ಇತಿಹಾಸದ ಹೆಜ್ಜೆಗುರುತು, ಸಿನಿಮಾಗಳ ನೆಚ್ಚಿನ ತಾಣ: ಚೆಟ್ಟಿನಾಡಿನ ಭವ್ಯ ಅರಮನೆಗಳು

ತಮಿಳುನಾಡಿನ ಶಿವಗಂಗೈ ಮತ್ತು ಪುದುಕ್ಕೋಟೈ ಜಿಲ್ಲೆಗಳ ಮಧ್ಯೆ ಹರಡಿರುವ ಚೆಟ್ಟಿನಾಡು ಪ್ರದೇಶವು ಭಾರತದ ಅತ್ಯಂತ ವೈಶಿಷ್ಟ್ಯಮಯ ಸಾಂಸ್ಕೃತಿಕ ನೆಲೆಯಾಗಿದೆ. “ಚೆಟ್ಟಿನಾಡು” ಎಂದರೆ “ಚೆಟ್ಟಿಯಾರರ ನಾಡು” ಎಂಬ ಅರ್ಥ. ಇಲ್ಲಿನ ನಾಟುಕೊಟ್ಟೈ ಚೆಟ್ಟಿಯಾರ್ ಸಮುದಾಯವು ಒಂದು ಕಾಲದಲ್ಲಿ ದಕ್ಷಿಣ ಏಷ್ಯಾದ ಪ್ರಮುಖ ವ್ಯಾಪಾರಿಗಳಾಗಿದ್ದು, ಬರ್ಮಾ, ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ್ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ವ್ಯಾಪಾರ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಸಂಪತ್ತನ್ನು ಗಳಿಸಿತ್ತು.

ಅವರ ಆರ್ಥಿಕ ಸಮೃದ್ಧಿಯ ಪ್ರತಿಬಿಂಬವೇ ಇಂದು ಚೆಟ್ಟಿನಾಡಿನಲ್ಲಿ ಕಾಣುವ ಭವ್ಯ ಅರಮನೆಗಳು. ಇವು ಸಾಮಾನ್ಯ ಮನೆಗಳಲ್ಲ, ಸಂಪೂರ್ಣವಾಗಿ ಕಲಾತ್ಮಕತೆ, ಐಶ್ವರ್ಯ ಮತ್ತು ಪರಂಪರೆಯ ಸಂಕೇತಗಳು. ಗ್ರಾಮೀಣ ವಾತಾವರಣದ ನಡುವೆ ಏಕಾಏಕಿ ಎದ್ದು ಕಾಣುವ ಈ ಮಂಟಪಗಳು ಪ್ರವಾಸಿಗರನ್ನು ಇನ್ನೊಂದು ಯುಗಕ್ಕೆ ಕರೆದೊಯ್ಯುವಂತಿವೆ.

Kadambamagazine.com

 

ವಾಸ್ತುಶಿಲ್ಪದ ಅದ್ಭುತ

ಚೆಟ್ಟಿನಾಡಿನ ಅರಮನೆಗಳ ಅತ್ಯಂತ ವಿಶೇಷ ಅಂಶವೆಂದರೆ ಅವುಗಳ ನಿರ್ಮಾಣದಲ್ಲಿ ಬಳಸಲಾದ ಅಪರೂಪದ ವಸ್ತುಗಳು. ಬರ್ಮಾದಿಂದ ತರಿಸಲಾದ ಗಟ್ಟಿಯಾದ ತೇಗು ಮರ, ಇಟಲಿಯ ಮಾರ್ಬಲ್ ಕಲ್ಲುಗಳು, ಬೆಲ್ಜಿಯಂನ ಕನ್ನಡಿ ಹಾಗೂ ಗಾಜಿನ ಛತ್ರಿಗಳು, ಇಂಗ್ಲೆಂಡಿನ ಅಲಂಕಾರಿಕ ಟೈಲ್ಸ್ ಇವೆಲ್ಲವೂ ಅರಮನೆಗಳಲ್ಲಿ ಸಂಯೋಜಿತವಾಗಿರುವುದು ಅಚ್ಚರಿಯ ಸಂಗತಿ.

