ಒಂದು ದೇಶದ ಬಲವು ಅದರ ಸೈನ್ಯದಲ್ಲಿಯೂ, ಸಂಪತ್ತಲ್ಲಿಯೂ ಅಲ್ಲ – ಅದು ಅದರ ಮೌಲ್ಯಗಳಲ್ಲಿ ಅಡಗಿದೆ. ಆ ಮೌಲ್ಯಗಳಿಗೆ ದಿಕ್ಕು ತೋರಿಸುವ ದೀಪವೇ ನಮ್ಮ ಭಾರತದ ಸಂವಿಧಾನ.
1950ರ ಜನವರಿ 26ರಂದು ಜಾರಿಗೆ ಬಂದ ಈ ಸಂವಿಧಾನವು ಭಾರತವನ್ನು ಪ್ರಜಾಪ್ರಭುತ್ವ ಗಣರಾಜ್ಯವಾಗಿ ರೂಪುಗೊಳಿಸಿತು. ಸ್ವಾತಂತ್ರ್ಯ ಪಡೆದ ನಂತರ, ವಿಭಿನ್ನ ಸಂಸ್ಕೃತಿಗಳು, ಭಾಷೆಗಳು, ಧರ್ಮಗಳು ಮತ್ತು ಪರಂಪರೆಗಳ ನಡುವೆ ಏಕತೆಯನ್ನು ಕಾಪಾಡುವ ದೊಡ್ಡ ಸವಾಲು ನಮ್ಮ ಮುಂದೆ ಇತ್ತು. ಆ ಸಂದರ್ಭದಲ್ಲಿ ರೂಪುಗೊಂಡ ಸಂವಿಧಾನವು ಕೇವಲ ಆಡಳಿತ ವ್ಯವಸ್ಥೆಯನ್ನು ನಿರ್ಮಿಸದೆ, “ನಾವು ಭಾರತೀಯರು” ಎಂಬ ಸಾಮೂಹಿಕ ಚಿಂತನೆಗೆ ಬುನಾದಿ ಹಾಕಿತು.
ಅಂದು ರೂಪಗೊಂಡ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿ, ಜಾತಿ, ಧರ್ಮ, ಲಿಂಗ ಅಥವಾ ಆರ್ಥಿಕ ಸ್ಥಿತಿ ಯಾವುದು ಆಗಿದ್ದರೂ, ಎಲ್ಲರೂ ಕಾನೂನಿನ ಮುಂದೆ ಒಂದೇ ಎಂಬ ತತ್ವವನ್ನು ದೃಢಪಡಿಸುತ್ತದೆ. ಆದರೆ ಪ್ರಶ್ನೆ ಏನೆಂದರೆ – ನಾವು ಈ ಹಕ್ಕುಗಳನ್ನು ಮಾತ್ರ ಕೇಳುತ್ತೇವೆಯೇ? ಅಥವಾ ನಮ್ಮ ಕರ್ತವ್ಯಗಳನ್ನು ಸಹ ಅರಿತು ಪಾಲಿಸುತ್ತೇವೆಯೇ?
ಇಂದಿನ ಕಾಲಘಟ್ಟದಲ್ಲಿ ಸಂವಿಧಾನದ ಮೌಲ್ಯಗಳು ಸವಾಲಾಗಿ ನಿಂತಿವೆ. ಸಾಮಾಜಿಕ ಮಾಧ್ಯಮಗಳ ಪ್ರಭಾವ, ರಾಜಕೀಯ ಭಿನ್ನಾಭಿಪ್ರಾಯಗಳು, ಹಾಗೂ ವ್ಯಕ್ತಿಪರವಾದ ಚಿಂತನೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಸಂವಿಧಾನದ ಆತ್ಮವಾದ ಸಮಾನತೆ, ಸಹಿಷ್ಣುತೆ ಮತ್ತು ನ್ಯಾಯ ಎಂಬ ಮೌಲ್ಯಗಳನ್ನು ನಾವು ಮರೆಯುವ ಅಪಾಯವೂ ಇದೆ.
ಸಂವಿಧಾನವು ಕೇವಲ ನ್ಯಾಯಾಲಯಗಳಲ್ಲಿ ಸೀಮಿತವಾಗದೆ; ನಮ್ಮ ದೈನಂದಿನ ಜೀವನದಲ್ಲಿ ಮಾಡುವ ಎಲ್ಲಾ ಕೆಲಸದಲ್ಲಿ ಸಂವಿಧಾನವನ್ನು ಪಾಲಿಸಿದಾಗ ಮಾತ್ರ ಅದರ ಅರ್ಥ ಸಂಪೂರ್ಣವಾಗುತ್ತದೆ.
ಇದು ಜೀವಂತ ದಾಖಲೆ. ಕಾಲಾನುಗುಣವಾಗಿ ತಿದ್ದುಪಡಿಗಳನ್ನು ಸ್ವೀಕರಿಸುವ ಮೂಲಕ ಅದು ತನ್ನನ್ನು ತಾನೇ ಹೊಸದಾಗಿ ರೂಪಿಸಿಕೊಂಡಿದೆ. ಆದರೆ ಅದರ ಮೂಲ ಆತ್ಮ ಯಾವತ್ತೂ ಅಚಲವಾಗಿದೆ – ಅದು ಮಾನವೀಯತೆ.
- ಗ್ಲೆನ್ ಗುಂಪಲಾಜೆ











