ದಡಗಳನ್ನು ಬೆಸೆದ ಸೇತುಬಂಧು

ನಂದಿತ ಎನ್.ಜಿ.

ಸೈಕಾಲಜಿಸ್ಟ್, ಬೆಂಗಳೂರು

 

ADVT.

ತೂಗುಸೇತುವೆಗಳ ಸರದಾರ, ‘ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ’ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ನುಡಿನಮನ
ಮಳೆಗಾಲ ಪ್ರಾರಂಭವಾದರೆ ಕೆಲವು ಊರುಗಳು ಹೊರಜಗತ್ತಿನಿಂದ ಸಂಪರ್ಕ ಕಳೆದುಕೊಳ್ಳುವ ಪರಿಸ್ಥಿತಿ, ತುರ್ತು ಸಂದರ್ಭದಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೆ ಕುಟುಂಬಗಳು ಆತಂಕಪಡುವ ದಿನಗಳು. ಇಂತಹ ಸಂಕಷ್ಟಗಳನ್ನು ದಕ್ಷಿಣ ಭಾರತದ ಅನೇಕ ಗ್ರಾಮಗಳು ದಶಕಗಳ ಕಾಲ ಎದುರಿಸುತ್ತಿರುವ ಸಂದರ್ಭ, ಆ ಗ್ರಾಮಗಳ ಬದುಕಿನಲ್ಲಿ ಭರವಸೆಯಾಗಿ ಬಂದ ಒಬ್ಬ ಎಂಜಿನಿಯರ್, ಕಡಿಮೆ ವೆಚ್ಚದಲ್ಲಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ತೂಗುಸೇತುವೆಗಳನ್ನು ನಿರ್ಮಿಸಿ ಸಾವಿರಾರು ಜನರ ಬದುಕಿಗೆ ಹೊಸ ದಾರಿ ತೋರಿಸಿದರು ಡಾ. ಗಿರೀಶ್ ಭಾರದ್ವಾಜ್.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಹುಟ್ಟಿದ ಗಿರೀಶ್ ಭಾರದ್ವಾಜ್ ತಮ್ಮ ಸರಳ ಬದುಕು ಮತ್ತು ಅಪರೂಪದ ಎಂಜಿನಿಯರಿಂಗ್ ಪ್ರತಿಭೆಯಿಂದ ದೇಶದ ಗಮನ ಸೆಳೆದು ದೇಶದ ವಿವಿಧ ಭಾಗಗಳಲ್ಲಿ ನೂರಾರು ತೂಗುಸೇತುವೆಗಳನ್ನು ನಿರ್ಮಿಸಿ, ಜನರ ನಡುವೆ ‘ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ’ ಎಂಬ ಹೆಸರಿನಿಂದ ಜನಪ್ರಿಯರಾದರು. ಸೇತುವೆಗಳನ್ನು ನಿರ್ಮಿಸಿ ಅವುಗಳ ಮೂಲಕ ಊರುಗಳನ್ನು, ಜನರನ್ನು ಮತ್ತು ಹೃದಯಗಳನ್ನು ಪರಸ್ಪರ ಬೆಸೆದರು. ಅವರ ಈ ಸಮಾಜ ಸೇವೆಯನ್ನು ಗುರುತಿಸಿ ಭಾರತ ಸರಕಾರ 2017ರಲ್ಲಿ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 
ಗ್ರಾಮೀಣ ಬದುಕಿನ ನೋವು ಕಂಡ ಎಂಜಿನಿಯರ್
1950ರ ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಜನಿಸಿದ ಗಿರೀಶ್ ಭಾರದ್ವಾಜ್ ಅವರಿಗೆ ಬಾಲ್ಯದಿಂದಲೇ ಗ್ರಾಮೀಣ ಬದುಕಿನ ಕಷ್ಟಗಳು ಪರಿಚಿತವಾಗಿದ್ದವು. ಮಳೆಗಾಲದಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದಾಗ ಗ್ರಾಮಗಳ ಸಂಪರ್ಕ ಕಡಿತಗೊಳ್ಳುವುದು, ಕೃಷಿಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿದ್ದ ತೊಂದರೆಗಳು, ತುರ್ತು ವೈದ್ಯಕೀಯ ನೆರವು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇಂತಹ ಹಲವು ತೊಂದರೆಗಳು ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿದವು.
1973ರಲ್ಲಿ ಮಂಡ್ಯದ ಪಿ.ಇ.ಎಸ್. ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದು ತಂದೆಯ ಆಶಯದಂತೆ ಹುಟ್ಟೂರಿನಲ್ಲೇ ಉಳಿದು ಸಣ್ಣ ವರ್ಕ್‌ಶಾಪ್ ಆರಂಭಿಸಿದರು. ಅಲ್ಲಿಂದ ಪ್ರಾರಂಭವಾಯಿತು ಅವರ ಬದುಕಿನ ಮತ್ತೊಂದು ಅಧ್ಯಾಯ.

