ಮಣ್ಣಿನ ರೂಪದಲ್ಲಿ ಬಂದು, ಸಾವಿರ ಹೃದಯಗಳಲ್ಲಿ ನೆಲೆಸುವ ಬಪ್ಪಾ

ಗಣೇಶ ಚತುರ್ಥಿ ಬಂದರೆ ಸಾಕು, ಹುಬ್ಬಳ್ಳಿಯ ವಾತಾವರಣವೇ ಬದಲಾಗುತ್ತದೆ. ಬೀದಿಬೀದಿಗಳಲ್ಲಿ ಭವ್ಯ ಗಣೇಶ ಮೂರ್ತಿಗಳು, ಕಂಗೊಳಿಸುವ ಮಂಟಪಗಳು, ಬಣ್ಣಬಣ್ಣದ ದೀಪಗಳು, ಭಜನೆ, ಸಂಗೀತ ಮತ್ತು ಜನರ ನಗು... ಎಲ್ಲೆಡೆ ಹಬ್ಬದ ಸಡಗರ ಕಾಣಿಸುತ್ತದೆ. ಚೋಟಾ ಮುಂಬೈ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಹುಬ್ಬಳ್ಳಿಯಲ್ಲಿ ಗಣೇಶೋತ್ಸವವೆಂದರೆ ಕೇವಲ ಒಂದು ಹಬ್ಬವಲ್ಲ; ಇದು ನಗರದ ಜನರ ಭಕ್ತಿ, ಪ್ರೀತಿ, ಒಗ್ಗಟ್ಟು ಮತ್ತು ಸಂಭ್ರಮದ ಪ್ರತೀಕ.

ಗಣೇಶನನ್ನು ವಿಘ್ನ ನಿವಾರಕ, ಜ್ಞಾನ ಮತ್ತು ಶುಭದ ಸಂಕೇತವಾಗಿ ಪೂಜಿಸುವ ಪರಂಪರೆ ಬಹಳ ಹಿಂದಿನಿಂದಲೂ ಇದೆ. ಗಣೇಶೋತ್ಸವವನ್ನು ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಆಚರಿಸುವ ಪರಂಪರೆಗೆ ಲೋಕಮಾನ್ಯ ಬಾಲ ಗಂಗಾಧರ ತಿಲಕರು ವಿಶೇಷ ಉತ್ತೇಜನ ನೀಡಿದರು. ಜನರು ಒಂದೆಡೆ ಸೇರಿ ಹಬ್ಬ ಆಚರಿಸುವ ಮೂಲಕ ಒಗ್ಗಟ್ಟು ಮತ್ತು ಸಹೋದರತ್ವ ಬೆಳೆಸುವುದು ಇದರ ಪ್ರಮುಖ ಆಶಯವಾಗಿತ್ತು. ಇಂದು ಕೂಡ ಗಣೇಶೋತ್ಸವ ಜನರನ್ನು ಹತ್ತಿರವಾಗಿಸುವ ಹಬ್ಬವಾಗಿ ಮುಂದುವರಿದಿದೆ.

ಆದರೆ ಹುಬ್ಬಳ್ಳಿಯ ಗಣೇಶೋತ್ಸವಕ್ಕೆ ತನ್ನದೇ ಆದ ಒಂದು ವಿಶೇಷ ಬಣ್ಣವಿದೆ. ಗಣೇಶನ ಆಗಮನಕ್ಕೂ ಮುನ್ನವೇ ನಗರದ ವಿವಿಧ ಪ್ರದೇಶಗಳಲ್ಲಿ ಮಂಟಪಗಳ ಸಿದ್ಧತೆ ಆರಂಭವಾಗುತ್ತದೆ. ಗಣೇಶನನ್ನು ಪ್ರತಿಷ್ಠಾಪಿಸಿದ ಬಳಿಕ ಹನ್ನೊಂದು ದಿನಗಳ ಕಾಲ ಪೂಜೆ, ಆರತಿ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರಸಾದ ವಿತರಣೆ ನಡೆಯುತ್ತವೆ. ಕೆಲವು ಮಂಟಪಗಳಲ್ಲಿ ಪ್ರತಿದಿನ ಭಕ್ತರಿಗೆ ಪ್ರಸಾದ ನೀಡುವ ಮೂಲಕ ಸೇವಾ ಮನೋಭಾವವನ್ನು ತೋರಿಸಲಾಗುತ್ತದೆ. ಹೀಗಾಗಿ ಗಣೇಶೋತ್ಸವದ ದಿನಗಳಲ್ಲಿ ಹುಬ್ಬಳ್ಳಿಯ ಹಲವು ಪ್ರದೇಶಗಳು ಭಕ್ತಿಯಿಂದ ತುಂಬಿದ ಹಬ್ಬದ ತಾಣಗಳಾಗಿ ಬದಲಾಗುತ್ತವೆ.

