ಇಂದಿನ ವೇಗದ ಜೀವನದಲ್ಲಿ ನಾವು ಸದಾ ಯಾರೊಂದಿಗಾದರೂ ಸಂಪರ್ಕದಲ್ಲಿದ್ದೆ ಇರುತ್ತೇವೆ, ಒಂದು ಸಂದೇಶ, ಒಂದು ಕರೆ, ಒಂದು ಇ-ಮೇಲ್ ಅಥವಾ ಸಾಮಾಜಿಕ ಜಾಲತಾಣದ ಸೂಚನೆ (ನೋಟಿಫಿಕೇಶನ್) ದಿನದ ಯಾವುದೇ ಸಮಯದಲ್ಲಿ ನಮ್ಮ ಗಮನವನ್ನು ಸೆಳೆಯಲು ಸಿದ್ಧವಾಗಿರುತ್ತದೆ ಈ ವೇಗದ ಜಗತ್ತಿನಲ್ಲಿ ನಮ್ಮ ಜೀವನ ಶಯ್ಲಿಯ್ತಲ್ಲಿ ಸೇರಿಕೊಂಡಿರುವಂತಹ ತಂತ್ರಜ್ಞಾನ ನಮ್ಮ ಬದುಕನ್ನು ಸುಲಭಗೊಳಿಸಿದರೂ, ಅದರೊಂದಿಗಿನ ನಿರಂತರ ಸಂಪರ್ಕದ ಸಂಸ್ಕೃತಿ ನಮ್ಮ ಆರೋಗ್ಯದ ಮೇಲೆ, ವಿಶೇಷವಾಗಿ ಹೃದಯದ ಮೇಲೆ, ಮೌನವಾಗಿ ಪರಿಣಾಮ ಬೀರುತ್ತಿರುವುದು ನಮಗೇ ತಿಳಿಯುವುದೇ ಇಲ್ಲ.
ನಗರ ಜೀವನದಲ್ಲಿ ಕೆಲಸದ ಒತ್ತಡ, ಹಣಕಾಸಿನ ಚಿಂತೆ, ವಾಹನಗಳ ದಟ್ಟಣೆ, ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವ ಒತ್ತಾಯ ಮತ್ತು ಸಾಮಾಜಿಕ ಜಾಲತಾಣಗಳ ನಿರಂತರ ಚಟುವಟಿಕೆ ನಮ್ಮನ್ನು ಸದಾ ಎಚ್ಚರ ಸ್ಥಿತಿಯಲ್ಲೇ ಇಡುತ್ತಿವೆ ನಮ್ಮ ದೇಹಕ್ಕೆ ವಿಶ್ರಾಂತಿ ಬೇಕಾದ ಸಮಯದಲ್ಲಿಯೂ ಮನಸ್ಸು ಕೆಲಸದ ವಿಚಾರಗಳಲ್ಲೇ ತೊಡಗಿರುತ್ತವೆ. ಈ ನಿರಂತರ ಒತ್ತಡವನ್ನು ನಾವು ಸಾಮಾನ್ಯವೆಂದು ಭಾವಿಸಿದ್ದರೂ, ಅದು ನಿಧಾನವಾಗಿ ಹೃದಯದ ಆರೋಗ್ಯವನ್ನು ದುರ್ಬಲಗೊಳಿಸುತ್ತಿರುತ್ತದೆ ಇದು ನಾವೆಲ್ಲರೂ ಹೆಚ್ಚಿನ ಗಮನ ಕೊಡಬೇಕಾದ ಸಂಗತಿ.