ಒಂದು ಸಣ್ಣ ಸೇತುವೆಯಿಂದ ಆರಂಭವಾದ ಪಯಣ
1989 ವರ್ಷದಲ್ಲಿ ಕೊಡಗು ಜಿಲ್ಲೆಯ ನಿಸರ್ಗಧಾಮದಲ್ಲಿ ಒಂದು ಸಣ್ಣ ತೂಗುಸೇತುವೆ ನಿರ್ಮಿಸುವ ಕೆಲಸ ಗಿರೀಶ್ ಭಾರದ್ವಾಜ್ ಅವರ ಜೀವನದಲ್ಲಿ ಮಹತ್ವದ ತಿರುವಾಯಿತು. ತೂಗುಸೇತುವೆ ನಿರ್ಮಾಣದಲ್ಲಿ ಯಾವುದೇ ಅನುಭವವಿಲ್ಲದಿದ್ದರೂ, ಅವರು ಆ ಕೆಲಸವನ್ನು ಧೈರ್ಯದಿಂದ ಕೈಗೆತ್ತಿಕೊಂಡರು. ಅದು ಅವರಿಗೆ ಕೇವಲ ಒಂದು ನಿರ್ಮಾಣ ಕಾಮಗಾರಿಯಾಗಿರಲಿಲ್ಲ. ಮುಂದಿನ ಹಲವು ದಶಕಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಜನರನ್ನು ಸಂಪರ್ಕಿಸುವ ಮಹತ್ತರ ಸೇವಾ ಪಯಣಕ್ಕೆ ಅದು ಮೊದಲ ಹೆಜ್ಜೆಯಾಯಿತು.
ಅದೇ ವರ್ಷ ತಾವು ಬಾಲ್ಯದಿಂದ ಅನುಭವಿಸಿಕೊಂಡು ಬಂದಂತಹ ತಮ್ಮ ಊರಿನ ತೊಂದರೆಗೂ ನಾಂದಿ ಹಾಡಿದರು. ಮಳೆಗಾಲದಲ್ಲಿ ಉಕ್ಕಿ ಹರಿಯುವ ಪಯಸ್ವಿನಿ ನದಿ ಅರಂಬೂರು ಮತ್ತು ಸುಳ್ಯ ನಡುವಿನ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗುವಂತಹ ದೊಡ್ಡ ಕಾಂಕ್ರೀಟ್‍ ಸೇತುವೆ ನಿರ್ಮಿಸುವುದು ತಕ್ಷಣದ ಮಾತಾಗಿರಲಿಲ್ಲ. ಹೀಗಾಗಿ ಅವರು ತಮ್ಮ ಗ್ರಾಮದ ಸುಮಾರು 40 ಮಂದಿ ಸ್ಥಳೀಯ ಯುವಕರನ್ನು ಒಗ್ಗೂಡಿಸಿ ತೂಗುಸೇತುವೆ ನಿರ್ಮಿಸುವ ಕಾರ್ಯ ಆರಂಭಿಸಿದರು. ಸುಮಾರು 87 ಮೀಟರ್ ಉದ್ದದ ಈ ಸೇತುವೆ ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡಿತು. ಅದಕ್ಕಿಂತ ಮುಖ್ಯವಾಗಿ, ತಮ್ಮ ಸೇವೆಗೆ ಯಾವುದೇ ಸಂಭಾವನೆಯನ್ನು ಅವರು ಪಡೆಯಲಿಲ್ಲ. ವರ್ಷಗಳು ಉರುಳಿದರು ಇಂದಿಗೂ ಆ ಸೇತುವೆ ಜನರ ಸಂಚಾರಕ್ಕೆ ನೆರವಾಗುತ್ತಲೇ ಇರುವುದು ಅವರ ತಾಂತ್ರಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ADVT.

