ಮುಡಿಕಟ್ಟೆಯ ಮಣ್ಣಿನಿಂದ ಮೆರೆದ ಕ್ರಾಂತಿ – ದಿ ರೈಸ್ ಆಫ್ ಅಶೋಕ

ಮುಡಿಕಟ್ಟೆಯಿಂದ ಮೆರೆದ ಮಣ್ಣಿನ ಗರ್ಜನೆ – ದಿ ರೈಸ್ ಆಫ್ ಅಶೋಕ ಸಿನಿ ವಿಮರ್ಶೆ

ಸಂಘರ್ಷದ ಕಿಡಿ ಒಮ್ಮೆ ಹೊತ್ತಿಕೊಂಡರೆ ಅದು ಮಣ್ಣಿನೊಳಗೇ ಉಳಿಯುವುದಿಲ್ಲ; ಕಾಲದ ಗೋಡೆಗಳನ್ನು ಒಡೆದು ಹೊರಬರುತ್ತದೆ. ಅದೇ ಧಾಟಿಯಲ್ಲಿ ಮೂಡಿಬಂದ ಚಿತ್ರವೇ ದಿ ರೈಸ್ ಆಫ್ ಅಶೋಕ. ಸತೀಶ್ ನೀನಾಸಂ ನಟನೆ ಮತ್ತು ನಿರ್ದೇಶಕ ವಿನೋದ್ ದೊಂಡಲೇ ಅವರ ಕನಸಿನ ಕನಸಾಗಿದ್ದ ಈ ಸಿನಿಮಾ, ನಿರ್ದೇಶಕರ ಅಕಾಲಿಕ ನಿಧನದ ನಂತರವೂ ನಿಂತುಕೊಳ್ಳದೇ ಮತ್ತಷ್ಟು ಬಲದಿಂದ ಎದ್ದಿದೆ. 

 

1970ರ ದಶಕದ ಹಿನ್ನೆಲೆಯಲ್ಲಿರುವ ಕಥೆ – ಸಾಮಾಜಿಕ ಶೋಷಣೆ, ಮೇಲ್ಜಾತಿಯ ದೌರ್ಜನ್ಯ, ಹಾಗೂ ತಳ ಸಮುದಾಯದ ಸಂಕಷ್ಟಗಳ ನಡುವೆ ಹುಟ್ಟಿದ ಒಂದು ಕ್ರಾಂತಿಯ ಕಥನ. ‘ಅವರತ್ತಿ’ ಎಂಬ ಊರಿನ ಮುಡಿಕಟ್ಟೆಯಲ್ಲಿ ಕೂದಲು ತೆಗೆಯುವ ಗಂಗರಾಜುಗೆ ತನ್ನ ಮಗ ಅಶೋಕನ ಬಗ್ಗೆ ದೊಡ್ಡ ಕನಸು. “ಮಗ ಆಫೀಸರ್ ಆಗಬೇಕು” ಎಂಬ ಸಾಮಾನ್ಯ ತಂದೆಯ ಆಸೆ. ಅಶೋಕ ಸರ್ಕಾರಿ ಕೆಲಸ ಪಡೆಯುತ್ತಾನೆ; ಅಪಾಯಿಂಟ್‌ಮೆಂಟ್ ಲೆಟರ್ ಕೈ ಸೇರುತ್ತದೆ. ಆದರೆ, ಆ ಕ್ಷಣದಲ್ಲೇ ಅವನ ಜೀವನದ ದಿಕ್ಕು ತಿರುಗುತ್ತದೆ.

ಸ್ವಾರ್ಥದ ದಾರಿ ಬಿಟ್ಟು, ಸಮಾಜದ ಹಿತದತ್ತ ಹೆಜ್ಜೆ ಇಡುವ ಅಶೋಕ – ಅಲ್ಲಿ ಶುರುವಾಗುತ್ತದೆ ಸಂಘರ್ಷದ ಅಧ್ಯಾಯ. ತನ್ನ ಸಮುದಾಯದ ಗೌರವಕ್ಕಾಗಿ, ನ್ಯಾಯಕ್ಕಾಗಿ ಹೋರಾಡುವ ಯುವಕನ ರೂಪಾಂತರವೇ ಚಿತ್ರದ ಆತ್ಮ.

The Rise Of Ashoka 2026 | The Rise Of Ashoka Kannada Movie: Release ...

ಸತೀಶ್ ನೀನಾಸಂ – ಪಾತ್ರದೊಳಗೆ ಕರಗಿದ ನಟ

ಬಡತನದ ನೆಲೆಯಿಂದ ಕನಸು ಕಾಣುವ ಹುಡುಗನಾಗಿ, ಅನ್ಯಾಯ ಕಂಡಾಗ ಕುದಿಯುವ ರಕ್ತದ ಯುವಕನಾಗಿ, ಪ್ರೇಮಿಯ ಮೃದುವಾದ ಮುಖವನ್ನೂ ತೋರಿಸುವ ವ್ಯಕ್ತಿಯಾಗಿ ಸತೀಶ್ ನೀನಾಸಂ ಬಹುಮಟ್ಟಿಗೆ ಮನಸೆಳೆಯುತ್ತಾರೆ. ವಿಶೇಷವಾಗಿ ಆಕ್ಷನ್ ಸನ್ನಿವೇಶಗಳಲ್ಲಿ ಅವರ ದೈಹಿಕ ಭಾಷೆ ಗಮನಾರ್ಹ. ಕೆಲವೆಡೆ ಭಾವನಾತ್ಮಕ ಆಳ ಇನ್ನಷ್ಟು ಗಟ್ಟಿಯಾಗಬಹುದಿತ್ತು ಎನ್ನಿಸುವ ಕ್ಷಣಗಳೂ ಇದ್ದರೂ, ಒಟ್ಟಾರೆ ಅಶೋಕನ ತೀವ್ರತೆಯನ್ನು ಅವರು ಸಮರ್ಥವಾಗಿ ಹೊತ್ತಿದ್ದಾರೆ.

