ಆದಿಚುಂಚನಗಿರಿಗೊಂದು ಅನಿರೀಕ್ಷಿತ ಪಯಣ! ದಕ್ಷಿಣ ಕಾಶಿಯಲ್ಲಿ ಮುದ ನೀಡಿದ ಚಾರಣ!

 

ಪೂರ್ವಯೋಜಿತ ಪ್ರವಾಸಕ್ಕಿಂತ ದಿಢೀರ್ ಆಗಿ ನಡೆದು ಹೋಗುವ ಸುತ್ತಾಟ ಕೊಡುವ ಸಂತೋಷ ಬಹಳ ವಿಶೇಷ. ಕೆಲವೊಮ್ಮೆ ಇಂಥ ಕಡೆ ಹೋಗಬೇಕೆಂದು ಯೋಜನೆ ಹಾಕಿಕೊಂಡರಂತೂ ಕೊನೆ ಘಳಿಗೆಯಲ್ಲಿ ಏನಾದರೊಂದು ವಿಘ್ನ ಎದುರಾಗುವುದೂ ಇದೆ. ಆದರೆ, ಗೊತ್ತು ಗುರಿಯಿಲ್ಲದ ಅಲೆದಾಟದಲ್ಲಿ ಸಿಕ್ಕಿದ್ದೆಲ್ಲವೂ ಲಾಭ!

ಬೆಂಗಳೂರಿನಲ್ಲಿ 2022ರ ಮಾರ್ಚ್ ತಿಂಗಳ ಒಂದು ರವಿವಾರ. ಎಲ್ಲಾದರೂ ಹೋಗಿ ಬರಬೇಕಲ್ಲ ಎನ್ನುತ್ತ ಗೂಗಲ್ ನಲ್ಲಿ ಆ ಜಾಗ ಇಷ್ಟು ದೂರ, ಈ ಜಾಗ ಎಷ್ಟು ದೂರ.. ಹೋಗೋಣವೇ ಬೇಡವೇ ಎನ್ನುತ್ತ ನನ್ನಿಬ್ಬರು ಮಿತ್ರರು ಬೆಳಗ್ಗೆ ಲೆಕ್ಕಾಚಾರ ಹಾಕುತ್ತ ಕುಳಿತಿದ್ದರು. ನಾನು ನಿಶ್ಚಿಂತೆಯಿಂದ ನನ್ನ ಪಾಡಿಗೆ ಪತ್ರಿಕೆ ಓದುತ್ತ ಕುಳಿತಿದ್ದೆ. ಹನ್ನೊಂದೂವರೆ ಹೊತ್ತಿಗೆ “ಹೊರಡೋಣ” ಎಂದರು. ಎಲ್ಲಿ ಎತ್ತ -ಏನೂ ಕೇಳದೆ ಹೆಲ್ಮೆಟ್ ಹಿಡಿದುಕೊಂಡು ಹೊರಟೆ. ಅವರ ಹುಡುಕಾಟ ನೋಡಿ ಖಂಡಿತಾ ಇದು ನಿಗದಿತ ದಿಕ್ಕಿನಲ್ಲಿ ಸಾಗದು ಎಂದು ನನಗೆ ಖಚಿತವಾಗಿತ್ತು! ಆದರೂ ಬೈಕ್ ನ ಹಿಂದಿನ ಸೀಟಿನಲ್ಲಿ ಹಾಡುತ್ತಾ ಕುಳಿತುಕೊಂಡಿರುವುದು ನನಗೆ ಕಷ್ಟವೇನಲ್ಲ ಬಿಡಿ! 

