ನಮ್ಮ ದೇಶದ ಸಂವಿಧಾನ ನಮಗೆ ಕೊಟ್ಟಿರುವ ಅತ್ಯಂತ ದೊಡ್ಡ ಆಸ್ತಿ ಎಂದರೆ ಅದು 'ಸಮಾನತೆಯ ಹಕ್ಕು'. ಭಾರತದ ಸಂವಿಧಾನದ ವಿಧಿ 14 (Article 14) ರ ಅಡಿಯಲ್ಲಿ ಬರುವ ಈ ಹಕ್ಕು ಕೇವಲ ಪುಸ್ತಕದಲ್ಲಿರುವ ಕಾನೂನಲ್ಲ; ಅದು ನಮ್ಮ ಬದುಕಿಗೆ ರಕ್ಷಣೆ ಕೊಡುವ ಒಂದು ಜೀವಂತ ಶಕ್ತಿ.
ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮೊದಲು ಒಂದು ಸಣ್ಣ ಕಥೆಯನ್ನು ನೋಡೋಣ.
ಒಂದು ನಗರದ ರಸ್ತೆಯಲ್ಲಿ ಒಂದೇ ದಿನ ಇಬ್ಬರು ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಾರೆ. ಮೊದಲನೆಯವನು ಒಬ್ಬ ದೊಡ್ಡ ಕೋಟ್ಯಾಧಿಪತಿ ಉದ್ಯಮಿ, ತನ್ನ ದುಬಾರಿ ಕಾರಿನಲ್ಲಿ ಕೆಂಪು ಸಿಗ್ನಲ್ ದಾಟುತ್ತಾನೆ. ಎರಡನೆಯವನು ದಿನಗೂಲಿ ಕಾರ್ಮಿಕ, ತನ್ನ ಹಳೆಯ ಬೈಕ್‌ನಲ್ಲಿ ಅದೇ ತಪ್ಪು ಮಾಡುತ್ತಾನೆ.
ಪೊಲೀಸರು ಇಬ್ಬರಿಗೂ ದಂಡ ವಿಧಿಸುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಆ ದೊಡ್ಡ ಉದ್ಯಮಿ ತನ್ನ ಅಧಿಕಾರಿಗಳ ಪ್ರಭಾವ ಬಳಸಿ ದಂಡವನ್ನು ರದ್ದು ಮಾಡಿಸಿಕೊಳ್ಳುತ್ತಾನೆ. ಆದರೆ ಬಡ ಕಾರ್ಮಿಕನಿಗೆ ಮಾತ್ರ "ಕೂಡಲೇ ದಂಡ ಕಟ್ಟದಿದ್ದರೆ ಬೈಕ್ ಜಪ್ತಿ ಮಾಡುತ್ತೇವೆ" ಎಂದು ಪೊಲೀಸರಿಂದ ನೋಟಿಸ್ ಬರುತ್ತದೆ.
ಅಗ ಆ ಕಾರ್ಮಿಕ, "ಒಂದೇ ತಪ್ಪು ಮಾಡಿದ್ದೇವೆ, ಶಿಕ್ಷೆ ಮಾತ್ರ ಇಬ್ಬರಿಗೂ ಬೇರೆ ಬೇರೆ ಯಾಕೆ?" ಎಂದು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುತ್ತಾನೆ.
ಕಾನೂನಿನ ಮುಂದೆ ಎಲ್ಲರೂ ಸಮಾನರೇ? ಅಥವಾ ದುಡ್ಡು, ಅಧಿಕಾರ ಇದ್ದವರಿಗೆ ಬೇರೆ ಕಾನೂನು, ಬಡವರಿಗೆ ಬೇರೆ ಕಾನೂನು ಇದೆಯೇ? ಎಂಬ ಕಾರ್ಮಿಕನ ಪ್ರಶ್ನೆಗೆ ನ್ಯಾಯಾಲಯ ನೀಡಿದ ಉತ್ತರವೇ ಸಂವಿಧಾನದ ವಿಧಿ 14.
ವಿಧಿ 14 ಏನು ಹೇಳುತ್ತದೆ?
"ಭಾರತದ ಗಡಿಯೊಳಗೆ ಇರುವ ಯಾವುದೇ ವ್ಯಕ್ತಿಗೆ ಸರ್ಕಾರವು ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಕಾನೂನುಗಳ ಸಮಾನ ರಕ್ಷಣೆಯನ್ನು ನಿರಾಕರಿಸುವಂತಿಲ್ಲ."
