ಚಾರಣಿಗರ ತಾಣ ಎತ್ತಿನಭುಜ

    ಸಾಮಾನ್ಯವಾಗಿ ಎಲ್ಲಾ ಉದ್ಯೋಗಸ್ಥರೂ ಭಾನುವಾರ ಎಂಬ ರಿಲೀಫ್ ಡೇ ಗಾಗಿ ಕಾಯುತ್ತಿರುತ್ತಾರೆ. ಅದು ವಿರಾಮಕ್ಕಿರಬಹುದು, ಮೋಜಿಗಿರಬಹುದು, ಅತೀ ನಿದ್ದೆಗಿರಬಹುದು ಅಥವಾ ಎಲ್ಲಾದರೂ ಸುತ್ತಾಟಕ್ಕಿರಬಹುದು. ಅದರಲ್ಲೂ ನಾಲ್ಕಾರು ಜನರೊಂದಿಗೆ ಸುತ್ತ-ಮುತ್ತ ಇರುವ ಯಾವುದಾದರೂ ರಮಣೀಯ ಸ್ಥಳಗಳಿಗೆ ಹೋಗುವುದೆಂದರೆ ಆ ದಿನವನ್ನು ಬರಮಾಡಿಕೊಳ್ಳುವ ಆತುರತೆಯೇ ನಮ್ಮ ಮನಕ್ಕೆ ಹೊಕ್ಕಿರುತ್ತದೆ. ಅಂತೆಯೇ ನಾನೂ ಸಹ ಆ ದಿನವನ್ನು ಎದುರು ನೋಡುತ್ತಿದ್ದೆನು ಅಂತೂ ಆ ದಿನ ಬಂದೇ ಬಿಟ್ಟಿತು. ಅಂದೊಂದು ಭಾನುವಾರ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂಧಿಗಳು ತಮ್ಮ ಶೈಕ್ಷಣಿಕ ವರ್ಷದ ಪಿಕ್ನಿಕ್‍ ಆಯೋಜಿಸಿದ ದಿನ. ಈ ವರ್ಷದ ನಮ್ಮ ಪಿಕ್ನಿಕ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ ಬೆಟ್ಟ ಹಾಗೂ ಎತ್ತಿನ ಭುಜ ಎಂದು ನಿರ್ಧರಿತವಾಗಿತ್ತು. ಅತೀ ಉತ್ಸಾಹದಿಂದ ಆ ದಿನ ಮುಂಜಾನೆ ನಾವು ಬೇಗನೆ ನಮ್ಮ ಕಾಲೇಜಿನ ಎದುರುಗಡೆ ಬಂದು ಸೇರತೊಡಗಿದೆವು. ಪ್ರವಾಸಕ್ಕೆ ಹೊರಡಲು ನಾವು ನಿರ್ಧರಿಸಿದ ಸಮಯ ಮುಂಜಾನೆ 6.45 ಆದರೆ ನಮ್ಮ ಸಹಜ ವಿಳಂಬ ನೀತಿಯಂತೆ ಎಲ್ಲರೂ ಸೇರಿ ವಾಹನ ಏರಿದಾಗ 7.20 ದಾಟಿತ್ತು ಅಷ್ಟೇ. 1 ವಾಹನದಲ್ಲಿ 34 ಬೋಧಕ-ಬೋಧಕೇತರ ಬಂಧುಗಳೊಂದಿಗೆ ನಮ್ಮ ಪ್ರವಾಸ ಎಲ್ಲಿಯೂ ಪ್ರಯಾಸ ಆಗದಿರಲೆಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಉಜಿರೆ-ಮುಂಡಾಜೆ-ಚಾರ್ಮಾಡಿ ಮಾರ್ಗವಾಗಿ ನಮ್ಮ ಪಯಣ ಸಾಗಿತ್ತು. ಸುಮಾರು 2-3 ಗಂಟೆಗಳ ಪಯಣ. ನಮ್ಮ ಬಸ್ಸಿನಲ್ಲಿ ಹಳೆ ಬೇರು