ಹಾಲಿವುಡ್‌ನಲ್ಲಿ ಡಿಜಿಟಲ್ ಯುಗದ ಪ್ರೀತಿ ಮತ್ತು ಡೇಟಿಂಗ್ ಆಪ್‌ಗಳ ಪ್ರಭಾವದ ಬಗ್ಗೆ ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ಆದರೆ ನಿರ್ದೇಶಕ ವಿಘ್ನೇಶ್ ಶಿವನ್, ತಮಿಳು ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಈ ಪರಿಕಲ್ಪನೆಯನ್ನು 'ಫ್ಯೂಚರಿಸ್ಟಿಕ್ ಸೈನ್ಸ್ ಫಿಕ್ಷನ್ ರೋಮ್ಯಾಂಟಿಕ್ ಕಾಮಿಡಿ' (Sci-Fi Rom-Com) ಶೈಲಿಯಲ್ಲಿ, 2040 ರ ಭವಿಷ್ಯದ ಕಾಲಘಟ್ಟಕ್ಕೆ ಕೊಂಡೊಯ್ದು ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಪ್ರದೀಪ್ ರಂಗನಾಥನ್, ಕೀರ್ತಿ ಶೆಟ್ಟಿ ಮತ್ತು ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಲವ್ ಇನ್ಶುರೆನ್ಸ್ ಕಂಪನಿ' (LIK) ಚಿತ್ರದ ಸಮಗ್ರ ವಿಮರ್ಶೆ ಇಲ್ಲಿದೆ.
ಕಥಾಸಾರಾಂಶ
ಚಿತ್ರದ ಕಥೆ 2040 ರ ಹೈಟೆಕ್ ಜಗತ್ತಿನಲ್ಲಿ ನಡೆಯುತ್ತದೆ. ನಾಯಕಿ ಧೀಮಾ (ಕೀರ್ತಿ ಶೆಟ್ಟಿ) ಸಂಪೂರ್ಣವಾಗಿ ತಂತ್ರಜ್ಞಾನದ ಆಡಳಿತಕ್ಕೆ ಒಳಗಾದ ಯುವತಿ. ಸೂರ್ಯ (ಎಸ್.ಜೆ. ಸೂರ್ಯ) ನಡೆಸುವ 'ಲವ್ ಇನ್ಶುರೆನ್ಸ್ ಕಂಪನಿ' ಸೃಷ್ಟಿಸಿರುವ 'LIK' ಆಪ್ ಸುತ್ತಲೇ ಆಕೆಯ ಇಡೀ ಜೀವನ ಸುತ್ತುತ್ತದೆ. ಆಪ್‌ನಲ್ಲಿ ಸಿಗುವ ಲೈಕ್ಸ್ ಮತ್ತು ಫಾಲೋವರ್ಸ್ ಸಂಖ್ಯೆಯೇ ಆಕೆಯ ಬದುಕಿನ ಪರಮೋದ್ದೇಶ. ಮೊಬೈಲ್ ವ್ಯಸನಿಯಾದ ತಾಯಿ, ಧೀಮಾಗೆ ಮನುಷ್ಯನ ಪ್ರೀತಿ ಮತ್ತು ಸ್ಪರ್ಶಕ್ಕಿಂತ ಹೆಚ್ಚಾಗಿ ಅಲ್ಗಾರಿದಮ್‌ಗಳು ಮತ್ತು ಡಿಜಿಟಲ್ ಮೀಡಿಯಾವನ್ನು ಉಣಬಡಿಸಿ ಬೆಳೆಸಿರುತ್ತಾರೆ.
