ಯುವಜನರನ್ನು ಭಾರತದ ಸಂಸ್ಕೃತಿ, ಪರಂಪರೆ ಮತ್ತು ಅಭಿವೃದ್ಧಿಯೊಂದಿಗೆ ಬೆಸೆಯುವ ರಾಷ್ಟ್ರೀಯ ಕಾರ್ಯಕ್ರಮ

ಭಾರತವು ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನಶೈಲಿಗಳ ವೈವಿಧ್ಯತೆಯಿಂದ ವಿಶ್ವದ ಗಮನ ಸೆಳೆದಿರುವ ರಾಷ್ಟ್ರವೆಂಬುವುದು ನಮಗೆಲ್ಲ ತಿಳಿದಿರುವ ವಿಚಾರವೇ. ಈ ವೈವಿಧ್ಯತೆಯನ್ನು ಯುವಜನರು ನೇರವಾಗಿ ಅನುಭವಿಸಲು ಭಾರತ ಸರ್ಕಾರ “ಯುವ ಸಂಗಮ್” (Yuva Sangam) ಎಂಬ ವಿಶೇಷ ಕಾರ್ಯಕ್ರಮವನ್ನು ಆರಂಭಿಸಿದೆ. ಇದು “ಏಕ್ ಭಾರತ್ ಶ್ರೇಷ್ಠ ಭಾರತ” (Ek Bharat Shreshtha Bharat – EBSB) ಯೋಜನೆಯಡಿ ಜಾರಿಗೊಂಡಿರುವ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮ.

ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ ಮುನ್ನಡೆಸುತ್ತಿದ್ದು, ಯುವಜನ ವ್ಯವಹಾರಗಳ ಸಚಿವಾಲಯ, ಸಾಂಸ್ಕೃತಿಕ ಸಚಿವಾಲಯ, ಪ್ರವಾಸೋದ್ಯಮ ಸಚಿವಾಲಯ ಹಾಗೂ ರೈಲ್ವೆ ಸಚಿವಾಲಯಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಕಾರ್ಯಕ್ರಮದ ಮುಖ್ಯ ಉದ್ದೇಶವು ಒಂದು ರಾಜ್ಯದ ಯುವಜನರನ್ನು ಮತ್ತೊಂದು ರಾಜ್ಯದೊಂದಿಗೆ ಸಂಪರ್ಕಿಸಿ, ಭಾರತದ ವಿವಿಧ ಭಾಗಗಳ ಸಂಸ್ಕೃತಿ, ಪರಂಪರೆ, ಅಭಿವೃದ್ಧಿ ಮತ್ತು ಜನಜೀವನವನ್ನು ನೇರವಾಗಿ ಪರಿಚಯಿಸುವುದಾಗಿದೆ.

ಯುವ ಸಂಗಮ್ ಎಂದರೇನು?

ಯುವ ಸಂಗಮ್ ದೇಶದ ವಿವಿಧ ರಾಜ್ಯಗಳ ಯುವಜನರನ್ನು ಆಯ್ಕೆ ಮಾಡಿ, ಅವರನ್ನು ಬೇರೆ ರಾಜ್ಯಗಳಿಗೆ ಅಧ್ಯಯನ ಹಾಗೂ ಸಾಂಸ್ಕೃತಿಕ ಪ್ರವಾಸಕ್ಕೆ ಕಳುಹಿಸುವ ಕಾರ್ಯಕ್ರಮವಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಮತ್ತು ಯುವಕರು ಭಾರತದ ವೈವಿಧ್ಯತೆಯನ್ನು ಸಮೀಪದಿಂದ ಅರಿತುಕೊಳ್ಳುವ ಅವಕಾಶ ಪಡೆಯುತ್ತಾರೆ.

