ಕನ್ನಡ ಒಟಿಟಿ ಲೋಕದಲ್ಲಿ ಹೊಸ ರೀತಿಯ ಪ್ರಯೋಗಗಳಿಗೆ ಈಗ ಹೆಚ್ಚು ಸ್ಪಂದನೆ ಸಿಗುತ್ತಿದೆ. ಆ ಹಾದಿಯಲ್ಲಿ ಗಮನ ಸೆಳೆಯುತ್ತಿರುವ ಹೊಸ ವೆಬ್ ಸರಣಿ ಎಂದರೆ ರಾಕ್ಷಸ . ಉತ್ತರ ಕರ್ನಾಟಕದ ನೆಲದ ಸೊಗಡು, ಅಲ್ಲಿನ ಮಾತಿನ ಶೈಲಿ, ಗ್ರಾಮೀಣ ವಾತಾವರಣ ಮತ್ತು ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಅಂಶಗಳನ್ನು ಒಟ್ಟುಗೂಡಿಸಿಕೊಂಡು ಬಂದಿರುವ ಈ ಸರಣಿ ಈಗ ZEE5 ನಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ.
ಈ ಸರಣಿಯ ಪ್ರಮುಖ ಆಕರ್ಷಣೆಯೆಂದರೆ ವಿಜಯ್ ರಾಘವೇಂದ್ರ ಅವರ ಪಾತ್ರ. ಬಾಲನಟನಾಗಿ ಆರಂಭಿಸಿ ಅನೇಕ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಅವರು ಮೊದಲ ಬಾರಿಗೆ ವೆಬ್ ಸರಣಿಯ ಮೂಲಕ ಡಿಜಿಟಲ್ ವೇದಿಕೆಗೆ ಕಾಲಿಟ್ಟಿದ್ದಾರೆ. ಈ ಹೊಸ ಮಾಧ್ಯಮದಲ್ಲಿ ಅವರ ಅಭಿನಯ ಹೇಗಿರಬಹುದು ಎಂಬ ಕುತೂಹಲ ವೀಕ್ಷಕರಲ್ಲಿತ್ತು; ಬಿಡುಗಡೆಯಾದ ನಂತರ ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.
ಕಥೆಯ ಕೇಂದ್ರಬಿಂದುವಿನಲ್ಲಿ ಮಲಪ್ರಭಾ ನದಿ ತೀರದ ನಿಗೂಢ ಘಟನೆಗಳಿವೆ. ಮೊಸಳೆ ದಾಳಿಗಳಂತೆ ಕಾಣುವ ವಿಚಿತ್ರ ಸಾವುಗಳ ಹಿಂದೆ ಅಡಗಿರುವ ರಹಸ್ಯವನ್ನು ಅನಾವರಣಗೊಳಿಸುವ ಪ್ರಯತ್ನವೇ ಕಥೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಗ್ರಾಮೀಣ ವಾತಾವರಣದ ಮಧ್ಯೆ ನಡೆಯುವ ಈ ಘಟನಾಕ್ರಮಗಳು ಪ್ರತಿ ಭಾಗದಲ್ಲೂ ಕುತೂಹಲ ಹೆಚ್ಚಿಸುವ ರೀತಿಯಲ್ಲಿ ಹೆಣೆದಿರುವುದು ಸರಣಿಯ ಬಲವಾಗಿದೆ.
ಸರಣಿಯ ಇನ್ನೊಂದು ವಿಶೇಷವೆಂದರೆ ಉತ್ತರ ಕರ್ನಾಟಕ ಭಾಷೆಗೆ ನೀಡಿರುವ ಆದ್ಯತೆ. ಸಂಭಾಷಣೆಗಳಲ್ಲಿ, ಪಾತ್ರಗಳಲ್ಲಿ ಮತ್ತು ಪರಿಸರ ನಿರ್ಮಾಣದಲ್ಲಿ ಆ ಭಾಗದ ಸ್ವಾಭಾವಿಕತೆ ಸ್ಪಷ್ಟವಾಗಿ ಕಾಣುತ್ತದೆ. ಇದು ಕೇವಲ ಭಾಷಾ ಆಯ್ಕೆಯಷ್ಟೇ ಅಲ್ಲ, ಕಥೆಯ ನೈಜತೆಯನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದೆ.