 

ಉಳಿದ ತಾರಾಗಣ – ಕಥೆಗೆ ಬಲ

ಹೂ ಕಟ್ಟುವ ಅಂಬಿಕಾ ಪಾತ್ರದಲ್ಲಿ ಸಪ್ತಮಿ ಗೌಡ ಸೊಗಸಾಗಿ ಕಾಣಿಸಿಕೊಳ್ಳುತ್ತಾರೆ. ಗಂಗರಾಜುವಾಗಿ ಬಿ. ಸುರೇಶ ನೀಡಿದ ಅಭಿನಯ ಆತ್ಮೀಯ. ವಿಲನ್ ಕುಟ್ಟಿ ಬಾಬ್ಜಿ ಪಾತ್ರದಲ್ಲಿ ಸಂಪತ್ ಸಿಟ್ಟು ತರಿಸುವಷ್ಟು ಪ್ರಭಾವ ಬೀರುತ್ತಾರೆ. ಚಂದ್ರಣ್ಣನಾಗಿ ಗೋಪಾಲಕೃಷ್ಣ ದೇಶಪಾಂಡೆ ಕಡಿಮೆ ಸಮಯದಲ್ಲೇ ಗುರುತು ಮೂಡಿಸುತ್ತಾರೆ.

 

ತಾಂತ್ರಿಕ ವೈಭವ

ಚಿತ್ರದ ದೊಡ್ಡ ಬಲವೆಂದರೆ ಅದರ ದೃಶ್ಯ ಭಾಷೆ. ಸಿನಿಮ್ಯಾಟೋಗ್ರಫಿಯಲ್ಲಿ ಲವಿತ್ ಹಿಡಿದ ಶಾಟ್‌ಗಳು, ವಿಶೇಷವಾಗಿ ಹಾಡು ಮತ್ತು ಹೋರಾಟದ ದೃಶ್ಯಗಳಲ್ಲಿ, ಕಥೆಯ ತೀವ್ರತೆಯನ್ನು ಹೆಚ್ಚಿಸುತ್ತವೆ. ಕಲಾ ನಿರ್ದೇಶನ 70ರ ದಶಕದ ವಾತಾವರಣವನ್ನು ನಂಬಿಸುವಂತೆ ಮೂಡಿಸಿದೆ. ಸಂಗೀತದಲ್ಲಿ ಆ ಪೂರ್ಣಚಂದ್ರ ತೇಜಸ್ವಿ ಅವರ ಹಾಡುಗಳು ನೆನಪಿನಲ್ಲಿ ಉಳಿಯುವಂತಿವೆ; ಹಿನ್ನೆಲೆ ಸಂಗೀತ ಕಥೆಗೆ ಪೂರಕ. ಆದರೆ, ಸಂಕಲನ ಭಾಗದಲ್ಲಿ ಸ್ವಲ್ಪ ನಿಧಾನ ಗತಿ ಕಾಣುತ್ತದೆ. ಕೆಲವು ದೃಶ್ಯಗಳು ಎಳೆದಂತೆ ಭಾಸವಾಗುತ್ತವೆ. ಇನ್ನಷ್ಟು ಚುರುಕಾಗಿದ್ದರೆ ಪರಿಣಾಮ ಹೆಚ್ಚುತ್ತಿತ್ತು.

 

ಸಂಘರ್ಷದ ಕಥೆಗಳು ಕನ್ನಡ ಸಿನೆಮಾದಲ್ಲಿ ಹೊಸದಲ್ಲ. ಹೀಗಾಗಿ ಕಥೆ ಪೂರ್ವಾನುಮಾನಕ್ಕೆ ಒಳಪಟ್ಟಂತೆಯೇ ಅನಿಸಬಹುದು. ಆದರೆ, ನಿರೂಪಣೆಯ ಶೈಲಿ ಮತ್ತು ಪಾತ್ರಗಳ ಭಾವನಾತ್ಮಕ ಬಲ ಚಿತ್ರದ ನಿಜವಾದ ಶಕ್ತಿ. ನಿರ್ದೇಶಕ ವಿನೋದ್ ದೋಂಡಾಳೆ ಅವರ ಕನಸು ಚಿತ್ರದಲ್ಲೇ ಜೀವಂತವಾಗಿದೆ ಎಂಬ ಭಾವ ಮೂಡುತ್ತದೆ.

ಯಾವುದೇ ದೊಡ್ಡ ನಿರೀಕ್ಷೆಗಳಿಲ್ಲದೆ ನೋಡಿದರೆ, ದಿ ರೈಸ್ ಆಫ್ ಅಶೋಕ ಮನಸ್ಸಿಗೆ ತಾಕುವ, ಚರ್ಚೆಗೆ ಆಹ್ವಾನಿಸುವ ಸಿನಿಮಾ. ಮುಡಿಕಟ್ಟೆಯಲ್ಲಿ ಹೊತ್ತ ಕಿಡಿ, ಪರದೆಯ ಮೇಲೆ ಗರ್ಜನೆಯಾಗಿ ಅನಿಸುತ್ತಿದೆ.


- ಗ್ಲೇನ್ ಗುಂಪಲಾಜೆ 

ಸಂ. ಕದಂಬ ಪತ್ರಿಕೆ