ಪ್ರಸ್ತುತ ಈ ಕಾರ್ಯಕ್ರಮವನ್ನು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (NIT), ರೌರ್ಕೆಲಾ ಮತ್ತು ಭಾರತೀಯ ನಿರ್ವಹಣಾ ಸಂಸ್ಥೆ (IIM), ಅಹಮದಾಬಾದ್ ಸಂಯುಕ್ತವಾಗಿ ಆಯೋಜಿಸುತ್ತಿವೆ. ಶಿಕ್ಷಣ ಸಚಿವಾಲಯದ “ಏಕ್ ಭಾರತ್ ಶ್ರೇಷ್ಠ ಭಾರತ” ಯೋಜನೆಯ ಭಾಗವಾಗಿ ನಡೆಯುವ ಈ ಕಾರ್ಯಕ್ರಮವು ಯುವಜನರಲ್ಲಿ ರಾಷ್ಟ್ರೀಯ ಏಕತೆ ಮತ್ತು ಪರಸ್ಪರ ಅರ್ಥೈಸುವಿಕೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಯುವ ಸಂಗಮ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • ವಯಸ್ಸು 18 ರಿಂದ 30 ವರ್ಷಗಳ ನಡುವೆ ಇರಬೇಕು.
  • ಪದವಿ (UG) ಹಾಗೂ ಸ್ನಾತಕೋತ್ತರ (PG) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • NSS, NYKS ಸ್ವಯಂಸೇವಕರು ಹಾಗೂ ಕಾಲೇಜಿನ ಹೊರಗಿನ ಯುವಕರು ಮತ್ತು ಉದ್ಯೋಗದಲ್ಲಿರುವ ಯುವಜನರೂ ಅರ್ಹರಾಗಿರುತ್ತಾರೆ.

ಸಾಂಸ್ಕೃತಿಕ ವಿನಿಮಯ, ರಾಷ್ಟ್ರೀಯ ಏಕತೆ, ನಾಯಕತ್ವ ಮತ್ತು ತಂಡದ ಕಾರ್ಯಗಳಲ್ಲಿ ಆಸಕ್ತಿ ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ

ಯುವ ಸಂಗಮ್ ಕಾರ್ಯಕ್ರಮಕ್ಕೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು.

ಅಧಿಕೃತ ಪೋರ್ಟಲ್‌ಗಳು:

  • mygov.in
  • ekbharat.gov.in
  • aicte-india.org

     

ನೋಂದಣಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು APAAR ID ಅಥವಾ Academic Bank of Credits (ABC) ಬಳಸಿ ತಮ್ಮ ಖಾತೆಯನ್ನು ಸೃಷ್ಟಿಸಬೇಕು. ಬಳಿಕ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರಗಳು ಹಾಗೂ ಆಸಕ್ತಿಯ ಕ್ಷೇತ್ರಗಳಾದ ಸಂಸ್ಕೃತಿ, ಕ್ರೀಡೆ, ತಂತ್ರಜ್ಞಾನ ಮುಂತಾದ ವಿಷಯಗಳನ್ನು ನಮೂದಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ದೇಶದ ವಿವಿಧ ಭಾಗಗಳಿಂದ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತವೆ. ಅವುಗಳಲ್ಲಿ ಕೆಲವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಲಿಂಗ ಸಮತೋಲನ, ವಿವಿಧ ಪ್ರದೇಶಗಳ ಪ್ರತಿನಿಧಿತ್ವ ಹಾಗೂ ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸಲಾಗುತ್ತದೆ.

ಸರ್ಕಾರದಿಂದ ಸಂಪೂರ್ಣ ವೆಚ್ಚ ಭರ್ತಿ

ಯುವ ಸಂಗಮ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ ಆಯ್ಕೆಯಾದ ಪ್ರತಿನಿಧಿಗಳ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವುದು.

ಇದರಲ್ಲಿ:

  • ಹೋಗಿ-ಬರುವ ವಿಮಾನ ಅಥವಾ ರೈಲು ಪ್ರಯಾಣ
  • ವಸತಿ ವ್ಯವಸ್ಥೆ
  • ಆಹಾರ
  • 5 ರಿಂದ 7 ದಿನಗಳ ಅಧ್ಯಯನ ಮತ್ತು ಸಾಂಸ್ಕೃತಿಕ ಪ್ರವಾಸದ ಎಲ್ಲಾ ವೆಚ್ಚಗಳು

ಸೇರಿವೆ. ಇದರಿಂದ ಆರ್ಥಿಕ ಹಿನ್ನೆಲೆಯ ಯಾವುದೇ ಅಡೆತಡೆ ಇಲ್ಲದೆ ಪ್ರತಿಭಾವಂತ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಪ್ರವಾಸದಲ್ಲಿ ಏನು ಕಲಿಯಬಹುದು?