ಈ ಒಂದೇ ಒಂದು ಸಾಲಿನಲ್ಲಿ ಇಡೀ ದೇಶದ ನ್ಯಾಯದ ವ್ಯವಸ್ಥೆ ಅಡಗಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನಾವು ಇದರ ಎರಡು ಮುಖಗಳನ್ನು ನೋಡಬೇಕು.
1. ಕಾನೂನಿನ ಮುಂದೆ ಸಮಾನತೆ (Equality Before Law)
ಇದರ ಅರ್ಥ ಕಾನೂನಿಗಿಂತ ಮೇಲೆ ಈ ದೇಶದಲ್ಲಿ ಯಾರೂ ಇಲ್ಲ. ವ್ಯಕ್ತಿಯ ಜಾತಿ, ಧರ್ಮ, ಲಿಂಗ, ಆರ್ಥಿಕ ಸ್ಥಿತಿ ಅಥವಾ ಸಾಮಾಜಿಕ ಹಿನ್ನೆಲೆ ಏನೇ ಇರಲಿ, ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಒಂದೇ. ಒಬ್ಬ ಪ್ರಧಾನ ಮಂತ್ರಿಯಾಗಲಿ, ದೊಡ್ಡ ಉದ್ಯಮಿಯಾಗಲಿ ಅಥವಾ ಸಾಮಾನ್ಯ ರೈತನಾಗಲಿ, ತಪ್ಪು ಮಾಡಿದರೆ ಶಿಕ್ಷೆ ಎಲ್ಲರಿಗೂ ಒಂದೇ ರೀತಿ ಇರುತ್ತದೆ. ಯಾರಿಗೂ 'ವಿಶೇಷ ಸವಲತ್ತು' ಇರುವುದಿಲ್ಲ.
2. ಕಾನೂನುಗಳ ಸಮಾನ ರಕ್ಷಣೆ (Equal Protection of Laws)
ಸಮಾನತೆ ಎಂದರೆ ಕೇವಲ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದಲ್ಲ. ಪರಿಸ್ಥಿತಿಗೆ ತಕ್ಕಂತೆ ನ್ಯಾಯ ಒದಗಿಸುವುದು.
ಉದಾಹರಣೆಗೆ, ಒಬ್ಬ ಅಂಗವಿಕಲ ವ್ಯಕ್ತಿ ಮತ್ತು ಓಡುವ ಪಟು ಇಬ್ಬರನ್ನೂ ಒಂದೇ ರೇಸ್‌ನಲ್ಲಿ ಓಡಿಸಿ 'ನಾವು ಸಮಾನವಾಗಿ ನಡೆಸಿಕೊಂಡೆವು' ಎಂದರೆ ಅದು ನ್ಯಾಯವಲ್ಲ. ಅದಕ್ಕಾಗಿಯೇ ಸಮಾಜದಲ್ಲಿ ದುರ್ಬಲರಾದವರು, ಹಿಂದುಳಿದವರು, ಮಹಿಳೆಯರು, ಮಕ್ಕಳು ಮತ್ತು ಅಂಗವಿಕಲರಿಗೆ ಸರ್ಕಾರ ವಿಶೇಷ ಯೋಜನೆಗಳು ಅಥವಾ ಮೀಸಲಾತಿ ತಂದಾಗ ಅದನ್ನು 'ತಾರತಮ್ಯ' ಅನ್ನಲು ಸಾಧ್ಯವಾಗುವುದಿಲ್ಲ ಎಲ್ಲರನ್ನೂ ಒಂದೇ ಮಟ್ಟಕ್ಕೆ ತರಲು ಇಂತಹ ವಿಶೇಷ ರಕ್ಷಣೆ ಅಗತ್ಯವಿರುತ್ತದೆ.