ಹುಬ್ಬಳ್ಳಿಯ ಗಣೇಶೋತ್ಸವದ ಪ್ರಮುಖ ಆಕರ್ಷಣೆ ಇಲ್ಲಿನ ವಿಭಿನ್ನ ಮಂಟಪಗಳು. ಪ್ರತಿ ಪ್ರದೇಶದ ಗಣೇಶೋತ್ಸವ ಸಮಿತಿಯೂ ತನ್ನದೇ ಆದ ಕಲ್ಪನೆಯೊಂದಿಗೆ ಮಂಟಪವನ್ನು ಸಿದ್ಧಪಡಿಸುತ್ತದೆ. ಕೆಲವೆಡೆ ಭವ್ಯ ದೇವಾಲಯಗಳ ಮಾದರಿ ಕಂಡುಬಂದರೆ, ಇನ್ನೂ ಕೆಲವೆಡೆ ಪೌರಾಣಿಕ ಕಥೆಗಳು, ಭಾರತದ ಇತಿಹಾಸ, ಸಂಸ್ಕೃತಿ ಮತ್ತು ದೇಶಭಕ್ತಿಯ ವಿಚಾರಗಳನ್ನು ಕಲಾಕೃತಿಗಳ ಮೂಲಕ ಪರಿಚಯಿಸಲಾಗುತ್ತದೆ. ಹೀಗಾಗಿ ಒಂದು ಮಂಟಪದಿಂದ ಮತ್ತೊಂದು ಮಂಟಪಕ್ಕೆ ಹೋದಾಗ ಪ್ರತಿ ಬಾರಿ ಹೊಸ ಅನುಭವ ಸಿಗುತ್ತದೆ.

ಮಂಟಪಗಳು ಇಲ್ಲಿ ಕೇವಲ ಅಲಂಕಾರವಲ್ಲ, ಒಂದೊಂದು ಕಥೆ ಹೇಳುವ ವೇದಿಕೆ. ಶಿವ, ಪಾರ್ವತಿ ಮತ್ತು ಗಣೇಶನ ಕಥೆಗಳನ್ನು ನಾಟಕಗಳ ಮೂಲಕ ಪ್ರದರ್ಶಿಸುವುದು ಹಲವು ಪ್ರದೇಶಗಳ ವಿಶೇಷ ಆಕರ್ಷಣೆಯಾಗಿದೆ. ಗಣೇಶನ ಜನನ, ಶಿವನೊಂದಿಗೆ ಗಣೇಶನ ಸಂಬಂಧ ಸೇರಿದಂತೆ ಪೌರಾಣಿಕ ಪ್ರಸಂಗಗಳನ್ನು ಕಲಾವಿದರು ವೇದಿಕೆಯ ಮೇಲೆ ಜೀವಂತಗೊಳಿಸುತ್ತಾರೆ. ಇದರ ಜೊತೆಗೆ ಭಾರತದ ಇತಿಹಾಸ, ಸಂಸ್ಕೃತಿ ಹಾಗೂ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಕಥೆಗಳನ್ನೂ ಜನರ ಮುಂದೆ ತರುತ್ತಾರೆ.