ಹೊಸ ಚಿಗುರು ಎಂಬಂತೆ ಹಿರಿಯ ಹಾಗೂ ಕಿರಿಯ ಉಪನ್ಯಾಸಕರ ಸಮ್ಮಿಳಿತವಿತ್ತು. ಪ್ರಯಾಣದ ಸಮಯದಲ್ಲಿ ಸುಮ್ಮನೆ ಕುಳಿತು ಪಯಣಿಸುವುದಕ್ಕಿಂತ ಬಸ್ಸಿನ ನಡುವಿರುವ ಕಿರು ಜಾಗವನ್ನೇ ನಮ್ಮಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನಾಗಿಸಲಾಯಿತು.ಹಿರಿಯ-ಕಿರಿಯ, ಬೋಧಕ, ಬೋಧಕೇತರ ಎಂಬ ಯಾವುದೇ ಭೇದ-ಭಾವವಿಲ್ಲದೇ ವಿವಿಧ ಮನೋರಂಜನಾ ಚಟುವಟಿಕೆಗಳು ನಡೆಯುತ್ತಿದ್ದವು. ಚಾರ್ಮಾಡಿ ಘಾಟ್ ಪ್ರವೇಶಿಸಿದಾಕ್ಷಣ ಪ್ರಕೃತಿಯ ರಮ್ಯತೆಯನ್ನು ಆಸ್ವಾದಿಸುತ್ತಾ ಚುಮು-ಚುಮು ಚಳಿಯ ಹಿತಾನುಭವ ನಮ್ಮನ್ನು  ಬೇರೆಯದೇ ಲೋಕಕ್ಕೆ ಕರೆದೊಯ್ಯಿತು. ಕೊಟ್ಟಿಗೆಹಾರ ಮಾರ್ಗವಾಗಿ ಸುಮಾರು 15-16 ಕಿ.ಮೀ. ಬಲಕ್ಕೆ ತಿರುಗಿದರೆ ದೇವರಮನೆ ಬೆಟ್ಟಕ್ಕೆ  ಕಿರಿದಾದ ಏರಿಳಿತದ ಹಾದಿ ಸಿಗುತ್ತದೆ.ಪಶ್ಚಿಮ ಘಟ್ಟಗಳ ಸಾಲು, ಸಾಲು ಬೆಟ್ಟ-ಗುಡ್ಡಗಳ ನಡುವೆ ನಮ್ಮ ವಾಹನ ಸಾಗುವಾಗ ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವುದೇ ಒಂದು ರೋಚಕ ಅನುಭವ. ದಾರಿ ಮಧ್ಯೆ ಕಾಫಿ ತೋಟದ ನಡುವೆ ಪೂರ್ವ ನಿಗದಿಯಂತೆ ನಮ್ಮ ಉಪಾಹಾರವನ್ನು ಮುಗಿಸಿ ಮತ್ತೆ ಪ್ರಯಾಣ ಮುಂದುವರಿಸಿದೆವು. ಅಂತೂ ನಮ್ಮ ಮೊದಲ ತಾಣ ದೇವರಮನೆ ಬೆಟ್ಟ ತಲುಪಿದೆವು. ಅಲ್ಲೊಂದು ಸುಂದರ ಸಂಪೂರ್ಣ ಕಲ್ಲಿನಲ್ಲಿಯೇ ಕಟ್ಟಿದ ಕಾಲಭೈರವೇಶ್ವರ ದೇವಸ್ಥಾನ, ಹೊರಗಡೆ ಎಷ್ಟೇ ಬಿಸಿಲ ಝಳವಿದ್ದರೂ ದೇವಸ್ಥಾನದ ಒಳಗಡೆ ಮಾತ್ರ ಸಂಪೂರ್ಣ ಶೀತಮಯ ಎನಿಸುವಷ್ಟು ತಂಪಾದ, ಆಹ್ಲಾದ ವಾತಾವರಣ.                          ಕಾಲಭೈರವೇಶ್ವರನಿಗೆ ನಮಸ್ಕರಿಸಿ ಅಲ್ಲಿಯೇ ಇರುವ ಬೆಟ್ಟವನ್ನು ಹತ್ತಲು ಆರಂಭಿಸಿದೆವು.ಅದ್ಭುತ ಸೌಂದರ್ಯ!! ಒಂದೆಡೆ ಎತ್ತರದ ಬೆಟ್ಟಗಳ ಸಾಲು, ಇನ್ನೊಂದೆಡೆ ಅಷ್ಟೇ ಆಳವಾದ ಕಂದಕಗಳ ಸಾಲು, ನೋಡಿಯೇ ಅನುಭವಿಸಬೇಕು. ಎಂತಹ ಬಿಸಿಲ ಝಳವಾದರೂ ಒಂದಿನಿತು ಬೆವರು ಬರದು.ಕಾರಣ ಅಷ್ಟು ಗಾಳಿ ಬೀಸುತ್ತಿರುತ್ತದೆ. ಎಲ್ಲರೂ ಪ್ರಕೃತಿಯ ಸೌಂದರ್ಯದ ಜೊತೆಗೆ ತಮ್ಮ ಸೌಂದರ್ಯವನ್ನು ಒರೆಗೆ ಹಚ್ಚುವರೋ ಎಂಬಂತೆ ಸ್ವಚಿತ್ರ (ಸೆಲ್ಫಿ) ತೆಗೆಯುವುದರಲ್ಲಿಯೇ ಮಗ್ನರಾಗಿದ್ದರು. ಅಂತೂ ಮನಸೋ ಇಚ್ಛೆ ಅಲ್ಲಿ ಸುತ್ತಾಡಿದ ನಂತರ ನಮ್ಮ ಇನ್ನೊಂದು ತಾಣವಾದ ಎತ್ತಿನಭುಜದತ್ತ, ಪ್ರಯಾಣಿಸಿದೆವು.ದೇವರಮನೆ ಕಾಡಿನಿಂದ ಸುಮಾರು 25 ಕಿ.ಮೀ.ಮೂಡಿಗೆರೆ-ಭೈರಾಪುರ ಮಾರ್ಗವಾಗಿ ಚಲಿಸಬೇಕು.ಎತ್ತಿನಭುಜ ಗಿರಿ ಸಮೀಪಿಸುತ್ತಿರುವುದು ದೂರದಿಂದಲೇ ಗೋಚರವಾಯಿತು. ಈ ಗಿರಿಗಿಂತ ಸರಿಸುಮಾರು 2-3 ಕಿ.ಮೀ. ಹಿಂದೆಯೆ ನಾಣ್ಯಭೈರವ ದೇವಸ್ಥಾನ ಇದೆ. ಇಲ್ಲಿಯೇ ವಾಹನ ನಿಲ್ಲಿಸಿ ಎತ್ತನಭುಜಕ್ಕೆ ಚಾರಣ ಹೋಗಬೇಕು.ದೇವಸ್ಥಾನದ ಪರಿಸರದಲ್ಲಿ ನಾವು ತೆಗೆದುಕೊಂಡು ಹೋದ ಊಟವನ್ನು ಮುಗಿಸಿ ಚಾರಣಕ್ಕೆ ಅಣಿಯಾದೆವು. ಕಲ್ಲು-ಮುಳ್ಳುಗಳ ದುರ್ಗಮವಾದ ಕಾಡುಹಾದಿ, ದೂರದಲ್ಲೆಲ್ಲೊ ಎತ್ತರವಾದ ಶಿಖರ ಕಾಣಿಸುತ್ತದೆ. ಆ ಶಿಖರದ ತುತ್ತತುದಿ ಎರಬೇಕೆಂದರೆ ಏಂಟೆದೆ ಬೇಕು ಅನಿಸುತ್ತದೆ. ಅಂತಹ ಕಲ್ಲಿನ ಶಿಖರವದು. ಪ್ರಾರಂಭದಲ್ಲಿ ಬೆಟ್ಟ ಏರುವಲ್ಲಿರುವ ಉತ್ಸಾಹ, ಬೆಟ್ಟ ಏರುತ್ತಿರುವಂತೆ ಕುಸಿಯತೊಡಗುತ್ತದೆ.