ಕಡಿಮೆ ವೆಚ್ಚದಲ್ಲಿ ಜನರಿಗೆ ದೊಡ್ಡ ನೆರವು
ಗಿರೀಶ್ ಭಾರದ್ವಾಜ್ ಅವರ ತೂಗುಸೇತುವೆಗಳ ವಿಶೇಷತೆ ಅವುಗಳ ಸರಳತೆ ಮತ್ತು ಆರ್ಥಿಕತೆಯಲ್ಲಿತ್ತು. ದುಬಾರಿ ಕಾಂಕ್ರೀಟ್‍ ಸೇತುವೆಗಳಿಗೆ ಪರ್ಯಾಯವಾಗಿ, ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಸೇತುವೆಗಳನ್ನು ನಿರ್ಮಿಸುವ ವಿಧಾನವನ್ನು ಅವರು ರೂಪಿಸಿಕೊಂಡಿದ್ದರು.
ಅವರ ಸೇತುವೆಗಳನ್ನು ನಿರ್ಮಿಸಲು ತಿಂಗಳುಗಳ ಕಾಲ ಕಾಯಬೇಕಾಗಿರಲಿಲ್ಲ. ಕೆಲವೇ ವಾರಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಸ್ಥಳೀಯ ಗ್ರಾಮಸ್ಥರನ್ನು ನಿರ್ಮಾಣ ಕಾರ್ಯದಲ್ಲಿ ಬಳಸಿಕೊಳ್ಳವ ಮೂಲಕ ಶ್ರಮದಾನದ ಸಂಸ್ಕೃತಿಯನ್ನು ಬೆಳೆಸುತ್ತಿದ್ದರು. ಹೀಗಾಗಿ ಸೇತುವೆ ಪೂರ್ಣಗೊಂಡಾಗ ಅದು ಕೇವಲ ಸರ್ಕಾರದ ಅಥವಾ ಗುತ್ತಿಗೆದಾರರ ನಿರ್ಮಾಣವಾಗಿರದೆ, ಇಡೀ ಗ್ರಾಮದ ಸ್ವಂತ ಆಸ್ತಿಯೆಂಬ ಭಾವನೆ ಜನರಲ್ಲಿ ಮೂಡುತ್ತಿತ್ತು.
ಅವರ ತೂಗುಸೇತುವೆಗಳು ಮುಖ್ಯವಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳ್ಳುತ್ತಿದ್ದವು. ಕೆಲವು ಸೇತುವೆಗಳು ಹಲವು ದಶಕಗಳ ಕಾಲ ಬಳಕೆಯಲ್ಲಿದ್ದು, ಅವರ ವಿನ್ಯಾಸದ ಪ್ರಾಯೋಗಿಕತೆ ಮತ್ತು ಬಾಳಿಕೆಯನ್ನು ಸಾಬೀತುಪಡಿಸಿವೆ.

