ಯೋಚನೆ

                   ಒಮ್ಮೆ ಭೌತಶಾಸ್ತ್ರದ ತರಗತಿಯಲ್ಲಿ ಶಿಕ್ಷಕರು, ಕ್ವಾಂಟಮ್ ಥೇರಿಯ ಬಗ್ಗೆ ಉಪನ್ಯಾಸ ನೀಡುತ್ತಿದ್ದರು. ಎಲ್ಲರೂ ಗಮನವಿಟ್ಟು ಉಪನ್ಯಾಸವನ್ನು ಕೇಳುತ್ತಿರುವಾಗ , ಒಬ್ಬ ವಿದ್ಯಾರ್ಥಿಯು ಅನ್ಯಮನಸ್ಕನಾಗಿ ಎಲ್ಲಿಯೋ ಬೇರೆಯ ಕಡೆಗೆ ದೃಷ್ಟಿ ಹರಿಸಿ, ಏನನ್ನೋ ಯೋಚನೆ ಮಾಡುತ್ತಾ ಕುಳಿತಿದ್ದ. ಅವನ ಲಕ್ಷ್ಯ ಪಾಠದ ಮೇಲೆ ಇರದೆ ಇದ್ದಿದ್ದನ್ನು ಗಮನಿಸಿದ ಶಿಕ್ಷಕರು, ಆತನನ್ನು ಎದ್ದು ನಿಲ್ಲಿಸಿ ಏನು ಯೋಚನೆ ಮಾಡುತ್ತಿದ್ದೆ ಎಂದು ಕೇಳಿದರು. ಆಗ ಅವನು " ನಮ್ಮ ಮನೆಯಲ್ಲಿರುವ ಹಸುವೊಂದು ಕರು ಹಾಕಿದೆ. ನನಗೆ ಆ ಹಸು ಎಂದರೆ ಪಂಚಪ್ರಾಣ. ನಾನು ಆ ಹಸುವಿನ ಬಗ್ಗೆಯೇ ಯೋಚಿಸುತ್ತಿದ್ದೆ" ಎಂದು ಪ್ರಾಮಾಣಿಕವಾಗಿ ಹೇಳಿದ. ಆಗ ಶಿಕ್ಷಕರು, 

 " ನಿನ್ನ ತಲೆಯಲ್ಲಿರುವ ಆ ಹಸುವಿನ ಯೋಚನೆ ಸಂಪೂರ್ಣವಾಗಿ ಮುಗಿಯುವವರೆಗೂ ತರಗತಿಗೆ ಬರಕೂಡದು" ಎಂದು ಸೂಚಿಸಿ ಆತನಿಗೆ ಹೊರಗೆ ಕಳುಹಿಸಿದರು. ಆತ ಒಂದು ನಿರ್ಜನ ಪ್ರದೇಶಕ್ಕೆ ಹೋಗಿ ಹಗಲೂ ರಾತ್ರಿ ತನ್ನನ್ನು ಮೋಹಿಸಿದ ಆ ಆಕಳಿನ ಬಗ್ಗೆಯೇ ಯೋಚನೆ ಮಾಡಿದ.

                ಮುಂದೆ , ಎರಡು ವಾರಗಳ ನಂತರ ಆ ವಿದ್ಯಾರ್ಥಿ ಪುನಃ ತರಗತಿಗೆ ಹಾಜರಾಗಲು ಬಂದಾಗ, ಭೌತಶಾಸ್ತ್ರದ ಶಿಕ್ಷಕರು " ಹಸುವಿನ ಯೋಚನೆ ಪೂರ್ತಿಯಾಗಿ ಮುಗಿದಿದ್ದರೆ ಒಳಗೆ ಬರಬಹುದು" ಎಂದು ಹೇಳಿದರು. ಆದರೆ ಆತ ಇನ್ನೂ ಬಾಗಿಲ ಹೊರಗಡೆಯೆ ನಿಂತಿದ್ದನ್ನು ನೋಡಿ, ಅವರು ಏನಾಯಿತಯ್ಯ ಎಂದು ಪ್ರಶ್ನಿಸಿದರು. ಅದಕ್ಕೆ ಆ ವಿದ್ಯಾರ್ಥಿಯು,   "ಕ್ಷಮಿಸಿ ಸರ್, ನನ್ನ ಕೋಡುಗಳು ಎಷ್ಟು ಉದ್ದವಾಗಿ ಬೆಳೆದು ಬಿಟ್ಟಿವೆ ಎಂದರೆ ಈ ತರಗತಿಯ ಬಾಗಿಲನ್ನು ದಾಟಿ ಒಳ ಬರಲು ಸಾಧ್ಯವಾಗುತ್ತಿಲ್ಲ. " ಎಂದು ಉತ್ತರಿಸಿದ.

 

- ವೇದಾ ವಾತ್ಸಲ್ಯ, ಹುಬ್ಬಳ್ಳಿ