ಪ್ರಕೃತಿ: ಸೌಂದರ್ಯದ ಮಡಿಲು ಮತ್ತು ನಮ್ಮ ಜವಾಬ್ದಾರಿ

ಪ್ರಕೃತಿಯ ಸೌಂದರ್ಯವನ್ನು ಸವಿಯಲು ಎರಡು ಕಣ್ಣುಗಳು ಸಾಲದು. ಪ್ರಕೃತಿಯ ಮಡಿಲಲ್ಲಿ ನಾವು ಸೋತು ಶರಣಾದರೆ, ಅಲ್ಲಿನ ಪ್ರತಿ ಗಿಡ, ಮರ, ಪ್ರಾಣಿ, ಪಕ್ಷಿ ಮತ್ತು ನದಿಗಳು ನಮ್ಮೊಂದಿಗೆ ಮಾತನಾಡುತ್ತಿರುವಂತೆ ಭಾಸವಾಗುತ್ತದೆ.

ಮುಖ್ಯವಾಗಿ ಮಾನ್ಸೂನ್ (ಮಳೆಗಾಲ) ಸಮಯದಲ್ಲಿ ಪ್ರಕೃತಿಯನ್ನು ನೋಡುವುದೇ ಒಂದು ಅನನ್ಯ ಖುಷಿ. ಮುಂಜಾನೆ ಬೇಗ ಎದ್ದು, ಆಕಾಶದಿಂದ ನೀರಿನ ಹನಿಗಳು ಧರೆಗೆ ಉರುಳುವುದನ್ನು ನೋಡುತ್ತಾ, ಹಕ್ಕಿಗಳ ಚಿಲಿಪಿಲಿ ಧ್ವನಿಯ ನಡುವೆ ಸೂರ್ಯೋದಯವನ್ನು ಆನಂದಿಸುವುದೇ ಒಂದು ರೋಮಾಂಚನ. ಸುತ್ತಲೂ ಕಣ್ಣು ಹಾಯಿಸಿದ ಕಡೆಯೆಲ್ಲಾ ಹಸಿರು ಗಿಡಗಳು, ಮರಗಳು ಮತ್ತು ಬಣ್ಣ ಬಣ್ಣದ ಹೂವುಗಳು ಮನಸ್ಸಿಗೆ ತೃಪ್ತಿಯನ್ನುಂಟುಮಾಡುತ್ತದೆ. ಪ್ರಕೃತಿಯಲ್ಲಿನ ಪ್ರತಿ ಮರ ಮತ್ತು ಗಿಡಕ್ಕೂ, ಪ್ರಾಣಿ-ಪಕ್ಷಿಗೂ ತನ್ನದೇ ಆದ ಸುಂದರ ಕಥೆಗಳಿವೆ. ನಾವು ಪ್ರಕೃತಿಯೊಂದಿಗೆ ಸಮಯ ಕಳೆದು, ಅದನ್ನು ಅರಿಯಲು ಹೊರಟರೆ ಕಲಿಯಬಹುದಾದ ವಿಷಯಗಳು ಅವೆಷ್ಟೋ ಇವೆ. 

ನಮ್ಮ ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡುವ ಅದ್ಭುತ ಶಕ್ತಿ ಪ್ರಕೃತಿಗಿದೆ. ಸುರಿಯುವ ಮಳೆಯನ್ನು ನೋಡುತ್ತಾ ನಿಂತರೆ, ಮನಸ್ಸಿನ ಎಷ್ಟೋ ಭಾರಗಳು ಇಳಿದು ಹಗುರವೆನಿಸುತ್ತದೆ. ನಮ್ಮಿಂದ ಏನನ್ನೂ ನಿರೀಕ್ಷಿಸದೆ ಪ್ರಕೃತಿ ನಮಗೆ ಅಸಂಖ್ಯಾತ ಕೊಡುಗೆಗಳನ್ನು ನೀಡಿತ್ತದೆ, ಈ ಕೊಡುಗೆಗಳನ್ನು ನಾವು ಪ್ರೀತಿಯಿಂದ ಉಳಿಸಿಕೊಳ್ಳಬೇಕೇ ಹೊರತು, ಎಂದಿಗೂ ನಾಶ ಮಾಡಬಾರದು. ಪ್ರಕೃತಿ ಎಷ್ಟು ಸುಂದರವಾಗಿದೆಯೋ, ಅದನ್ನು ನಾವು ಅತಿಯಾಗಿ ಕೆಣಕಿದರೆ ಅಷ್ಟೇ ಅಪಾಯಕಾರಿಯೂ ಆಗಬಲ್ಲದು ಎಂಬುದನ್ನು ನಾವು ಮರೆಯಬಾರದು.

ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್‌ನ ವಿಪರೀತ ಉಪಯೋಗದಿಂದಾಗಿ ಪರಿಸರ ದಿನದಿಂದ ದಿನಕ್ಕೆ ಹಾನಿಗೊಳಗಾಗುತ್ತಿದೆ. ವಾಯು ಮಾಲಿನ್ಯ ಮತ್ತು ಜಲ ಹೆಚ್ಚುತ್ತಿದೆ ಇವೆಲ್ಲವನ್ನು ತಡೆಗಟ್ಟುವ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕಿದೆ. 

"ನಾವು ಪ್ರಕೃತಿಯನ್ನು ಉಳಿಸಿದರೆ, ಪ್ರಕೃತಿ ನಮ್ಮನ್ನು ಉಳಿಸುತ್ತದೆ." ಒಂದು ವೇಳೆ ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯಬೇಕಾಗಿ ಬಂದರೂ, ಅದರ ಜಾಗದಲ್ಲಿ ಹೊಸ ಗಿಡಗಳನ್ನು ನೆಡುವುದನ್ನು ಮರೆಯಬಾರದು. ನಮ್ಮ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಶ್ರಮಿಸಬೇಕು. ಪ್ಲಾಸ್ಟಿಕ್ ಬಳಸಿದ ನಂತರ ಅದನ್ನು ಎಲ್ಲೆಂದರಲ್ಲಿ ಬಿಸಾಡದೆ, ಕಸದ ಬುಟ್ಟಿಗೇ ಹಾಕುವ ಹವ್ಯಾಸ ಬೆಳೆಸಿಕೊಳ್ಳಬೇಕು.

ಪ್ರಕೃತಿಯನ್ನು ಕಾಪಾಡಿಕೊಳ್ಳಲು ಇಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ತನ್ನದೇ ಆದ ಜವಾಬ್ದಾರಿ  ಎಂದು ಮರೆಯದೆ ಪರಿಸರವನ್ನು ಉಳಿಸಿ, ಬೆಳೆಸಬೇಕು. 

 

- ತನುಶ್ರೀ ಸಿ. ಕೆ.