ವೈದ್ಯರ ಪ್ರಕಾರ, ಇಂದಿನ ಜೀವನಶೈಲಿಯ ಕೆಲವು ಅಭ್ಯಾಸಗಳು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತಿವೆ. ಒಬ್ಬ ಆಫೀಸ್ ಕೆಲಸಕ್ಕೆ ಹೋಗುವ ವ್ಯಕ್ತಿ ದಿನದ ಹೆಚ್ಚಿನ ಸಮಯ ಕುರ್ಚಿಯಲ್ಲಿ ಕುಳಿತು, ಮೊಬೈಲ್ ಹಾಗೂ ಕಂಪ್ಯೂಟರ್ ಸ್ಕ್ರೀನ್ ನೋಡುತ್ತಾನೆ, ಇದನ್ನು ಸಮತೋಲನ ಗೊಳಿಸಲು ಬೇಕಾದ ದೈಹಿಕ ಚಟುವಟಿಕೆಗಳನ್ನು ಮಾಡದೆ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಸಮರ್ಪಕ ನಿದ್ರೆಯ ಅಭಾವದಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ದೇಹತೂಕ ಹಾಗೂ ರಕ್ತನಾಳಗಳ ಸಮಸ್ಯೆಗಳಂತಹ ರೋಗಗಳಿಗೆ ಬಲಿಯಾಗುತ್ತಿದ್ದಾನೆ.
ಇವಿಷ್ಟರಲ್ಲಿ ನಾವು ತುಂಬಾ ನಿರ್ಲಕ್ಷ್ಯವಹಿಸುವ ನಿದ್ರೆಯ ಕೊರತೆ ಅತ್ಯಂತ ಗಂಭೀರವಾದ ಸಮಸ್ಯೆ ಎಂಬುವುದು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ನಿದ್ರೆ ಎನ್ನುವುದು ಕೇವಲ ವಿಶ್ರಾಂತಿಯಲ್ಲ; ಅದು ದೇಹದ ಪುನಶ್ಚೇತನದ ಅವಧಿಯಾಗಿದೆ. ನಾವು ನಿದ್ರಿಸುವಾಗ ಹೃದಯದ ಬಡಿತ ನಿಧಾನಗೊಳ್ಳುತ್ತದೆ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಮತ್ತು ರಕ್ತನಾಳಗಳು ಚೇತರಿಸಿಕೊಳ್ಳಲು ಅವಕಾಶ ಸಿಗುತ್ತದೆ. ಆದರೆ ನಾವು ದಿನಂಪ್ರತಿ ಅಗತ್ಯವಿರುವ ಸಮಯಕ್ಕಿಂತ ಕಡಿಮೆ ನಿದ್ರೆ ಮಾಡುತ್ತಿರುವುದರಿಂದ ಈ ಸಹಜ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ.
ನಮಗೆ ಸಾಕಷ್ಟು ನಿದ್ರೆ ಇಲ್ಲದಿರುವುದು ದೇಹದ ಗ್ಲೂಕೋಸ್ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಹಾರ್ಮೋನ್‌ಗಳ ಸಮತೋಲನ ಕದಡಿ, ದೇಹದಲ್ಲಿ ಒತ್ತಡವನ್ನು ಹೆಚ್ಚಿಸುವ ರಾಸಾಯನಿಕಗಳ ಪ್ರಮಾಣ ಏರಿಕೆಯಾಗುತ್ತದೆ. ಇದರ ಪರಿಣಾಮವಾಗಿ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಬಿದ್ದು ಹೃದಯಾಘಾತ, ಪಾರ್ಶ್ವವಾಯು ಹಾಗೂ ಇತರ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಇನ್ನೊಂದು ಆತಂಕಕಾರಿ ಸಂಗತಿ ಎಂದರೆ, ಇಂತಹ ಸಮಸ್ಯೆಗಳನ್ನು ನಾವು ಸಮಸ್ಯೆಗಳೆಂದು ಪರಿಗಣಿಸದೇ ಇರುವುದು. “ನನಗೆ ನಿದ್ರೆ ಕಡಿಮೆ, ಆದರೆ ಕೆಲಸ ಹೆಚ್ಚು,” ಅಥವಾ “ದಣಿವು ಸಹಜ” ಎಂಬ ಮನೋಭಾವ ಇಂದಿನ ಸಮಾಜದಲ್ಲಿ ಸಾಮಾನ್ಯವಾಗಿದೆ. ಅನೇಕರು ದಣಿದಿರುವುದನ್ನು ಶ್ರಮದ ಸಂಕೇತವೆಂದು ಭಾವಿಸುತ್ತಾರೆ. ಆದರೆ ದೇಹ ನಿರಂತರವಾಗಿ ಕಳುಹಿಸುವ ಎಚ್ಚರಿಕೆಯ ಸಂದೇಶಗಳನ್ನು ನಿರ್ಲಕ್ಷಿಸಿದರೆ ಅದರ ಬೆಲೆ ಅನಾರೋಗ್ಯದ ರೂಪದಲ್ಲಿ ಕಟ್ಟಬೇಕಾಗುತ್ತದೆ ಎಂಬುವುದು ನಾವು ಗಮನದಲ್ಲಿಟ್ಟುಕೊಳ್ಳಬೇಕು.