ವಿಧಿ 14ರ ವಿಶೇಷತೆಗಳು
ಈ ವಿಧಿಯ ದೊಡ್ಡ ತನ ಏನೆಂದರೆ, ಇದು ಕೇವಲ ಭಾರತದ ನಾಗರಿಕರಿಗೆ ಮಾತ್ರವಲ್ಲ, ನಮ್ಮ ದೇಶಕ್ಕೆ ಪ್ರವಾಸಕ್ಕೆ ಬಂದ ವಿದೇಶಿಯರಿಗೂ, ಭಾರತದ ನೆಲದಲ್ಲಿ ಕಾಲಿಟ್ಟ ಪ್ರತಿಯೊಬ್ಬ ಮನುಷ್ಯನಿಗೂ ಅನ್ವಯಿಸುತ್ತದೆ ಮತ್ತು ಈ ಸಮಾನತೆಯ ರಕ್ಷಣೆ ಸಿಗುತ್ತದೆ.
ಮನಬಂದಂತೆ ಆಡಳಿತ ನಡೆಸಲು ಬ್ರೇಕ್: ಅಧಿಕಾರಿಗಳು ಅಥವಾ ಸರ್ಕಾರಗಳು ತಮಗೆ ಇಷ್ಟ ಬಂದಂತೆ, ನಿಯಮ ಮೀರಿ ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ. ಇ.ಪಿ. ರಾಯಪ್ಪ ಮತ್ತು ತಮಿಳುನಾಡು ಸರ್ಕಾರದ ಕೇಸ್ (E.P. Royappa v. State of Tamil Nadu) ನಲ್ಲಿ ಸುಪ್ರೀಂ ಕೋರ್ಟ್ ಒಂದು ಮಾತು ಹೇಳಿತು — "ಸಮಾನತೆ ಮತ್ತು ಮನಬಂದ ಆಡಳಿತ (Arbitrariness) ಇವೆರಡೂ ಜನ್ಮಶತ್ರುಗಳು. ಎಲ್ಲಿ ಮನಬಂದಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆಯೋ, ಅಲ್ಲಿ ಸಮಾನತೆ ಸತ್ತುಹೋಗುತ್ತದೆ."
ಇದು ಕೇವಲ ಕಾನೂನಲ್ಲ, ಬದುಕಿನ ಮೌಲ್ಯ
ಇದು ಕೇವಲ ವಕೀಲರು ಮಾತನಾಡಬೇಕಾದ ಕೋರ್ಟ್ ರೂಮಿನ ವಿಷಯವಲ್ಲ ಒಬ್ಬ ರೈತನಿಗೆ, ದಿನಗೂಲಿ ಕಾರ್ಮಿಕನಿಗೆ, ಮಹಿಳೆಗೆ, ವಿದ್ಯಾರ್ಥಿಗೆ ಹಾಗೂ ತೃತೀಯಲಿಂಗಿ ವ್ಯಕ್ತಿಗೆ ಸಮಾಜದಲ್ಲಿ ನೆಮ್ಮದಿಯಿಂದ ತಲೆ ಎತ್ತಿ ಬದುಕಲು ಕೊಟ್ಟಿರುವ ಭರವಸೆ. ಇದರ ಸಂದೇಶ ಬಲು ಸರಳ "ಒಬ್ಬ ಮನುಷ್ಯನ ಯೋಗ್ಯತೆಯನ್ನು ಅವನ ಜಾತಿ, ಧರ್ಮ, ಲಿಂಗ ಅಥವಾ ದುಡ್ಡಿನಿಂದ ಅಳೆಯಬಾರದು. ಅವನು ಮನುಷ್ಯನಾಗಿ ಹುಟ್ಟಿದ್ದಾನೆ ಎಂಬ ಒಂದೇ ಕಾರಣಕ್ಕೆ ಅವನು ಗೌರವ ಮತ್ತು ಸಮಾನತೆಗೆ ಅರ್ಹನು."
ನಮ್ಮ ದೇಶದ ಪ್ರಜಾಪ್ರಭುತ್ವದ ಭವ್ಯ ಕಟ್ಟಡವು ನಿಂತಿರುವುದೇ ಇಂತಹ ಬಲವಾದ ಸ್ತಂಭಗಳ ಮೇಲೆ. ಸಮಾನತೆಯ ಈ ಬೆಳಕು ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಬದುಕನ್ನು ತಲುಪಿದಾಗ ಮಾತ್ರ ಸಂವಿಧಾನದ ನಿಜವಾದ ಕನಸು ನನಸಾಗುತ್ತದೆ.
-ಗ್ಲೆನ್ ಗುಂಪಲಾಜೆ









