ಈ ಕವಿತ್ವವೇ ಹಾಗೆ ಬಲು ವಿಚಿತ್ರ. ಒಮ್ಮೊಮ್ಮೆ ತನ್ನಿಂತಾನೇ ಅಕ್ಷರಗಳು ತಾಮುಂದು ನಾಮುಂದೆಂದು ಕವನದ ಸಾಲಿನ ಸರತಿಗೆ ನಿಲ್ಲಲು ತಾವಾಗಿಯೇ ಪೈಪೋಟಿಗಿಳಿದುಬಿಡುತ್ತವೆ. ಆದರೆ ಮತ್ತೊಮ್ಮೆ ಮನಸ್ಸು ಥೇಟ್ ಆ ಕಾರ್ಮೋಡಗಳಂತೆ ಕತ್ತಲಿಗೆ ಸರಿದು ಬಿಡುತ್ತವೆ. ಜೊತೆಗೆ ಅದೇನೋ ಮನಕೆ ಒಂದು ರೀತಿಯ ಮಂಕು ಆವರಿಸಿಬಿಡುತ್ತದೆ.
ಈ ಕವಿ ಮನಸ್ಸೇ ಹಾಗೆ ತಳಮಳ, ಕಾತರಿಕೆ, ಶಾಂತತೆ, ದುಗುಡತೆ, ನಿರಾಶೆ ಪ್ರತಿಯೊಂದರ ಪದರವೂ ಹಂತ ಹಂತವಾಗಿ ಬಿಚ್ಚುಕೊಳ್ಳುತ್ತಾ ಸಾಗುತ್ತಿರುತ್ತದೆ. ಅವನೊಳಗೊಬ್ಬ ಯಾರಿಗೂ ಕಾಣದ ಅಪ್ಪಟ ಪ್ರೇಮಿ ಅವಿತು ಕುಳಿತಿರುತ್ತಾನೆ. ಮತ್ತೊಮ್ಮೆ ಭಗ್ನ ಕನಸುಗಳ ಹೆಣಗಳ ರಾಶಿಗಳ ಹೊರಲಾರದೆ ಬೋರಲು ಬಿದ್ದಿರುತ್ತಾನೆ.
ಎಲ್ಲವೂ ಮುಗಿಯಿತು ಎಂದಾಗ ಎಲ್ಲೋ ಒಂದು ನಿರಾಶೆಯ ಬಿಂದು ಆಸೆಯಾಗಿ ಉಕ್ಕುವುದಕ್ಕೆ ಕ್ಷಣದಲ್ಲೇ ಸಿದ್ಧವಾಗಿರುತ್ತದೆ. ಕೆಲವೊಮ್ಮೆ ಶಾಂತಿಯ ಬೆಳಕೊಂದು ಹೊರಸೂಸಲು ಹವಣಿಸುತ್ತಿರುತ್ತದೆ. ಇವೆಲ್ಲದರ ಸಾಕಾರವಾಗಿ ಅಕ್ಷರಗಳ ಗೀಚಲು ಯಾವುದೋ ಒಂದು ಬಿಳಿ ಹಾಳೆ ಇಲ್ಲವೆ ಕೇವಲ ಒಂದು ಬಸ್ಸಿನ ಟಿಕೆಟ್ಟು ಅಥವಾ ಅಂಗಡಿ ಸಾಮಾನಿನ ರಶೀದಿಯ ಹಿಂದೆ ಸಿಗುವ ಸ್ವಲ್ಪ ಜಾಗ ಕೊನೇ ಪಕ್ಷ ಏನಿಲ್ಲದಿದ್ದರೂ ಮನಸ್ಸಿನಲ್ಲಿ ಕಲ್ಪನೆ ಮೂಡಿದ ತಕ್ಷಣ ಜೇಬಿನೊಳಗೆ ಭದ್ರವಾಗಿ ಕುಳಿತ ಮೊಬೈಲಿನ ಕೀಪ್ಯಾಡುಗಳೇ ಮನಸ್ಸಿನ ಭಾವನೆಗಳನ್ನು ತಾವೇ ಕುಟ್ಟಿಸಿಸಿಕೊಳ್ಳಲು ತಯಾರಾಗಿ ನಿಂತುಬಿಡುತ್ತವೆ.