ದಾರಿ ಮಧ್ಯೆ ಆದಿಚುಂಚನಗಿರಿಗೆ ಹೋಗುವುದೆಂದು ನಿರ್ಧಾರವಾಯಿತು! ಬೆಂಗಳೂರಿನಿಂದ ಸುಮಾರು 120 ಕಿ.ಮೀ. ಪ್ರಯಾಣ. ಮಾಸ್ಕ್, ಹೆಲ್ಮೆಟ್ ಧರಿಸಿ ಬುಲೆಟ್, ಜಿಕ್ಸರ್ ಏರಿ ಮೂವರ ಪಯಣ ಮುಂದುವರಿಯಿತು.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಅನ್ನದಾನಿ ಮಠವೆಂದೇ ಪ್ರಸಿದ್ಧಿ ಹೊಂದಿದೆ. ದಕ್ಷಿಣ ಕಾಶಿ ಎಂಬ ಖ್ಯಾತಿಯೂ ಇದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ನಾವು ಹೊರಟದ್ದೂ ಅನ್ನಪ್ರಸಾದಕ್ಕಾಗಿಯೇ ಎನ್ನಿ! ಊಟದ ಹೊತ್ತಿಗೆ ತಲುಪಿದ್ದೆವು ಕೂಡ. ಅನ್ನವೇ ದೇವರು ಎನ್ನುತ್ತ ಊಟ ಮಾಡಿ ಹೊರ ಬಂದು ಕಣ್ಣು ಹಾಯಿಸಿದಾಗ ಎತ್ತರದ ಗಿರಿ. 

ಈ ಕ್ಷೇತ್ರದ ಅಧಿದೇವತೆ ಶ್ರೀ ಗಂಗಾಧರೇಶ್ವರ ಸ್ವಾಮಿ. ಕಾಲಭೈರವೇಶ್ವರ ಇಲ್ಲಿನ ಕ್ಷೇತ್ರಪಾಲಕ. ಮೊದಲಿಗೆ ಸಿಗುವ ಕಾಲಭೈರವೇಶ್ವರನ ದೇಗುಲದ ಮುಂಭಾಗದಲ್ಲಿಯೇ ಬೆಟ್ಟಕ್ಕೆ ಮೆಟ್ಟಿಲುಗಳು ಆರಂಭವಾಗುತ್ತವೆ. ಪ್ರಯಾಣದ ವೇಳೆ ಗೊತ್ತು ಗುರಿಯಿಲ್ಲದಿದ್ದ ಕಾರಣ ಯಾವುದು ಮಠ, ಯಾವುದು ದೇಗುಲ ಒಂದೂ ತಿಳಿದಿರದೆ ಬೆಟ್ಟ ಹತ್ತುವ ಉತ್ಸಾಹದಿಂದ ಮೆಟ್ಟಿಲು ಹತ್ತಿ ಹೋದಾಗ ಮೊದಲು ಬಸವ ಮೂರ್ತಿಯ ದರ್ಶನವಾಯಿತು. ಕಲ್ಲುಬಂಡೆಗಳ ಗಿರಿಗೆ ಅಭಿಮುಖವಾಗಿ ತನ್ನೊಡೆಯನ ಆಜ್ಞೆಗಾಗಿ ಕಾದು ಕುಳಿತಿರುವ ಬಸವನಿಗೆ ಕೈಮುಗಿದು ಮುಂದೆ ಸಾಗಿದರೆ, ಸ್ವಲ್ಪ ಎತ್ತರದಲ್ಲಿ ಬಸವನ ಬಲದಿಕ್ಕಿನಲ್ಲಿ ಪಶ್ಚಿಮಕ್ಕೆ ಮುಖ ಮಾಡಿರುವ ಶ್ರೀ ಮಲ್ಲೇಶ್ವರ ಸ್ವಾಮಿಯ ಗುಡಿ. ಅಲ್ಲಿಂದ ಸ್ವಲ್ಪ ಎತ್ತರದಲ್ಲಿ ಎಡಭಾಗದಲ್ಲಿ ದಕ್ಷಿಣಕ್ಕೆ ಮುಖಮಾಡಿರುವ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ. ಅಲ್ಲಿ ಇತರ ಪರಿವಾರ ದೇವತೆಗಳ ಸಾನ್ನಿಧ್ಯವೂ ಇದೆ. ಈ ದೇವಸ್ಥಾನದಿಂದ ಹೊರಬರುತ್ತ ಎಡಭಾಗದಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ದಾರಿ ಎಂಬ ಬೋರ್ಡ್ ಕಂಡಿತು. ಅಲ್ಲಿಂದ ಆರಂಭವಾಯಿತು ನೋಡಿ ಒಂದು ಅನಿರೀಕ್ಷಿತ ಸಾಹಸ!

