ಇರುವೆಯ ನಿದ್ದೆಯೆಷ್ಟು ಗೊತ್ತೇ?

   ಇರುವೆಯು ಪ್ರಾಣಿಶಾಸ್ತ್ರದ  ವರ್ಗೀಕರಣದ ಪ್ರಕಾರ ‘ಹೈಮೆನೋಪೆಟ್ರಾ’  ವರ್ಗದಲ್ಲಿ ‘ಫಾರ್ಮಿಸೀಡೇ’ ಕುಟುಂಬಕ್ಕೆ ಸೇರಿದ ಜೀವಿಯಾಗಿದೆ. ಕಣಜ ಮತ್ತು ದುಂಬಿಗಳೂ ಈ ವರ್ಗಕ್ಕೇ ಸೇರಿದ ಜೀವಿಗಳಾಗಿದ್ದು, ಇರುವೆಗಳಲ್ಲಿ ೧೨,೦೦೦ಕ್ಕೂ ಅಧಿಕ ವಿಧಗಳಿವೆ. ಉಷ್ಣ ವಲಯದಲ್ಲಿ ಇರುವೆಗಳ ಪ್ರಭೇದ ಉಳಿದೆಡೆಗಿಂತ ಹೆಚ್ಚಿದ್ದು, ಇರುವೆಗಳು ತಮ್ಮ ಕಟ್ಟುನಿಟ್ಟು ಮತ್ತು ಶಿಸ್ತುಬದ್ಧ ಕುಟುಂಬ ಜೀವನ ಕ್ರಮಕ್ಕೆ ಹೆಸರಾಗಿವೆ. ಇರುವೆಗಳ ಒಂದು ಗೂಡಿನಲ್ಲಿ ಕಲವೊಮ್ಮೆ ಲಕ್ಷಾಂತರ ಇರುವೆಗಳೂ ನೆಲೆಸುವ ಕ್ರಮವಿದೆ.
ಇರುವೆಯ ವಿಕಾಸ
     ಸಂಶೋಧನೆಗಳ ಪ್ರಕಾರ ಇರುವೆಯು ಕಣಜದ ಹುಳುಗಳಿಂದ ವಿಕಸನಗೊಂಡ ಪ್ರಾಣಿಯಾಗಿದ್ದು, ಸುಮಾರು ೧೨೦ ರಿಂದ ೧೭೦ ದಶಲಕ್ಷ ವರ್ಷಗಳ ಹಿಂದೆ ಇರುವೆಯು ಕಣಜದಿಂದ ಪ್ರತ್ಯೇಕಗೊಂಡು ಹೊಸ ತಳಿಯ ಸ್ವತಂತ್ರ ಜೀವಿಯಾಗಿ ವಿಕಸನ ಹೊಂದಿತೆಂದು ಪ್ರತೀತಿಯಿದೆ. ೧೦೦ ದಶಲಕ್ಷ ವರ್ಷಗಳ ಹಿಂದೆ ನೆಲದ ಮೇಲೆ ‘ಆಂಗಿಯೋಸ್ಪರ್ಮ್’ ಸಸ್ಯಗಳ ವಿಕಸನವಾದ ನಂತರ ಇರುವೆಗಳು ತೀವ್ರವಾಗಿ ಅಭಿವೃದ್ಧಿ ಹೊಂದಿ, ಹೊಸ ಹೊಸ ತಳಿಗಳ ರೂಪದಲ್ಲಿ ಭೂಮಿಯ ಬಹುತೇಕ ಪ್ರದೇಶಗಳಲ್ಲಿ ವ್ಯಾಪಿಸಿದುವು. ಇರುವೆ ಮತ್ತು ಕಣಜಗಳ ಸಂಬಂಧಕ್ಕೆ ೮೦ ದಶಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆಯೂ ಪುಷ್ಟಿ ಕೊಡುತ್ತದೆ.
