ಒಂದು ಕ್ಲಿಕ್... ಬದುಕಿನ ಸಂಪಾದನೆಯೇ ಕಳೆದುಹೋದರೆ?

- ಸೈಬರ್ ಜಗತ್ತಿನಲ್ಲಿ ಎಚ್ಚರಿಕೆಯ ಹೆಜ್ಜೆಗಳು

 

ಒಂದು ದಿನ ಬೆಳಗ್ಗೆ ನಿಮ್ಮ ಮೊಬೈಲ್‌ಗೆ ಒಂದು ಸಂದೇಶ ಬರುತ್ತದೆ. "ನಿಮ್ಮ ಬ್ಯಾಂಕ್ ಖಾತೆಗೆ ₹50,000 ಜಮಾ ಆಗಿದೆ, ಸಂಪೂರ್ಣ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ." ನೀವು ಕುತೂಹಲದಿಂದ ಆ ಲಿಂಕ್ ಒತ್ತುತ್ತೀರಿ. ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಮಾಯವಾಗುತ್ತದೆ!

ಇದು ಕೇವಲ ಕಾಲ್ಪನಿಕ ಕಥೆಯಲ್ಲ. ಇಂತಹ ಘಟನೆಗಳು ಪ್ರತಿದಿನ ಸಾವಿರಾರು ಜನರ ಬದುಕಿನಲ್ಲಿ ನಡೆಯುತ್ತಿವೆ. ಒಂದು ಕಾಲದಲ್ಲಿ ಕಳ್ಳರು ಮನೆಯ ಬಾಗಿಲು ಒಡೆದು ಒಳನುಗ್ಗುತ್ತಿದ್ದರು. ಇಂದು ಅವರು ನಮ್ಮ ಮನೆಯೊಳಗೆ ಬರುವ ಅಗತ್ಯವೇ ಇಲ್ಲ; ನಮ್ಮ ಕೈಯಲ್ಲಿರುವ ಮೊಬೈಲ್‌ ಫೋನ್‌ಗಳ ಮೂಲಕವೇ ನಮ್ಮ ಖಾಸಗಿ ಬದುಕಿನೊಳಗೆ ಪ್ರವೇಶಿಸುತ್ತಿದ್ದಾರೆ. ಈ ಹೊಸ ಜಗತ್ತಿನ ಕಳ್ಳರನ್ನು "ಸೈಬರ್ ಅಪರಾಧಿಗಳು" ಎಂದು ಕರೆಯುತ್ತಾರೆ.

ಡಿಜಿಟಲ್ ಯುಗ ಎಂದು ಕರೆಯಲಾಗುವ ಇಂದಿನ ಯುಗದಲ್ಲಿ ಬೆಳಿಗ್ಗೆ ಕಣ್ಣು ತೆರೆದ ಕ್ಷಣದಿಂದ ರಾತ್ರಿ ಮಲಗುವವರೆಗೆ ನಮ್ಮ ದಿನಚರಿಯ ಬಹುತೇಕ ಎಲ್ಲಾ ಕೆಲಸಗಳು ಇಂಟರ್ನೆಟ್‌ಗೆ ಅವಲಂಬಿತವಾಗಿವೆ. ಬ್ಯಾಂಕಿಂಗ್ ವ್ಯವಹಾರಗಳು, ಆನ್‌ಲೈನ್ ಖರೀದಿ, ಶಿಕ್ಷಣ, ಉದ್ಯೋಗ, ಮನರಂಜನೆ, ಸರ್ಕಾರಿ ಸೇವೆಗಳು ಎಲ್ಲವೂ ಈಗ ಒಂದು ಮೊಬೈಲ್ ಪರದೆಯೊಳಗೆ ಸೇರಿವೆ. ಈ ತಂತ್ರಜ್ಞಾನ ನಮ್ಮ ಬದುಕನ್ನು ಸುಲಭಗೊಳಿಸಿದೆ೦ದರೆ ತಪ್ಪಿಲ್ಲ ಆದರೆ ಇದೇ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುವುದು ನಮ್ಮ ಗಮನದಲ್ಲಿರಬೇಕಾದ ಸಂಗತಿ.

