಅಂಕಗಳನ್ನು ಮಾತ್ರ ಎಲ್ಲರೂ ಗಮನಿಸಿದರು.
ಕೊನೆಗೆ, ಎಲ್ಲರ ನಿರೀಕ್ಷೆಗಳ ನಡುವೆ, ತನ್ನ ಸ್ನೇಹಿತರಿಲ್ಲದ ಒಂದು ಕಾಲೇಜಿಗೆ ಅವನನ್ನು ಸೇರಿಸಲಾಯಿತು. ಕುರಿಮಂದೆಯಿಂದ ಒಂದು ಕುರಿಯನ್ನು ಬೇರ್ಪಡಿಸಿದಂತೆ ಅವನು ತನ್ನ ಪರಿಚಿತ ವಲಯದಿಂದ ದೂರವಾದ. ಅಲ್ಲಿಂದ ಸುಮಂತ್ ನಿಧಾನವಾಗಿ ಬದಲಾಗತೊಡಗಿದ. ಒಮ್ಮೆ ತುಂಬಾ ಚುರುಕಾಗಿದ್ದ ಹುಡುಗ, ಮೌನದ ಕಡೆ ತಿರುಗಿದ.
ಅವನಿಗೆ ವಿಜ್ಞಾನ ವಿಷಯಗಳ ಬಗ್ಗೆ ವಿರೋಧ ಇರಲಿಲ್ಲ; ಆದರೆ ಪುಸ್ತಕದೊಳಗಿನ ವಿಜ್ಞಾನಕ್ಕಿಂತ ಪುಸ್ತಕದ ಹೊರಗಿನ ಬದುಕು ಹೆಚ್ಚು ಪ್ರಿಯವಾಗಿತ್ತು. ಆದರೂ "ಅಂಕ ಗಳಿಸಬೇಕು" ಎಂಬ ಒತ್ತಡವೇ ಅವನ ದಿನಗಳನ್ನು ನಿಯಂತ್ರಿಸತೊಡಗಿತು. ಬಾಲ್ಯದಿಂದಲೇ ಅವನಿಗೆ NCC ಸೇರಬೇಕು ಎಂಬ ಕನಸಿತ್ತು. ಯೂನಿಫಾರ್ಮ್ ಧರಿಸಿ ಶಿಸ್ತಿನ ಜೀವನವನ್ನು ಅನುಭವಿಸಬೇಕು ಎಂಬ ಬಯಕೆ ಇತ್ತು. ಆದರೆ ವಿಜ್ಞಾನ ವಿಭಾಗದ ಒತ್ತಡದಲ್ಲಿ ಆ ಕನಸೂ ನಿಧಾನವಾಗಿ ದೂರ ಸರಿಯಿತು.
ಹಾಗೋ ಹೀಗೋ ಮಾಡಿ ಆತ PUCಯನ್ನೂ distinction ಜೊತೆ ಮುಗಿಸಿದ. ಆದರೆ ಮುಂದಿನ ಹಂತದಲ್ಲಿ ಮತ್ತೆ ಅದೇ ಪ್ರಶ್ನೆ—ಮುಂದೆ ಯಾವ ದಾರಿ? ಅವನ ಮುಂದೆ ಸಮಾಜ ಎರಡು ತಕ್ಕಡಿಗಳನ್ನು ಇಟ್ಟಿತು: ಡಾಕ್ಟರ್ ಅಥವಾ ಇಂಜಿನಿಯರ್. ಆದರೆ ಸುಮಂತ್ ಮನಸ್ಸು ಮಾತ್ರ ಬೇರೆ ದಿಕ್ಕಿನಲ್ಲಿ ನಿಂತಿತ್ತು. "ನನಗೆ B.A ಮಾಡಬೇಕು" ಎಂಬ ಅವನ ಒಳಧ್ವನಿ, ಹೊರಗಿನ ಗದ್ದಲದಲ್ಲಿ ಕಳೆದುಹೋಯಿತು. ಕೊನೆಗೆ ಆತ degreeಗೆ B.A ಮಾಡಬೇಕು ಎಂದು ಪಟ್ಟು ಹಿಡಿದ. ಆದರೆ ಮತ್ತೆ ಸಮಾಜ ತನ್ನ ಅಭಿಪ್ರಾಯ ಹೇಳಿತು
B.Aಗೆ ಬೆಲೆ ಇಲ್ಲ. ಭವಿಷ್ಯ ಸಿಗುವುದಿಲ್ಲ. ಇಷ್ಟು ಅಂಕ ತೆಗೆದುಕೊಂಡು Arts ಏಕೆ?