ಕೆಲವೊಮ್ಮೆ ಶೂನ್ಯತೆ ಆವರಿಸಿ ಒಂದಕ್ಷರವನ್ನೂ ಗೀಚದೆ ತಡಬಡಿಸಿದ ಕ್ಷಣಗಳೆಷ್ಟೋ ಹಾಗೆಯೇ ಬರವಣಿಗೆಯ ಹಸಿವಿಗೆ ಆಹಾರವಾದ ಹಾಳೆಗಳೆಷ್ಟೋ...?! ಲೆಕ್ಕವಿಟ್ಟರ‍್ಯಾರು..!! ಕೆಲವೊಮ್ಮೆ ಮನಸ್ಸು ಇಂಥಾ ಆಹುತಿಗಾಗುವ ನಿರ್ಮಲ ಬಿಳಿ ಹಾಳೆಗಳ ಕ್ಷಮೆ ಕೇಳುತ್ತಲೇ ಅಕ್ಷರಗಳ ಕದನಕ್ಕಿಳಿದುಬಿಡುತ್ತವೆ.
ಕವಿ ಮನಸ್ಸು ಗೀಚುವ ಪದಗಳಿಗೆ ಯಾವುದೇ ವಿಷಯಗಳೂ ನಿಶ್ವಯವಾಗಿರುವುದಿಲ್ಲ. ಹಳೆಯ ಪ್ರೇಮ, ಪ್ರಕೃತಿಯ ಚಿಗುರು, ಎಲ್ಲೋ ನಕ್ಕು ಮರೆಯಾದ ಯಾವುದೋ ಒಂದು ನಗು ಕೆಲವೊಮ್ಮೆ ನಮ್ಮ ಬೀದಿಯ ಮೂಲೆಯೊಂದರಲ್ಲಿ ಬಿದ್ದ ನಾರುವ ಕಸದ ರಾಶಿಗಳೇ ಬರವಣಿಗೆಗೆ ಸ್ಪೂರ್ತಿ ತುಂಬುವುದುಂಟು.
ಯಾರೋ ಬರೆದ ಕವನದ ಒಂದು ಪದ, ಮತ್ಯಾರೋ ಕಾಡಿದಂತ ಒಂದು ಕ್ಷಣ, ಗೆಳೆಯರ ಹುಡುಗಾಟಿಕೆ, ಮಗುವಿನ ಮುಗ್ಧ ನಗು, ಯಾರದೋ ಕುಹಕ ಕೊನೆಗೆ ಯಾರದೋ ಒಂದು ಅಸಹಾಯಕ ಅಳು ಕೂಡ ಬರೆಯಲು ಈ ಮನಸ್ಸಿಗೆ ಹುಚ್ಚು ಹಿಡಿಸಬಹುದು.
ವಾಸ್ತವದಲ್ಲಿ ಮನಸ್ಸಿನ ವೇದನೆಗಳೇ ಬಹುಪಾಲು ಆ ಕವನದ ಸಾಲುಗಳನ್ನು ನುಂಗಿರುತ್ತವೆ. ಯಾರದೋ ಒಂದು ಸ್ಪೂರ್ತಿ, ಹೀಯಾಳಿಕೆ, ಅವಮಾನ ಹರಡಿ ಪದಗಳಾಗಿ ಕುಳಿತಿರುತ್ತವೆ. ಬರೆವ ಹುಚ್ಚಿನ ಆರಂಭದ ಕವಿತೆಗಳು ನಮಗೆ ಮಗುವಿನ ತೊದಲು ನುಡಿಯಂತೆ..! ತಪ್ಪಾಗಿದ್ದರೂ ಸರಿಯಾಗಿದ್ದರೂ ಅವುಗಳು ಕೊಡುವ ಕಚಗುಳಿಗೆ ಹೋಲಿಕೆಯುಂಟೆ..?!. ತಾನು ಬರೆದ ಮೊದಲ ಕವನ ಯಾವುದೋ ಒಂದು ಪತ್ರಿಕೆಯಲ್ಲಿ ಅಚ್ಚಾದಾಗಲಂತೂ ಚೊಚ್ಚಲ ಮಗುವಿನ ತಂದೆಯಾದಂತಹ ಖುಷಿ. ಆಗಲೇ ಏನೋ ಒಂದು ಸಣ್ಣ ಹುರುಪು. ಅವರಿವರು ಬರೆದ ಕವನಗಳನ್ನೆಲ್ಲಾ ಓದಿ ತುಲನೆ ಮಾಡಿ ನನ್ನ ಕವನವೂ ಪರವಾಗಿಲ್ಲ ಎಂದು ನನ್ನ ಬೆನ್ನ ನಾನೇ ತಟ್ಟಿದಾಗ ಏನೋ ಸಿಕ್ಕಂತಾಗಿ ಮನಸ್ಸು ಹುಚ್ಚು ಕಲ್ಪನೆಗಳಲ್ಲಿ ಹಾರಾಡತೊಡಗಿತ್ತು.
