ಹೆಣವೆದ್ದು ಮಾತನಾಡಿದಾಗ!!

ನಡುರಾತ್ರಿಯ ಹೊತ್ತು 
ಬಸ್ಸು ಕಾರುಗಳ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು 
ಹಾರನ್ ಗಳ ಸದ್ದಿಲ್ಲದೆ ನಿಶ್ಶಬ್ದ ಮೂಡಿತ್ತು 
ಕತ್ತಲ ಹಾದಿಯಲ್ಲೊಂದು ಮಸಣ ಕಂಡಿತ್ತು

 

ಮಸಣ ದಾಟಿದರೆ ಕಾಣುವುದು ಮನೆ
ಕಾಲ್ನಡಿಗೆಯಲ್ಲಿ ನನ್ನಯ ಚಲನೆ
ಸುತ್ತ ಗೋರಿಗಳು ಮಾರ್ದನಿಸುವ ಹಾಹಾಕಾರಗಳು
ಅಲ್ಲಿ,ಬದುಕಿ ಸತ್ತವರು ಒಂದೆಡೆ
ಸತ್ತು ಬದುಕಿದವರು ಒಂದೆಡೆ

 

ಹೆಜ್ಜೆಯು ವೇಗವಾಗಿತ್ತು 
ಎದೆ ಬಡಿತ ಕೇಳುವಷ್ಟಾಗಿತ್ತು 
ಆಗಲೇ ಮಾರ್ದನಿಸಿತೊಂದು ಅಳು 
ಹಿಂತಿರುಗಿ ನೋಡಲಾರೆನೆಂದು ನಡಿಗೆ ವೇಗವಾಯಿತು 
ಮನೋ ಓಟವೂ ಕೂಡ,

 

ಅಳು ಇನ್ನೂ ಜೋರಾಯಿತು 
ತಿರುಗಿನೋಡಿದೆ ಹೆಣವೊಂದು ಎದ್ದು ಅಳುತಿತ್ತು 
ಓಡಬೇಕು ಎಂದುಕೊಂಡೆ 
ಕಾಲು ನಿಶ್ಚಲವಾಯಿತು

 

ಹೆಣವು ಬೆನ್ನುಮಾಡಿ ಅಳುತಿತ್ತು
ಮುಖ ಕಾಣಲಿಲ್ಲ,
ಗಂಟಲು ಒಣಗಿತ್ತು
ಹೆಣವು ಅಳುತ್ತಲೇ ಇತ್ತು

 

ನಾನು ಹೀಗೆ ಮಾಡಬಾರದಿತ್ತು
ಯಾವುದ್ಯಾವುದೋ ಹುಚ್ಚಿಗೆ
ಜೀವ ಕಳೆದುಕೊಳ್ಳಬಾರದಿತ್ತು
ಇಳಿ ವಯಸ್ಸಲ್ಲೇ ಮಸಣ ಸೇರಬಾರದಿತ್ತು!!

 

ಅವ್ವನ ಕಣ್ಣೀರು
ಅಪ್ಪನ ಮೌನ
ಅವರ ಅಳುವಿನ ಆರ್ತನಾದ
ದುಡುಕಿ ಬಿಟ್ಟೆ ನಾನು!!

 

ಹೇಳುತ್ತ ಅಳುತ್ತಿತ್ತು ಹೆಣ
ನಾನು ಸ್ತಬ್ದಳಾಗಿದ್ದೆ
ಹೆಣವು ಅಳುತಿತ್ತು
ಜೋರಾಗಿ ಇನ್ನು ಜೋರಾಗಿ

 

ದೈರ್ಯದಿಂದ ಹೆಣದ ಭುಜದ ಮೇಲೆ ಕೈ ಇಟ್ಟೆ
ಅದು ತಿರುಗಿತು...
ಏನದು!!ನನ್ನದೇ ಪ್ರತಿಬಿಂಬ
ಅಯ್ಯೋ ಸತ್ತು ಬಿಟ್ಟೆನೆ ನಾನು!!

 

ಜೋರಾಗಿ ಕಿರುಚಿದೆ,
ಇಲ್ಲ ಅದು ನಾನಲ್ಲ!!
ಅಮ್ಮ ಎಬ್ಬಿಸಿದಳು ಏನಾಯ್ತು ಎಂದು
ಸಾವರಿಸಿ ಕಣ್ಣು ಬಿಟ್ಟೆ

 

ಅಯ್ಯೋ ! ನಾ ಸತ್ತಿಲ್ಲ
ಹೆಣವೂ ಇಲ್ಲ
ಬರಿಯ ಕನಸಷ್ಟೇ
ಸ್ವಲ್ಪ ಸಮಾಧಾನಗೊಂಡೆ

 

  • - ಕಲ್ಪನಾ ಲೋಕದ ವಿಹಾರಿ
    (ಲಾವಣ್ಯ ಎಸ್. ಜಿ)