ಈ ಮಾತುಗಳ ಕೊನೆಯಲ್ಲಿ ಮತ್ತೆ ನಡೆದದ್ದು B.Sc ದಾಖಲಾತಿ. ಅಲ್ಲೂ ಅವನಿಗೆ ಸಿಗಿದ್ದು ಮತ್ತೊಮ್ಮೆ ಒಂಟಿತನವೇ. ಇದೀಗ ಸುಮಂತ್‌ನಲ್ಲಿದ್ದ ಚುರುಕು ಕಾಣುವುದಿಲ್ಲ. ಕನಸುಗಳು ಮಂಕಾಗಿವೆ. ಓದುವುದು ಕೇವಲ ಪರೀಕ್ಷೆಗಾಗಿ. ಮನಸ್ಸಿನಲ್ಲಿಲ್ಲದ ವಿಷಯದ ಮೇಲೆ ಪ್ರೀತಿ ಬೆಳೆಸಲು ಸಾಧ್ಯವಾಗದೆ, ಆತ ದಿನಗಳನ್ನು ಸಾಗಿಸುತ್ತಿದ್ದಾನೆ.
ಇದರ ಮಧ್ಯೆ online classಗಳು ಆರಂಭವಾದವು. ತರಗತಿಯಲ್ಲಿ ಕಷ್ಟಪಟ್ಟು ಅರ್ಥವಾಗುತ್ತಿದ್ದ ಪಾಠಗಳು, onlineನಲ್ಲಿ ಇನ್ನೂ ದೂರವಾದವು. ಶಿಕ್ಷಕರ ಮಾತು ಕೇಳಿಸುತ್ತಿತ್ತು; ಆದರೆ ಅರ್ಥ ಮನಸ್ಸಿಗೆ ತಲುಪುತ್ತಿರಲಿಲ್ಲ.
ಜೀವನದ ಓಟದಲ್ಲಿ ಮನೆಯವರಿಗೂ ತಮ್ಮ ತಮ್ಮ ವ್ಯಸ್ತತೆ. ಗೆಳೆಯರು ತಮ್ಮದೇ ದಾರಿಯಲ್ಲಿ ಸಾಗಿದರು. ಮಾತಾಡಲು, ಮನ ಬಿಚ್ಚಲು, ಒಳಗಿನ ಗೊಂದಲ ಹೇಳಿಕೊಳ್ಳಲು ಯಾರೂ ಸಿಗದ ಪರಿಸ್ಥಿತಿ.
ಮನೆಯೊಳಗೆ ದಿನವಿಡೀ ಒಂಟಿಯಾಗಿ ಕುಳಿತಾಗ ಮನಸ್ಸಿನಲ್ಲಿ ಅನೇಕ ಆಲೋಚನೆಗಳು ಮೂಡುತ್ತವೆ. ಅವುಗಳಲ್ಲಿ ಮತ್ತೆ ಮತ್ತೆ ಮೇಲೇಳುವ ಒಂದು ಪ್ರಶ್ನೆ “ಗಳಿಸಿದ ಅಂಕವೇ ಮುಳುವಾಯಿತೇ?” ಸುಮಂತ್ ಕೇವಲ ಕಥೆಯ ಪಾತ್ರವಲ್ಲ. ಆತ ನಮ್ಮ ನಡುವೆ ಇರುವ ಅನೇಕ ವಿದ್ಯಾರ್ಥಿಗಳ ಪ್ರತಿಬಿಂಬ. ಅಂಕಗಳ ಹಿಂದೆ ಓಡುತ್ತಾ, ತಮ್ಮ ಆಸಕ್ತಿ, ಕನಸು, ಆಯ್ಕೆ ಮತ್ತು ಕೆಲವೊಮ್ಮೆ ತಮ್ಮನ್ನೇ ಕಳೆದುಕೊಳ್ಳುತ್ತಿರುವ ಯುವಮನಗಳ ಪ್ರತಿನಿಧಿ.
ವಿದ್ಯಾರ್ಥಿಯ ಮೌಲ್ಯ ಅಂಕಗಳಲ್ಲಿ ಮಾತ್ರವಲ್ಲ; ಅವನ ಆಸಕ್ತಿಯಲ್ಲಿ, ಆಯ್ಕೆಯಲ್ಲಿ, ಬದುಕನ್ನು ನೋಡುವ ದೃಷ್ಟಿಯಲ್ಲಿ ಕೂಡ ಇದೆ ಎಂಬುದನ್ನು ಸಮಾಜ ಅರಿಯಬೇಕಾದ ಸಮಯ ಇದು.
-ಶ್ರೇಯಸ್ ಎಲ್.
ಎರಡನೇ ವರ್ಷದ ಬಿ.ಎಡ್. ವಿದ್ಯಾರ್ಥಿ
ಸೆಂಟ್ ಅಲೋಶಿಯಸ್(ಪರಿಗಣಿತ ವಿಶ್ವ ವಿದ್ಯಾಲಯ), ಮಂಗಳೂರು.