ಇಂತಹ ಕಳ್ಳರನ್ನು ತಡೆಹಿಡಿಯುವಲ್ಲಿ ನಮ್ಮ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುವ ಸಾಧಕವೇ ಸೈಬರ್ ಭದ್ರತೆ (Cyber Security). ನಾವು ನಮ್ಮ ಮನೆಯ ಬಾಗಿಲಿಗೆ ಬೀಗ ಹಾಕುವಂತೆ, ಡಿಜಿಟಲ್ ಬದುಕಿಗೂ ಭದ್ರತೆಯ ಬೀಗ ಹಾಕುವುದು ಅತ್ಯಗತ್ಯ. ಸೈಬರ್ ಭದ್ರತೆಯು ನಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆಗಳ ವಿವರಗಳು, ಪಾಸ್‌ವರ್ಡ್‌ಗಳು, ದಾಖಲೆಗಳು ಹಾಗೂ ಆನ್‌ಲೈನ್ ವ್ಯವಹಾರಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.

ಆದರೆ ಭದ್ರತೆ ಎಂಬುದು ಕೇವಲ ತಂತ್ರಜ್ಞಾನದ ಜವಾಬ್ದಾರಿಯಲ್ಲ; ಬಳಕೆದಾರರ ಜಾಗೃತಿಯೂ ಹೌದು. ನಾವು ಪಾಲಿಸಬೇಕಾದ ಕೆಲವು ಸರಳ ಆದರೆ ಮಹತ್ವದ ನಿಯಮಗಳಿವೆ. 

 

  1. ಓಟಿಪಿ (OTP) ಎಂಬುದು ನಿಮ್ಮ ಬ್ಯಾಂಕ್ ಖಾತೆಯ ಕೀಲಿಕೈಯಂತಿದೆ. ಎಷ್ಟೇ ವಿಶ್ವಾಸಾರ್ಹರಂತೆ ಮಾತನಾಡಿದರೂ ಅಪರಿಚಿತ ವ್ಯಕ್ತಿಗಳಿಗೆ ಅದನ್ನು ನೀಡಬಾರದು. ಬ್ಯಾಂಕ್ ಅಥವಾ ಸರ್ಕಾರಿ ಸಂಸ್ಥೆಗಳು ಎಂದಿಗೂ ದೂರವಾಣಿ ಮೂಲಕ ಓಟಿಪಿ ಕೇಳುವುದಿಲ್ಲ ಎಂಬುದನ್ನು ನೆನಪಿಡಬೇಕು.
  2. ಮೊಬೈಲ್ ಅಥವಾ ಇಮೇಲ್‌ನಲ್ಲಿ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕು. ಆಕರ್ಷಕ ಬಹುಮಾನಗಳು, ಉದ್ಯೋಗದ ಆಮಿಷಗಳು ಅಥವಾ ತುರ್ತು ಎಚ್ಚರಿಕೆಗಳ ಹೆಸರಿನಲ್ಲಿ ಕಳುಹಿಸುವ ಲಿಂಕ್‌ಗಳು ಅನೇಕ ಬಾರಿ ವಂಚನೆಯ ಬಲೆಯಾಗಿರುತ್ತವೆ.
  3. ಬ್ಯಾಂಕ್ ಖಾತೆ ಸಂಖ್ಯೆ, ಎಟಿಎಂ ಕಾರ್ಡ್ ವಿವರಗಳು, ಯುಪಿಐ ಪಿನ್ ಅಥವಾ ನೆಟ್ ಬ್ಯಾಂಕಿಂಗ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇವು ವೈಯಕ್ತಿಕ ಆಸ್ತಿಯಷ್ಟೇ ಅಮೂಲ್ಯವಾದ ಮಾಹಿತಿಗಳಾಗಿವೆ.
  4. ನಮ್ಮ ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿರುವ ಆ್ಯಪ್‌ಗಳು ಹಾಗೂ ಸಾಫ್ಟ್‌ವೇರ್‌ಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡಬೇಕು. ಅನೇಕ ಬಾರಿ ಈ ಅಪ್‌ಡೇಟ್‌ಗಳು ಹೊಸ ವೈಶಿಷ್ಟ್ಯಗಳಿಗಿಂತಲೂ ಭದ್ರತೆಯ ಕೊರತೆಗಳನ್ನು ಸರಿಪಡಿಸಲು ಬಿಡುಗಡೆಯಾಗಿರುತ್ತವೆ.
  5. ಪಾಸ್‌ವರ್ಡ್ ರಚಿಸುವಾಗಲೂ ಎಚ್ಚರಿಕೆ ಅಗತ್ಯ. "123456", "password" ಅಥವಾ ಜನ್ಮ ದಿನಾಂಕದಂತಹ ಸುಲಭ ಪಾಸ್‌ವರ್ಡ್‌ಗಳನ್ನು ಬಳಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆಯೇ. ಅಕ್ಷರಗಳು, ಅಂಕೆಗಳು ಮತ್ತು ವಿಶೇಷ ಚಿಹ್ನೆಗಳನ್ನು ಒಳಗೊಂಡ ಬಲಿಷ್ಠ ಪಾಸ್‌ವರ್ಡ್‌ಗಳನ್ನು ಬಳಸುವುದು ಉತ್ತಮ.
  6. ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿರುವ ಉಚಿತ ವೈ-ಫೈ ಬಳಕೆಯಲ್ಲಿಯೂ ಜಾಗರೂಕರಾಗಬೇಕು. ಸುರಕ್ಷತೆ ಇಲ್ಲದ ನೆಟ್‌ವರ್ಕ್‌ಗಳ ಮೂಲಕ ಹ್ಯಾಕರ್‌ಗಳು ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ.