ಸೇತುವೆ ಕಟ್ಟಿದ್ದು ನದಿಗೆ ಮಾತ್ರವಲ್ಲ, ಮನಸ್ಸುಗಳಿಗೂ
ಗಿರೀಶ್ ಭಾರದ್ವಾಜ್ ಅವರ ಕೆಲಸದ ಅತ್ಯಂತ ಮಾನವೀಯ ಮುಖ ಅವರ ಸೇತುವೆಗಳ ಸಾಮಾಜಿಕ ಪರಿಣಾಮದಲ್ಲಿತ್ತು. ಎರಡು ದಡಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣವಾದಾಗ, ಕೇವಲ ಪ್ರಯಾಣದ ಅಂತರ ಕಡಿಮೆಯಾಗಲಿಲ್ಲ; ಜನರ ನಡುವಿನ ಅಂತರವೂ ಕರಗಿತು. ಇದಕ್ಕೆ ಉದಾಹರಣೆ ಕಾಸರಗೋಡು ಭಾಗದ ಬಾವಿಕೆರೆಯೆಂಬಲ್ಲಿ ನಿರ್ಮಾಗೊಂಡ ಸೇತುವೆ. ಆ ನದಿಯ ಎರಡು ದಡಗಳಲ್ಲಿ ವಾಸಿಸುತ್ತಿದ್ದ ಜನರ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದವು, ಗಿರೀಶ್ ಭಾರದ್ವಾಜ್ ಅವರ ವಿಷೇಶತೆಯೇ ಗ್ರಾಮದ ಜನರನ್ನು ಒಗ್ಗೂಡಿಸಿ ಸೇತುವೆ ನಿರ್ಮಿಸುವುದು. ಇಲ್ಲಿ ಅವರ ಈ ಕಲ್ಪನೆಯಿಂದ ಸೇತುವೆ ನಿರ್ಮಾನವಾಗುವಷ್ಟರಲ್ಲಿ ಎರಡೂ ದಡಗಳ ಜನರು ಒಂದಾಗಿ ಸೇತುವೆಯ ಕೆಲಸ ಮುಗಿಸಿ, ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಒಂದಾಗಿ ಭಾಗವಹಿಸಿದ ಕ್ಷಣ ಗಿರೀಶ್ ಅವರ ಕೆಲಸದ ವಿಶೇಷತೆಯನ್ನು ಎತ್ತಿಹಿಡಿಯುತ್ತದೆ. ಅದಕ್ಕಾಗಿಯೇ ಅವರ ಸೇತುವೆಗಳನ್ನು ಕೇವಲ ‘ಇಂಜಿನಿಯರಿಂಗ್ ಯೋಜನೆಗಳು’ ಎಂದು ಕರೆಯಲು ಸಾಧ್ಯವಿಲ್ಲ. ಅವು ಗ್ರಾಮೀಣ ಬದುಕಿನ ಸಾಮಾಜಿಕ ಬದಲಾವಣೆಯ ಸಾಧನಗಳಾಗಿದ್ದವು.

ಸುಳ್ಯದಿಂದ ದೇಶದ ಗಡಿಗಳವರೆಗೆ
ಅರಂಬೂರಿನ ಸೇತುವೆಯ ಯಶಸ್ಸಿನ ನಂತರ ಗಿರೀಶ್ ಭಾರದ್ವಾಜ್ ಅವರ ಸೇವೆಯ ವ್ಯಾಪ್ತಿ ವಿಸ್ತರಿಸಿತು. ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಒಡಿಶಾ ಸೇರಿದಂತೆ ಹಲವು ರಾಜ್ಯಗಳ ದುರ್ಗಮ ಪ್ರದೇಶಗಳಲ್ಲಿ ಅವರು ತೂಗುಸೇತುವೆಗಳನ್ನು ನಿರ್ಮಿಸಿದರು.
ದಟ್ಟ ಕಾಡುಗಳು, ನದಿಗಳು ಹಾಗೂ ರಸ್ತೆ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಕೆಲಸ ಮಾಡುವುದು ಸುಲಭದ ಸಂಗತಿಯಾಗಿರಲಿಲ್ಲ. ಆದರೂ ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ವಿನ್ಯಾಸ ರೂಪಿಸಿ, ಜನರ ಸಹಕಾರದೊಂದಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿದ್ದರು. ದೇಶದ ವಿವಿಧ ಭಾಗಗಳಲ್ಲಿ 160ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿದ ಕೀರ್ತಿ ಗಿರೀಶ್ ಭಾರದ್ವಾಜ್ ಅವರಿಗೆ ಸಲ್ಲುತ್ತದೆ. 

ದುರ್ಗಮ ಪ್ರದೇಶದಲ್ಲೂ ಅಸಾಧ್ಯವೆನ್ನುವುದನ್ನು ಸಾಧ್ಯವಾಗಿಸಿದವರು
ಒಡಿಶಾದ ರಾಯಗಢದಂತಹ ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಅಲ್ಲಿನ ಜನರ ಸಂಚಾರ ಸುಗಮವಾಗುವಂತೆ ಗಿರೀಶ್ ಭಾರದ್ವಾಜ್ ಅವರು ಹಲವು ತೂಗುಸೇತುವೆಗಳನ್ನು ನಿರ್ಮಿಸಿದರು. ಅವರ ತಂಡ ನಿರ್ಮಿಸಿದ ಹಲವು ಸೇತುವೆಗಳು ನೂರಾರು ಮೀಟರ್ ಉದ್ದವಿದ್ದು, ಅವುಗಳಲ್ಲಿ ಕೆಲವು ಇಂದಿಗೂ ದೇಶದ ಗಮನ ಸೆಳೆಯುತ್ತವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಭಾಗದಲ್ಲಿ ಘಟಪ್ರಭಾ ನದಿಗೆ ನಿರ್ಮಿಸಿದ ಉದ್ದವಾದ ತೂಗುಸೇತುವೆಯೂ ಅವರ ಪ್ರಮುಖ ಕಾರ್ಯಗಳಲ್ಲಿ ಒಂದು.
ಕಾವೇರಿ, ಚಂದ್ರಗಿರಿ, ತುಂಗಾ, ಭದ್ರಾ, ಘಟಪ್ರಭಾ, ನೇತ್ರಾವತಿ ಸೇರಿದಂತೆ 50ಕ್ಕೂ ಹೆಚ್ಚು ನದಿಗಳ ಮೇಲೆ ಅವರ ತಾಂತ್ರಿಕ ಜ್ಞಾನ ಮತ್ತು ಪರಿಶ್ರಮದ ಗುರುತು ಮೂಡಿದೆ.