ಈ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು ಆಯಾ ರಾಜ್ಯಗಳ ಶೈಕ್ಷಣಿಕ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ ಭೇಟಿ ನೀಡುತ್ತಾರೆ. ಇದಲ್ಲದೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಆಡಳಿತಾಧಿಕಾರಿಗಳು ಹಾಗೂ ಉದ್ಯಮ ಕ್ಷೇತ್ರದ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ ಅವರ ಅನುಭವಗಳನ್ನು ತಿಳಿದುಕೊಳ್ಳುವ ಅವಕಾಶವೂ ದೊರೆಯುತ್ತದೆ.

ರಾಷ್ಟ್ರೀಯ ಏಕತೆಗೆ ಸೇತುವೆ

ಯುವ ಸಂಗಮ್ ಕೇವಲ ಒಂದು ಪ್ರವಾಸ ಕಾರ್ಯಕ್ರಮವಲ್ಲ. ಇದು ಭಾರತದ ವಿವಿಧ ಸಂಸ್ಕೃತಿಗಳು, ಭಾಷೆಗಳು ಮತ್ತು ಜೀವನಶೈಲಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ವಿವಿಧ ರಾಜ್ಯಗಳ ಯುವಜನರು ಒಟ್ಟಾಗಿ ಸಂವಹನ ನಡೆಸುವುದರಿಂದ ಪರಸ್ಪರ ಗೌರವ, ಅರ್ಥೈಸುವಿಕೆ ಮತ್ತು ರಾಷ್ಟ್ರೀಯ ಏಕತೆಯ ಭಾವನೆ ಮತ್ತಷ್ಟು ಬಲವಾಗುತ್ತದೆ.

ಹೊಸ ಸ್ನೇಹಿತರನ್ನು ಪರಿಚಯಿಸಿಕೊಳ್ಳುವುದು, ವಿಭಿನ್ನ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳುವುದು, ಸ್ಥಳೀಯ ಜೀವನಶೈಲಿಯನ್ನು ಅನುಭವಿಸುವುದು ಹಾಗೂ ಅಭಿವೃದ್ಧಿಯ ಹೊಸ ಮಾದರಿಗಳನ್ನು ಅರಿಯುವುದು ಈ ಕಾರ್ಯಕ್ರಮದ ಪ್ರಮುಖ ಲಾಭಗಳಾಗಿವೆ.

ಆದ್ದರಿಂದ ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ನೇರವಾಗಿ ಅನುಭವಿಸಲು ಬಯಸುವ ಯುವಜನರಿಗೆ ಯುವ ಸಂಗಮ್ ಒಂದು ಅಪೂರ್ವ ಅವಕಾಶವಾಗಿದೆ. ದೇಶದ ವಿವಿಧ ಭಾಗಗಳನ್ನು ಅರಿಯುವ ಮೂಲಕ ಯುವಕರು ಕೇವಲ ಪ್ರವಾಸವನ್ನಷ್ಟೇ ಮಾಡುವುದಿಲ್ಲ, ಬದಲಾಗಿ “ವೈವಿಧ್ಯತೆಯಲ್ಲಿ ಏಕತೆ” ಎಂಬ ಭಾರತದ ಮೂಲ ತತ್ವವನ್ನು ತಮ್ಮ ಅನುಭವದ ಮೂಲಕ ಅರ್ಥಮಾಡಿಕೊಳ್ಳುತ್ತಾರೆ. ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಯುವಜನರಿಗೆ ಯುವ ಸಂಗಮ್ ನಿಜವಾಗಿಯೂ ಜ್ಞಾನ, ಅನುಭವ ಮತ್ತು ರಾಷ್ಟ್ರೀಯ ಏಕತೆಯ ಪಯಣವಾಗಿದೆ.

ತನುಶ್ರೀ ಸಿ . ಕೆ