 

ಕಲ್ಲಿನ ಒಡಲಲ್ಲಿ ಗವಿಸಿದ್ದೇಶ್ವರ 

ಗವಿಸಿದ್ದೇಶ್ವರನ ದರ್ಶನಕ್ಕೆ ಹೋಗುವ ದಾರಿಯ ದ್ವಾರ ಬಹಳ ಕಿರಿದು. ಈಗಷ್ಟೇ ಸಂದರ್ಶಿಸಿದ ಗಂಗಾಧರೇಶ್ವರ ಸ್ವಾಮಿ ದೇಗುಲ ಮತ್ತು ಅದರ ಹಿಂದೆ ಇರುವ ಬಂಡೆಯ ನಡುವೆ ಇರುವ ಸಣ್ಣ ಸಂದಿಯಲ್ಲಿ ಗವಿಸಿದ್ದೇಶ್ವರನ ದರ್ಶನಕ್ಕೆ ದಾರಿ ಆರಂಭವಾಗುತ್ತದೆ. ನಮ್ಮ ಮಿತ್ರ ಒಬ್ಬ ನಮಗಿಂತ ದೈತ್ಯದೇಹಿಯಾದ್ದರಿಂದ ಅಲ್ಲಿ ನುಗ್ಗುವ ಸಾಹಸ ಮಾಡದೆ, ಗಂಗಾಧರೇಶ್ವರ ಸ್ವಾಮಿ ದೇಗುಲದ ಮುಂಭಾಗದ ಮೆಟ್ಟಿಲು ಏರಿ, ದೇಗುಲದ ಛಾವಣಿಯ ಅಂಚಿನ ಮೂಲಕ ಬಂದ-“ದೇವ್ರು ಇನ್ನೊಂದು ಆಪ್ಶನ್ ಇಟ್ಟಿರ್ತಾನೆ” ಎನ್ನುತ್ತ! 

ಕಲ್ಲಿನ ಮೆಟ್ಟಿಲುಗಳನ್ನು ಏರಿ ಹೋದಾಗ ವಿಶಾಲವಾದ ದೈತ್ಯ ಬಂಡೆಯ ಉದರದಲ್ಲೊಂದು ಗುಹೆ. ಒಳಗೆ ಗವಿಸಿದ್ದೇಶ್ವರ ಸ್ವಾಮಿ. ಓರ್ವ ಬಾಲ ಅರ್ಚಕರು. ಗುಹೆಯೇ ಗುಡಿ. ಒಂದು ಚಿಕ್ಕ ದ್ವಾರ. ನೇರ ಎದ್ದು ನಿಲ್ಲಲು ಕಷ್ಟ. ಅಲ್ಲಿ ಸಣ್ಣ ಬೂದುಗುಂಬಳಕಾಯಿ ಗಾತ್ರದ ಕಲ್ಲಿನ ಎರಡು ಬಸವನ ಮೂರ್ತಿಗಳಿವೆ. 

