ಪುಸ್ತಕ ಓದುವುದು ಅಂದರೆ ಅನೇಕರಿಗೆ ಇಷ್ಟ. ಕೆಲವರು ಪುಸ್ತಕದ ಕಥಾವಸ್ತುವನ್ನು ಮೆಚ್ಚಿ ಓದುತ್ತಾರೆ, ಇನ್ನೂ ಕೆಲವರು ಅದರ ಶೀರ್ಷಿಕೆಯಿಂದಲೇ ಆಕರ್ಷಿತರಾಗಿ ಪುಸ್ತಕವನ್ನು ಕೈಗೆತ್ತಿಕೊಳ್ಳುತ್ತಾರೆ. ನಾನು ಓದಿದ "The Art of Being Alone" ಕೂಡ ಅಂತಹ ಒಂದು ಪುಸ್ತಕ. ಪುಸ್ತಕದ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ, ಲೇಖಕಿ ರೇಣುಕ ಗೌರಾನಿ ಬರೆದ ಈ ಪುಸ್ತಕದ ಶೀರ್ಷಿಕೆಯೇ ನನ್ನನ್ನು ಓದಲು ಪ್ರೇರೇಪಿಸಿತು.
ಜೀವನದ ಹಲವು ಗೊಂದಲಗಳು ಮತ್ತು ಆಲೋಚನೆಗಳಿಂದ ಹೊರಬರಲು ಪ್ರಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ಈ ಪುಸ್ತಕ ನನ್ನ ಕೈ ಸೇರಿತು. ಒಂದು ಉತ್ತಮ ಪುಸ್ತಕ ನಮ್ಮ ಜೀವನದ ದೃಷ್ಟಿಕೋನವನ್ನು ಬದಲಾಯಿಸುವ ಶಕ್ತಿ ಹೊಂದಿರುತ್ತದೆ ಎ೦ದು ಹಲವರು ಹೇಳುವುದನ್ನು ಕೇಳಿದ್ದೆ ಆದರೆ ಈ ಪುಸ್ತಕ ಓದಿದ ನಂತರ ನಾವು ಆಲೋಚನೆಗಳು ಮತ್ತು ಬದುಕನ್ನು ನೋಡುವ ದೃಷ್ಟಿಯನ್ನು ಹೇಗೆ ಬದಲಾಯಿಸುತ್ತೇವೆ ಎಂಬುವುದನ್ನು ಅರಿತೆ.
ಸಾಮಾನ್ಯವಾಗಿ ನಾವು ನಮ್ಮ ಜೀವನದಲ್ಲಿ ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬ ಚಿಂತೆಯಲ್ಲೇ ಕಳೆಯುತ್ತೇವೆ. ಇತರರನ್ನು ಮೆಚ್ಚಿಸಲು ಪ್ರಯತ್ನಿಸುವ ಭರದಲ್ಲಿ, ಎಲ್ಲೋ ನಮ್ಮ ನಿಜವಾದ ವ್ಯಕ್ತಿತ್ವವನ್ನು ಮರೆತುಬಿಡುತ್ತೇವೆ. ವಾಸ್ತವದಲ್ಲಿ, ನಮ್ಮ ಜೀವನವನ್ನು ಯಾರನ್ನೂ ಮೆಚ್ಚಿಸಲು ಬದುಕಬೇಕಾಗಿಲ್ಲ ಎಂಬ ಸತ್ಯವನ್ನು ನಾವು ಮರೆತುಬಿಡುತ್ತೇವೆ.