ಮಯೂರಿ ಕ್ಯಾತಾರಿ ,ಅವಿನಾಶ್ ಸೇರಿದಂತೆ ಅನೇಕ ಪರಿಚಿತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು 89ಕ್ಕೂ ಹೆಚ್ಚು ಪಾತ್ರಗಳನ್ನು ಒಳಗೊಂಡಿರುವ ಈ ಸರಣಿಯಲ್ಲಿ ಬಹುತೇಕ ಕಲಾವಿದರು ಉತ್ತರ ಕರ್ನಾಟಕ ಹಿನ್ನೆಲೆಯವರೇ ಆಗಿರುವುದು ವಿಶೇಷ. ಅದರಿಂದ ಪ್ರತಿ ಪಾತ್ರಕ್ಕೂ ಸ್ಥಳೀಯ ಸೊಗಡು ಹೆಚ್ಚಾಗಿದೆ.
ನಿರ್ಮಾಣದ ದೃಷ್ಟಿಯಿಂದಲೂ ಸರಣಿ ಗಮನಾರ್ಹವಾಗಿದೆ. ತರುಣ್ ಸುಧೀರ್ ಅವರ ಸೃಜನಾತ್ಮಕ ಭಾಗವಹಿಸುವಿಕೆ, ಕಥೆಗೆ ಸೂಕ್ತವಾದ ಥ್ರಿಲ್ಲರ್ ಟೋನ್ ನೀಡಿದೆ. ಕಥೆ ಹಾಗೂ ನಿರ್ದೇಶನದಲ್ಲಿ ಸ್ಥಳೀಯ ಅಂಶಗಳನ್ನು ಕಳೆದುಕೊಳ್ಳದೆ, ಒಟಿಟಿ ವೀಕ್ಷಕರಿಗೆ ಹೊಂದುವ ವೇಗದಲ್ಲಿ ನಿರೂಪಿಸಿರುವುದು ಗಮನ ಸೆಳೆಯುತ್ತದೆ.
ಏಳು ಭಾಗಗಳ ಈ ಸರಣಿಯ ಪ್ರತಿಯೊಂದು ಎಪಿಸೋಡ್ ಸುಮಾರು 22ರಿಂದ 25 ನಿಮಿಷಗಳ ಅವಧಿಯಲ್ಲಿದ್ದು, ವಾರಾಂತ್ಯದಲ್ಲಿ ಒಂದೇ ಸುತ್ತಿನಲ್ಲಿ ನೋಡಬಹುದಾದ ರೀತಿಯಲ್ಲಿ ಕಟ್ಟಿಕೊಡಲಾಗಿದೆ. ವೇಗವಾಗಿ ಸಾಗುವ ಕಥಾಹಂದರ ಮತ್ತು ಪ್ರತಿ ಭಾಗದ ಕೊನೆಯಲ್ಲಿ ಮೂಡುವ ಕುತೂಹಲ, ಮುಂದಿನ ಎಪಿಸೋಡ್ ನೋಡಬೇಕೆಂಬ ಆಸಕ್ತಿ ಹುಟ್ಟಿಸುತ್ತದೆ.
ಕನ್ನಡದಲ್ಲಿ ಸ್ಥಳೀಯ ನೆಲೆಯ ಕಥೆಗಳನ್ನು ಹೊಸ ಶೈಲಿಯಲ್ಲಿ ಹೇಳುವ ಪ್ರಯತ್ನಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ‘ರಾಕ್ಷಸ’ ಆ ದಿಕ್ಕಿನಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಗ್ರಾಮೀಣ ಹಿನ್ನೆಲೆ, ರಹಸ್ಯ, ಮನೋವೈಜ್ಞಾನಿಕ ಒತ್ತಡ ಮತ್ತು ಅಪರಾಧ ತನಿಖೆ ಒಂದೇ ಸರಣಿಯಲ್ಲಿ ಅನುಭವಿಸಬೇಕೆಂದರೆ ಇದು ಒಳ್ಳೆಯ ಆಯ್ಕೆ.
ಗ್ಲೆನ್ ಗುಂಪಲಾಜೆ
ಸ೦. ಕದಂಬ ಪತ್ರಿಕೆ