ಇನ್ನೂ ವಿಶಿಷ್ಟವೆಂದರೆ ಗೋಡೆಗಳಿಗೆ ಬಳಸಲಾದ ಸಾಂಪ್ರದಾಯಿಕ ಲೇಪನ ತಂತ್ರ. ಗೋಡೆಗೆ ಹೊಳಪು ನೀಡಲು ಸುಣ್ಣ, ಮೊಟ್ಟೆಯ ಬಿಳಿ ಭಾಗ ಮತ್ತು ಕಬ್ಬಿಣ ನೀರು/ಮೊಸರು ಬಳಸಲಾಗಿದ್ದು ಕೊನೆಯ ಪದರದಲ್ಲಿ ಕಲ್ಲಿನ ಪುಡಿ ಮತ್ತು ಹಾಲಿನ ತಿಳಿನೀರನ್ನು ಬಳಸಿ ನಯವಾಗಿ ಉಜ್ಜಲಾಗಿದೆ. ಇದರಿಂದ ಗೋಡೆಗಳು ಕನ್ನಡಿಯಂತಹ ಹೊಳಪು ನೀಡುವುದರ ಜೊತೆಗೆ ಬೇಸಿಗೆಯಲ್ಲೂ ಮನೆ ತಂಪಾಗಿರಿಸುತ್ತವೆ. ಮನೆಯ ಬಾಗಿಲುಗಳು, ಮರದ ಕಂಬಗಳು ಮತ್ತು ಮಂಟಪಗಳ ಮೇಲಿನ ಕೆತ್ತನೆಗಳು ಭಾರತೀಯ ಹಾಗೂ ಯುರೋಪಿಯನ್ ಶೈಲಿಗಳ ಅದ್ಭುತ ಮಿಶ್ರಣವನ್ನು ಪ್ರತಿಬಿಂಬಿಸುತ್ತವೆ.

ADVT.

 

ವಿನ್ಯಾಸ ಮತ್ತು ಒಳರಚನೆ

ಚೆಟ್ಟಿನಾಡಿನ ಮನೆಗಳ ವಿನ್ಯಾಸವೇ ಅವುಗಳ ವೈಭವವನ್ನು ಸಾರುತ್ತದೆ. ದೊಡ್ಡ “ತಿಣ್ಣೈ” ಅಥವಾ ಮುಂಭಾಗದ ಮಂಟಪವು ಅತಿಥಿಗಳನ್ನು ಸ್ವಾಗತಿಸಲು ಬಳಸಲಾಗುತ್ತಿತ್ತು. ಅದರ ಬಳಿಕ ಒಂದರ ಹಿಂದೆ ಒಂದು ತೆರೆಯುವ ಆವರಣಗಳು, 

ವಿಶಾಲ ಸಭಾಂಗಣಗಳು, ನೂರಾರು ಕೊಠಡಿಗಳು ಮತ್ತು ಉದ್ದನೆಯ ದಾರಿಗಳು ಮನೆಯನ್ನು ಕೋಟೆಯಂತೆ ರೂಪಿಸುತ್ತವೆ.

ಈ ಮನೆಗಳಲ್ಲಿ ಭದ್ರತಾ ವ್ಯವಸ್ಥೆಯೂ ಬಹಳ ಬಲವಾಗಿತ್ತು. ಬೃಹತ್ ತೇಗು ಮರದ ಬಾಗಿಲುಗಳು, ಅನೇಕ ಕಬ್ಬಿಣದ ಲಾಕ್‌ಗಳು ಮತ್ತು ಒಳಹೊರಗಿನ ಬಹುಪದರ ವಿನ್ಯಾಸವು ಮನೆಗಳನ್ನು ಸುರಕ್ಷಿತವಾಗಿಟ್ಟಿತ್ತು.

ಇದಲ್ಲದೆ, ಮಳೆನೀರು ಸಂಗ್ರಹಿಸುವ ಸುಧಾರಿತ ವ್ಯವಸ್ಥೆಯೂ ಇಲ್ಲಿ ಕಂಡುಬರುತ್ತದೆ. ಮನೆಗಳ ಮೇಲ್ಚಾವಣಿಯಿಂದ ಹರಿಯುವ ನೀರನ್ನು ವಿಶೇಷ ಕಾಲುವೆಗಳ ಮೂಲಕ ಕೆರೆಗಳಿಗೆ ಹರಿಸಲಾಗುತ್ತದೆ. ಪರಿಸರ ಸಂರಕ್ಷಣೆಯ ಬಗ್ಗೆ ಅವರ ದೂರದೃಷ್ಟಿಯನ್ನು ಸ್ಪಷ್ಟಪಡಿಸುತ್ತದೆ.

 

ಇಂದಿನ ಸ್ಥಿತಿ ಮತ್ತು ಪ್ರವಾಸೋದ್ಯಮ

ಕಾಲಕ್ರಮೇಣ ಚೆಟ್ಟಿಯಾರ್ ಸಮುದಾಯದ ವ್ಯಾಪಾರ ಕುಸಿದ ನಂತರ ಅನೇಕ ಅರಮನೆಗಳು ನಿರ್ಲಕ್ಷ್ಯಕ್ಕೆ ಒಳಗಾದವು. ಕೆಲವು ಮನೆಗಳು ಹಾಳಾಗಿದ್ದರೂ, ಅನೇಕ ಮನೆಗಳನ್ನು ಇಂದಿಗೆ ಪರಂಪರಾ ಹೋಟೆಲ್‌ಗಳಾಗಿ ಮತ್ತು ಪ್ರವಾಸಿ ತಾಣಗಳಾಗಿ ಪರಿವರ್ತಿಸಲಾಗಿದೆ.