     ಇರುವೆಗಳ ನಿದ್ರೆಯ ಚಕ್ರದ ಕುರಿತ ಇತ್ತೀಚಿನ ಅಧ್ಯಯನದ ಪ್ರಕಾರ ಒಂದು ಕೆಲಸಗಾರ ಇರುವೆ ಪ್ರತಿದಿನ ಸರಾಸರಿ ೨೫೦ ಬಾರಿ ನಿದ್ರೆಗಳನ್ನು ಮಾಡುತ್ತದೆ ಎಂದು ಗೊತ್ತಾಗಿದೆ. ಪ್ರತಿಯೊಂದೂ ನಿದ್ದೆಯು ಕೇವಲ ಒಂದು ನಿಮಿಷಕ್ಕಿಂತ ತುಸು ಹೆಚ್ಚಷ್ಟೇ ಇದ್ದು, ಇದು ದಿನಕ್ಕೆ ೪ ಗಂಟೆ ೪೮ ನಿಮಿಷಗಳ ನಿದ್ರೆಯನ್ನು ಒಟ್ಟುಗೂಡಿಸುತ್ತದೆ. ೮೦% ಕೆಲಸಗಾರ ಇರುವೆಗಳು ಎಲ್ಲಾ ಸಮಯದಲ್ಲೂ ಎಚ್ಚರವಾಗಿದ್ದು, ಸಕ್ರಿಯವಾಗಿರುತ್ತವೆ.
      ಮನುಷ್ಯ, ಪ್ರಾಣಿ, ಪಕ್ಷಿಗಳು ಹಾಗೂ ಜಲಚರಗಳು ನಿದ್ರೆ ಮಾಡುವುದು ಸಾಮಾನ್ಯ. ದಣಿದ ಪ್ರತಿಯೊಂದು ಹೃದಯವೂ ನಿದ್ರೆಯನ್ನು ಬಯಸುತ್ತವೆ. ನಿದ್ರೆ ಮಾಡುವ ಮೂಲಕ ವಿಶ್ರಾಂತಿ ಪಡೆಯಲಾಗುತ್ತದೆ. ಆದರೆ ಅತ್ಯಂತ ಸಕ್ರಿಯ ಇರುವೆಗಳು ನಿದ್ರೆ ಮಾಡುವುದಿಲ್ಲ. ಅದಕ್ಕೊಂದು ಕಾರಣವಿದ್ದು, ಅನೇಕ ಕೀಟಗಳಂತೆ, ಇರುವೆಗಳು ಕೇಂದ್ರೀಕೃತ ನರಮಂಡಲ ವ್ಯವಸ್ಥೆಯನ್ನು ಹೊಂದಿಲ್ಲವಾದ್ದರಿಂದ ಮನುಷ್ಯ ಮತ್ತು ಪ್ರಾಣಿಗಳಂತೆ ಇರುವೆಗಳು ನಿದ್ರೆ ಮಾಡುವುದಿಲ್ಲ. ಇರುವೆಗಳು ಕೇಂದ್ರೀಕೃತ ನರಮಂಡಲ ವ್ಯವಸ್ಥೆಯ ಬದಲಿಗೆ ‘ಗ್ಯಾಂಗ್ಲಿಯಾ’ ಸಮೂಹವನ್ನು ಹೊಂದಿದ್ದು, ಇವುಗಳನ್ನು ನರಕೋಶಗಳೆಂದು ಕರೆಯಲಾಗುತ್ತದೆ. ಇವು ಇರುವೆಯ ದೇಹದಾದ್ಯಂತ ಇದ್ದು, ಇವುಗಳ ನಿದ್ರೆಯ ಮಾದರಿಗಳು ವಿಭಿನ್ನವಾಗಿವೆ.
