ಅವಕಾಶಗಳೇ ಅದೃಷ್ಟದ ಹೆಬ್ಬಾಗಿಲು

"ಅವಕಾಶಗಳು ಸಿಗಲಿಲ್ಲ ಎಂಬುದು ಸೋಲಲ್ಲ; ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದಿರುವುದೇ ನಿಜವಾದ ಸೋಲು" ಎಂಬ ಮಾತು ಜೀವನದ ಮಹತ್ತರ ಸತ್ಯವನ್ನು ಹೇಳುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಅವಕಾಶಗಳು ಹಲವು ರೂಪಗಳಲ್ಲಿ ಬರುತ್ತವೆ. ಆದರೆ ಅವುಗಳನ್ನು ಗುರುತಿಸಿ, ಧೈರ್ಯದಿಂದ ಅಪ್ಪಿಕೊಳ್ಳುವವರೇ ಯಶಸ್ಸಿನ ಶಿಖರವನ್ನು ತಲುಪುತ್ತಾರೆ. ಸಮಯ ಮತ್ತು ಅವಕಾಶ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವೆರಡೂ ಜೀವನದಲ್ಲಿ ಮರುಕಳಿಸದ ಅಮೂಲ್ಯ ಸಂಪತ್ತು. ಒಮ್ಮೆ ಕೈತಪ್ಪಿದರೆ ಮತ್ತೆ ಅದೇ ರೂಪದಲ್ಲಿ ಮರಳಿ ಸಿಗುವುದಿಲ್ಲ. ಆದ್ದರಿಂದ ದೊರೆತ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಜೀವನವು ಒಂದು ಪುಸ್ತಕದಂತಿದೆ. ಅದರ ಮೊದಲ ಪುಟವನ್ನು ತಂದೆ-ತಾಯಿಯ ಪ್ರೀತಿ, ಮಾರ್ಗದರ್ಶನ ಮತ್ತು ಆಶೀರ್ವಾದಗಳು ಅಲಂಕರಿಸುತ್ತವೆ. ನಂತರ ತೆರೆದುಕೊಳ್ಳುವ ಪ್ರತಿಯೊಂದು ಹೊಸ ಪುಟವೂ ಹೊಸ ಅನುಭವಗಳನ್ನು, ಹೊಸ ಸವಾಲುಗಳನ್ನು ಮತ್ತು ಹೊಸ ಅವಕಾಶಗಳನ್ನು ನಮ್ಮ ಮುಂದೆ ತರುತ್ತದೆ. ಪ್ರತಿಯೊಂದು ಅಧ್ಯಾಯವೂ ಬದುಕಿನ ಪಾಠಗಳನ್ನು ಕಲಿಸುತ್ತಾ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆ ಪಾಠಗಳಿಂದ ಕಲಿತು ಮುಂದೆ ಸಾಗುವವರೇ ತಮ್ಮ ಕನಸುಗಳಿಗೆ ನಿಜವಾದ ಅರ್ಥ ನೀಡಲು ಸಾಧ್ಯವಾಗುತ್ತದೆ.

ಯಶಸ್ಸು ಎಂಬುದು ಎಂದಿಗೂ ಸುಲಭವಾಗಿ ಸಿಗುವುದಿಲ್ಲ. ಅದರ ಹಿಂದೆ ಪರಿಶ್ರಮ, ತಾಳ್ಮೆ ಮತ್ತು ಸತತ ಪ್ರಯತ್ನ ಅಡಗಿರುತ್ತವೆ. ಜೀವನದಲ್ಲಿ ಅವಕಾಶಗಳು ಬಂದಾಗ ಅವುಗಳ ಜೊತೆಗೆ ಸೋಲು ಮತ್ತು ಗೆಲುವು ಎರಡೂ ಕೈಹಿಡಿದು ಬರುತ್ತವೆ. ಸೋಲು ಎಂದರೆ ಜೀವನದ ಅಂತ್ಯವಲ್ಲ; ಅದು ಮತ್ತೊಂದು ಯಶಸ್ಸಿನ ಆರಂಭ. ಪ್ರತಿಯೊಂದು ಸೋಲೂ ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡುತ್ತದೆ. ಸೋಲಿನಿಂದ ಪಾಠ ಕಲಿತು ಮುಂದುವರಿದಾಗ ಮಾತ್ರ ಗೆಲುವು ನಮ್ಮದಾಗುತ್ತದೆ. ಆದ್ದರಿಂದ ಸಣ್ಣದಾದ ಅವಕಾಶವನ್ನೂ ದೊಡ್ಡ ಕನಸಿನ ಮೊದಲ ಹೆಜ್ಜೆಯಾಗಿ ಪರಿಗಣಿಸಬೇಕು.

ಪ್ರತಿದಿನ ಬೆಳಗಾಗುತ್ತಿದ್ದಂತೆ ನಮ್ಮ ಮುಂದೆ ನೂರಾರು ಅವಕಾಶಗಳು ಬಂದು ಹೋಗುತ್ತವೆ. ಆದರೆ ಅವುಗಳಲ್ಲಿ ಎಷ್ಟನ್ನು ನಾವು ಗುರುತಿಸುತ್ತೇವೆ ಎಂಬುದೇ ಮುಖ್ಯ. ಹಲವಾರು ಬಾರಿ ಅವಕಾಶಗಳು ನಮ್ಮ ಕೈತಪ್ಪಲು ಕಾರಣ ಪರಿಸ್ಥಿತಿಗಳಲ್ಲ, ನಮ್ಮ ನಿರ್ಲಕ್ಷ್ಯ, ಭಯ ಮತ್ತು ಸೋಮಾರಿತನವೇ ಆಗಿರುತ್ತದೆ. "ನನಗೇನು ಆಗುವುದಿಲ್ಲ" ಎಂಬ ಮನೋಭಾವವೇ ನಮ್ಮ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಮೊದಲು ನಮ್ಮೊಳಗಿನ ಆಲಸ್ಯವನ್ನು ದೂರ ಮಾಡಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜೀವನವು ಹೊಸ ದಾರಿಗಳನ್ನು ತೆರೆದಿಡುತ್ತದೆ.

ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಆದರೆ ಕನಸು ಕಾಣುವುದಷ್ಟೇ ಸಾಕಾಗುವುದಿಲ್ಲ; ಅವುಗಳನ್ನು ನನಸಾಗಿಸಲು ನಿರಂತರ ಪ್ರಯತ್ನವೂ ಅಗತ್ಯ. ಕಷ್ಟಗಳು ಎದುರಾದಾಗ ಹಿಂದೆ ಸರಿಯದೆ, ಅವುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮುಂದೆ ಸಾಗಬೇಕು. ನಮ್ಮ ಕನಸುಗಳಿಗೆ ನಾವುಲೇ ರೆಕ್ಕೆಗಳನ್ನು ಕಟ್ಟಬೇಕು. ಅವಕಾಶಗಳು ಸಿಗುವುದನ್ನು ಕಾಯುವುದಕ್ಕಿಂತ, ನಮ್ಮ ಪರಿಶ್ರಮದಿಂದ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆಗ ನಮ್ಮ ಕನಸುಗಳಿಗೂ ಹೊಸ ದಿಕ್ಕು ಮತ್ತು ಹೊಸ ಅರ್ಥ ದೊರೆಯುತ್ತದೆ.

ಕೊನೆಗೆ, ಬದುಕಿನಲ್ಲಿ ಸಿಕ್ಕ ಪ್ರತಿಯೊಂದು ಅವಕಾಶವೂ ನಮ್ಮ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಹೊಂದಿರುತ್ತದೆ. ಅದನ್ನು ನಿರ್ಲಕ್ಷಿಸದೆ, ಆತ್ಮವಿಶ್ವಾಸ, ಪರಿಶ್ರಮ ಮತ್ತು ದೃಢ ಸಂಕಲ್ಪದೊಂದಿಗೆ ಬಳಸಿಕೊಂಡರೆ ಯಶಸ್ಸು ನಮ್ಮನ್ನು ಹುಡುಕಿಕೊಂಡೇ ಬರುತ್ತದೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ವ್ಯಕ್ತಿಗೆ ಅದೃಷ್ಟವೂ ಕೈಜೋಡಿಸುತ್ತದೆ. ಆದ್ದರಿಂದ ಅವಕಾಶಗಳ ಬಾಗಿಲು ತಟ್ಟಿದಾಗ ಅದನ್ನು ತೆರೆಯಲು ಹಿಂಜರಿಯಬೇಡಿ. ಏಕೆಂದರೆ ಅವಕಾಶಗಳೇ ಅದೃಷ್ಟದ ಹೆಬ್ಬಾಗಿಲು.

 

– ಶಿಲ್ಪಾ

ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ

ಎಸ್. ಡಿ. ಎಂ ಕಾಲೇಜು ಉಜಿರೆ