ಎಷ್ಟು ಏರಿದರೂ ಮುಗಿಯದು. ಕೆಲವರು ಸುಸ್ತಾಗಿ ಅರ್ಧದಲ್ಲಿಯೇ ಕುಳಿತರೆ, ಇನ್ನು ಕೆಲವರಿಗೆ ಏನೇ ಆದರೂ ಸಂಪೂರ್ಣವಾಗಿ ಶಿಖರದ ತುತ್ತತುದಿಯನ್ನು ಏರಬೇಕೆನ್ನುವ ಛಲ. ಶಿಖರದ ತುತ್ತತುದಿಗೆ ತಲುಪುತ್ತಿದ್ದಂತೆ ಬಹಳ ಜಾಗರೂರಕವಾದ ನಡಿಗೆ ಬೇಕಾಗುತ್ತದೆ. ಸ್ವಲ್ಪ ಆಯ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಅಂತೂ ನಮಗಿರುವ ಎಲ್ಲಾ ಕೈ-ಕಾಲುಗಳನ್ನು ಬಳಸಿ ಶಿಖರದ ತುತ್ತ ತುದಿಯನ್ನೇರಿದೆವು. ಅಲ್ಲಿಂದ ಕೆಳಗೆ ನಾವು ಶಿಖರವೇರಿದ ದಾರಿಯನ್ನು ಒಮ್ಮೆ ನೋಡಿದರೆ, ಮೈ ಎಲ್ಲಾ ಝುಂ ಎನ್ನುತ್ತದೆ. ಅಂತಹ ಎತ್ತರದ ಶಿಖರವದು. ದೂರದಿಂದ ನೋಡಿದಾಗ ಮಲಗಿರುವ ಎತ್ತಿನ ಭುಜದ ರೀತಿ ಈ ಬೆಟ್ಟ ಕಾಣುವುದರಿಂದ ಆ ರೀತಿಯ ಹೆಸರು ಬಂದಿದೆ. ಚಾರಣಕ್ಕೆ ಹೇಳಿ ಮಾಡಿಸಿದ ತಾಣವದು. ಅತೀ ಎತ್ತರದಿಂದ ನಿಂತು ಸುತ್ತ-ಮುತ್ತ ಕಾಣುವ ಊರುಗಳನ್ನು, ಇನ್ನಿತರ ಗಿರಿ ಶಿಖರಗಳನ್ನು ನೋಡುತ್ತಾ ನಿಂತರೆ ಮೈ ಎಲ್ಲಾ ಮರೆತು ಹೋಗುತ್ತದೆ. ನಮ್ಮಲ್ಲಿರುವ ಕೆಲವು ಹಿರಿಯ ಪ್ರಾಧ್ಯಾಪಕರೂ, 5-6 ವಯಸ್ಸಿನ ಅತೀ ಚಿಕ್ಕ ಮಕ್ಕಳೂ  ಅತ್ಯುತ್ಸಾಹದಿದಂದ  ಶಿಖರದ ತುತ್ತತುದಿಯನ್ನು ಏರಿ, ನಿಸರ್ಗದ ಸವಿಯನ್ನು ಸವಿದಿದ್ದು ಅತೀವ ಸಂತಸವನ್ನು ತಂದಿತ್ತು.ಒಂದೆಡೆ ಸುಡುವ ಬಿಸಿಲು, ಇನ್ನೊಂದೆಡೆ ಹಿತವಾದ ಗಾಳಿಯು ಸೇರಿ ನಮ್ಮ ಪ್ರಯಾಸವನ್ನು ಮರೆಸಿದ್ದವು. ಸಮಯ ಕಳೆದದ್ದು ಗೊತ್ತೇ ಆಗಲಿಲ್ಲ. ನಿಧಾನವಾಗಿ ಏರಿದ ಗಿರಿಯನ್ನು ಇಳಿಯಲು ಆರಂಭಿಸಿದೆವು. ಆ ಕಾನನದಲ್ಲಿ ಆನೆ ಇದೆ ಎಂಬ ಮಾತನ್ನು ಕೇಳಿದ್ದೆವು. ನಮಗೆ ಕಾಣಿಸಿದ ಕೆಲವು ಕುರುಹುಗಳು ಸಹ ಆ ಮಾತನ್ನು ಪುಷ್ಟೀಕರಿಸಿದವು. ಆದ್ದರಿಂದ ಬೇಗ-ಬೇಗನೆ ನಾವು ಬಸ್ಸು ನಿಲ್ಲಿಸಿದ ಸ್ಥಳದತ್ತ ಬಂದು ಸೇರಿದೆವು. ವಾಹನ ಏರಿ ಬರುವಾಗಲೂ ನಮ್ಮ ಮನಸ್ಸಿನಲ್ಲಿ ಎತ್ತಿನಭುಜದಂತಹ ನೈಸರ್ಗಿಕ ಪ್ರಕೃತಿಯ ವಿಸ್ಮಯ, ನಿಗೂಢತೆ, ರಮ್ಯತೆಯೇ ನಮ್ಮನ್ನು