ಹಾವು ಎಂದರೆ ಸಾಕು, ಅನೇಕ ಜನರ ಮೈ ಜುಮ್ಮನೆನಿಸುತ್ತದೆ ಕೆಲವರಿಗೆ ಹಾವಿನ ಚಿತ್ರವನ್ನೇ ನೋಡಿದರೂ ಸಾಕು ಭಯವಾಗುತ್ತದೆ.ಅಂತಹ ಭಯ ಪಡಿಸುವ ಪ್ರಕೃತಿಯಲ್ಲಿ ತೆವಳುವ ಜೀವಿ ಭೂಮಿಯ ಬಹುತೇಕ ಎಲ್ಲ ಭಾಗಗಳಲ್ಲೂ ಕಂಡುಬರುತ್ತವೆ. ದಟ್ಟ ಕಾಡುಗಳಿಂದ ಹಿಡಿದು ಒಣ ಮರುಭೂಮಿಗಳವರೆಗೆ, ಪರ್ವತ ಪ್ರದೇಶಗಳಿಂದ ಹಿಡಿದು ಹಳ್ಳಿಗಳವರೆಗೆ ಹಾವುಗಳ ಸಂಚಾರ ಸಾಮಾನ್ಯ. ಆದರೆ, ಭೂಮಿಯ ಮೇಲೆಯೇ ಹಾವುಗಳನ್ನು ಕಾಣದ ಕೆಲವು ಪ್ರದೇಶಗಳಿವೆ ಎಂದರೆ ನಂಬುತ್ತೀರಾ?
ಕೇಳಲು ಅಚ್ಚರಿಯೆನಿಸಿದರೂ ಇದು ಸತ್ಯ. ಜಗತ್ತಿನ ಕೆಲವು ದೇಶಗಳು ಮತ್ತು ದ್ವೀಪಗಳಲ್ಲಿ ಹಾವುಗಳು ಸ್ವಾಭಾವಿಕವಾಗಿ ವಾಸಿಸುವುದಿಲ್ಲ. ಅಲ್ಲಿ ಬದುಕುವ ಜನರಿಗೆ ಹಾವಿನ ಭಯವೇ ಇಲ್ಲ ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಕೇವಲ ಅದೃಷ್ಟವಲ್ಲ; ಪ್ರಕೃತಿಯೇ ಆ ಪ್ರದೇಶಗಳಿಗೆ ವಿಶಿಷ್ಟವಾದ ರಕ್ಷಣೆಯನ್ನು ನೀಡಿದೆ.
ಹಾವುಗಳು ಶೀತ-ರಕ್ತದ ಪ್ರಾಣಿಗಳು. ಅವು ಬದುಕಲು ನಿರ್ದಿಷ್ಟ ಹವಾಮಾನ ಮತ್ತು ಪರಿಸರ ವ್ಯವಸ್ಥೆ ಅಗತ್ಯ. ಅತಿಯಾದ ಚಳಿ, ಭೌಗೋಳಿಕ ಪ್ರತ್ಯೇಕತೆ, ಸಮುದ್ರಗಳಿಂದ ಸುತ್ತುವರಿದ ದ್ವೀಪಗಳ ಸ್ಥಿತಿ ಹಾಗೂ ಕಟ್ಟುನಿಟ್ಟಿನ ಜೈವಿಕ ಭದ್ರತಾ ನಿಯಮಗಳು ಹಾವುಗಳ ವಾಸವನ್ನು ತಡೆಯುತ್ತವೆ. ಹೀಗಾಗಿ ಕೆಲವು ಪ್ರದೇಶಗಳು ಹಾವುಗಳಿಲ್ಲದ ಅಪರೂಪದ ಸ್ಥಳಗಳಾಗಿ ಉಳಿದಿವೆ. ಅವುಗಳನ್ನು ನೋಡುವುದಾದರೆ
1. ಅಲಾಸ್ಕಾ
ಅಮೆರಿಕದ ಉತ್ತರ ತುದಿಯಲ್ಲಿರುವ ಅಲಾಸ್ಕಾ ತನ್ನ ತೀವ್ರ ಚಳಿಗಾಲಕ್ಕೆ ಪ್ರಸಿದ್ಧ. ಇಲ್ಲಿ ವರ್ಷದಲ್ಲಿ ಬಹುತೇಕ ಸಮಯ ಹಿಮ ಆವರಿಸಿರುತ್ತದೆ. ಹಾವುಗಳು ಇಂತಹ ತಣ್ಣನೆಯ ವಾತಾವರಣದಲ್ಲಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಅಲಾಸ್ಕಾದಲ್ಲಿ ಸ್ವಾಭಾವಿಕವಾಗಿ ಯಾವುದೇ ಹಾವಿನ ಜಾತಿಗಳು ಕಂಡುಬರುವುದಿಲ್ಲ.
2. ಹವಾಯಿ
ಪ್ರಶಾಂತ ಮಹಾಸಾಗರದ ಮಧ್ಯದಲ್ಲಿರುವ ಹವಾಯಿ ದ್ವೀಪಗಳು ಹಾವುಗಳಿಲ್ಲದ ಪ್ರದೇಶಗಳಲ್ಲಿ ಒಂದು ಇಲ್ಲಿ ಹಾವುಗಳು ನೆಲೆಸುವುದನ್ನು ಸರ್ಕಾರ ಕಟ್ಟುನಿಟ್ಟಾಗಿ ನಿರ್ಬಂಧಿಸುತ್ತದೆ, ಹಾವುಗಳು ಸ್ಥಳೀಯ ಪಕ್ಷಿಗಳು ಮತ್ತು ಪರಿಸರ ವ್ಯವಸ್ಥೆಗೆ ಅಪಾಯ ಉಂಟುಮಾಡಬಹುದಾದ ಕಾರಣದಿ೦ದ, ಅವುಗಳನ್ನು ತರಲು ಕಠಿಣ ನಿರ್ಬಂಧಗಳಿವೆ.
