ನಾನು ಯಾರು?.

ನಮಸ್ಕಾರ, ನಾನು?  ನಾನು ಯಾರು?. ನನ್ನ ಜನ್ಮಕಾರಣವೇನು?  ಇದೆ ನನ್ನ ಕೆಲವು ಯಕ್ಷಪ್ರಶ್ನೆಗಳಲ್ಲಿ ಒಂದು. ಆದರೆ ನಾನು ಹುಟ್ಟಿದ್ದು ಮಾತ್ರ ಮನುಷ್ಯರಿಂದ. ನನಗೆ ನೂರಾರು ವರ್ಷಗಳ ಆಯಸ್ಸು. ಮನುಷ್ಯರೇ ನನ್ನ ಸೃಷ್ಟಿಸಿ ಬೆಳಸಿ, ಮತ್ತೆ ಮತ್ತೆ ಇನ್ನಷ್ಟು ಬೆಳಸುತ್ತಿರುವುದು.  

ಅದ್ರಲ್ಲೂ ಈ GEN-Z ಕಾಲದಲ್ಲಿ, ನಾನು ಸದಾ ಟ್ರೆಂಡ್ನಲ್ಲಿರುವ ಜೀವ. Whatsapp, Facebook, Instagram, ಎಲ್ಲೆಲ್ಲಿಯು ನನ್ನದೇ ಅಬ್ಬರ. ಕ್ಷಮಿಸಿ, ನನ್ನ ಹೆಸರು ಹೇಳುವುದೆ ಮರೆತೇ. ಪ್ರತಿ ಭಾಷೆಯಲ್ಲು ನನಗೊಂದು ಹೆಸರಿದೆ. ನನ್ನ ಹೆಸರು “ ಜನ್ಮದಿನದ ಶುಭಾಶಯಗಳು ”, ಇಂಗ್ಲಿಷ್ನಲ್ಲಿ “Happy Birthday”. ಪ್ರತಿದಿನ ಎಲ್ಲ ಸಾಮಾಜಿಕ ಜಾಲತಾಣಗಳ್ಳಲ್ಲಿ, ಯಾವುದಾದರು ಫೋಟೋ ಕೆಳಗೆ, ನನ್ನ ಹೆಸರು emojiಗಳೊಂದಿಗೆ ಕಂಗೊಳಿಸುತ್ತಿರುತ್ತದೆ.. “Happy Birthday 🥳🍰” ಹೀಗೆ…

ಇನ್ನು ನನ್ನ ಬಗ್ಗೆ ಅನೇಕ ಹಾಡಗಳನ್ನು ಸಹ ಬರೆದಿದ್ದಾರೆ. ಸಿನಿಮಾ ತಗೆಯುವುದೊಂದೇ ಬಾಕಿ ಇದೆ. ನನ್ನ ಹೆಸರಲ್ಲಿ ಭಾರತೀಯ ಜನರು ವರ್ಷಕೊಮ್ಮೆ ಸುಮಾರು ₹1000 ಇಂದ ಹಿಡಿದು ₹3,00,000 ವರೆಗೂ ಆದರೂ ಖರ್ಚು ಮಾಡುತ್ತಾರೆ. ಒಂತರ ನನ್ನಿಂದಲು  ಭಾರತೀಯ ಆರ್ಥಿಕತೆಗೆ ಕೊಡುಗೆ ಇದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ವಯಸ್ಸಾದವರವರೆಗೂ ಎಲ್ಲರು ನನ್ನ ಹೆಸರಲ್ಲಿ ಹಾರೈಸುತ್ತಾ, candle ಹಚ್ಚಿ, ಉಡುಗೊರೆ ನೀಡಿ, ಕೇಕ್ ತಿನ್ನುತ್ತಾ ಸಂಭ್ರಮಿಸುವುದನ್ನು ಕಂಡರೆ ಖುಷಿಯಾಗುತ್ತದೆ. 

