ರಾಮಪುರ ಎಂಬ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಸ್ವಾತಿ ಎಂಬ ಬಡ ಕುಟುಂಬದ ಹುಡುಗಿ 10ನೇ ತರಗತಿಯಲ್ಲಿ ಓದುತ್ತಿರುತ್ತಾಳೆ. ಸ್ವಾತಿ ಓದಿನಲ್ಲಿ ಸ್ವಲ್ಪ ಹಿಂದಿದ್ದಳು ಮತ್ತು ಶಾಲೆಯ ಶಿಕ್ಷಕರು ಪ್ರತಿ ಬಾರಿ ಅವಳನ್ನ ಬೈಯುತ್ತಿದ್ದರು. ಅದರಲ್ಲೂ ವಿಶೇಷವಾಗಿ ಸ್ವಾತಿಯ ವಿಜ್ಞಾನ ಗುರುಗಳಾದ ರಾಮಯ್ಯ ಮಾತ್ರ ಸ್ವಲ್ಪ ಹೆಚ್ಚಾಗಿ ತರಗತಿಗಳಲ್ಲಿ ಅವಳಿಗೆ "ನೀನು ಅಂಕಗಣಿಸುವುದಿಲ್ಲ ನೀನು ದೊಡ್ಡ ದಡ್ಡಿ" ,"ಈ ಜನ್ಮದಲ್ಲಿ ನೀನು ಉದ್ಧಾರವಾಗುವುದಿಲ್ಲ'' ಅಂತ ತುಂಬಾ ಬೈಯುತ್ತಿದ್ದರು. ಇಡೀ ಕ್ಲಾಸ್ ಮುಂದೆ ನಿಲ್ಲಿಸಿ ಅವಳನ್ನ ಅವಮಾನಿಸುತ್ತಿದ್ದರು.
ಇದರಿಂದ ಬೇಸರಗೊಂಡ ಸ್ವಾತಿ ಸಂಜೆ ಶಾಲೆ ಬಿಟ್ಟು ಮನೆಗೆ ಬಂದಾಗ ತಾಯಿಯ ಮಡಿಲಲ್ಲಿ ಮಲಗಿಕೊಂಡು ಎಲ್ಲವನ್ನು ನೆನೆದು ಅಳುತ್ತಿದಳು. ತಾಯಿ ಸೀತಮ್ಮ ಶಿಕ್ಷಕರು ಬೈಯುವುದನ್ನು ಮನಸ್ಸಿಗೆ ಹೆಚ್ಚು ಹಚ್ಚಿಕೊಳ್ಳದೆ , ಯೋಚಿಸುವುದನ್ನು ಬಿಟ್ಟು ಓದುವುದರ ಕಡೆ ಗಮನ ಕೊಡುವುದಕ್ಕೆ ಅವಳಿಗೆ ಬುದ್ಧಿ ಹೇಳುತ್ತಿದ್ದರು.
ಸ್ವಾತಿ ದಡ್ಡಿ ಏನಲ್ಲ ಆದರೆ, ತಂದೆ ಇಲ್ಲದ ಸ್ವಾತಿಗೆ ಅವಳ ತಾಯಿ ಸೀತಮ್ಮನೆ ಆಸರೆ ತುಂಬಾ ಚುರುಕಿನ ಹುಡುಗಿ ಸ್ವಾತಿ. ಆದರೆ , ಪರೀಕ್ಷೆಯಲ್ಲಿ ಅಂಕಗಳಿಸುವುದು ಅವಳಿಂದ ಸಾಧ್ಯವಾಗುತ್ತಿರಲಿಲ್ಲ . ಅದಕ್ಕೆ ಕಾರಣ ಕೂಡ ಇದೆ. ತಾಯಿ ಗೌರಮ್ಮ ದಿನಪೂರ್ತಿ ಬೇರೆಯವರ ಮನೆಯಲ್ಲಿ ಪಾತ್ರೆ-ಪಗಡೆ ತೊಳೆದು, ಕಷ್ಟಪಟ್ಟು ದುಡಿದರು ಅದು ಅವರ ಮೂರು ಹೊತ್ತಿನ ಊಟಕ್ಕೂ ಸಾಕಾಗುತ್ತಿರಲಿಲ್ಲ ಇದರಿಂದ ಸ್ವಾತಿಗೆ ಬದುಕಿನಲ್ಲಿ ಬಹಳಷ್ಟು ಕನಸುಗಳಿದ್ದರೂ, ಕಿತ್ತು ತಿನ್ನುವ ಬಡತನದಿಂದ ಓದಿನ ಕಡೆ ಹೆಚ್ಚು ಆಸಕ್ತಿ ವಹಿಸಲು ಅವಳಿಂದ ಸಾಧ್ಯವಾಗುತ್ತಿರಲಿಲ್ಲ, ಹೀಗಾಗಿ ಅಮ್ಮನಿಗೆ ನೆರವಾಗಲು ಪ್ರತಿನಿತ್ಯ ಬೆಳಿಗ್ಗೆ ಬೇಗ ಎದ್ದು ತಾಯಿ ಕಟ್ಟಿಕೊಡುತ್ತಿದ್ದ ಮಲ್ಲಿಗೆ ಹೂವನ್ನು ಪಕ್ಕದ ದೇವಾಲಯದ ಬಳಿ ತೆಗೆದುಕೊಂಡು ಹೋಗಿ ಮಾರುತಿದ್ದಳು. ಕೆಲವೊಮ್ಮೆ ಶಾಲೆಗೆ ಹೋಗುವುದು ಕೂಡ ತಡವಾಗುತ್ತಿತ್ತು. ಅಷ್ಟೇ ಅಲ್ಲದೆ ಸಂಜೆ ಶಾಲೆ ಮುಗಿಸಿ ಬಂದವಳೇ ತಾಯಿ ಕೆಲಸಕ್ಕೆ ಹೋಗುತ್ತಿದ್ದ ಮನೆಗಳಿಗೆ ಹೋಗಿ ತಾಯಿಯ ಕೆಲಸಗಳಿಗೆ ತನ್ನಿಂದ ಆದಷ್ಟು ಸಹಾಯ ಮಾಡುತ್ತಿದ್ದಳು .ತಾಯಿಯ ಕಷ್ಟಕ್ಕೆ ನೆರವಾಗಲು ದುಡಿಯುತ್ತಿದ್ದ ಸ್ವಾತಿಗೆ ಓದಿನ ಕಡೆ ಗಮನ ಹರಿಸುವುದು ಕಷ್ಟ ಸಾಧ್ಯವಾಗಿತ್ತು.
ಹೀಗೆ ಒಂದು ದಿನ ದೇವಾಲಯದಲ್ಲಿ ಎಂದಿನಂತೆ ಹೂವು ಮಾರುತ್ತಿದ್ದ ಸ್ವಾತಿಯನ್ನ ಅವಳ ವಿಜ್ಞಾನ ಮೇಷ್ಟ್ರು ರಾಮಯ್ಯ ದೂರದಿಂದಲೇ ನೋಡುತ್ತಾರೆ. ಮುಂದಿನ ಒಂದು ವಾರ ಪ್ರತಿದಿನ ಮೇಷ್ಟು ಸ್ವಾತಿ ಶ್ರಮವಹಿಸಿ ಮನೆಗಾಗಿ ಕಷ್ಟಪಟ್ಟು ದುಡಿಯುತ್ತಿದ್ದದನ್ನ ಗಮನಿಸುತ್ತಿದ್ದರು ಮತ್ತು ಇದರಿಂದ ಅವರ ಮನಸ್ಸು ಕರಗುತ್ತದೆ. ಅವಳಿಗೆ ಪ್ರತಿದಿನ ಬೈದಿದ್ದಕ್ಕೆ ಮನದೊಳಗೆ ನೋವನ್ನ ಪಟ್ಟುಕೊಂಡು ಅಲ್ಲಿಂದ ಮನೆಗೆ ತೆರಳುತ್ತಾರೆ.