3. ಕುಕ್ ದ್ವೀಪಗಳು
ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿರುವ ಕುಕ್ ದ್ವೀಪಗಳು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಈ ದ್ವೀಪಗಳ ಭೌಗೋಳಿಕ ಪ್ರತ್ಯೇಕತೆ ಮತ್ತು ಪರಿಸರದ ವಿಶೇಷತೆಗಳಿಂದ ಇಲ್ಲಿ ಹಾವುಗಳು ನೆಲೆಸಿಲ್ಲ. ಹೀಗಾಗಿ ಪ್ರವಾಸಿಗರು ಹಾವುಗಳ ಭಯವಿಲ್ಲದೆ ಪ್ರಕೃತಿಯ ಸೊಬಗನ್ನು ಸವಿಯುತ್ತಾರೆ.
4. ಕೇಪ್ ವರ್ಡೆ
ಪಶ್ಚಿಮ ಆಫ್ರಿಕಾದ ಕರಾವಳಿಯಲ್ಲಿ ಮಧ್ಯ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಒಂದು ದ್ವೀಪಸಮೂಹ ದೇಶ. ಸಮುದ್ರದಿಂದ ಪ್ರತ್ಯೇಕವಾಗಿರುವ ಈ ದ್ವೀಪಗಳಲ್ಲಿ ಹಾವುಗಳ ನೈಸರ್ಗಿಕ ವಾಸಸ್ಥಾನ ರೂಪುಗೊಂಡಿಲ್ಲ. ಇದರಿಂದಾಗಿ ಇಲ್ಲಿ ಹಾವುಗಳ ಕಾಣಿಸಿಕೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆ.
5. ನ್ಯೂಜಿಲ್ಯಾಂಡ್
ಹಾವುಗಳಿಲ್ಲದ ದೇಶಗಳ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ ಅತ್ಯಂತ ಪ್ರಸಿದ್ಧ. ಈ ದೇಶದ ಕಟ್ಟುನಿಟ್ಟಿನ ಜೈವಿಕ ಭದ್ರತಾ ಕಾನೂನುಗಳು ಜಗತ್ತಿನಲ್ಲೇ ಮಾದರಿಯಾಗಿವೆ. ಯಾವುದೇ ಹಾವು ದೇಶದೊಳಗೆ ಪ್ರವೇಶಿಸದಂತೆ ವಿಶೇಷ ನಿಗಾವಹಿಸಲಾಗುತ್ತದೆ. ಪರಿಣಾಮವಾಗಿ, ನ್ಯೂಜಿಲ್ಯಾಂಡ್ ಇಂದು ಹಾವುಗಳಿಲ್ಲದ ಸುರಕ್ಷಿತ ಪರಿಸರವನ್ನು ಉಳಿಸಿಕೊಂಡಿದೆ.
ಪ್ರಕೃತಿಯ ಅಪರೂಪದ ಉಡುಗೊರೆ
ಭೂಮಿಯ ಬಹುತೇಕ ಭಾಗಗಳಲ್ಲಿ ಹಾವುಗಳು ಪರಿಸರ ಸಮತೋಲನ ಕಾಪಾಡುವ ಪ್ರಮುಖ ಜೀವಿಗಳಾಗಿವೆ. ಆದರೆ ಕೆಲವು ದೇಶಗಳು ಮತ್ತು ದ್ವೀಪಗಳು ಪ್ರಕೃತಿಯ ವಿಶಿಷ್ಟ ಕಾರಣಗಳಿಂದ ಹಾವುಗಳಿಲ್ಲದ ಪ್ರದೇಶಗಳಾಗಿ ಉಳಿದಿವೆ. ಅತಿಯಾದ ಚಳಿ, ಸಮುದ್ರಗಳಿಂದ ಉಂಟಾದ ಪ್ರತ್ಯೇಕತೆ ಮತ್ತು ಕಟ್ಟುನಿಟ್ಟಿನ ಸಂರಕ್ಷಣಾ ಕ್ರಮಗಳು ಈ ಅಪರೂಪದ ವೈಶಿಷ್ಟ್ಯಕ್ಕೆ ಕಾರಣವಾಗಿವೆ.
ಹೀಗಾಗಿ, "ಹಾವುಗಳ ಭಯವಿಲ್ಲದ ದೇಶ ಯಾವುದು?" ಎಂಬ ಪ್ರಶ್ನೆಗೆ ಒಂದಲ್ಲ, ಐದು ಉತ್ತರಗಳಿವೆ. ಪ್ರಕೃತಿಯ ಈ ವಿಚಿತ್ರತೆ ನಮಗೆ ಭೂಮಿಯ ವೈವಿಧ್ಯತೆಯ ಮತ್ತೊಂದು ಅದ್ಭುತ ಮುಖವನ್ನು ಪರಿಚಯಿಸುತ್ತದೆ. ಕೆಲವರಿಗೆ ಹಾವುಗಳಿಲ್ಲದ ಈ ದೇಶಗಳು ಕನಸಿನ ತಾಣಗಳಂತೆ ಕಾಣಬಹುದು!
– ತನುಶ್ರೀ ಸಿ. ಕೆ.