“ಈ ಮೂರ್ತಿಯ ಮೇಲೆ ಕಿಂಚಿತ್ ಕಾಣಿಕೆ ಇಟ್ಟು ಮನಸ್ಸಿನ ಇಚ್ಛೆಯನ್ನು ನೆನೆದುಕೊಂಡು ಅದು ನೆರವೇರಿದರೆ ಮತ್ತೆ ಬಂದು ದರ್ಶನ ಮಾಡುತ್ತೇನೆ ಎಂದುಕೊಂಡು ಆ ಮೂರ್ತಿಯನ್ನು ಎತ್ತಬೇಕು (ಕುಳಿತುಕೊಂಡು). ಮೂರ್ತಿಯು ಹೂವಿನಂತೆ ಸಲೀಸಾಗಿ ಮೇಲೆ ಬಂದರೆ ಅಂದುಕೊಂಡದ್ದು ಆಗುತ್ತದೆ. ಸ್ವಲ್ಪ ಭಾರ ಎನಿಸಿದಲ್ಲಿ ಕೆಲಸ ಆಗುತ್ತದೆ, ಆದರೆ ಸ್ವಲ್ಪ ನಿಧಾನ ಎಂದುಕೊಳ್ಳಬಹುದು” ಎಂದು ಅರ್ಚಕರು ವಿವರಿಸಿದರು. ಮೂವರೂ ಇದನ್ನು ಪ್ರಯತ್ನಿಸಿ ಅಲ್ಲಿಂದ ಹೊರಬಂದೆವು. ಅರ್ಚಕರು ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿಯನ್ನು ನಮ್ಮ ಕೈಗಿಡುತ್ತ “ಇದನ್ನು ಕೆಳಗೆ ತಲುಪಿಸಿ” ಎಂದರು. ನೀರು ಬೇಕೆಂದರೆ ಗಂಗಾಧರೇಶ್ವರ ಸ್ವಾಮಿ ದೇಗುಲದ ಬಳಿ ಹೋಗಬೇಕು. ಮೇಲೆ ಸಿಗುವುದಿಲ್ಲ. ಮುಂದಿನ ಹಂತದ ಆರೋಹಣಕ್ಕೆ ಕೂಡ ಇಲ್ಲಿಂದ ಕೆಳಗಿಳಿಯಲೇಬೇಕು (ಬಂದ ದಾರಿಯಲ್ಲೇ). 

 

ಗಂಗಾಧರೇಶ್ವರ ಸ್ವಾಮಿ ದೇಗುಲದ ಬಳಿ ಬಂದು ನೀರಿನ ಬಾಟಲಿ ಕೊಟ್ಟು, ಮುಂದಿನ ಪ್ರಯಾಣ ಆರಂಭ. ಮೆಟ್ಟಿಲುಗಳನ್ನು ಹತ್ತಿ ಮೇಲೇರಿದಾಗ ಕೋಟೆಯ ಬುರುಜಿನಂಥ, ಅರೆ ಶಿಥಿಲವಾದ ರಚನೆಯೊಂದು ಕಂಡು ಬರುತ್ತದೆ. ಬೆಟ್ಟದ ಕೆಳಗಿನಿಂದ ನೋಡಿದಾಗ ಬೆಟ್ಟದ ಮೇಲೆ ನಾಲ್ಕು ಶಿಖರ/ ಪ್ರದೇಶಗಳು ಕಾಣುತ್ತವೆ. ಕೋಟೆಯ ಬುರುಜಿನಂಥ ರಚನೆ ಇರುವ ಬಂಡೆಯೇ ಮೂರನೇ ಶಿಖರವಾಗಿದ್ದು, ಅದರ ಒಡಲಿನಲ್ಲಿಯೇ ಗವಿಸಿದ್ದೇಶ್ವರ ಸ್ವಾಮಿ ಸನ್ನಿಧಿ ಇರುವುದು. 

 

ಕಗ್ಗತ್ತಲಲ್ಲಿ ಕತ್ತಲೆ ಸೋಮೇಶ್ವರ! 

ಬುರುಜಿನಂಥ ರಚನೆಯನ್ನು ದಾಟಿ ಸ್ವಲ್ಪ ಮುಂದೆ ಹೋದಾಗ ಶ್ರೀ ಕತ್ತಲೆ ಸೋಮೇಶ್ವರ ಸ್ವಾಮಿ ದೇವಸ್ಥಾನ ಎಂದು ಬರೆದಿರುವ ಬೋರ್ಡ್, ಅದರ ಕೆಳಗೆ ಬಂಡೆಯ ಮೇಲೆ ಬಲಭಾಗಕ್ಕೆ ಹೋಗಲು ಸೂಚಿಸುವ ಬಾಣದ ಗುರುತು ಕಾಣಿಸುತ್ತದೆ. 