ಹಣಕ್ಕಿಂತಲೂ ಜನರ ಸಂತೋಷವೇ ಮುಖ್ಯ
ಗಿರೀಶ್ ಭಾರದ್ವಾಜ್ ಅವರ ಸೇವಾ ಮನೋಭಾವದ ಅತ್ಯಂತ ವಿಶೇಷ ಗುಣವೆಂದರೆ ಹಣವನ್ನು ಅವರು ಎಂದಿಗೂ ತಮ್ಮ ಕೆಲಸದ ಮುಖ್ಯ ಉದ್ದೇಶವನ್ನಾಗಿ ಮಾಡಿಕೊಂಡವರಲ್ಲ. ಸೇತುವೆಯ ವಿನ್ಯಾಸ ರೂಪಿಸುವುದರಿಂದ ಹಿಡಿದು ಸ್ಥಳ ಪರಿಶೀಲನೆ ಮತ್ತು ತಾಂತ್ರಿಕ ಮಾರ್ಗದರ್ಶನ ನೀಡುವವರೆಗೂ ಅನೇಕ ಸಂದರ್ಭಗಳಲ್ಲಿ ಅವರು ಯಾವುದೇ ಸಂಭಾವನೆ ಪಡೆಯದೆ ಸೇವೆ ಸಲ್ಲಿಸಿದ್ದರು.
ಕೆಲವು ಕಡೆಗಳಲ್ಲಿ ಕಾಮಗಾರಿ ಅಂತಿಮ ಹಂತ ತಲುಪಿದಾಗ ಹಣದ ಕೊರತೆಯಾದ ಸಂದರ್ಭದಲ್ಲೂ ತಮ್ಮ ಸ್ವಂತ ಹಣದಿಂದ ಕೆಲಸ ಪೂರ್ಣಗೊಳಿಸಿದ ಉದಾಹರಣೆಗಳೂ ಇವೆ.
ಸೇತುವೆ ಪೂರ್ಣಗೊಂಡ ನಂತರ ಗ್ರಾಮಸ್ಥರ ಮುಖದಲ್ಲಿ ಕಾಣಿಸುತ್ತಿದ್ದ ಸಂತೋಷವೇ ಅವರಿಗೆ ಸಿಗುತ್ತಿದ್ದ ದೊಡ್ಡ ಪ್ರತಿಫಲ ಎಂದು ನಂಬಿದವರು. 

ಅನಾರೋಗ್ಯವನ್ನು ಲೆಕ್ಕಿಸದ ಕಾರ್ಯತತ್ಪರತೆ
2012ರಲ್ಲಿ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದ ನಂತರವೂ ಅವರು ತಮ್ಮ ಕೆಲಸವನ್ನು ನಿಲ್ಲಿಸದೆ, ಚಿಕಿತ್ಸೆಯ ಅವಧಿಯಲ್ಲಿಯೂ ಸೇತುವೆಗಳ ವಿನ್ಯಾಸದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಅವರು, ಆಸ್ಪತ್ರೆಯಿಂದ ಹಿಂತಿರುಗಿ ಬಂದ ನಂತರದ ದಿನಗಳಲ್ಲಿ ಸೇತುವೆ ಕಾಮಗಾರಿಗಳ ಸ್ಥಳಗಳಿಗೆ ಸ್ವತಃ ತಾವೆ ತೆರಳಿ ಪರಿಶೀಲನೆ ಮಾಡಿ, ಕಾಮಗಾರಿಯ ಪ್ರಗತಿಯನ್ನು ಗಮನಿಸುತ್ತಿದ್ದರು.

