ದುಡ್ಡೇ ದೊಡ್ಡಪ್ಪಾ!! - ದುಡ್ಡಿಗೆ ಇರುವ ಮರ್ಯಾದೆ ಮನುಷ್ಯನಿಗೆ ಇಲ್ಲವಾಯಿತೇ??

ಒಂದು ಚಿಕ್ಕ ಘಟನೆ…
ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಇಬ್ಬರು ಸ್ನೇಹಿತರು ಕೂತು ಮಾತನಾಡುತ್ತಿದ್ದರು. ಅವರ ನಗು, ಮಾತು, ಹಾಸ್ಯ ಎಲ್ಲವೂ ಸಹಜವಾಗಿಯೇ ಇತ್ತು. ಆದರೆ ಅಲ್ಲಿದ್ದವರ  ಕಣ್ಣಿಗೆ ಅದು “ಅಸಹಜ”ವಾಗಿ ಕಾಣಿಸಿತು. ಕೆಲವೇ ಕ್ಷಣಗಳಲ್ಲಿ ಮಾತುಗಳು ಗುಸುಗುಸುಗಳಾಗಿ, ಗುಸುಗುಸುಗಳು ಆರೋಪಗಳಾಗಿ ಬದಲಾಗಿದವು.
ಆದರೆ ಕಥೆ ಇಲ್ಲಿ ಮುಗಿಯುವುದಿಲ್ಲ. ಅದೇ ಘಟನೆ ಇನ್ನೊಂದು ದಿನ, ಅದೇ ಸ್ಥಳದಲ್ಲಿ ನಡೆಯಿತು. ಈ ಬಾರಿ ಅದೇ ರೀತಿಯ ಮಾತು, ಅದೇ ನಗು ಆದರೆ ಪಾತ್ರಧಾರಿಗಳು ಶ್ರೀಮಂತರ ಮಕ್ಕಳು. ಈ ಬಾರಿ ಯಾರೂ ಪ್ರಶ್ನಿಸಲಿಲ್ಲ. ಯಾರೂ ತೀರ್ಪು ಕೊಡಲಿಲ್ಲ. ಬದಲಾಗಿ, “ಇದು ಅವರ ವೈಯಕ್ತಿಕ ವಿಷಯ” ಎಂದು ಎಲ್ಲರೂ ಮೌನವಾಗಿ ನಿಂತರು.

ಹಾಗಾದರೆ ಪ್ರಶ್ನೆ ಏನು?
ಘಟನೆ ಒಂದೇ ಆಗಿದ್ದರೂ, ವ್ಯಕ್ತಿಯ ಸ್ಥಿತಿ ಬದಲಾದರೆ ಅದರ ಅರ್ಥವೂ ಬದಲಾಗುತ್ತದೆಯೇ?

ಇಂದು ನಮ್ಮ ಸಮಾಜದಲ್ಲಿ ಒಂದು ಅಪಾಯಕಾರಿ ಧೋರಣೆ ಬೆಳೆದಿದೆ “ಹಣ ಇದ್ದರೆ ತಪ್ಪು ಕೂಡ ಸರಿ, ಹಣ ಇಲ್ಲದಿದ್ದರೆ ಸರಿ ಕೂಡ ತಪ್ಪು.”

