ಹೇಗೆ ನೋಡಲಿ ನಾ ನಿನ್ನ ಬೆಳದಿಂಗಳು;
ನಾ ಮುಳುಗಿದ ಮೇಲೆಯೇ ಬರುವೆ ನೀ, ಈ ವರ್ಷದ ಕೊನೆಯ ತಿಂಗಳು.
ಸದ್ದೇ ಇಲ್ಲದ ಸಂಜೆಯಲ್ಲಿ ಬರುವೆ ನನ್ನ ಮುಂದೆ;
ನಿನ್ನ ನೋಡಿ ಲಜ್ಜೆಯಿಂದ ನಾ ಅಡಗುವೆ ಭೂಮಿಯ ಹಿಂದೆ!
ಮುಂಜಾನೆಯ ಮಂಜಿನಲ್ಲಿ ಮಸುಕಾಗಿ ಕಾಣುವೆ;
ನಾ ಆರ್ಭಟಿಸಲು ಮುನ್ನ ನೀ ಮುಳುಗಿ ಹೋಗುವೆ.
ನಮ್ಮ ಈ ಪ್ರೇಮ ಕಾವ್ಯದಲ್ಲಿ ಒಂದಾಗುವುದು ಎಂದು?
ಈ ಕಣ್ಣಾಮುಚ್ಚಾಲೆಯಲ್ಲಿ ನಾ ಯೋಚಿಸುವೆ ಇಂದು!
ನನ್ನ ಮೇಲಿನ ಪ್ರೀತಿ ನಿನ್ನ ಕಣ್ಣಲ್ಲೇ ಕಾಣುತಲುಂಟು;
ಬಾಯ್ತುಂಬ ಹೇಳದಿರುವೆಯೆಂದು ಪ್ರಶ್ನೆಗಳು ಮೂಡುತಿವೆ ಹದಿನೆಂಟು.
ಎಂದು ಬರುವುದೋ ಆ ದ್ವಿಕಿರಣದ ಮುಸ್ಸಂಜೆಯ ನಂಟು;
ಆ ಯೋಚನೆಯು ಇಂದು ಹೊಡೆಯುತಿದೆ ನನಗೆ ತಲ್ಲಣದ ಕೊಂಟು!
ನಮ್ಮ ಪ್ರೀತಿಯ ಮಧ್ಯೆ ಬರುವನು, ಗ್ರಹಣದ ಹೆಸರಿನಲ್ಲಿ, ಈ ರಾಹು;
ಇವನನ್ನು ಕಕ್ಕಬಿಕ್ಕಿ ಮಾಡುತ್ತೆ ಲೀಲಾಜಾಲವಾಗಿ ನನ್ನ ಆಜಾನುಬಾಹು!
ಅಮಾವಾಸ್ಯೆ ದಿವಸದಂದು ನನ್ನ ಮನವು, ಯಮನ ಬಾಗಿಲ ತಟ್ಟಿ ಬರುವುದು;
ಪೌರ್ಣಿಮೆಯ ದಿವಸವು ನನ್ನ ಮನವು, ಸ್ವರ್ಗವನ್ನೇ ಎತ್ತಿ ತರುವುದು!
- ಹರಿ ಕೀರ್ತನ್
ಹಿರೇನಂದಿ, ಎಚ್.ಡಿ ಕೋಟೆ ತಾಲೂಕು
ಮೈಸೂರು ಜಿಲ್ಲೆ