    ಇರುವೆಗಳು ಮಲಗುವ ಬದಲು ವಿಶ್ರಾಂತಿ ಪಡೆಯುತ್ತವೆ ಮತ್ತು ಆ ವೇಳೆಗೆ ಅವು ಸಕ್ರಿಯವಾಗಿರುವುದಿಲ್ಲ. ಇದನ್ನು ಒಂದು ರೀತಿಯ ನಿದ್ರೆ ಎನ್ನಬಹುದು. ಇವುಗಳು ನಿದ್ರಿಸುತ್ತಿರುವ ವೇಳೆಗೆ ಅವುಗಳು ಪರಸ್ಪರ ಸಂಬಂಧ ಹೊಂದಿರುವುದಿಲ್ಲ ಮತ್ತು ಶತ್ರುಗಳು ಇವುಗಳ ಮೇಲೆ ದಾಳಿ ಮಾಡಿದರೂ ಅಥವಾ ಆಹಾರವು ಒಂದು ನಿರ್ದಿಷ್ಟ ಸ್ಥಳದಲ್ಲಿದೆ ಎಂದು ತಿಳಿದಿದ್ದರೂ, ಇರುವೆಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ವೇಳೆ ಯಾವುದೇ ಪ್ರತಿಕ್ರಿಯೆ ತೋರುವುದಿಲ್ಲ. ನಾವು ನಿರಂತರವಾಗಿ ನಿದ್ರೆ ಬಿಟ್ಟರೆ ಹೇಗೆ ಸಾಯಬಹುದೋ ಅದೇ ರೀತಿ ಇರುವೆಗಳು ವಿಶ್ರಾಂತಿ ಪಡೆಯದಿದ್ದರೆ ಸಾಯುತ್ತವೆ. ಇರುವೆಗಳು ವಿಶ್ರಾಂತಿ ಸಮಯದಲ್ಲಿ ಶಕ್ತಿಯನ್ನು ಉಳಿಸಿಕೊಂಡು ಅಗತ್ಯವಿದ್ದಾಗ ತನ್ನ ಶಕ್ತಿಯನ್ನು ಬಳಸಿಕೊಳ್ಳುತ್ತದೆ.
ಇರುವೆಗಳು ತಮ್ಮ ಸಾಮ್ರಾಜ್ಯದಲ್ಲಿ ಇತರ ಇರುವೆಗಳನ್ನು ನಮ್ಮಂತೆ ಮಲಗಲು ಬಿಡುವುದಿಲ್ಲ. ಏಕೆಂದರೆ ಇರುವೆಗಳ ಗೂಡಿನಲ್ಲಿ ಪ್ರತಿಯೊಂದು ಇರುವೆಗಳೂ ಕಾವಲು ಕಾಯುವುದು, ಮರಿ ಇರುವೆಗಳ ಆರೈಕೆ, ಶತ್ರುಗಳಿಗೆ ಆಹಾರ ಸಿಗದಂತೆ ತಡೆಯುವುದು ಮುಂತಾದ ತನ್ನದೇ ಆದ ವಿಭಿನ್ನ ಜವಾಬ್ದಾರಿಗಳನ್ನು ಹೊಂದಿವೆ. ಆದ್ದರಿಂದ ನಿದ್ರೆ ಇರುವೆಗಳ ಜೀವನದಲ್ಲಿ ಒಂದು ಪ್ರಮುಖ ಭಾಗವಾಗಿಲ್ಲ ಮತ್ತು ಅವುಗಳ ತಮ್ಮ ಬಳಗಕ್ಕಾಗಿ ಮಾತ್ರ ಶ್ರಮಿಸುತ್ತವೆ. ಇರುವೆಗಳು ತಮ್ಮ ತೂಕಕ್ಕಿಂತ ೫೦ ಪಟ್ಟು ಹೆಚ್ಚು ಭಾರವನ್ನು ಎತ್ತಬಲ್ಲವು.
ಹೆಚ್ಚಿನ ಇರುವೆಗಳ ನಿದ್ದೆಯ ಕ್ರಮವು ಮನುಷ್ಯನ ಎಂಟು ಗಂಟೆಗಳ ನಾಕೌಟ್ ನಿದ್ದೆಗಿಂತ ಹೆಚ್ಚು ಪವರ್ ನ್ಯಾಪನ್ನು ಹೊಂದಿದೆ. ಇರುವೆಗಳು ಪ್ರತಿ ೧೨ ಗಂಟೆಗಳಿಗೆ ಒಮ್ಮೆ ಎಂಟು ನಿಮಿಷಗಳ ವಿಶ್ರಾಂತಿಯಿಂದ ಹಿಡಿದು ಒಂದು ದಿನದಲ್ಲಿ ೨೫೦ ಕ್ಕಿಂತ ಹೆಚ್ಚು ಒಂದು ನಿಮಿಷದ ನಿದ್ದೆ ಇದರಲ್ಲಿ ಯಾವುದಾದರೂ ಒಂದನ್ನು ಅನುಸರಿಸುತ್ತವೆ. ಇರುವೆಗಳ ಪೈಕಿ ರಾಣಿ ಇರುವೆಗಳು ಸಾಮಾನ್ಯವಾಗಿ ಹೆಚ್ಚು ನಿಯಮಿತ, ದೀರ್ಘ ಮತ್ತು ಆಳವಾದ ನಿದ್ರೆಯನ್ನು ಅಂದರೆ ಒಂದು ದಿನಕ್ಕೆ ಒಂಬತ್ತು ಗಂಟೆಗಳವರೆಗೆ ಮಾಡುತ್ತವೆ. ಅಂದರೆ ಸಾಮಾನ್ಯ ಕೆಲಸಗಾರ ಇರುವೆಯು ನಿದ್ರಿಸುವ ಎರಡು ಪಟ್ಟು ಎನ್ನಬಹುದು.
