ಅಭಿಜಿತ್ ಪಾಟೀಲ್: ದೇಶದ ಯುವಕರಿಗೆ ಸ್ಪೂರ್ತಿಯ ದೀಪ

ಇಂದಿನ ಡಿಜಿಟಲ್ ಯುಗದಲ್ಲಿ ಸಮಯ ಅತ್ಯಂತ ಅಮೂಲ್ಯವಾದ ಸಂಪತ್ತು, ಆದರೆ ಇದೇ ಸಮಯವನ್ನು ಅನೇಕರು ಸಾಮಾಜಿಕ ಜಾಲತಾಣಗಳು, ಮನರಂಜನೆ ಮತ್ತು ಅನಗತ್ಯ ವಿಷಯಗಳಿಗೆ ಕಳೆದುಕೊಳ್ಳುತ್ತಿರುವಾಗ, ಇನ್ನು ಕೆಲವರು ಅದೇ ಸಮಯವನ್ನು ತಮ್ಮ ಕನಸುಗಳ ಮೆಟ್ಟಿಲನ್ನಾಗಿ ರೂಪಿಸಿಕೊಳ್ಳುತ್ತಾರೆ. ಅಂತಹ ಯುವಕರಲ್ಲಿ ಒಬ್ಬರು ಅಭಿಜಿತ್ ತುಳಸಿರಾಮ್ ಪಾಟೀಲ್. ಕೇವಲ 22ನೇ ವಯಸ್ಸಿನಲ್ಲೇ ಮೊದಲ ಪ್ರಯತ್ನದಲ್ಲಿ UPSC Civil Services Examination–2022ರಲ್ಲಿ ಆಲ್ ಇಂಡಿಯಾ ರಾಂಕ್ 470 ಪಡೆದು ಭಾರತೀಯ ಪೊಲೀಸ್ ಸೇವೆ (IPS)ಗೆ ಆಯ್ಕೆಯಾಗಿರುವ ಸಾಧನೆ ಇಂದಿನ ಜನರೇಷನ್ ಯುವಕರಿಗೆ ಸ್ಫೂರ್ತಿಯಾಗಿದೆ.

ಮಹಾರಾಷ್ಟ್ರ ಮೂಲದ ಅಭಿಜಿತ್ ಪಾಟೀಲ್ ಅವರು 1999ರ ಜೂನ್ 11ರಂದು ಜನಿಸಿದರು, ಅವರ ಪೋಷಕರೂ ಸರ್ಕಾರಿ ಸೇವೆಯಲ್ಲಿದ್ದರಿಂದ ಬಾಲ್ಯದಿಂದಲೇ ಶಿಸ್ತು, ಶಿಕ್ಷಣ ಮತ್ತು ಕರ್ತವ್ಯದ ಮೌಲ್ಯಗಳನ್ನು ಅರಿತ ವಾತಾವರಣದಲ್ಲಿ ಬೆಳೆದವರು. ಆದರೆ ಅವರ ಯಶಸ್ಸಿನ ಹಿಂದಿನ ನಿಜವಾದ ಕಾರಣ ಕುಟುಂಬದ ಹಿನ್ನೆಲೆ ಮಾತ್ರವಲ್ಲ; ಅದಕ್ಕಿಂತ ಹೆಚ್ಚಾಗಿ ಅವರ ಪರಿಶ್ರಮ, ದೃಢಸಂಕಲ್ಪ ಮತ್ತು ಸಮಯದ ಸದ್ಬಳಕೆ.

ಅಭಿಜಿತ್ ಅವರು ಇಂಜಿನಿಯರಿಂಗ್‌ನಲ್ಲಿ B.Tech ಪದವಿಯನ್ನು ಅಭ್ಯಾಸ ಮಾಡುತ್ತಿದ್ದ ಸಮಯದಲ್ಲೇ UPSC ಪರೀಕ್ಷೆಯ ಕನಸನ್ನು ಕಂಡವರು. ಸಾಮಾನ್ಯವಾಗಿ ವಿದ್ಯಾರ್ಥಿಗಳು ಪದವಿ ಪೂರ್ಣಗೊಂಡ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಿದರೆ ಅಭಿಜಿತ್ ವಿಭಿನ್ನವಾಗಿ ಯೋಚಿಸಿ ಕಾಲೇಜಿನ ಕೊನೆಯ ವರ್ಷದ ಓದು ಮತ್ತು UPSC ತಯಾರಿಯನ್ನು ಸಮತೋಲನವಾಗಿ ನಿರ್ವಹಿಸಿದರು. ಕೆಲವು ವರದಿಗಳ ಪ್ರಕಾರ, ಪದವಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಅವರು UPSC ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ UPSC ಪರೀಕ್ಷೆಗೆ ದುಬಾರಿ ಕೋಚಿಂಗ್ ಸಂಸ್ಥೆಗಳ ಅವಶ್ಯಕತೆ ಇದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಅಭಿಜಿತ್ ಆ ಕಲ್ಪನೆಯನ್ನು ತಪ್ಪು ಎಂದು ಸಾಬೀತುಪಡಿಸಿದ್ದಾರೆ ಯಾವುದೇ ಕೋಚಿಂಗ್ ಸೆಂಟರ್‌ಗೆ ಸೇರದೆ, ಸ್ವಯಂ ಅಧ್ಯಯನದ ಮೂಲಕವೇ ಅವರು ತಮ್ಮ ಸಿದ್ಧತೆಯನ್ನು ನಡೆಸಿ ಪುಸ್ತಕಗಳು, ಅಂತರ್ಜಾಲದಲ್ಲಿ ಲಭ್ಯವಿದ್ದ ಅಧ್ಯಯನ ಸಂಪನ್ಮೂಲಗಳು ಮತ್ತು ನಿರಂತರ ಅಭ್ಯಾಸದಿಂದಲೇ UPSC ಯಲ್ಲಿ ಉತ್ತೀರ್ಣಗೊಂಡು ಪೊಲೀಸ್ ಆಫೀಸರ್ ಆಗಿ ಸೇವೆಗೆ ಸೇರಿರುವುದು ನಮಗೆಲ್ಲ ಸ್ಫೂರ್ತಿದಾಯಕ ವಿಷಯ. 

