ತಮಿಳು ಚಿತ್ರರಂಗದ ಅಭಿಮಾನಿಗಳು ಅವರನ್ನು ಪ್ರೀತಿಯಿಂದ “ತಳಪತಿ” ಎಂದು ಕರೆಯುತ್ತಾರೆ. ಆದರೆ ಇಂದು ಆ ತಳಪತಿ ಕೇವಲ ಚಿತ್ರರಂಗದ ನಾಯಕನಲ್ಲ; ಜನರ ಮತದ ಮೂಲಕ ಅಧಿಕಾರದ ಗದ್ದುಗೆ ಏರಿದ ರಾಜಕೀಯ ನಾಯಕ. ಬಾಲನಟನಾಗಿ ಆರಂಭವಾದ ಪಯಣ, ಸೂಪರ್‌ಸ್ಟಾರ್ ಸ್ಥಾನವನ್ನು ದಾಟಿ ಮುಖ್ಯಮಂತ್ರಿ ಹುದ್ದೆಯವರೆಗೆ ತಲುಪಿರುವುದು ಭಾರತೀಯ ರಾಜಕೀಯ ಮತ್ತು ಸಿನಿರಂಗ ಎರಡಕ್ಕೂ ವಿಶಿಷ್ಟ ಅಧ್ಯಾಯವಾಗಿದೆ. ಇದು ಜೊಸೆಫ್ ವಿಜಯ್ ಚಂದ್ರಶೆಕರ್ ಅವರ ಪಯಣವು ಕನಸು, ಪರಿಶ್ರಮ ಮತ್ತು ಜನಬೆಂಬಲದ ಅಪರೂಪದ ಕಥೆ.
ಬಾಲನಟನಿಂದ ನಾಯಕನತ್ತ
1974ರ ಜೂನ್ 22ರಂದು ಜನಿಸಿದ ವಿಜಯ್, ನಿರ್ದೇಶಕ ಎಸ್. ಎ. ಚಂದ್ರಶೆಕರ್ ಮತ್ತು ಗಾಯಕಿ ಶೊಭ ಚಂದ್ರಶೆಕರ್ ಅವರ ಪುತ್ರ. ಸಿನಿಮಾ ಅವರ ಕುಟುಂಬದ ವಾತಾವರಣದ ಭಾಗವಾಗಿತ್ತು. ಕೇವಲ ಹತ್ತು ವರ್ಷದ ಬಾಲಕನಾಗಿದ್ದಾಗ ತಂದೆಯ ಚಿತ್ರ ವೆಟ್ರಿಯಲ್ಲಿ ಸಣ್ಣ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ಮುಂದೆ ಲಕ್ಷಾಂತರ ಅಭಿಮಾನಿಗಳ ಹೃದಯದ ರಾಜನಾಗುತ್ತಾನೆಂದು ಯಾರು ಊಹಿಸಿರಲಿಲ್ಲ.
ಬಾಲನಟನಾಗಿ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡ ಬಳಿಕ, 1992ರಲ್ಲಿ ನಾಲೈಯ ತಿರ್ಪು ಚಿತ್ರದ ಮೂಲಕ ನಾಯಕನಾಗಿ ಪರಿಚಯವಾದರು. ಮೊದಲ ಪ್ರಯತ್ನ ಅಷ್ಟಾಗಿ ಯಶಸ್ವಿಯಾಗಲಿಲ್ಲ ಮಾತ್ರವಲ್ಲದೆ ಅವರ ಅಭಿನಯ ಮತ್ತು ವ್ಯಕ್ತಿತ್ವದ ಬಗ್ಗೆಯೂ ಟೀಕೆಗಳು ಕೇಳಿಬಂದವು. ಆದರೆ ಅದೇ ಟೀಕೆಗಳನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಂಡ ವಿಜಯ್ ತಮ್ಮ ಪ್ರಯಾಣವನ್ನು ಮುಂದುವರಿಸಿದರು.
‘ಇಳಯ ತಳಪತಿ’ಯ ಜನನ
1994ರಲ್ಲಿ ಬಿಡುಗಡೆಯಾದ ರಸಿಗನ್ ಚಿತ್ರದ ಬಳಿಕ ಅಭಿಮಾನಿಗಳು ವಿಜಯ್ ಅವರನ್ನು “ಇಳಯ ತಳಪತಿ” ಎಂದು ಕರೆಯಲು ಆರಂಭಿಸಿದರು. ಆ ಹೆಸರು ಕೇವಲ ಬಿರುದಾಗಿ ಉಳಿಯಲಿಲ್ಲ; ಅದು ಮುಂದಿನ ಮೂರು ದಶಕಗಳ ಕಾಲ ಅವರ ವ್ಯಕ್ತಿತ್ವದ ಭಾಗವಾಯಿತು.
