ಶಿಕ್ಷಕ ವೃತ್ತಿಯ ವಿಶೇಷತೆ.. ಶ್ರೇಷ್ಠತೆ..

ಸ್ವಚ್ಛತೆಯಿಂದ ಬಟ್ಟೆ ಧರಿಸಿದ್ದೀರಾ, ತಿಂಡಿ ತಿಂದು ಬಂದ್ರಾ, ತಲೆ ಸರಿಯಾಗಿ ಬಾಚಿದ್ದೀರ, ಇಲ್ಲಿ ಬಿದ್ದಿರುವ ಕಸ ಆಯ್ದುಕೊಳ್ಳಿ, ಸುತ್ತಲಿನ ಸ್ವಚ್ಛತೆ ಕಾಯ್ದುಕೊಳ್ಳಿ, ಬನ್ನಿ ಎಲ್ಲಾ ಹಾಲು ಕುಡಿಯಿರಿ, ಸರಿಯಾಗಿ ನಿಂತುಕೊಳ್ಳಿ, ಉಗುರು ಕತ್ತರಿಸಿದ್ದೀರಾ, ನೇರವಾಗಿ ನಿಲ್ಲಿ, ಸ್ಪಷ್ಟವಾಗಿ ಉಚ್ಛರಿಸಿ, ವಿನಯವಾಗಿ ಮಾತನಾಡಿ, ಈಗಲ್ಲ ಓದುವುದು ಸ್ವರಭಾರ ಇರಬೇಕು, ಏರಿಳಿತ ಇರಲಿ, ಎರಡು ಗೆರೆ ಮಧ್ಯೆಯೇ ಕಾಪಿ ರೈಟಿಂಗ್ ಬರೀಬೇಕು, ಶೂ ಲೇಸ್ ಸರಿಯಾಗಿ ಕಟ್ಕೋ, ಲೆಕ್ಕ ತಪ್ಪು ಮಾಡ್ಬೇಡ, ಅರ್ಥ ಆಗದೆ ಇದ್ರೆ ಮತ್ತೆ ಕೇಳು, ಮಗ್ಗಿ ಕಲಿ, ಸ್ನೇಹಿತರನ್ನು ಪ್ರೀತಿಸಿ, ಹಿರಿಯರನ್ನು ಗೌರವಿಸಿ, ಚಿಕ್ಕವರನ್ನು ಪ್ರೀತಿಸಿ, ಶಿಸ್ತು ತುಂಬಾ ಮುಖ್ಯ.. ವೇಳಾಪಟ್ಟಿ ಪಾಲಿಸು. ವೇಳಾಪಟ್ಟಿ ತಯಾರಿಸು ಹಾಗೆಯೇ ದಿನವೂ ಕೆಲಸ ನಿರ್ವಹಿಸು. ಪರಿಸರ ಪ್ರೀತಿಸಬೇಕು ಗಿಡಮರ ಹೆಚ್ಚು ಬೆಳೆಸಬೇಕು.   ಅಪಠ್ಯ ಅಷ್ಟೇ ಅಲ್ಲ ಸಹಪಠ್ಯ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ.

 