ಆದರೆ ಏಕೋ, ಏನೋ ಬಹಳ ದಿನಗಳಿಂದ ಕೆಲವು ಯಕ್ಷಪ್ರಶ್ನೆಗಳು ನನ್ನ ಅಂತರಾಳವನ್ನು ಕಲಕುತ್ತಿದ್ದವು, ಇನ್ನು ಕಲಕುತ್ತಲೆ ಇವೆ. ಜನರು ನನ್ನ ಹೆಸರಲ್ಲೆಕೆ ಸಂಭ್ರಮಿಸುತ್ತಾರೆ? ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರು ಫೋಟೋ ಕೆಳಗೆ ನನ್ನ ಹೆಸರನ್ನೇಕೆ ಹಾಕುತ್ತಾರೆ?  ಪ್ರಕೃತಿಯಲ್ಲಿ ಸೃಷ್ಟಿಯಾಗುವ ಪ್ರತಿ ಜೀವಿಯ ಹುಟ್ಟಿನ ಹಿಂದೆಯೂ ಒಂದು ಕಾರಣವಿರುತ್ತದೆ. ಹಾಗಿದ್ದರೆ ನನ್ನ ಜನ್ಮದ ಹಿಂದಿನ ಕಾರಣವೇನಾದರೂ ಏನು?ಈ ಪ್ರಶ್ನೆಗಳು ನನ್ನ ತಲೆಬಿಸಿ ಮಾಡಲು ಆರಂಭಿಸಿದವು. ಮೊದಮೊದಲು ಈ ಪ್ರಶ್ನೆಯನ್ನು ವಿಶ್ಲೇಷಿಸಲು ಪ್ರಾರಂಭಿಸಿದೆ. 

ನನ್ನ ಹೆಸರಿನ ಅರ್ಥದಲ್ಲಿಯೇ ನನ್ನ ಜನ್ಮಕಾರಣವಿರಬಹುದೇನೋ?  ನಿಧಾನವಾಗಿ ಯೋಚಿಸಿದೆ.

ನನ್ನ ಹೆಸರು “ ಜನ್ಮದಿನದ ಶುಭಾಶಯಗಳು”. ಜನ್ಮ ಎಂದರೆ ಹುಟ್ಟು.

 ಓಹೋ! ಮನುಷ್ಯರು ಹುಟ್ಟಿದ ಆ ದಿನವನ್ನು ನನ್ನ ಹೆಸರಲ್ಲಿ ಆಚರಿಸಬಹುದೇನೋ ಅನ್ಕೊಂಡೆ? ಆದರೆ ನನ್ನ ಯೋಚನೆ ಸರಿ ಇದ್ದರೆ ಆಗಷ್ಟೇ ಹುಟ್ಟಿದ ಮಕ್ಕಳು ಮಾತ್ರ ನನ್ನ ಹೆಸರಲ್ಲಿ ಆಚರಿಸಬೇಕು ಅಲ್ಲವೇ? ಆದರಿಲ್ಲಿ ಎಲ್ಲ ವಯಸ್ಸಿನವರು ಆಚರಿಸುತ್ತಾರೆ. ಪ್ರತಿ ವರ್ಷ ಮನುಷ್ಯ ಮತ್ತೆ ಮತ್ತೆ ತಾಯಿಯ ಗರ್ಭದಿಂದ ಹುಟ್ಟಲು ಸಾಧ್ಯವಿಲ್ಲ. 