ಬಡವನಿಗೆ ತಪ್ಪು ಮಾಡಲು ಅವಕಾಶವೇ ಇಲ್ಲ. ಅವನ ಪ್ರತಿಯೊಂದು ಹೆಜ್ಜೆಯನ್ನೂ ಸಮಾಜ ಕಣ್ಣಾರೆ ಗಮನಿಸುತ್ತದೆ. ಅವನು ನಡಿದರೂ ನಕ್ಕರೂ ಪ್ರಶ್ನೆ, ಅವನು ಮಾತನಾಡಿದರೂ ಅನುಮಾನ. ಆದರೆ ಶ್ರೀಮಂತನಿಗೆ? ಅವನ ತಪ್ಪುಗಳಿಗೂ ‘ಸ್ಟೈಲ್’ ಎಂಬ ಹೆಸರಿಡಲಾಗುತ್ತದೆ. ಅವನ ವರ್ತನೆಗೆ ‘ಸ್ವಾತಂತ್ರ್ಯ’ ಎಂಬ ಮುದ್ರೆ ಅಂಟಿಸಲಾಗುತ್ತದೆ. ಇದು ಕೇವಲ ಆರ್ಥಿಕ ಅಂತರವಲ್ಲ ಇದು ಮಾನಸಿಕ ಅಸಮಾನತೆ. ನಾವು ಒಬ್ಬ ವ್ಯಕ್ತಿಯನ್ನು ಅವನ ನಡವಳಿಕೆಯ ಆಧಾರದ ಮೇಲೆ ಅಳೆಯಬೇಕೋ, ಅಥವಾ ಅವನ ಹಣದ ಆಧಾರದ ಮೇಲೆ ತೀರ್ಪು ಕೊಡಬೇಕೋ? ಈ ಪ್ರಶ್ನೆಗೆ ನಮ್ಮ ಉತ್ತರವೇ ನಮ್ಮ ಸಮಾಜದ ದಿಕ್ಕನ್ನು ನಿರ್ಧರಿಸುತ್ತದೆ. ನಾವು ಯಾರನ್ನಾದರೂ ಟೀಕಿಸುವ ಮೊದಲು, ನಾವು ಸರಿಯಾಗಿದ್ದೇವೇ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು.
ಅವರ ಪರಿಸ್ಥಿತಿ, ಅವರ ಉದ್ದೇಶ, ಅವರ ಹಿನ್ನೆಲೆ ಇವುಗಳನ್ನು ತಿಳಿಯದೇ ತೀರ್ಪು ಕೊಡುವುದು ನ್ಯಾಯವಲ್ಲ. ಒಂದು ಕ್ಷಣ ಯೋಚನೆ ಮಾಡಿದರೆ, ಅನೇಕ ಅನಾವಶ್ಯಕ ಟೀಕೆಗಳು ತಪ್ಪಿಸಿಕೊಳ್ಳಬಹುದು. ಸಮಾಜದಲ್ಲಿ ನಿಜವಾದ ನ್ಯಾಯ ಎಂದರೆ ಒಂದೇ ಕಾರ್ಯಕ್ಕೆ ಒಂದೇ ತೀರ್ಪು. ಅದು ಶ್ರೀಮಂತರಾಗಲಿ, ಬಡವರಾಗಲಿ ನ್ಯಾಯದ ತೂಕ ಸಮವಾಗಿರಬೇಕು. ಆ ದಿನ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರು ಸ್ನೇಹಿತರ ಕಥೆ ನಮ್ಮ ಕಣ್ಣು ತೆರೆಸಬೇಕಾಗಿದೆ.
ನಾವು ನೋಡಬೇಕಾದದ್ದು ಅವರ ನಗು ತಪ್ಪೋ ಸರಿಯೋ ಅಲ್ಲ ನಮ್ಮ ದೃಷ್ಟಿ ಸರಿಯೋ ತಪ್ಪೋ ಎಂಬುದು. ಆದ್ದರಿಂದ ಹಣ ಕೇವಲ ಮೌಲ್ಯವಾದ ವಾಸ್ತಗಳನ್ನು ಖರೀದಿಸಬಹುದು,   ನೈತಿಕತೆಯನ್ನು ಅಲ್ಲ. ಈ ಕಟು ಸತ್ಯ ಬಹಳ ಜನರಿಗೆ ತಿಳಿಯುವುದಿಲ್ಲ. ಹಾಗಾಗಿ ಇತರರ ಬಗ್ಗೆ ತೀರ್ಪು ಕೊಡುವ ಮೊದಲು ನಾವು ಸರಿಯಾಗಿ ಇದ್ದಿವೋ ಎಂಬುವುದನ್ನು ಯೋಚಿಸೋಣ.

 

- ಗ್ಲೆನ್ ಗುಂಪಲಾಜೆ
ಸ೦. ಕದಂಬ ಪತ್ರಿಕೆ