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ದೊಡ್ಡ ಬದಲಾವಣೆಗಳೇ ಬೇಕೆಂದಿಲ್ಲ. ಪ್ರತಿದಿನ ಕನಿಷ್ಠ ಏಳು ರಿಂದ ಎಂಟು ಗಂಟೆಗಳ ಗುಣಮಟ್ಟದ ನಿದ್ರೆ, ನಿಯಮಿತ ವ್ಯಾಯಾಮ, ಸ್ಕ್ರೀನ್ ಬಳಕೆಗೆ ಮಿತಿ, ಸಮತೋಲಿತ ಆಹಾರ ಮತ್ತು ಒತ್ತಡ ನಿರ್ವಹಣೆಯ ಅಭ್ಯಾಸಗಳು ಸಾಕಷ್ಟು ಸಹಾಯಕವಾಗುತ್ತವೆ. ಕೆಲಸದ ನಡುವೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಹಾಗೂ ಡಿಜಿಟಲ್ ಜಗತ್ತಿನಿಂದ ಸ್ವಲ್ಪ ಹೊತ್ತು ದೂರವಿರುವುದೂ ಮನಸ್ಸು ಮತ್ತು ಹೃದಯಕ್ಕೆ ನೆಮ್ಮದಿಯನ್ನು ನೀಡುತ್ತದೆ.
ತಂತ್ರಜ್ಞಾನ ಮತ್ತು ಆಧುನಿಕ ಜೀವನ ನಮ್ಮ ಅಭಿವೃದ್ಧಿಗೆ ಅಗತ್ಯವೇ ಸರಿ. ಆದರೆ ಅದರ ನಡುವೆ ನಮ್ಮ ಆರೋಗ್ಯವನ್ನು ಮರೆಯಬಾರದು. ಏಕೆಂದರೆ ಕಣ್ಣಿಗೆ ಕಾಣದ ಒತ್ತಡ, ನಿದ್ರೆಯ ಕೊರತೆ ಮತ್ತು ಡಿಜಿಟಲ್ ಬಳಲಿಕೆ ನಿಧಾನವಾಗಿ ಹೃದಯವನ್ನು ಹಾನಿಗೊಳಿಸುತ್ತವೆ. ಆದ್ದರಿಂದ ಯಶಸ್ಸಿನ ಹಿಂದೆ ಓಡುವಷ್ಟೇ ನಮ್ಮ ಹೃದಯದ ಧ್ವನಿಯನ್ನು ಕೇಳುವುದೂ ಮುಖ್ಯ. ಆರೋಗ್ಯಕರ ಹೃದಯವೇ ಆರೋಗ್ಯಕರ ಬದುಕಿನ ನಿಜವಾದ ಆಧಾರ.
– ತನುಶ್ರೀ ಸಿ. ಕೆ.