ನಾನು ಹೀಗೆ ಮೇಲೆ ಮೇಲೆ ಯೋಚಿಸಿದರೆ ಉತ್ತರ ಸಿಗಲು ಸಾಧ್ಯವಿಲ್ಲ . ಇನ್ನು ಆಳಕ್ಕೆ ಹೋಗಿ ಯೋಚಿಸಬೇಕು ಅನಿಸಿತು. ಹುಟ್ಟು, ಜನ್ಮ ಎಂದರೆ “ಆರಂಭ” ಅಥವಾ “ಬದಲಾವಣೆ” ಎಂದು ಸಹ ಹೇಳಬಹುದು.. ಹಾಗಿದ್ದರೆ ಪ್ರತಿ ವರ್ಷ, ಅದೇ ತಿಂಗಳು, ಅದೇ ದಿನ ಮನುಷ್ಯನ ಬದುಕಿನಲ್ಲಿ ಅದೇನು ಆರಂಭ ಅಥವಾ ಬದಲಾವಣೆ ಆಗಬಹುದು? ಹಾಗಾಗಲು ಸಾಧ್ಯವಾ? ನನ್ನ ತಲೆಯಲ್ಲಿ ಈ ಒಂದು ನಿಮಿಷದಲ್ಲೇ ಅದೆಷ್ಟು ಆಲೋಚನೆಗಳು ಆರಂಭ, ಅಂತ್ಯ, ಬದಲಾವಣೆಗಳನ್ನು ಕಾಣುತ್ತಿರುವಾಗ ಮನುಷ್ಯನಲ್ಲಿ ವರ್ಷಕೊಮ್ಮೆ ಮಾತ್ರ ಹಾಗಾಗಲೂ ಸಾಧ್ಯವಾ? ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ ಪ್ರತಿ ನಿಮಿಷ ಅದೆಷ್ಟು ಬದಲಾವಣೆಗಳನ್ನು ಕಾಣುವುದಿಲ್ಲ. ಅದು ಊಹೆಗೂ ನಿಲುಕದ್ದು. ಹಾಗೆ ನೋಡಿದರೆ ಪ್ರತಿನಿಮಿಷ ನನ್ನ ಹೆಸರಲ್ಲಿ ಆಚರಿಸಿ ಸಂಭ್ರಮಿಸಾಬೇಕಲ್ಲವೇ? ವರ್ಷಕೊಮ್ಮೆ ಮಾತ್ರವೇಕೆ? 

ತಟ್ಟನೆ ಒಂದು ದೃಶ್ಯ ನನ್ನ ಕಣ್ಮುಂದೆ ಹೊಳೆಯಿತು. ಕೇಕ್ ಮೇಲೆ ನನ್ನ ಹೆಸರೊಂದಿಗೆ ಆ ಆ ಮನುಷ್ಯರ ವಯ್ಸುಸು ಬರೆದಿರುವುದನ್ನು ನೋಡಿದ್ದೇ. ಓ ಹೋ ಬಹುಶಃ ಮನುಷ್ಯರು ತಮ್ಮ ವಯಸ್ಸನ್ನು ಲೆಕ್ಕಹಾಕಲು ಅಥವಾ ನಾನಿನ್ನೂ ಬದುಕಿದ್ದೇನೆ ಎಂಬ ಸಂತಸವನ್ನು ನನ್ನ ಹೆಸರಲ್ಲಿ ಸಂಭ್ರಮಿಸಬಹುದೇನೋ ಅನ್ಕೊಂಡೆ. ಆದರೆ ಆಗಲೇ ಅನ್ಕೊಂಡ ಹಾಗೆ ಮನುಷ್ಯನಿಗೆ ಪ್ರತಿ ನಿಮಿಷ ವಯಸ್ಸಾಗುತ್ತೆ,  ಅಲ್ಲವಾ? ಮತ್ತದೆ ಪ್ರಶ್ನೆ. ವರ್ಷಕೊಮ್ಮೆ ಮಾತ್ರವೇಕೆ? 