 ನೀನು ತುಂಬಾ ಚೆನ್ನಾಗಿ ಹಾಡು ಹೇಳಿದೆ, ನೃತ್ಯ ಅಭ್ಯಾಸ ಮಾಡು, ಚೆನ್ನಾಗಿ ಓದುತ್ತೀಯ ದಿನಾ ಬೆಳಿಗ್ಗೆ ಅಭ್ಯಾಸ ಮಾಡು, ಕಬ್ಬಡಿ ಆಡುವಾಗ ಈ ತಂತ್ರ ಬಳಸಬೇಕು. ಅಬ್ಬಾ!! ಇದನೆಲ್ಲ ಅಪ್ಪಾ ಅಮ್ಮ ಮನೆಯಲ್ಲಿ ಎಲ್ಲವನ್ನೂ ಕೇಳುತ್ತಾರೋ ಇಲ್ಲವೋ ಗೊತ್ತಿಲ್ಲ,  ಆದರೆ ಯಾವ ದಿನ ಶಿಕ್ಷಕ ವೃತ್ತಿಗೆ ಬಂದೇವೋ ಅಂದಿನಿಂದ ಇಂದಿನವರೆಗೂ ನಮಗೊಂದು ಗುರುತರ ಜವಾಬ್ದಾರಿ ಇದೆ, ಎಲ್ಲಾ ಮಕ್ಕಳು ನಮ್ಮ ಮಕ್ಕಳೆಂಬ ಪ್ರೀತಿ ಅನುಬಂಧವಿದೆ....
ಶಿಕ್ಷಕರಾಗಿ ನಾವೇನು ಮಾಡುತ್ತೇವೆ?? ಏನೆಲ್ಲಾ ಮಾಡುತ್ತೇವೆ? ಹೇಗೆ ಕಲಿಸುತ್ತೇವೆ? ಬಳಪ ಹಿಡಿದ ಭಗವಂತ-ಬಳವಪವನ್ನೂ ಬದಿಗಿರಿಸಿ ಮಾಡುವ ಇನ್ಯಾರು ಮಕ್ಕಳಿಗೆ ಹೇಳದ ಬದುಕ ಪಾಠ ಹೇಳಿಕೊಡುವ ಅಂಶಗಳನ್ನು ಶಿಕ್ಷಕರಾದವರು ಮಾಡುತ್ತಾರೆ.. ಪ್ರತಿ ತರಗತಿಯಲ್ಲಿಯೂ ಮಕ್ಕಳನ್ನೂ ಪರಿಪಕ್ವವಾಗಿಸುವಲ್ಲಿ ಬದ್ಧರಾಗಿರುತ್ತಾರೆ... ಕಲ್ಲಿನಿಂದ ಶಿಲ್ಪ ಕೆತ್ತುವಂತೆ, ಮಣ್ಣಿನಿಂದ ಮೂರ್ತಿ ಮಾಡುವಂತೆ ಮಕ್ಕಳ ಭವಿಷ್ಯ ಬೆಳಗುವ ಶ್ರದ್ಧೆ ಶಿಕ್ಷಕರಿಗಿದೆ. ಬಿಳಿ ಹಾಳೆಯಂತೆ ಬರುವ ಮಕ್ಕಳ ಜೀವನದಲ್ಲಿ ಸುಂದರ ಚಿತ್ರವಾಗಿಸಲು ಬೇಕಾದ ಓದು, ಬರಹ, ಆತ್ಮವಿಶ್ವಾಸ ಕೌಶಲಗಳು, ಆಸಕ್ತಿಗಳು,ಮೌಲ್ಯಗಳು, ಸದ್ಗುಣಗಳು ಹೀಗೆ ಎಲ್ಲ ಬಣ್ಣಗಳನ್ನು ಕಟ್ಟಿಕೊಟ್ಟು ಬದುಕಿಗೊಂದು ಬುನಾದಿ ಹಾಕುವಲ್ಲಿ ಶಿಕ್ಷಕ ತಲ್ಲೀನನಾಗುತ್ತಾನೆ..  ಮಕ್ಕಳಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಮಗು ಶಾಲೆಗೆ ಕಾಲಿಟ್ಟ ದಿನದಿಂದ ತಂದೆಯಾಗಿ, ತಾಯಿಯಾಗಿ, ಬಂಧುವಾಗಿ, ಸ್ನೇಹಿತನಾಗಿ ಕಾಳಜಿ ಬೆರೆತ ಪ್ರೀತಿಯೊಂದಿಗೆ ಅತ್ಯಾವಶ್ಯಕವಾಗಿ ಅಕ್ಷರದ ಹಣತೆ ಹಚ್ಚಿ ಜ್ಞಾನ ಜ್ಯೋತಿಯ ಬೆಳಗುವವರು ಶಿಕ್ಷಕರು. ಅದಕ್ಕಾಗಿ ವೃತ್ತಿಯಲ್ಲಿ ತುಂಬಾ ವಿಶಿಷ್ಟರು...


- ಶೃತಿ. ಕೆ
ಸಹಶಿಕ್ಷಕಿ