ಇದಕ್ಕೆ ತದ್ವಿರುದ್ಧವಾಗಿ, ನಾಯಕ ವೈಬ್ ವಾಸಿ (ಪ್ರದೀಪ್ ರಂಗನಾಥನ್) ತಂತ್ರಜ್ಞಾನವನ್ನು ದ್ವೇಷಿಸುವ ತನ್ನ ತಂದೆಯೊಂದಿಗೆ (ಸೀಮನ್) ಅತ್ಯಂತ ಸರಳ ಜೀವನ ನಡೆಸುತ್ತಿರುತ್ತಾನೆ. "ಯಾರ ಮುಂದೆಯೂ ತಲೆಬಾಗಬೇಡ, ಸ್ವಾಭಿಮಾನದಿಂದ ಬದುಕು" ಎಂಬುದು ತಂದೆಯ ಕಿವಿಮಾತು. ಆದರೆ ವಾಸಿ, ಧೀಮಾಳನ್ನು ಕಂಡ ತಕ್ಷಣ ಆಕೆಯ ಪ್ರೀತಿಯಲ್ಲಿ ಬೀಳುತ್ತಾನೆ. ಆಕೆಯನ್ನು ತಲುಪಲು 'LIK' ಆಪ್ ಒಂದೇ ದಾರಿ ಎಂದು ತಿಳಿದಾಗ, ತಂದೆಯ ಇಚ್ಛೆಗೆ ವಿರುದ್ಧವಾಗಿ ಆಪ್ ಲೋಕಕ್ಕೆ ಕಾಲಿಡುತ್ತಾನೆ. ಅಲ್ಲಿ ಪ್ರೀತಿಯನ್ನು ಲೆಕ್ಕ ಹಾಕಲಾಗುತ್ತದೆ, ರೇಟಿಂಗ್ ನೀಡಲಾಗುತ್ತದೆ. ವಾಸಿ ಧೀಮಾಳನ್ನು ಕನೆಕ್ಟ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೂ, ಆಪ್‌ನ ಹೊಸ ಫೀಚರ್ ಆದ 'ಲವ್ ಸ್ಕೋರ್' (Love Score) ಇವರಿಬ್ಬರ ಸಂಬಂಧದ ನಡುವೆ ಬಿರುಗಾಳಿ ಎಬ್ಬಿಸುತ್ತದೆ. ಆಪ್‌ಗಿಂತ ಹೃದಯ ದೊಡ್ಡದು ಎಂಬುದನ್ನು ಧೀಮಾ ನಂಬಲು ನಿರಾಕರಿಸಿದಾಗ ಇವರ ಪ್ರೀತಿ ಮುರಿದು ಬೀಳುತ್ತದೆ. ಮುಂದೆ ವಾಸಿ ಏನು ಮಾಡುತ್ತಾನೆ? ಆಪ್ ನಿಯಂತ್ರಿಸುವ ಈ ಜಗತ್ತಿನಲ್ಲಿ ನೈಜ ಪ್ರೀತಿಗೆ ಜಯ ಸಿಗುತ್ತದೆಯೇ? ಎಂಬುದೇ ಉಳಿದ ಕಥೆ.
ತಾಂತ್ರಿಕ ವಿಭಾಗ
ಚಿತ್ರದ ಪ್ರೊಡಕ್ಷನ್ ವ್ಯಾಲ್ಯೂಸ್ ಅತ್ಯಂತ ಶ್ರೀಮಂತವಾಗಿದೆ. ಚಿತ್ರಮಂದಿರದಲ್ಲಿ ವೀಕ್ಷಿಸಲು ಇದೊಂದು ವರ್ಣರಂಜಿತ ದೃಶ್ಯ ವೈಭವವಾಗಿದೆ. ರವಿವರ್ಮನ್ ಅವರ ಛಾಯಾಗ್ರಹಣ (Cinematography) ಅದ್ಭುತವಾಗಿದ್ದು, 2040 ರ ಜಗತ್ತನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಇನ್ನು ಅನಿರುದ್ಧ್ ರವಿಚಂದರ್ ಅವರ ಸಂಗೀತ ಚಿತ್ರ ಬಿಡುಗಡೆಗೆ ಮುನ್ನವೇ ಬ್ಲಾಕ್ಬಸ್ಟರ್ ಆಗಿದ್ದು, ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್ ಆಗಿದೆ.
ಸಾಂಸ್ಕೃತಿಕ ನಂಟು ಮತ್ತು ಪ್ರಭಾವ (Cultural Connection & Impact)
ಈ ಚಿತ್ರದ ಕಥಾವಸ್ತು ಜೆನ್-ಜಿ (Gen Z) ಮತ್ತು ಜೆನ್-ಆಲ್ಫಾ (Gen Alpha) ಪೀಳಿಗೆಗೆ, ಅಂದರೆ ಇಂದಿನ ಯುವಕರಿಗೆ ತುಂಬಾ ಹತ್ತಿರವಾಗುತ್ತದೆ. ಕರ್ನಾಟಕದ ಐಟಿ ರಾಜಧಾನಿ ಬೆಂಗಳೂರಿನಂತಹ ನಗರಗಳಲ್ಲಿ ಬೆಳೆಯುತ್ತಿರುವ ಇಂದಿನ ಯುವ ಪೀಳಿಗೆ ಕೂಡ ಪ್ರೀತಿ, ಸ್ನೇಹವನ್ನು ನಿಜ ಜೀವನಕ್ಕಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲೇ ಹುಡುಕುತ್ತಿದ್ದಾರೆ. ಈ ಚಿತ್ರದಲ್ಲಿ ಬಳಸಲಾದ ಸಂಭಾಷಣೆ ಮತ್ತು ಭಾಷಾ ಶೈಲಿ (Lingo) ಇಂದಿನ ಯುವಕರ ದಿನನಿತ್ಯದ ಮಾತಿನಂತಿದೆ. ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಇಂದಿನ ಪೀಳಿಗೆಯ ಭಾವನಾತ್ಮಕ ಬೆಳವಣಿಗೆ ಹೇಗೆ ಕುಂಠಿತಗೊಳ್ಳುತ್ತಿದೆ ಎಂಬುದನ್ನು ಚಿತ್ರ ಸೂಕ್ಷ್ಮವಾಗಿ ತೋರ್ಪಡಿಸುತ್ತದೆ.