1990ರ ದಶಕದಲ್ಲಿ ಪೂವೆ ಉನಕ್ಕಾಗ , ಕಧಲುಕ್ಕು ಮರಿಯಾಧೈ, ಕುಶಿ ಮುಂತಾದ ಚಿತ್ರಗಳು ವಿಜಯ್ ಅವರನ್ನು ಯುವಜನತೆಯ ಹೃದಯಕ್ಕೆ ಇನ್ನಷ್ಟು ಹತ್ತಿರ ತಂದವು. ಪ್ರೇಮಕಥೆಗಳ ನಾಯಕನಾಗಿ ಗುರುತಿಸಿಕೊಂಡ ಅವರು, 2000ರ ದಶಕದಲ್ಲಿ ತಮ್ಮ ಇಮೇಜ್‌ನ್ನು ಬದಲಿಸಿಕೊಂಡರು.
ಮಾಸ್ ಹೀರೋ ಆಗಿ ರೂಪಾಂತರ
2003ರ ತಿರುಮಲ ಮತ್ತು 2004ರ ಗಿಲ್ಲಿ ಚಿತ್ರಗಳು ವಿಜಯ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿದವು. ಈ ಚಿತ್ರಗಳ ಯಶಸ್ಸಿನೊಂದಿಗೆ ಅವರು ಕೇವಲ ನಟನಲ್ಲ, “ಮಾಸ್ ಹೀರೋ” ಆಗಿ ಹೊರಹೊಮ್ಮಿದರು. ನಂತರ ಬಂದ ಪೋಕಿರಿ, ತುಪಾಕಿ, ಥೆರ್ರಿ, ಮೆರ್ಸಾಲ್, ಬಿಗಿಲ್, ಮಾಸ್ಟರ ಹಾಗೂ ಲಿಯೋ ಮೊದಲಾದ ಚಿತ್ರಗಳು ಅವರನ್ನು ತಮಿಳು ಚಿತ್ರರಂಗದ ಅಗ್ರನಟರ ಸಾಲಿನಲ್ಲಿ ಸ್ಥಾಪಿಸಿತು.
ಅವರ ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಕಾಣುತ್ತಿದ್ದಂತೆ ಅಭಿಮಾನಿಗಳ ಬಳಗವೂ ವಿಸ್ತಾರಗೊಂಡಿತು. ಈ ಅಭಿಮಾನಿ ಬಳಗವೇ ಮುಂದೆ ಅವರ ರಾಜಕೀಯ ಪಯಣದ ಬಲಿಷ್ಠ ಅಡಿಪಾಯವಾಯಿತು.
ಅಭಿಮಾನಿ ಸಂಘದಿಂದ ರಾಜಕೀಯ ಸಂಘಟನೆಯವರೆಗೆ
ವಿಜಯ್ ತಮ್ಮ ಅಭಿಮಾನಿ ಸಂಘಟನೆಗಳನ್ನು ಸಮಾಜಮುಖಿ ಚಟುವಟಿಕೆಗಳತ್ತ ಕೊಂಡೊಯ್ಯುವ ಪ್ರಯತ್ನವನ್ನು ಬಹಳ ಹಿಂದೆಯೇ ಆರಂಭಿಸಿದ್ದರು. 2009ರಲ್ಲಿ ವಿಜಯ್ ಮಕ್ಕಳ್ ಇಯಕ್ಕಂ ಎಂಬ ಸಂಘಟನೆಯ ಮೂಲಕ ಜನಸೇವೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ ಅವರು ರಕ್ತದಾನ ಶಿಬಿರಗಳು, ವಿದ್ಯಾರ್ಥಿಗಳಿಗೆ ನೆರವು ಮತ್ತು ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ಇನಷ್ಟು ಗುರುತಿಸಿಕೊಂಡರು.
ಇದೇ ಸಂಘಟನೆ ಮುಂದೆ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂಬುದು ಅಂದಿನವರಿಗೆ ಗೊತ್ತಿರಲಿಲ್ಲ.
ರಾಜಕೀಯ ಪ್ರವೇಶ
2024ರ ಫೆಬ್ರವರಿ 2ರಂದು ವಿಜಯ್ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam - TVK) ಪಕ್ಷವನ್ನು ಸ್ಥಾಪಿಸಿದರು. ಇದು ಕೇವಲ ಹೊಸ ಪಕ್ಷದ ಘೋಷಣೆಯಾಗಿರಲಿಲ್ಲ; ಅವರ ಜೀವನದ ಹೊಸ ಅಧ್ಯಾಯದ ಆರಂಭವಾಗಿತ್ತು. ಅಭಿಮಾನಿ ಸಂಘಟನೆಗಳ ಜಾಲವನ್ನು ರಾಜಕೀಯ ಸಂಘಟನೆಯಾಗಿ ಪರಿವರ್ತಿಸಿ, ರಾಜ್ಯದಾದ್ಯಂತ ಬಲಿಷ್ಠ ನೆಲೆಯನ್ನು ನಿರ್ಮಿಸಿದರು ಇದಕ್ಕೆ ಅಂದು ಸೇರಿದ್ದ ಜನರೇ ಸಾಕ್ಷಿ.