 ವರ್ಷಕೊಮ್ಮೆ ಒಂದು ಸಂಭ್ರಮ ಬೇಕು ಎಂದನಿಸಿದರೆ ಭಾರತದಲ್ಲಿ ಅದೆಷ್ಟು ಹಬ್ಬಗಳಿಲ್ಲ. ಸಂಕ್ರಾಂತಿ, ಯುಗಾದಿ, ದೀಪಾವಳಿ ಇನ್ನು ಅನೇಕ. ಹಬ್ಬಕೊಂದು ಸಿಹಿ, ಉಡುಗೆ, ತೋಡುಗೆ, ಉಡುಗೊರೆ. ಇವುಗಳ ಜೊತೆಗೆ ಕೇವಲ ಕೇಕ್ ತಿನ್ನುವ ನೆಪಕ್ಕಾಗಿ  ಮನುಷ್ಯರು ನನ್ನ ಸೃಷ್ಟಿಸಿದರೆ? ಅಂಗಡಿಗೆ ಹೋದರೆ ಕೇಕ್ ಸಿಗುತ್ತದೆ. ಅದಕ್ಕೆ ನಾನು ಬೇಕಾದೆನ?  ಛೇ ಛೇ ನನ್ನ ಜನ್ಮಕಾರಣ ಇಷ್ಟೆ ಆಗಿರಲು ಸಾಧ್ಯವಾ? 

ಹೋಗಲಿ. ಮನುಷ್ಯರು ನನ್ನ ಹೆಸರಲ್ಲಿ ಮೊತ್ತಬ್ಬರಿಗೇಕೆ ಹಾರೈಸುತ್ತಾರೆ? “ಜನ್ಮದಿನದ ಶುಭಾಶಯಗಳು”. ಅಂದರೆ “ನೀನು ಹುಟ್ಟಿದ ಈ ದಿನ ಶುಭವಾಗಿರಲಿ”. ಈ ದಿನ ಮಾತ್ರ ಶುಭವಾಗಿದ್ದರೆ ಸಾಕೆ? ಮತ್ತೆಲ್ಲ ದಿನಗಳು ಏನಾಗಿರಬೇಕು? ಹೋಗಲಿ ಮನುಷ್ಯರು ನನ್ನನೇಕೆ ಸೃಷ್ಟಿಸಿದರು ಎಂಬ ಪ್ರಶ್ನೆಗೆ ಅವರ ಬಳಿಯಾದರೂ ಉತ್ತರವಿದೇಯ? ಈ ಪ್ರಶ್ನೆಯಂತೂ ನನ್ನನು ಅದೆಷ್ಟು ಗಾಬರಿಗೊಳಿಸಿತು ಎಂದರೆ ಅದನ್ನು ವರ್ಣಿಸಲು ಸಾಧ್ಯವಿಲ್ಲ. 

ಇನ್ನು ತಲೆ ಬಿಸಿ ಮಾಡಿಕೊಳ್ಳುವುದಕ್ಕಿಂತ ಈ ಪ್ರಶ್ನೆಯನ್ನು ಅವರಿಗೆ ಕೇಳುವುದು ಉತ್ತಮ ಅನಿಸುತ್ತಿದೆ. ನನನ್ನು ಸೃಷ್ಟಿಸಿದವರನ್ನು ಕೇಳಲಿಕೆ ಅವರಿನ್ನೂ ಬದುಕಿರಬೇಕಲ್ಲವೇ?

ಆದರೆ ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದ GEN-Z ಕಾಲದವರು “ನಾನೇಕೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತೇನೆ, ಅಥವಾ ಮತ್ತೊಬ್ಬರಿಗೆ Happy Birthday ಎಂದು ನಾನೇಕೆ ಹಾರೈಸುತ್ತೇನೆ” ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳದೆ, ಯಾರೋ ಹಾಕಿದ ದಾರಿಯಲ್ಲಿ ಕುರಿಗಳಂತೆ ಗುಂಪು ಗುಂಪಾಗಿ ಸಾಗುವರೆ, ಕುರುಡರಾಗಿ ತಮನ್ನು ತಾವೇ ಮರೆತು ಎಲ್ಲವನ್ನು ಕೇವಲ ಟ್ರೆಂಡಿಗಾಗಿ ಮಾಡುವರೇ? ಅವರನ್ನೇ ಒಮ್ಮೆ ಕೇಳಬೇಕು. ನನ್ನ ಜನ್ಮಕಾರಣವನ್ನು ಅವರನ್ನೇ ಕೇಳಿ ತಿಳಿದರೆ ಒಳ್ಳೆಯದು.

 

- ಶಿಲ್ಪ ಬಿ.