ಕತ್ತಲೆ ಸೋಮೇಶ್ವರ ಸ್ವಾಮಿ ಅಕ್ಷರಶಃ ಕತ್ತಲೆಯಲ್ಲೇ ಇದ್ದಾನೆ. ನಡು ಮಧ್ಯಾಹ್ನದಲ್ಲೂ ಕಗ್ಗತ್ತಲಿನಿಂದ ಕೂಡಿರುವ ತಂಪಾದ ಗುಹೆಯೊಳಗೆ ಗವಿಸಿದ್ದೇಶ್ವರನ ಸನ್ನಿಧಿಯ ರೀತಿಯಲ್ಲೇ ಇಲ್ಲಿ ಕೂಡ ದೇವರು, ಬಸವನ ಮೂರ್ತಿಗಳು (ಎತ್ತುವಂಥವು) ಮತ್ತು ಬಾಲ ಅರ್ಚಕ, ಜೊತೆಗೆ ಇನ್ನೊಬ್ಬ ವ್ಯಕ್ತಿ (ಬಹುಶಃ ಅರ್ಚಕರ ತಂದೆ) ಇದ್ದರು. ಅವರ ಕೈಯಲ್ಲಿ ಟಾರ್ಚ್ ಇತ್ತು. ಈ ಗುಹೆಯ ಇನ್ನೊಂದು ದ್ವಾರವು ಬೆಟ್ಟದ ನಾಲ್ಕನೇ ಶಿಖರದ ಕಡೆ ದಾರಿ ಒದಗಿಸುತ್ತದೆ. ಅಲ್ಲಿ ಸಾಹಸದ ಇನ್ನೊಂದು ಭಾಗ ಎದುರಾಗುತ್ತದೆ..!

ಚೇಳೂರು ಕಂಬಕ್ಕೆ ದಾರಿ!

ಮುಂದೆ ಸಾಗಿದಾಗ ಪೊದೆಯ ನಡುವೆ ‘ಚೇಳೂರು ಕಂಬಕ್ಕೆ ಹೋಗುವ ದಾರಿ’ ಎಂಬ ಬೋರ್ಡ್ ಕಂಡುಬರುತ್ತದೆ. ಅಲ್ಲಿ ಬಂಡೆಯನ್ನು ಏರಬೇಕು. ಬಾವಿ ತೋಡುವವರು ಮತ್ತೆ ಮೇಲೆ ಬರುವುದಕ್ಕಾಗಿ ಬಾವಿಯ ಗೋಡೆಯ ಮೇಲೆ ಸಣ್ಣ ಸಣ್ಣ ಮೆಟ್ಟಿಲಿನಂತೆ (ತುದಿಗಾಲಷ್ಟೇ ಇಡಲು ಸಾಧ್ಯವಾಗುವಂತೆ) ಮಾಡಿರುವಂತೆ ಇಲ್ಲಿ ಬಂಡೆಯ ಮೇಲೆ ಆ ರೀತಿಯ ರಚನೆ ಇದೆ. ಜತೆಗೆ, ಬಂಡೆಗೆ ಕಬ್ಬಿಣದ ಕಂಬಿಗಳನ್ನು (ಮೊಳೆ ಹೊಡೆದ ರೀತಿಯಲ್ಲಿ) ಅಳವಡಿಸಲಾಗಿದೆ. ಅವುಗಳನ್ನೇ ಮೆಟ್ಟಿಲುಗಳ ರೀತಿಯಲ್ಲಿ ಬಳಸಿ ಹತ್ತಬೇಕು. ಮೇಲೆ ವಿಶಾಲ ಬಂಡೆಯಿದ್ದು, ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ಇಲ್ಲಿ ಒಂದು ಕಲ್ಲಿನ ಸ್ತಂಭವಿದೆ. ಅದರ ಬಗ್ಗೆ ಮಾಹಿತಿ ಸ್ಥಳದಲ್ಲಿ ಲಭ್ಯವಿರಲಿಲ್ಲ.