ಯಶಸ್ಸು ಎಂದರೆ ಕೇವಲ ಪ್ರತಿಭೆಯ ಫಲವಲ್ಲ; ಅದು ನಿರಂತರ ಪರಿಶ್ರಮದ ಪ್ರತಿಫಲವೂ ಹೌದು. ಅಭಿಜಿತ್ ಸುಮಾರು ಎಂಟು ತಿಂಗಳ ಕಾಲ ಪ್ರತಿದಿನ ಎಂಟು ಗಂಟೆಗಳಿಗಿಂತ ಹೆಚ್ಚು ಸಮಯವನ್ನು UPSC ತಯಾರಿಗೆ ಮೀಸಲಿಡುತ್ತಿದ್ದರು. ಈ ಅವಧಿಯಲ್ಲಿ ಅವರು ತಮ್ಮ ಗುರಿಯತ್ತ ಸಂಪೂರ್ಣ ಏಕಾಗ್ರತೆಯಿಂದ ಸಾಮಾಜಿಕ ಜಾಲತಾಣಗಳ ಆಕರ್ಷಣೆ, ಮನರಂಜನೆಯ ವ್ಯಸ್ತತೆಗಳು ಅಥವಾ ಯಾವುದೇ ಶಾರ್ಟ್‌ಕಟ್‌ಗಳ ಮೇಲೆ ಅವಲಂಬಿತರಾಗದೆ, ಶಿಸ್ತಿನ ಜೀವನಶೈಲಿಯನ್ನು ಅಳವಡಿಸಿಕೊಂಡು ಈ ಸಾದನೆಯನ್ನು ಮಾಡಿದ್ದಾರೆ.

ಅಭಿಜಿತ್ ಪಾಟೀಲ್ ಅವರ ಕಥೆ ಕೇವಲ ಒಬ್ಬ ಯುವ ಅಧಿಕಾರಿಯ ಯಶೋಗಾಥೆಯಲ್ಲ. ಅದು ಪ್ರತಿಯೊಬ್ಬ ಕನಸುಗಾರನಿಗೂ ಒಂದು ಸಂದೇಶ. ಯಶಸ್ಸು ಸಾಧಿಸಲು ದುಬಾರಿ ಕೋಚಿಂಗ್, ವಿಶೇಷ ಸೌಲಭ್ಯಗಳು ಅಥವಾ ಅದೃಷ್ಟದ ಅವಶ್ಯಕತೆ ಇಲ್ಲ. ಸ್ಪಷ್ಟ ಗುರಿ, ಕಠಿಣ ಪರಿಶ್ರಮ, ಸಮಯದ ಸರಿಯಾದ ಬಳಕೆ ಮತ್ತು ನಿರಂತರ ಶಿಸ್ತು ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ.

ಇಂದಿನ ಯುವಕರು ಅಭಿಜಿತ್ ಅವರ ಜೀವನದಿಂದ ಒಂದು ಮಹತ್ವದ ಪಾಠವನ್ನು ಕಲಿಯಬಹುದು – ಸಮಯವನ್ನು ವ್ಯರ್ಥ ಮಾಡದೆ ಗುರಿಯತ್ತ ಹೆಜ್ಜೆ ಇಟ್ಟರೆ, ಕನಸುಗಳು ಕೇವಲ ಕನಸುಗಳಾಗಿಯೇ ಉಳಿಯುವುದಿಲ್ಲ; ಅವು ವಾಸ್ತವವಾಗುತ್ತವೆ. ಯಶಸ್ಸಿನ ದಾರಿ ಸುಲಭವಲ್ಲ, ಆದರೆ ನಿರಂತರ ಪ್ರಯತ್ನ ಮಾಡುವವರಿಗೆ ಅದರ ಫಲ ಖಂಡಿತವಾಗಿಯೂ ದೊರೆಯುತ್ತದೆ. “ಅದೃಷ್ಟಕ್ಕಿಂತ ಪರಿಶ್ರಮ ದೊಡ್ಡದು, ಕನಸಿಗಿಂತ ಗುರಿ ದೊಡ್ಡದು, ಮತ್ತು ಗುರಿಗಿಂತ ಅದನ್ನು ಸಾಧಿಸುವ ದೃಢಸಂಕಲ್ಪವೇ ಅತ್ಯಂತ ದೊಡ್ಡದು.”

 

– ತನುಶ್ರೀ ಸಿ. ಕೆ