ಕವನಗಳೆಂದರೆ ಬರಿಯ ಸಾಲುಗಳಲ್ಲ ಅವು ಕವಿ ಮನಸ್ಸಿನ ಭಾವನೆಗಳ ಪಿಸುಗುಟ್ಟುವಿಕೆ. ಅವು ಮನಸ್ಸಿನ ಬೇಗುದಿಗಳ ಸಮಾಧಾನಪಡಿಸಲು ನಾವೇ ಹಾಡಿಕೊಂಡ ಜೋಗುಳ ಪದಗಳು. ಅತ್ತ ಕಣ್ಣೀರಿನ ಕೊನೆಯ ಬಿಂದು ಸರಿದಾಗ ಶಾಂತವಾದ ಮನಸ್ಸಿನ ತುಟಿಯ ನಗುವದು. ನನ್ನ ಮತ್ತು ಭಾವನೆಗಳ ಮಿಲನಕ್ಕೆ ಹುಟ್ಟಿರುವ ಕೂಸಿನ ಹೆಸರೇ ಕವನಗಳು. ಹಸುಗೂಸಿನ ತುಂಟತನ, ಕಚಗುಳಿ ಅದರಲ್ಲಡಗಿದೆ. ಹಳೆಯ ಯೋಚನೆಗಳಲ್ಲಿ ಹೊಸ ಯೋಜನೆಗಳನ್ನು ಹುಟ್ಟುಹಾಕುತ್ತವೆ. ಗೀಚಲು ಕೈಯನ್ನು ಭಾವನೆಗಳು ಬೆನ್ನ ತಟ್ಟುತ್ತವೆ. ನೋವು ಸಂಕಟವನ್ನು ಮೆಟ್ಟಿಹಾಕುತ್ತವೆ.
ಯಾವುದೋ ಒಂದು ಪದ ನಮ್ಮಲ್ಲಿ ಹೊಸ ಹುರುಪನ್ನು ತುಂಬುವುದುಂಟು. ಸಾಹಿತ್ಯದ ಯಾವದೋ ಒಂದು ಸಾಲು ನಮ್ಮ ಜೀವನದ ಗತಿಯನ್ನೇ ಬದಲಿಸುವುದುಂಟು. ಅದು ನನ್ನ ಒಂಟಿತನದ ಕುಚಿಕ್ಕು ಗೆಳೆಯ,ನನ್ನ ಪ್ರೀತಿಯ ಹುಡುಗಿ, ಕಾಯುವ ತಂದೆ, ತಾಯಿಯ ಮಡಿಲು ಎಲ್ಲವೂ ಕೂಡ.