ಒಲಿದು ಬಂದ ವಿಶೇಷ ಪ್ರಶಸ್ತಿ : ಪದ್ಮಶ್ರೀ 
ದೇಶಕ್ಕೆ ನೀಡಿದ ಅಮೂಲ್ಯ ಸೇವೆಯನ್ನು ಗುರುತಿಸಿ 2017ರಲ್ಲಿ ಗಿರೀಶ್ ಭಾರದ್ವಾಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಯಿತು. ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದನ್ನು ಪಡೆದಿದ್ದರೂ ಗಿರೀಶ್ ಭಾರದ್ವಾಜ್ ಅವರ ಬದುಕಿನಲ್ಲಿ ಯಾವುದೇ ಆಡಂಬರ ಇರಲಿಲ್ಲ. ತಮ್ಮ ಗ್ರಾಮೀಣ ಬೇರುಗಳನ್ನು ಮರೆಯದೆ, ಸರಳತೆಯಲ್ಲಿ ಬದುಕಿದ ಅವರು, ತಮ್ಮ ಜ್ಞಾನ ಮತ್ತು ಅನುಭವವನ್ನು ಜನರ ಸೇವೆಗೆ ಅರ್ಪಿಸಿದ್ದರು.
ಡಾ. ಗಿರೀಶ್ ಭಾರದ್ವಾಜ್ ಅವರು ಜೀವನದ ದೊಡ್ಡ ಸಾಧನೆ ದಡಗಳನ್ನು ಸಂಪರ್ಕಿಸುವ ಸೇತುವೆಗಳು ಮಾತ್ರವಲ್ಲ ಎರಡು ದಡದಲ್ಲಿ ಇದ್ದ ವಿಭಿನ್ನ ಮನೋಭಾವದ ಜನರ ಹೃದಯಗಳನ್ನು, ಮನಸ್ಸುಗಳನ್ನು ಸಂಪರ್ಕಿಸಿದ್ದು. ಒಂದು ಕಾಲದಲ್ಲಿ ಮಳೆ ಬಂದಾಗ ಪ್ರತ್ಯೇಕ ದ್ವೀಪಗಳಂತಾಗುತ್ತಿದ್ದ ಹಳ್ಳಿಗಳಿಗೆ ಅವರು ಹೊಸ ಸಂಪರ್ಕ ನೀಡಿದರು. ಆಸ್ಪತ್ರೆ, ಶಾಲೆ, ಮಾರುಕಟ್ಟೆ ಮತ್ತು ತಾಲೂಕು ಕೇಂದ್ರದತ್ತ ಸಾಗುವ ದಾರಿಯನ್ನು ಸುಗಮಗೊಳಿಸಿದರು.
ಅವರ ನಿರ್ಮಿಸಿದ ಸೇತುವೆಗಳಲ್ಲಿ ಕಾಲದ ಹೊಡೆತಕ್ಕೆ ಬದಲಾಗಬಹುದು. ಆದರೆ ಜನರ ಬದುಕಿನಲ್ಲಿ ಅವರು ನಿರ್ಮಿಸಿದ ನಂಬಿಕೆ, ಸೇವಾಭಾವ ಮತ್ತು ಮಾನವೀಯತೆಯ ಸೇತುವೆ ಎಂದಿಗೂ ಅಳಿಯದು. ನದಿಗಳ ದಡಗಳನ್ನು ಬೆಸೆದ ಎಂಜಿನಿಯರ್ ಆಗಿ ಆರಂಭವಾದ ಅವರ ಪಯಣ, ಕೊನೆಗೆ ಮನುಷ್ಯರ ಮನಸ್ಸುಗಳನ್ನು ಬೆಸೆದ ಮಹಾನ್ ಮಾನವೀಯ ಸೇವೆಯಾಗಿ ರೂಪುಗೊಂಡಿತು. ‘ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ’ ಎಂದು ಗೌರವಿಸಲ್ಪಟ್ಟ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಇದುವೇ ನಮ್ಮ ಹೃತ್ಪೂರ್ವಕ ನುಡಿನಮನ