 

ಸರಪಳಿ ಹಿಡಿದು ಸಾಹಸ 

ಮತ್ತೆ ಹತ್ತಿದ ರೀತಿಯಲ್ಲೇ ಇಳಿದು ಬಂದು ಕತ್ತಲೆ ಸೋಮೇಶ್ವರ ಸನ್ನಿಧಿಗೂ ಮೊದಲು ಸಿಕ್ಕ ಕೋಟೆಯ ಬುರುಜಿನಂಥ ರಚನೆಯನ್ನು ಹಾದು ಮುಂದೆ ಸಾಗಿದಾಗ ಮೊದಲನೇ ಶಿಖರದ ಕಡೆಗೆ ದಾರಿ ದೊರೆಯುತ್ತದೆ. ಇಲ್ಲಿನ ಆರೋಹಣವು ಮತ್ತಷ್ಟು ಸಾಹಸಮಯ. ಇಲ್ಲಿಯೂ ಬಂಡೆಯನ್ನೇರಲು ಕಬ್ಬಿಣದ ಕಂಬಿಗಳ ಆಧಾರವಿದೆ. ಜಾಗರೂಕತೆಯಿಂದ ಮೇಲೆ ಏರಿದಾಗ ಇನ್ನು ಮುಂದಿನ ಆರೋಹಣವನ್ನು ಮಾಡಬೇಕೆ ಬೇಡವೇ ಎಂದು ಸ್ವಲ್ಪ ಆಲೋಚಿಸಬೇಕಾಗುತ್ತದೆ..

ಈ ಶಿಖರದ ಮೇಲೆಯೂ ಒಂದು ಕಲ್ಲಿನ ಸ್ತಂಭವಿದೆ. ಆದರೆ ಅಲ್ಲಿಗೆ ತಲುಪಬೇಕಾದರೆ ಮೇಲಿನಿಂದ ಇಳಿಬಿಟ್ಟಿರುವ ಸುಮಾರು 12-15 ಅಡಿ ಉದ್ದದ ಕಬ್ಬಿಣದ ಸರಪಳಿಯನ್ನು ಹಿಡಿದು, ಬಾವಿಯನ್ನು ಹತ್ತುವಂತೆ ಹತ್ತಬೇಕು. ಕಾಲಿಡಲು ಸಣ್ಣ ಸಣ್ಣ ಜಾಗವಿದೆ. ಆಮೇಲೆ ಸರಪಳಿ ಬಿಟ್ಟು ಎಚ್ಚರಿಕೆ ಹೆಜ್ಜೆಗಳನ್ನಿಟ್ಟು ಮೇಲೆ ಏರಿ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಮೇಲೆ ಕಲ್ಲಿನ ಸ್ತಂಭಕ್ಕೆ ನಾನಾ ರೀತಿಯ ದಾರಗಳ ಜತೆಗೆ ಮಾಸ್ಕ್ ಗಳನ್ನೂ ಕಟ್ಟಿದ್ದು ಕಂಡು ಬಂತು. 

ಹತ್ತುವಾಗ ಆಧಾರ, ಇಳಿಯುವಾಗ ಬಾಧೆ! 

ಹತ್ತುವುದಕ್ಕಿಂತಲೂ ಇಳಿಯುವುದು ಸಾಹಸಮಯವಾಗಿದ್ದು, ಸರಪಳಿಯಿರುವ ಹಂತಕ್ಕೆ ಇಳಿಯುವಾಗ ಮುಂದೆ-ಮುಂದೆ ಇಳಿಯಲೆ, ಹಿಂದೆ-ಹಿಂದೆ ಇಳಿಯಲೆ ಎಂಬ ಗೊಂದಲ ಕಾಡಿತು! ಏಕೆಂದರೆ ಸರಪಳಿಯ ಮೂಲ ಇರುವ ಜಾಗದಲ್ಲಿ ಬಂಡೆಯೊಂದರ ಮೂತಿಯು ಹತ್ತುವಾಗ ಆಧಾರವಾದರೆ, ಇಳಿಯುವಾಗ ಬಾಧೆ ನೀಡುತ್ತದೆ! ಅಲ್ಲಿ ಗಡಿಬಿಡಿ ಮಾಡಿ ಎಚ್ಚರ ತಪ್ಪಿ ಕೈಕಾಲು ನಡುಗಿ ಜಾರಿದಿರೆಂದರೆ ಸರಪಳಿ ಹಿಡಿಯುವ ಪ್ರಮೇಯವೇ ಬರುವುದಿಲ್ಲ-ಸೀದಾ ಕೆಳಕ್ಕೆ! ಅಲ್ಲಿಂದಲೂ ಉರುಳಿದರೆ ಗಿರಿಯ ಬುಡದಲ್ಲಿ-ಕೈಕಾಲು ಮುರಿದುಕೊಂಡು! (ಸುದೈವವಶಾತ್, ಇಲ್ಲಿಯವರೆಗೆ ಆ ರೀತಿಯ ದುರ್ಘಟನೆಗಳು ಅಲ್ಲಿ ನಡೆದಿಲ್ಲ ಎನ್ನಲಾಗುತ್ತದೆ). ಹೇಗೋ ಸರಪಳಿ ಹಿಡಿದು ಇಳಿಯುವಷ್ಟರಲ್ಲಿ “ಉಸ್ಸಪ್ಪ” ಎನ್ನುವಂತಾಯಿತು. 

