ಕೊಂದುಬಿಡಬೇಕಿತ್ತು
ನನ್ನೊಳಗಿನ ಅಹಂ ಅನ್ನು,
ನನ್ನೊಳಗೆ ನಾ ಮಾಡೋ ಹೋಲಿಕೆಗಳನ್ನು,
ಹೊಟ್ಟೆ ಕಿಚ್ಚೆಂಬ ಅಗ್ನಿ ಪರ್ವತವನ್ನು
ಹೌದು, ಕೊಂದುಬಿಡಬೇಕಿತ್ತು
ಜಾತಿ-ಗೀತಿಗಳ ಹುಚ್ಚು ಪ್ರೇಮಗಳನ್ನು
ಸಿಗದೇ ಇರದ ವಸ್ತುಗಳ ನಶೆಯನ್ನು
ಅವು-ಇವುಗಳು ಬೇಕೆನ್ನುವ ಅತ್ಯಾಸೆಯನ್ನು
ಕೊಂದುಬಿಡಬೇಕಿತ್ತು
ಬದುಕ ಮೇಲಿರುವ ನಿರಾಶೆಯನ್ನು
ತಲೆಯ ತುಂಬಾ ಸುತ್ತಿ
ಮೆದುಳ ಕೊರೆವ ಅತೀ ಆಲೋಚನೆಗಳನ್ನು
ಕೊಂದುಬಿಡಬೇಕಿತ್ತು
ಅದ್ಯಾರದೋ ಕಷ್ಟ ನೋಡಿ ನಗುವ ಮನಸ್ಥಿತಿಯನ್ನು
ಹೊತ್ತಿ ಉಕ್ಕಿ ಹರಿವ ದ್ವೇಷಜ್ವಾಲೆಯನ್ನು
ನನ್ನೊಳಗಡಗಿಹ ಕ್ರೂರ ರಕ್ಕಸನನ್ನು
ಹೌದು, ಕೊಂದುಬಿಡಬೇಕಿತ್ತು
ಕೊಂದುಬಿಡಬೇಕಿತ್ತು
ಒಡಲ ಒಳಗಡಗಿಹ ಮತ್ಸರವನ್ನು
ನನ್ನೊಳಗೆ ಇರುವ ಕೆಟ್ಟತನಗಳನ್ನು
ನೀಡುವ ಅಗೌರವಗಳನ್ನು
ಮಾನವೀಯವಲ್ಲದ ನಡವಳಿಕೆಗಳನ್ನು
ಹೌದು, ನನ್ನ ಕೊಂದುಬಿಡಬೇಕಿತ್ತು
ನನ್ನೊಳಗೆ ನಾನಲ್ಲದಿರುವ ಆ ನನ್ನ ಕೊಂದುಬಿಡಬೇಕಿತ್ತು......
- ಕಲ್ಪನಾ ಲೋಕದ ವಿಹಾರಿ
(ಲಾವಣ್ಯ ಎಸ್. ಜಿ.)