ಚೆಟ್ಟಿನಾಡಿನ ಹಲವಾರು ಅರಮನೆಗಳು ತಮಿಳು ಮತ್ತು ಹಿಂದಿ ಸೇರಿದಂತೆ ಬಹುಭಾಷಾ ಚಲನಚಿತ್ರಗಳ ಚಿತ್ರೀಕರಣದ ನೆಚ್ಚಿನ ತಾಣಗಳಾಗಿ ಪ್ರಸಿದ್ಧವಾಗಿವೆ. ಐಶ್ವರ್ಯಾ ರೈ ಮತ್ತು ಮಮ್ಮುಟ್ಟಿ ಅಭಿನಯದ ಪ್ರಸಿದ್ಧ ತಮಿಳು ಸಿನಿಮಾ ‘ಕಂದುಕೊಂಡೇನ್ ಕಂದುಕೊಂಡೇನ್’ ಹಾಗೂ ಬಾಲಿವುಡ್‌ನ ಸೂಪರ್ ಹಿಟ್ ಚಿತ್ರ ‘ಭೂಲ್ ಭುಲೈಯಾ’ನಂತಹ ಹಲವು ಜನಪ್ರಿಯ ಚಲನಚಿತ್ರಗಳು ಇಲ್ಲಿನ ಭವ್ಯ ಅರಮನೆಗಳಲ್ಲಿ ಚಿತ್ರೀಕರಣಗೊಂಡಿವೆ. ಈ ಚಿತ್ರಗಳ್ಲಲಿ ತೋರಿಸಿರುವಂತಹ ಕಾನಾಡುಕಾಥಾನ್ ಅರಮನೆ ಸೇರಿದಂತೆ ಹಲವು ಐತಿಹಾಸಿಕ ಭವನಗಳು ಇಂದಿಗೂ ತಮ್ಮ ಮೂಲ ವೈಭವ ಹಾಗೂ ಗಾಂಭೀರ್ಯವನ್ನು ಹಾಗೇ ಉಳಿಸಿಕೊಂಡಿವೆ.

ಇದೇ ಕಾರಣಕ್ಕೆ ಇಂದು ದೇಶ-ವಿದೇಶಗಳಿಂದ ಸಾಲು ಸಾಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ, ಈ ಅಪೂರ್ವ ವಾಸ್ತುಶಿಲ್ಪದ ಕಲಾತ್ಮಕತೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದರೊಂದಿಗೆ, ಜಗತ್ಪ್ರಸಿದ್ಧವಾಗಿರುವ ಮಸಾಲೆಯುಕ್ತ ಸಾಂಪ್ರದಾಯಿಕ ‘ಚೆಟ್ಟಿನಾಡ್ ಅಡುಗೆ ಸಂಸ್ಕೃತಿ’ ಕೂಡ ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಯ ಜಿಹ್ವಾ ಚಾಪಲ್ಯವನ್ನು ತಣಿಸಿ, ಅವರ ಮನ ಸೆಳೆಯುತ್ತಿದೆ.

ADVT.

ಕೊನೆಯದಾಗಿ ಚೆಟ್ಟಿನಾಡಿನ ಅರಮನೆಗಳು ಕೇವಲ ಕಟ್ಟಡಗಳಲ್ಲ; ಅವು ದಕ್ಷಿಣ ಭಾರತದ ವ್ಯಾಪಾರ, ಸಂಸ್ಕೃತಿ, ಕಲೆ ಮತ್ತು ಜೀವನಶೈಲಿಯ ಜೀವಂತ ದಾಖಲೆಗಳು. ಪ್ರತಿಯೊಂದು ಗೋಡೆ, ಕಂಬ ಮತ್ತು ಆವರಣವು ಒಂದು ವೈಭವಶಾಲಿ ಇತಿಹಾಸದ ಕಥೆಯನ್ನು ಹೇಳುತ್ತದೆ.

ಇಂತಹ ಅಪರೂಪದ ಪರಂಪರೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಆಧುನಿಕತೆಯ ಅಲೆಗಳ ನಡುವೆ ಇಂತಹ ಸಾಂಸ್ಕೃತಿಕ ಸ್ಮಾರಕಗಳು ಉಳಿದಿದರೆ ಮಾತ್ರ ಮುಂದಿನ ಪೀಳಿಗೆಗಳು ತಮ್ಮ ಭೂತಕಾಲದ ವೈಭವವನ್ನು ಅರಿತುಕೊಳ್ಳಲು ಸಾಧ್ಯ. ಚೆಟ್ಟಿನಾಡಿನ ಅರಮನೆಗಳು ನಿಜಕ್ಕೂ ಭಾರತೀಯ ವಾಸ್ತುಶಿಲ್ಪದ ಅಮೂಲ್ಯ  ರತ್ನಗಳಾಗಿವೆ  

 

- ಗ್ಲೆನ್ ಗುಂಪಲಾಜೆ