ಇನ್ನೊಂದೆಡೆ ನಮ್ಮ ಇಂತಹ ವರ್ತನೆಯಿ೦ದ ಒಬ್ಬ ವ್ಯಕ್ತಿಯ ಮೇಲೆ ಅತಿಯಾಗಿ ಅವಲಂಬಿತರಾಗುತ್ತೇವೆ ಆ ವ್ಯಕ್ತಿ ತನ್ನ ಸಂಪೂರ್ಣ ಸಮಯವನ್ನು ನಮಗಾಗಿ ಮೀಸಲಿಡಬೇಕು ಎಂದು ನಿರೀಕ್ಷಿಸುತ್ತೇವೆ ಆದರೆ 24 ಗಂಟೆಗಳ ಕಾಲ ಅವರು ನಮ್ಮೊಂದಿಗೆ ಇರಲು ಸಾಧ್ಯವಿಲ್ಲ, ಅವರಿಗೂ ತಮ್ಮದೇ ಆದ ಜೀವನ, ಜವಾಬ್ದಾರಿಗಳು ಮತ್ತು ಕರ್ತವ್ಯಗಳಿವೆ ಎಂಬುದನ್ನು ಮರೆತುಬಿಡುತ್ತೇವೆ. ಕೆಲವೊಮ್ಮೆ ಅಂತಹ ಅವಲಂಬಿ ವ್ಯಕ್ತಿಯೊಂದಿಗೆ ಇದ್ದರೂ ಒಂಟಿತನ ಕಾಡುತ್ತದೆ ಅಂತಹ ಸಂದರ್ಭದಲ್ಲಿ, ಸ್ವತಃ ನಮ್ಮೊಂದಿಗೆ ಸಂತೋಷವಾಗಿರುವುದನ್ನು ಕಲಿಯುವುದು ಹೆಚ್ಚು ಮುಖ್ಯ. ಈ ಸ್ವ-ಸಹಾಯ (Self-help) ಪುಸ್ತಕವು ಸ್ವ-ಬೆಳವಣಿಗೆ (Self-growth), ಸ್ವ-ಪ್ರೀತಿ (Self-love) ಮತ್ತು ಸ್ವಂತ ಸಂಗಡವನ್ನು ಆನಂದಿಸುವ ಮಹತ್ವವನ್ನು ತಿಳಿಸುತ್ತದೆ. ಇತರರಿಂದ ಸಂತೋಷವನ್ನು ನಿರೀಕ್ಷಿಸುವ ಬದಲು, ನಮ್ಮನ್ನು ನಾವು ಅರ್ಥಮಾಡಿಕೊಳ್ಳಬೇಕು. ಹೊಸ ವಿಷಯಗಳನ್ನು ಕಲಿಯಬೇಕು, ಹೊಸ ಅನುಭವಗಳನ್ನು ಸ್ವೀಕರಿಸಬೇಕು ಮತ್ತು ನಮ್ಮ ಸಂತೋಷದ ಮೂಲವನ್ನು ನಮ್ಮೊಳಗೇ ಕಂಡುಕೊಳ್ಳಬೇಕು, ಇತರರು ಏನು ಹೇಳುತ್ತಾರೆ ಎಂಬ ಭಯದಲ್ಲಿ ಬದುಕುವುದಕ್ಕಿಂತ, ನಮ್ಮ ಜೀವನವನ್ನು ನಮ್ಮ ರೀತಿಯಲ್ಲಿ ಬದುಕಬೇಕು. ಪ್ರತಿಯೊಂದು ಕ್ಷಣವನ್ನೂ ಆನಂದಿಸುತ್ತಾ, ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು ಎಂಬ ವಿಷಯಗಳನ್ನು ಬಲು ಸೊಗಸಾಗಿ ಪುಸ್ತಕದಲ್ಲಿ ಲೇಖಕಿ ವಿವರಿಸುತ್ತಾರೆ.
ಒಟ್ಟಾರೆಯಾಗಿ, ಇತರರ ಸಂಗಡವನ್ನು ಹುಡುಕುವುದಕ್ಕಿಂತ ನಮ್ಮ ಸ್ವಂತ ಸಂಗಡವನ್ನು ಪ್ರೀತಿಸಿ, ಅದರಲ್ಲಿ ಸಂತೋಷವನ್ನು ಕಂಡುಕೊಳ್ಳುವುದನ್ನು ಈ ಪುಸ್ತಕ ಕಲಿಸುತ್ತದೆ. ಎಲ್ಲರ ಜೊತೆ ಇದ್ದೂ ಒಂಟಿತನ ಅನುಭವಿಸುವುದಕ್ಕಿಂತ, ಒಬ್ಬಂಟಿಯಾಗಿಯೇ ಸಂತೋಷವಾಗಿ ಬದುಕುವುದು ಉತ್ತಮ. ಮತ್ತೊಬ್ಬರ ನಿರೀಕ್ಷೆಯಲ್ಲಿ ನಮ್ಮನ್ನು ನಾವು ಕಳೆದುಕೊಳ್ಳಬಾರದು ಎಂಬ ಅಮೂಲ್ಯ ಸಂದೇಶವನ್ನು ಈ ಕೃತಿ ಓದುಗರಿಗೆ ನೀಡುತ್ತದೆ.
– ತನುಶ್ರೀ ಸಿ. ಕೆ.