ಆವರಿಸಿತ್ತು. ಇಂತಹ ನೈಸರ್ಗಿಕ ಸೌಂದರ್ಯಗಳು ಅಭಿವೃದ್ಧಿಯ ಹೆಸರಲ್ಲಿ ಅಳಿವಿನಂಚಿನಲ್ಲಿರುವುದು ಸ್ಮೃತಿಪಟಲದಲ್ಲಿ ಬಂದಾಗ ಖೇದ ಆಗದೇ ಇರದು. ಅಭಿವೃದ್ಧಿಗಾಗಿ ನೈಸರ್ಗಿಕ ಸಂಪತ್ತನ್ನು, ಪ್ರಕೃತಿಯ ಸಮತೋಲನವನ್ನು ಹಾಳು ಮಾಡುವುದು ಎಷ್ಟು ಸರಿ ಎಂಬ ವಿಚಾರವೇ ನನ್ನಲ್ಲಿ ಆವರಿಸಿದ್ದರಿಂದ, ಬಸ್ಸಿನಲ್ಲಿ ನಡೆಯುತ್ತಿದ್ದ ಸಂಗೀತ ಕಾರಂಜಿ ಹಾಗೂ ಉಜಿರೆ  ತಲುಪಿದ್ದು ಅರಿವಿಗೇ ಬರಲಿಲ್ಲ. ಉಜಿರೆ ತಲುಪಿದಾಗ ಈ ಪಿಕ್ನಿಕ್‍ಗೆ ಸಹಕರಿಸಿದ ಎಲ್ಲಾ ಹಿರಿ-ಕಿರಿಯ ಪ್ರಾಧ್ಯಾಪಕರನ್ನೂ, ಬೋಧಕೇತರ ಬಂಧುಗಳನ್ನೂ  ವಂದಿಸಿ, ನಮ್ಮೆಲ್ಲರ ಸಂಗೀತ, ನೃತ್ಯಗಳಂತಹ ಅಡಚಣೆಗಳ ನಡುವೆಯೂ ಅತ್ಯಂತ ದುರ್ಗಮವಾದ ದಾರಿಯಲ್ಲಿ ಅತೀ ಸುರಕ್ಷಿತವಾಗಿ ವಾಹನ ಚಲಾಯಿಸಿದ ಚಾಲಕರನ್ನೂ ಮನಃಪೂರ್ವಕವಾಗಿ ವಂದಿಸಿ ನಮ್ಮ-ನಮ್ಮ ಸ್ಥಳಗಳತ್ತ ಹೊರಟೆವು. ದಣಿದಿದ್ದರಿಂದ ಬೇಗನೆ ಮಲಗಿದರೂ ಸಹ, ನೈಸರ್ಗಿಕವಾಗಿ ಬೆಟ್ಟಗಳ ರಚನೆ, ಪ್ರಕೃತಿಯ ಅಗಾಧ ರಮ್ಯತೆ, ಸಹಜ ಸೌಂದರ್ಯ, ಮಾನವನ ಅಭಿವೃದ್ಧಿಯ ದಾಹಕ್ಕೆ ನೈಸಗಿಕ ಅಸಮತೋಲನ, ಅದಕ್ಕೆ ಪ್ರಕೃತಿ ಕೊಡುವ ಪ್ರತ್ಯುತ್ತರ ಇತ್ಯಾದಿ ಗೊಂದಲದ ಪ್ರಶ್ನೆಗಳೇ ನನ್ನ ನಿದ್ರೆಯನ್ನು ಕಸಿದವು. ಹೀಗೆ ನಮ್ಮ ರಿಲೀಫ್  ಡೇ ಭಾನುವಾರ ಒಂದು ಮೌಲ್ಯಯುತ ದಿನವಾಗಿ ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿಯವಂತೆ ಮಾಡಿದ ನಮ್ಮ ಸಂಸ್ಥೆಯ ಎಲ್ಲ ಹಿರಿಯ ಪ್ರಾಧ್ಯಾಪಕರನ್ನೂ, ಸಹಕರಿಸಿದ ಎಲ್ಲರನ್ನೂ ಮನಸಾರೆ ವಂದಿಸುತ್ತೇನೆ   

 

ಲಕ್ಷ್ಮೀಶ ಭಟ್ಟ
ಉಪನ್ಯಾಸಕರು, ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜು, ಉಜಿರೆ