ಈ ಪ್ರದರ್ಶನಗಳಿಗೆ ಇಂದಿನ ತಂತ್ರಜ್ಞಾನ ಮತ್ತಷ್ಟು ಮೆರುಗು ನೀಡಿದೆ. ಬೆಳಕು, ಧ್ವನಿ, ಪರದೆ, ಚಲಿಸುವ ಕಲಾಕೃತಿಗಳು ಮತ್ತು ವಿವಿಧ ದೃಶ್ಯ ಪರಿಣಾಮಗಳ ಮೂಲಕ ಕಥೆಗಳನ್ನು ಜೀವಂತವಾಗಿ ತೋರಿಸಲಾಗುತ್ತದೆ. ಮಕ್ಕಳಿಗೆ ಇದು ಕುತೂಹಲದ ಅನುಭವವಾದರೆ, ದೊಡ್ಡವರಿಗೆ ನಮ್ಮ ಸಂಸ್ಕೃತಿ ಮತ್ತು ಹಳೆಯ ನೆನಪುಗಳನ್ನು ಮತ್ತೆ ಕಣ್ಣ ಮುಂದೆ ತರುವ ಕ್ಷಣವಾಗುತ್ತದೆ.

ಈ ವೈಭವದ ಹಿಂದೆ ಅನೇಕ ಕಲಾವಿದರು, ಕಾರ್ಮಿಕರು ಮತ್ತು ಯುವಕರ ಪರಿಶ್ರಮವಿದೆ. ತಿಂಗಳುಗಳ ಮುಂಚೆಯೇ ಮಂಟಪದ ವಿನ್ಯಾಸ ರೂಪಿಸಿ, ಅದನ್ನು ಕಲಾಕೃತಿಯಾಗಿ ಕಟ್ಟಿಕೊಡುವ ಕೆಲಸ ನಡೆಯುತ್ತದೆ. ಗಣೇಶೋತ್ಸವ ಸ್ಥಳೀಯ ಕಲಾವಿದರ ಪ್ರತಿಭೆ, ಯುವಕರ ಉತ್ಸಾಹ ಮತ್ತು ಸೃಜನಶೀಲತೆಗೆ ಒಂದು ದೊಡ್ಡ ವೇದಿಕೆಯಾಗಿದೆ.

ಆದರೆ ಹುಬ್ಬಳ್ಳಿಯ ಗಣೇಶೋತ್ಸವದ ನಿಜವಾದ ಸೌಂದರ್ಯ ಕೇವಲ ಮಂಟಪಗಳಲ್ಲಿಲ್ಲ. ಗಣೇಶನ ಮುಂದೆ ಒಂದಾಗುವ ಜನರ ಮುಖದಲ್ಲಿದೆ. ಮಕ್ಕಳ ನಗು, ಯುವಕರ ಉತ್ಸಾಹ, ಹಿರಿಯರ ಭಕ್ತಿ, ಕುಟುಂಬಗಳ ಒಡನಾಟ, ಸ್ನೇಹಿತರ ಸಂಭ್ರಮ ಮತ್ತು ಎಲ್ಲರಿಗೂ ಹಂಚುವ ಪ್ರಸಾದದಲ್ಲಿ ಈ ಹಬ್ಬದ ನಿಜವಾದ ಪ್ರೀತಿ ಕಾಣುತ್ತದೆ.

ಸಂಜೆಯಾಗುತ್ತಿದ್ದಂತೆ ದೀಪಗಳಿಂದ ಕಂಗೊಳಿಸುವ ಮಂಟಪಗಳ ಮುಂದೆ ಜನಸಂದಣಿ ಹೆಚ್ಚಾಗುತ್ತದೆ. ಕುಟುಂಬಗಳು ಮಕ್ಕಳೊಂದಿಗೆ ಗಣೇಶನ ದರ್ಶನಕ್ಕೆ ಬರುತ್ತವೆ. ಸ್ನೇಹಿತರು ಒಟ್ಟಾಗಿ ಮಂಟಪಗಳನ್ನು ಸುತ್ತುತ್ತಾರೆ. ಒಂದು ಕಡೆ ಆರತಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಸಾಂಸ್ಕೃತಿಕ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿರುತ್ತದೆ. ಹುಬ್ಬಳ್ಳಿಯ ಪ್ರತಿಯೊಂದು ಬೀದಿಯೂ ಹಬ್ಬದ ನೆನಪುಗಳನ್ನು ಕಟ್ಟಿಕೊಡುವಂತೆ ಕಾಣುತ್ತದೆ.