     

ನಿಜ ಹೇಳಬೇಕೆಂದರೆ, ಡಿಜಿಟಲ್ ಯುಗದಲ್ಲಿ ಅಜ್ಞಾನವೇ ದೊಡ್ಡ ಅಪಾಯ. ತಂತ್ರಜ್ಞಾನವನ್ನು ಬಳಸಿದರೆ ಮಾತ್ರ ಸಾಕಾಗುವುದಿಲ್ಲ; ಅದನ್ನು ಸುರಕ್ಷಿತವಾಗಿ ಬಳಸುವುದನ್ನು ಕಲಿಯುವುದು ಇನ್ನಷ್ಟು ಮುಖ್ಯ. ಒಂದು ಕ್ಷಣದ ಅಜಾಗರೂಕತೆ ವರ್ಷಗಳ ಶ್ರಮದಿಂದ ಸಂಪಾದಿಸಿದ ಹಣವನ್ನು ಕಳೆದುಕೊಳ್ಳುವಂತೆ ಮಾಡಬಹುದು.

ಆದ್ದರಿಂದ ಸೈಬರ್ ಭದ್ರತೆಯ ಅರಿವು ಕೇವಲ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಅಥವಾ ತಂತ್ರಜ್ಞಾನ ಪರಿಣಿತರಿಗೆ ಮಾತ್ರ ಸೀಮಿತವಾಗಬಾರದು. ಮನೆಯ ಹಿರಿಯರಿಂದ ಹಿಡಿದು ಶಾಲಾ ಮಕ್ಕಳವರೆಗೆ ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದುಕೊಳ್ಳೋಣ, ನಮ್ಮಲ್ಲಿ ಡಿಜಿಟಲ್ ಅರಿವು ಹೆಚ್ಚಿದಷ್ಟೂ ಸೈಬರ್ ಅಪರಾಧಗಳ ಪ್ರಮಾಣ ಕಡಿಮೆಯಾಗುತ್ತದೆ.

ತಂತ್ರಜ್ಞಾನವನ್ನು ಅರ್ಥಮಾಡಿಕೊಂಡು ಬಳಸೋಣ, ಸೈಬರ್ ಅಪಾಯಗಳಿಂದ ದೂರವಿರೋಣ ಮತ್ತು ಸುರಕ್ಷಿತ ಡಿಜಿಟಲ್ ಭವಿಷ್ಯವನ್ನು ನಿರ್ಮಿಸೋಣ

 

ತನುಶ್ರೀ ಸಿ . ಕೆ