ಇನ್ನೂ ಒಂದು ಶಿಖರ ಉಳಿದಿತ್ತು. ಅದು ಎಲ್ಲ ಶಿಖರಗಳಿಗಿಂತಲೂ ಎತ್ತರದಲ್ಲಿದ್ದ ಎರಡನೇ ಶಿಖರ. ಆದರೆ ಅಲ್ಲಿಗೆ ದಾರಿ ತಿಳಿಯಲಿಲ್ಲ. ಅಲ್ಲಿದ್ದವರಿಗೂ ತಿಳಿದಿರಲಿಲ್ಲ. ಒಂದು ದಾರಿಯು ಮೇಲಕ್ಕೆ ಹೋಗಿತ್ತಾದರೂ ಮುಂದೆ ಸಾಗಿದಂತೆ ನಿಗೂಢವಾಗಿತ್ತು. ಇನ್ನು ಆರೋಹಣ ಸಾಕೆಂದು ಅವರೋಹಣ ಆರಂಭಿಸಿದೆವು.

ಕೆಳಕ್ಕೆ ಇಳಿದು ಕಾಲಭೈರವೇಶ್ವರ ಸ್ವಾಮಿಯ ದರ್ಶನಕ್ಕೆ ಹೋದೆವು. ಪೂಜೆಗೆ ಇನ್ನೂ ಸಮಯವಿತ್ತಾದ ಕಾರಣ ಗುಡಿಯ ಬಾಗಿಲು ಮುಚ್ಚಿತ್ತು. ಕಾಲಭೈರವೇಶ್ವರನ ಗರ್ಭಗುಡಿಯ ಎದುರು ಎಡಬಲಗಳಲ್ಲಿ ಹಲವು ದೇವತೆಗಳ ಆಳೆತ್ತರದ ಮೂರ್ತಿಗಳಿದ್ದವು. ದೇಗುಲದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕುವಾಗ ಸುತ್ತಲೂ ಕಾಲಭೈರವೇಶ್ವರ ಸ್ವಾಮಿಯ ವಿವಿಧ ರೂಪಗಳ ಮೂರ್ತಿಗಳು ಇರುವುದನ್ನು ಗಮನಿಸಿದೆವು. ಸೂರ್ಯಾಸ್ತ ಆಗುವುದರಲ್ಲಿತ್ತು. ಬೆಟ್ಟದ ಮೇಲೆ ಸೂರ್ಯಾಸ್ತ ಇನ್ನೂ ಮನೋಹರವಾಗಿದ್ದೀತು. ಆದರೆ ನಾವು ಇಳಿದಾಗಿತ್ತು. ಹೀಗೆ ಒಂದು ಅನಿರೀಕ್ಷಿತ ಚಾರಣ, ದೇಗುಲ ದರ್ಶನ ಮುಗಿಸಿ ಮರಳಿ ಬೆಂಗಳೂರಿನ ಹಾದಿ ಹಿಡಿದೆವು.

 

-ಕುದ್ಯಾಡಿ ಸಂದೇಶ್ ಸಾಲ್ಯಾನ್