     ಇರುವೆಗಳ ಈ ನಿಯಂತ್ರಿತ ನಿದ್ರೆಯ ಕ್ರಮದಿಂದಾಗಿ ಇವುಗಳಿಗೆ ಒಂದು ದಿನದಲ್ಲಿ ೩ ಲಕ್ಷ ಮೊಟ್ಟೆಗಳನ್ನು ಇಡಲು, ರಾತ್ರಿಯ ಆಹಾರ ಹುಡುಕುವಿಕೆ, ರಾತ್ರಿಯ ವೇಳೆ ಲಭ್ಯವಿರುವ ಆಹಾರಗಳ ಸಾಗಾಟ ಇತ್ಯಾದಿಗಳನ್ನು ನಿರ್ವಹಿಸಲು ಸಾಕಷ್ಟು ಕೆಲಸಗಾರ ಇರುವೆಗಳು ಲಭ್ಯವಾಗುತ್ತವೆ. ಕೆಲಸಗಾರ ಇರುವೆಗಳ ಈ ಸಣ್ಣ ಅವಧಿಯ ನಿದ್ದೆಯಿಂದಾಗಿ ತಮ್ಮ ವಸಾಹತನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಮತ್ತು ವಿವಿಧ ಕೆಲಸಗಳನ್ನು ಮಾಡಲು ಸಹಾಯಕ ಆಗುತ್ತದೆ. ನಿದ್ರೆಯ ಸಮಯದಲ್ಲಿನ ಈ ವ್ಯತ್ಯಾಸವು ಇರುವೆಗಳ ಆಯಸ್ಸಿನ ಮೇಲೆಯೂ ದೀರ್ಘಾವಧಿಯ ಪರಿಣಾಮಗಳನ್ನು ಬೀರಿದ್ದು, ಒಂದು ಕೆಲಸಗಾರ ಇರುವೆ ಸಾಮಾನ್ಯವಾಗಿ ೬-೧೨ ತಿಂಗಳು ಬದುಕಿದರೆ ರಾಣಿ ಆರು ವರ್ಷಗಳವರೆಗೆ ಬದುಕಬಲ್ಲದು.
       ಇರುವೆಗಳಿಗೆ ಶ್ವಾಸಕೋಶವಿದ್ದು, ಅದು ಅವುಗಳಿಗೆ ಉಸಿರಾಡಲು ಮತ್ತು ಆಮ್ಲಜನಕವನ್ನು ದೇಹಕ್ಕೆ ಹರಡಲು ಅನುವು ಮಾಡಿಕೊಡುತ್ತದೆ. ಇರುವೆಗಳು ಆಮ್ಲಜನಕವನ್ನು ಸೇವಿಸುತ್ತವೆ ಆದರೆ ಅವುಗಳು ತಮ್ಮ ದೇಹದಾದ್ಯಂತ ಹಲವಾರು ರಂಧ್ರಗಳನ್ನು ಹೊಂದಿದ್ದು, ಅವುಗಳು ಟ್ಯೂಬ್‌ಗಳಿಂದ ಜೋಡಿಸಲ್ಪಟ್ಟಿವೆ. ಇರುವೆಗಳು ಆಮ್ಲಜನಕವನ್ನು ಉಸಿರಾಡಿ ನಂತರ ಅದನ್ನು ಟ್ಯೂಬ್‌ಗಳ ಮೂಲಕ ದೇಹದಾದ್ಯಂತ ವಿತರಿಸುತ್ತವೆ. ಇರುವೆಗಳ ಪಾದಗಳ ಕೆಳಗೆ ಮೇಲ್ಮೈಯಲ್ಲಿರುವ  ಕಂಪನಗಳನ್ನು ಗ್ರಹಿಸುವ ಮೂಲಕ ಅವುಗಳು