ಗಣೇಶೋತ್ಸವದ ಹನ್ನೊಂದು ದಿನಗಳು ಮುಗಿದು ವಿಸರ್ಜನೆಯ ದಿನ ಬಂದಾಗ ವಾತಾವರಣದಲ್ಲಿ ಭಾವುಕತೆ ಮೂಡುತ್ತದೆ. ಹಲವು ದಿನಗಳಿಂದ ಮನೆಯ ಸದಸ್ಯನಂತೆ ಆರಾಧಿಸಿದ ಗಣೇಶನಿಗೆ ಭಕ್ತರು ಆರತಿ ಸಲ್ಲಿಸಿ, ಮೆರವಣಿಗೆಯಲ್ಲಿ ಬೀಳ್ಕೊಡುತ್ತಾರೆ. ಸಂತೋಷದ ನಡುವೆಯೇ ಮನಸ್ಸಿನಲ್ಲಿ ಸ್ವಲ್ಪ ಬೇಸರವೂ ಇರುತ್ತದೆ. ಆದರೆ ಆ ಬೇಸರದ ನಡುವೆಯೂ ಒಂದು ಸುಂದರ ನಂಬಿಕೆ ಇರುತ್ತದೆ — ‘ಮುಂದಿನ ವರ್ಷ ಮತ್ತೆ ಬಾ ಬಪ್ಪಾ’.

ಗಣೇಶ ಬರುತ್ತಾನೆ, ಹುಬ್ಬಳ್ಳಿಯನ್ನು ಬೆಳಕಿನಿಂದ ತುಂಬಿಸುತ್ತಾನೆ, ಜನರನ್ನು ಒಂದಾಗಿಸುತ್ತಾನೆ, ಮಕ್ಕಳಿಗೆ ಸಂತೋಷ ಕೊಡುತ್ತಾನೆ, ಕಲಾವಿದರಿಗೆ ವೇದಿಕೆ ನೀಡುತ್ತಾನೆ ಮತ್ತು ಸಾವಿರಾರು ನೆನಪುಗಳನ್ನು ಬಿಟ್ಟು ಹೋಗುತ್ತಾನೆ.

ಅದಕ್ಕಾಗಿಯೇ ಹುಬ್ಬಳ್ಳಿಯ ಗಣೇಶೋತ್ಸವ ಕೇವಲ ಧಾರ್ಮಿಕ ಹಬ್ಬವಲ್ಲ. ಇದು ಚೋಟಾ ಮುಂಬೈನ ಹೃದಯದ ಸಂಭ್ರಮ, ಜನರ ಪ್ರೀತಿಯ ಹಬ್ಬ ಮತ್ತು ಒಗ್ಗಟ್ಟಿನ ಪ್ರತೀಕ.

ಗಣೇಶ ಬಂದಾಗ ಹುಬ್ಬಳ್ಳಿ ಕೇವಲ ನಗರವಾಗಿರುವುದಿಲ್ಲ…

ಭಕ್ತಿ, ಪ್ರೀತಿ, ನಗು ಮತ್ತು ಸಂಭ್ರಮದಿಂದ ತುಂಬಿದ ಒಂದು ದೊಡ್ಡ ಕುಟುಂಬವಾಗುತ್ತದೆ.

 

-ವಿಜಯಲಕ್ಷ್ಮಿ ಜೈನ್ 

  ಹುಬ್ಬಳ್ಳಿ