ಯುವಜನರನ್ನು ಗುರಿಯಾಗಿಸಿಕೊಂಡ ಪ್ರಚಾರ, ಸಾಮಾಜಿಕ ಮಾಧ್ಯಮಗಳ ಪರಿಣಾಮಕಾರಿ ಬಳಕೆ ಮತ್ತು ಜನರೊಂದಿಗೆ ನೇರ ಸಂಪರ್ಕ ಅವರ ರಾಜಕೀಯ ಶೈಲಿಯ ಪ್ರಮುಖ ಲಕ್ಷಣಗಳಾಗಿದ್ದವು.
ಐತಿಹಾಸಿಕ ಜಯ
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ ಮೊದಲ ಬಾರಿಗೆ ಸ್ಪರ್ಧಿಸಿತು. ರಾಜಕೀಯ ಅನುಭವ ಕಡಿಮೆ ಎಂಬ ಟೀಕೆಗಳ ನಡುವೆಯೂ, ಜನರು ಅವರಿಗೆ ದೊಡ್ಡ ಮಟ್ಟದ ಬೆಂಬಲ ನೀಡಿದರು. ಪಕ್ಷವು ಗಮನಾರ್ಹ ಸಂಖ್ಯೆಯ ಸ್ಥಾನಗಳನ್ನು ಗೆದ್ದು ರಾಜ್ಯ ರಾಜಕೀಯದಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಿತು. ನಂತರ ಮೈತ್ರಿ ಬೆಂಬಲದೊಂದಿಗೆ ಸರ್ಕಾರ ರಚಿಸಿ, ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನದ ದಿನ ಅವರು ಜನರಿಗೆ ಪಾರದರ್ಶಕ ಆಡಳಿತ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ಸ್ಪಷ್ಟ ಭರವಸೆ ನೀಡಿದರು.
ಪರದೆಯ ನಾಯಕನಿಂದ ಜನನಾಯಕನಿಗೆ
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದಿಂದ ರಾಜಕೀಯಕ್ಕೆ ಬಂದ ನಾಯಕರ ಕೊರತೆಯಿಲ್ಲ. ಎಂ. ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತ ಅವರಂತೆ ವಿಜಯ್ ಕೂಡ ತಮ್ಮ ಸಿನಿ ಜನಪ್ರಿಯತೆಯನ್ನು ರಾಜಕೀಯ ಬಲವಾಗಿ ಪರಿವರ್ತಿಸಿಕೊಂಡಿದ್ದಾರೆ. ಆದರೆ ಅವರ ಪಯಣದ ವಿಶೇಷತೆ ಎಂದರೆ, ಅಭಿಮಾನಿಗಳ ಪ್ರೀತಿಯನ್ನು ಸಂಘಟಿತ ಜನಬೆಂಬಲವಾಗಿ ರೂಪಿಸಿ ಅಧಿಕಾರದ ಗದ್ದುಗೆಯವರೆಗೆ ತಲುಪಿರುವುದು.
ಒಂದು ಕಾಲದಲ್ಲಿ ತಂದೆಯ ಚಿತ್ರದ ಸಣ್ಣ ಪಾತ್ರಕ್ಕಾಗಿ ಸಂಭಾವನೆ ಪಡೆದ ಬಾಲಕ ಇಂದು ಲಕ್ಷಾಂತರ ಜನರ ಆಶಾಭರವಸೆಯ ಪ್ರತಿನಿಧಿಯಾಗಿದ್ದಾನೆ. ವಿಜಯ್ ಅವರ ಕಥೆ ಕೇವಲ ಒಬ್ಬ ನಟನ ಯಶೋಗಾಥೆಯಲ್ಲ; ಅದು ಕನಸುಗಳನ್ನು ಬೆನ್ನಟ್ಟಿದ ವ್ಯಕ್ತಿಯ ನಿರಂತರ ಹೋರಾಟದ ಕಥೆ. “ಇಳಯ ತಳಪತಿ”ಯಾಗಿ ಆರಂಭವಾದ ಈ ಪಯಣ ಇಂದು ಮುಖ್ಯಮಂತ್ರಿಯ ಕಚೇರಿಯವರೆಗೆ ತಲುಪಿದೆ. ಆದರೆ ಜನರ ನಿರೀಕ್ಷೆಗಳನ್ನು ಈಡೇರಿಸುವ ಮೂಲಕ ಇತಿಹಾಸದಲ್ಲಿ ತನ್ನ ಹೆಸರನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದೇ ಅವರ ಮುಂದಿನ ಅಧ್ಯಾಯವನ್ನು ನಿರ್ಧರಿಸಲಿದೆ.
ಇಂದು ತಮ್ಮ ಜನ್ಮ ದಿನವನ್ನು ಆಚರಿಸುವ ಈ ಸಂದರ್ಭದಲ್ಲಿ, ಜನರಿಗೆ ಒಳಿತು ಮಾಡುವ ಶಕ್ತಿ ದೇವರು ಅವರಿಗೆ ಕರುನಿಸಲಿ.
ಜನ್ಮ ದಿನದ ಹಾರ್ದಿಕ ಶುಭಾಶಯಗಳು ‘ಇಳಯ ತಳಪತಿ’.
-ಗ್ಲೆನ್ ಗುಂಪಲಾಜೆ
ಸಂ. ಕದಂಬ ಪತ್ರಿಕೆ