ಇತರ ಇರುವೆಗಳ ಮೂಲಕ ಸಂವಹನ ನಡೆಸುತ್ತವೆ. ಈ ಮೂಲಕವೇ ಅವುಗಳು ಅಪಾಯವನ್ನೂ ಗುರುತಿಸಿ ಅಪಾಯವಿದ್ದರೆ ನಿರ್ದಿಷ್ಟ ರೀತಿಯ ರಾಸಾಯನಿಕ ಸಂಕೇತವನ್ನು ಹೊರಸೂಸಲು ಪ್ರಾರಂಭಿಸುತ್ತವೆ. ಅದೇ ರೀತಿ ಆಹಾರವನ್ನು ಕಂಡರೆ ತಕ್ಷಣವೇ ತಮ್ಮ ಸಹಚರರಿಗೆ ತಿಳಿಸಲು ವಿಶೇಷ ರೀತಿಯ ರಾಸಾಯನಿಕ ಫೆರೋಮೋನನ್ನು ಬಿಡುಗಡೆ ಮಾಡುತ್ತವೆ. ಇದೇ ಕಾರಣಕ್ಕೆ ಇರುವೆಗಳು ಒಂದರ ಹಿಂದೆ ಒಂದರಂತೆ ಸಾಲಿನಲ್ಲಿ ನಡೆಯುತ್ತವೆ.
        ಇರುವೆಗಳು ತೇವವನ್ನು ಇಷ್ಟಪಡದ ಕಾರಣ ಅವು ಚಳಿಗಾಲದಲ್ಲಿ ಕಾಣಿಸುವುದಿಲ್ಲ. ಈ ಅವಧಿಯಲ್ಲಿ ಅವು ನೆಲದ ಕೆಳಗೆ ಅಥವಾ ಬಂಡೆಯ ಕೆಳಗೆ ಬೆಚ್ಚಗಿನ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ. ಇರುವೆಗಳು ಭೂಮಿಯ ಮೇಲೆ ಕನಿಷ್ಠ ೧೩೦ ದಶಲಕ್ಷ ವರ್ಷಗಳಿಂದ ಇವೆಯೆಂದು ಸಂಶೋಧನೆಗಳು ಹೇಳಿವೆ. ಇರುವೆಗಳಲ್ಲಿ ಒಟ್ಟು ೧೩,೩೭೯ ಜಾತಿಗಳಿದ್ದು, ಕೆಲವು ಮನೆಯಲ್ಲೇ ಉಳಿದರೆ ಕೆಲವು ಕಾಡಿನಲ್ಲಿ ಬಿಲಗಳು ಮತ್ತು ಖಾಲಿ ಜಾಗಗಳಲ್ಲಿ ತಮ್ಮದೇ ಆದ ಬಿಲಗಳನ್ನು ನಿರ್ಮಿಸಿ ಬದುಕುತ್ತವೆ, ತಮ್ಮ ಗೂಡಿನಲ್ಲಿ ರಾಣಿ ಇರುವೆ, ಕೆಲಸಗಾರ ಇರುವೆಗಳು ಮತ್ತು ಶೇಖರಣೆಗಾಗಿ ಗೊತ್ತುಪಡಿಸಿದ ಪ್ರತ್ಯೇಕ ಸ್ಥಳಗಳಿರುತ್ತವೆ. ಮೆಕ್ಸಿಕೋದಲ್ಲಿ ೩,೭೦೦ ಮೈಲುಗಳಷ್ಟು ಆಳದ ಭೂಗರ್ಭದಲ್ಲಿ ಇರುವೆಗಳ ವಸಾಹತು ಪತ್ತೆಯಾಗಿದೆ. ಪ್ರತಿ ಇರುವೆಗೆ ಎರಡು ಹೊಟ್ಟೆಗಳಿದ್ದು, ಒಂದು ಹೊಟ್ಟೆಯಲ್ಲಿ ