ಜಪಾನಿನ ಹಳ್ಳಿಯೊಂದರಲ್ಲಿ ವಾಸವಿದ್ದ ಹಶ್ನು ಎಂಬಾತ ಬೆಳಿಗ್ಗೆ ಮೀನು ಹಿಡಿಯಲು ನದಿಯ ಕಡೆಗೆ ಹೊರಟಿದ್ದ. ತುಂಬ ಧಾರ್ಮಿಕನೂ, ಹಾಗೂ ಸಹೃದಯಿಯೂ ಆಗಿದ್ದ ಆತ ದಾರಿಯ ಮಧ್ಯೆ ಕುರುಡನನ್ನು ನೋಡಿದ. ಆ ಕುರುಡ ರಸ್ತೆಯನ್ನು ದಾಟಲು ಹರಸಾಹಸ ಪಡುತ್ತಿದ್ದದ್ದನ್ನು ಗಮನಿಸಿದ ಹಶ್ನು, ಅವನಿಗೆ ರಸ್ತೆ ದಾಟುವುದಕ್ಕೆ ಸಹಾಯ ಮಾಡಿ , ಆ ಅಂಧನನ್ನು ಕುರಿತು " ಮಹನೀಯರೇ, ಇವತ್ತು ಮಧ್ಯಾಹ್ನ ನಮ್ಮ ಮನೆಯಲ್ಲಿ ಔತಣಕೂಟವಿದೆ. ದಯವಿಟ್ಟು ತಾವು ಅತಿಥಿಯಾಗಿ ಮನೆಗೆ ಬಂದು, ಆತಿಥ್ಯ ಸ್ವೀಕರಿಸಿ ನಮ್ಮನ್ನು ಹಾರೈಸಬೇಕು" ಎಂದು ವಿನಂತಿಸಿಕೊಂಡ. ಆತನ ಆಹ್ವಾನವನ್ನು ಒಪ್ಪಿಕೊಂಡ ಕುರುಡನಿಗೆ, ತನ್ನ ವಾಸಸ್ಥಳದ ವಿಳಾಸವನ್ನು ತಿಳಿಸಿದ ಹಶ್ನು, ಮನೆಗೆ ಬಂದು ತನ್ನ ಪತ್ನಿಗೆ ನಡೆದ ಎಲ್ಲಾ ಘಟನೆಯನ್ನೂ ತಿಳಿಸಿದ. ಅಲ್ಲದೇ ಮಧ್ಯಾನ್ಹ , ಒಬ್ಬರಿಗಾಗುವಷ್ಟು ಮೀನು ಸಾರು ಹಾಗೂ ರುಚಿಕರವಾದ ಭೋಜನವನ್ನು ಏರ್ಪಡಿಸುವಂತೆ ಸೂಚಿಸಿದ. ಸ್ವಲ್ಪ ಹೊತ್ತು ಬಿಟ್ಟ ಮೇಲೆ ಹಶ್ನುವಿನ ಪತ್ನಿ ಎರಡು ಊಟದ ತಟ್ಟೆಗಳನ್ನು ಸಿದ್ಧಪಡಿಸಿದ್ದನ್ನು ನೋಡಿದ ಆತ, ಅತಿಥಿ ಇರುವುದು ಒಬ್ಬರೇ ಎಂದು ಹೇಳಿದ. ಆಗ ಅವನ ಹೆಂಡತಿ , "ನೀವು ಕುರುಡನೊಬ್ಬನನ್ನೇ ಮನೆಗೆ ಆಹ್ವಾನಿಸಿದರೆ ಆತ ಒಬ್ಬನೇ ಬರುವುದಿಲ್ಲ. ಅವನ ಜೊತೆಗೆ ದಾರಿ ತೋರಿಸಲು ಇನ್ನೊಬ್ಬನೂ ಕೂಡ ಬರುತ್ತಾನೆ. ಅದಕ್ಕಾಗಿಯೇ ಎರಡು ತಟ್ಟೆಗಳು" ಎಂದು ಹೇಳಿದಳು.
- ವೇದಾ ವಾತ್ಸಲ್ಯ, ಹುಬ್ಬಳ್ಳಿ |
ಆಹ್ವಾನ










