1947ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯವನ್ನು ಪಡೆದ ಕ್ಷಣವು ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು. ಆದರೆ, ಬ್ರಿಟಿಷರ ದೀರ್ಘ ಆಡಳಿತದ ಅಂತ್ಯದೊಂದಿಗೆ “ಒಡೆದು ಆಳುವ” ಸಿದ್ಧಾಂತದ ಪರಿಣಾಮವಾಗಿ ಅಖಂಡ ಭಾರತ ವಿಭಜನೆಯ ನೋವನ್ನು ಅನುಭವಿಸಬೇಕಾಯಿತು. ಈ ಸಂದರ್ಭದಲ್ಲಿ ದೇಶ ಎದುರಿಸಿದ ಪ್ರಮುಖ ಪ್ರಶ್ನೆಗಳಲ್ಲಿ ಒಂದಾಗಿದ್ದು ಪೌರತ್ವ — ಯಾರು ಭಾರತೀಯರು? ಯಾರು ಅಲ್ಲ? ಎಂಬ ಗಂಭೀರ ಪ್ರಶ್ನೆಗೆ ಸ್ಪಷ್ಟ ಮತ್ತು ಸಮಗ್ರ ಉತ್ತರವನ್ನು 1950ರ ಜನವರಿ 26ರಂದು ಜಾರಿಗೆ ಬಂದ ಭಾರತದ ಸಂವಿಧಾನದ ವಿಧಿ 5 ನೀಡಿತು.

ಸ್ವಾತಂತ್ರ್ಯದ ನಂತರದ ಅಶಾಂತ ಪರಿಸ್ಥಿತಿಯಲ್ಲಿ, ವಿಶೇಷವಾಗಿ ವಿಭಜನೆಯ ಪರಿಣಾಮವಾಗಿ ಸ್ಥಳಾಂತರಗೊಂಡ ಲಕ್ಷಾಂತರ ಜನರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಧಿಯನ್ನು ರೂಪಿಸಲಾಯಿತು. ಇದರ ಮುಖ್ಯ ಉದ್ದೇಶ ದೇಶದೊಳಗಿನ ಸ್ಥಿರತೆ, ಏಕತೆ ಮತ್ತು ನ್ಯಾಯತತ್ತ್ವವನ್ನು ಕಾಪಾಡುವುದಾಗಿತ್ತು. ಈ ವಿಧಿ 5ವು ಕೇವಲ ಕಾನೂನಾತ್ಮಕ ವ್ಯಾಖ್ಯಾನವಲ್ಲ; ಅದು ಪ್ರತಿಯೊಬ್ಬ ವ್ಯಕ್ತಿಗೆ ಮಾನ್ಯತೆ ಮತ್ತು ಸಮಾನತೆ ಎಂಬ ಮೌಲ್ಯವನ್ನು ಬಲಪಡಿಸುವ ತತ್ವವಾಗಿದೆ, ಆದ್ದರಿಂದ ನಾಗರಿಕತ್ವವನ್ನು ಕೇವಲ ದಾಖಲೆಗಳ ಮೂಲಕವಲ್ಲ, ವ್ಯಕ್ತಿಯು ದೇಶದೊಂದಿಗೆ ಹೊಂದಿರುವ ನೈಜ ಸಂಬಂಧ, ಸಮಾಜದಲ್ಲಿನ ಸ್ಥಾನ ಮತ್ತು ಮಾನವೀಯ ಗೌರವದ ಆಧಾರದ ಮೇಲೆ ನೋಡಬೇಕೆಂಬ ಸಂದೇಶವನ್ನು ಇದು ನೀಡಿತು .
ಇಂದಿನ ಭಾರತದಲ್ಲಿ ನಾಗರಿಕತ್ವದ ಪ್ರಶ್ನೆ ಮತ್ತೊಮ್ಮೆ ಪ್ರಾಮುಖ್ಯತೆ ಪಡೆದುಕೊಂಡಿದೆ. ವಲಸೆ ಸಮಸ್ಯೆಗಳು, ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಪ್ರವೇಶ, ಮತ್ತು ಜನಸಂಖ್ಯೆಯ ಬದಲಾವಣೆಗಳು ಈ ವಿಚಾರವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿವೆ. ಗಡಿ ರಾಜ್ಯಗಳಲ್ಲಿ ಭದ್ರತಾ ವಿಚಾರಗಳು ಹಾಗೂ ಸ್ಥಳೀಯ ಜನರ ಆತಂಕಗಳು ನಾಗರಿಕತ್ವದ ಚರ್ಚೆಯನ್ನು ಸೂಕ್ಷ್ಮಗೊಳಿಸುತ್ತಿವೆ. ಇದೇ ವೇಳೆ, ಹಲವಾರು ಸಾಮಾನ್ಯ ನಾಗರಿಕರು ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸಲು ಅಗತ್ಯವಿರುವ ದಾಖಲೆಗಳನ್ನು ಹೊಂದಿಲ್ಲದಿರುವುದು ಮತ್ತೊಂದು ದೊಡ್ಡ ಸವಾಲಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಹಳೆಯ ದಾಖಲೆಗಳ ಕೊರತೆ, ಜನನ ನೋಂದಣಿ ವ್ಯವಸ್ಥೆಯ ಅಭಾವ ಮತ್ತು ಅರಿವಿನ ಕೊರತೆ ನಾಗರಿಕತ್ವದ ದೃಢೀಕರಣ ಪ್ರಕ್ರಿಯೆಯನ್ನು ಕಷ್ಟಕರವಾಗಿಸುತ್ತಿವೆ.
ಈ ಎಲ್ಲಾ ಸವಾಲುಗಳ ನಡುವೆಯೂ, ನಾಗರಿಕತ್ವದ ಪ್ರಶ್ನೆಯನ್ನು ಕೇವಲ ರಾಜಕೀಯ ಚರ್ಚೆಯಾಗಿ ನೋಡುವುದಕ್ಕಿಂತ, ಸಂವಿಧಾನದ ಆತ್ಮಕ್ಕೆ ಅನುಗುಣವಾಗಿ ಸಮತೋಲನದಿಂದ ಪರಿಹರಿಸುವುದು ಅತ್ಯಗತ್ಯವಾಗಿದೆ. ನ್ಯಾಯ, ಪಾರದರ್ಶಕತೆ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡುವ ದೃಷ್ಟಿಕೋಣವೇ ಈ ವಿಚಾರದಲ್ಲಿ ಮಾರ್ಗದರ್ಶಿಯಾಗಬೇಕು. ಭಾರತ ತನ್ನ ವೈವಿಧ್ಯತೆಯನ್ನು ಉಳಿಸಿಕೊಂಡು ಮುಂದುವರೆಯಬೇಕಾದರೆ, ವಿಧಿ 5ನ ಮೂಲ ಉದ್ದೇಶವನ್ನು ಅರಿತು ಅದನ್ನು ಕಾರ್ಯರೂಪಕ್ಕೆ ತರುವುದು ಅಗತ್ಯವಾಗಿದೆ.
- ಗ್ಲೆನ್ ಗುಂಪಲಾಜೆ