ಮುಂದೆ ಶಾಲೆಯಲ್ಲಿ ಒಂದು ದಿನ ಮೇಷ್ಟ್ರು ಸ್ವಾತಿಯನ್ನ ಅವರ ಹತ್ತಿರ ಕರೆದು ತನ್ನನ್ನ ಭೇಟಿಯಾಗಬೇಕೆಂದು ಹೇಳುತ್ತಾರೆ ಇದನ್ನು ಕೇಳಿದ ಸ್ವಾತಿಗೆ ಎಲ್ಲರ ಮುಂದೆ ಬೈದಿದ್ದು ಸಾಕಾಗಿಲ್ಲ ಅಂತ ಈಗ ಎಲ್ಲಾ ಶಿಕ್ಷಕರ ಮುಂದೆ ನನ್ನ ಮರ್ಯಾದೆ ತೆಗಿತಾರೆ ಅಂತ ಮನದೊಳಗೆ ಗೊಂದಲವನ್ನ ಹೊತ್ತು ಮೇಷ್ಟ್ರು ಬಳಿ ಹೋದಾಗ, ಈಗಾಗಲೇ ಸ್ವಾತಿಯ ಮನೆ ಪರಿಸ್ಥಿತಿ ಅವಳ ಬಡತನದ ಕಥೆಯನ್ನ ಆಕೆಯ ಗೆಳತಿಯಲ್ಲಿ ಕೇಳಿಕೊಂಡಿರುತ್ತಾರೆ.
ಹೀಗೆ ಅಂದು ಮೇಷ್ಟ್ರು ಮೌನ ಮುರಿದು ಸ್ವಾತಿಯ ಬಳಿ ಮಾತನಾಡುತ್ತಾರೆ ''ಮುಂದಿನ ದಿನಗಳಲ್ಲಿ ನನ್ನ ಬಳಿಗೆ ಬಾ, ನಾನು ನಿನಗೆ ಒಂದು ಗಂಟೆ ಪಾಠ ಹೇಳಿಕೊಡುತ್ತೇನೆ, ಪರೀಕ್ಷೆಗೆ ಬೇಕಾದ ಎಲ್ಲಾ ಪ್ರಶ್ನೆಗಳು ಉತ್ತರವನ್ನು ನಾನು ಸಿದ್ಧಪಡಿಸಿ ಕೊಡುತ್ತೇನೆ ಹೇಗಾದರೂ ಮಾಡಿ ಈ ಬಾರಿ 10ನೇ ತರಗತಿ ಪರೀಕ್ಷೆಯಲ್ಲಿ ನೀನು ಉತ್ತಮವಾಗಿ ಅಂಕಗಳಿಸಬೇಕು'' ಎಂದು ಅವಳಿಗೆ ಧೈರ್ಯದ ಮಾತುಗಳೊಂದಿಗೆ ಬುದ್ಧಿ ಹೇಳಿ ಕಳುಹಿಸುತ್ತಾರೆ. ಮುಂದಿನ ದಿನಗಳಲ್ಲಿ ಸ್ವಾತಿ ಕಷ್ಟಪಟ್ಟು ಓದುತ್ತಾಳೆ . ಹಗಲು ರಾತ್ರಿ ಎನ್ನದೆ ಪರೀಕ್ಷೆಗೆ ಸಿದ್ಧವಾಗುತ್ತಾಳೆ ''ಕೈ ಕೆಸರಾದರೆ ಬಾಯಿ ಮೊಸರು" ಮಾತಿನಂತೆ ಕಷ್ಟಪಟ್ಟು ಮುಂದೆ ಯಾರ ನಿರೀಕ್ಷೆಗೂ ನಿಲುಕದಂತೆ ಹತ್ತನೇ ತರಗತಿ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ಪಾಸ್ ಮಾಡಿ ಶಾಲೆಗೆ ಒಳ್ಳೆ ಹೆಸರನ್ನು ತಂದುಕೊಟ್ಟು ಸ್ವಾತಿ ತನ್ನ ಪರಿಶ್ರಮ ಸ್ವಾಭಿಮಾನದ ಜೊತೆಗೆ ತನ್ನ ಕನಸನ್ನ ನನಸಾಗಿಸಿಕೊಂಡು ಸಾಧನೆಯ ಗರಿಯೇರುತ್ತಾಳೆ.
ಕವನ ಚಾರ್ಮಾಡಿ
ತೃತೀಯ ಪತ್ರಿಕೋದ್ಯಮ
ಎಸ್ ಡಿ ಎಂ ಕಾಲೇಜು ಉಜಿರೆ.