ಪ್ಲಸ್ ಅಂಡ್ ಮೈನಸ್
ಪ್ಲಸ್ : ವಿಘ್ನೇಶ್ ಶಿವನ್ ಅವರ ನೈಜ ಸಂಭಾಷಣೆಗಳು, ಪಾತ್ರಗಳ ರಚನೆ ಮತ್ತು ಮೊದಲಾರ್ಧದಲ್ಲಿ ಬರುವ ಅತ್ಯುತ್ತಮ ಹಾಸ್ಯ ದೃಶ್ಯಗಳು. ಹೆಣ್ಣು ಮತ್ತು ಗಂಡು ಇಬ್ಬರ ದೃಷ್ಟಿಕೋನವನ್ನೂ ಸಮಾನವಾಗಿ ತೋರಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್.
ಮೈನಸ್ : ಕಥಾವಸ್ತು ಚೆನ್ನಾಗಿದ್ದರೂ ಚಿತ್ರಕಥೆ (Screenplay) ಮತ್ತು ಮೇಕಿಂಗ್ ನಿರಾಶೆ ಮೂಡಿಸುತ್ತದೆ. ಚಿತ್ರದ ಮುಖ್ಯ ಸಂಘರ್ಷವು ನಿರೀಕ್ಷಿತ ಮಟ್ಟದ ನಾಟಕೀಯ ತಿರುವು ಅಥವಾ ಬಿಗುವನ್ನು ಸೃಷ್ಟಿಸುವುದಿಲ್ಲ. ವಿಶೇಷವಾಗಿ ದ್ವಿತೀಯಾರ್ಧ (Second Half) ತುಂಬಾ ಎಳೆಯಲ್ಪಟ್ಟಂತೆ (Lag) ಭಾಸವಾಗುತ್ತದೆ ಮತ್ತು ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಳ್ಳಲು ವಿಫಲವಾಗುತ್ತದೆ.
ವೊತ್ತಾರೆ ಹೇಳುವುದಾದರೆ ನಿರ್ದೇಶಕ ವಿಘ್ನೇಶ್ ಶಿವನ್ ಅವರು 'LIK' ಮೂಲಕ ಒಂದು ಮಜಾವಾದ, ಫ್ಯೂಚರಿಸ್ಟಿಕ್ ಲವ್ ಸ್ಟೋರಿ ನೀಡಲು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿ ಒಳ್ಳೆಯ ಕಾನ್ಸೆಪ್ಟ್ ಮತ್ತು ತಾಂತ್ರಿಕ ಶ್ರೀಮಂತಿಕೆ ಇದೆ. ಆದರೆ ದುರ್ಬಲ ಚಿತ್ರಕಥೆಯಿಂದಾಗಿ ಇಂದಿನ ಜೆನ್-ಜಿ ಭಾಷೆಯಲ್ಲೇ ಹೇಳಬೇಕೆಂದರೆ ಈ ಸಿನಿಮಾ ಕೇವಲ 'ಮಿಡ್' (Mid - ಅಂದರೆ ಸಾಧಾರಣ) ಆಗಿದೆ. ಥಿಯೇಟರ್‌ಗಿಂತಲೂ ಒಟಿಟಿಯಲ್ಲಿ (Streaming) ಆರಾಮವಾಗಿ ಒಮ್ಮೆ ನೋಡಬಹುದಾದ ಚಿತ್ರವಿದು.
ರೇಟಿಂಗ್: 5.6/ 10 ಸ್ಟಾರ್ಸ್
ತನುಶ್ರೀ . ಸಿ .ಕೆ