ಮೊದಲ ಕವನ ಅಚ್ಚಾದಾಗ ಅದನ್ನು ಹತ್ತಾರು ಬಾರಿ ಓದಿ ದಿಂಬಿನ ಕೆಳಗಿಟ್ಟಿದ್ದೆ ಹೊಸ ಪ್ರೇಮಿಯ ನವ ಪ್ರೇಮ ಪತ್ರದಂತೆ. ನಂತರ ಬೇರೆ ಬೇರೆ ಪತ್ರಿಗಳಲ್ಲೂ ಬರತೊಡಗಿದಾಗ ನನ್ನಲ್ಲೇ ಒಂದು ರೀತಿಯ ಗಾಂಭೀರ್ಯತೆ, ಶಿಸ್ತು ಸೌಜನ್ಯವೂ ನನ್ನ ಮನದೊಳಗೆ ಅಚ್ಚಾಗತೊಡಗಿತ್ತು. ಕೇವಲ ಒಂದೇ ಒಂದು ಕವನ ನನ್ನ ಸ್ವಭಾವವನ್ನೇ ಬದಲಿಸಿತ್ತು. ನಾ ಕವಿಯೆಂಬ ಭ್ರಮೆಯೇ ನನ್ನ ಮೈ ಮರೆಸಿತ್ತು. ಮತ್ತೇನಾದರೂ ಬರೆಯಲು ಮನಸ್ಸು ಹುಚ್ಚುಕೋಡಿಯಾಗುತ್ತಿತ್ತು. ಅಲ್ಲಿ ವಿರಹವೂ ಕಾವ್ಯ. ಸನಿಹವೂ ಕಾವ್ಯ. ಜಾಲಿ ಮರದಿಂದ ಹಿಡಿದು ಕಂಗೊಳಿಸುವ ಗುಲಾಬಿಯೂ ಹೊಸ ಉತ್ಸಾಹ ಹೊಸ ಸ್ಫೂರ್ತಿ ತುಂಬುತಲಿತ್ತು.
ಕವನಗಳು ನನ್ನ ಮಕ್ಕಳಂತೆ ನಾವದರ ಹಡೆದವ್ವ. ಬಾಳ ಜಂಜಾಟದಲಿ ಬೇಸತ್ತು ಜೀವನದ ಮಜಲುಗಳಿಗೆ ಹೆದರಿ ಕಂಗಾಲಾದಾಗ ಅವೇ ನಮ್ಮ ದಾರಿ ತೋರುವ ಗುರಿ. ಒಟ್ಟಿನಲ್ಲಿ ಕಷ್ಟವೋ ಸುಖವೋ ಏನಾದರೂ ಸರಿಯೇ ಗೀಚುತ್ತಿರಬೇಕು. ಅದರ ನಡುವೆ ಸಿಗುವ ಸಾಸಿವೆಯಷ್ಟು ಸುಖವ ಬಾಚಿಕೊಳ್ಳುತ್ತಿರಬೇಕು. ಇದು ಒಂದು ತರಹದ ಹುಚ್ಚು. ಹೌದು ಇದು ಕವಿ ಮನಸ್ಸು ಯಾರ ಅಂದಾಜಿಗೂ ಸಿಗದ ಒಂದು ರೀತಿಯ ಕಿಚ್ಚು.
ಕವಿ ಮನಸ್ಸೇ ಹಾಗೆ ಹಳತರಲ್ಲೂ ಹೊಸತನ್ನು ಕಾಣುವ ಸಂಭ್ರಮ. ಅವನಿಗೆ ಹಳೆಯ ಸೂರ್ಯ ಚಂದ್ರ ಆಕಾಶಗಳೆಲ್ಲಾ ನಿತ್ಯ ಹೊಸತಾಗಿ ಕಂಗೊಳಿಸುತ್ತಿರುತ್ತವೆ. ಪ್ರಕೃತಿಗೆ ವರುಷಕ್ಕೆ ಒಂದೇ ವಸಂತವಾದರೆ ಈ ಕವಿಗೆ ಅನುದಿನವೂ ವಸಂತವೇ. ಸಂತಸಕ್ಕೆ ಒಂದು ಕವನವಾದರೆ ದಃಖಕ್ಕೆ ಹತ್ತಾರು ಕವನಗಳು. ಕವಿತ್ವವೇ ಅವನಿಗೆ ಕೃಷಿ ಅನುದಿನವೂ ಬೇಸಾಯ ಇಲ್ಲಿ ಫಲಾಫಲದ ನಿರೀಕ್ಷೆಯಿಲ್ಲ ಕವಿ ಬರೆಯುತ್ತಿರಬೇಕು ಸದಾ.
ಅದೇ ತೃಪ್ತಿ ಅದೇ ಅನಂದ..!!
- ಆರ್. ಸುನೀಲ್, ತರೀಕೆರೆ











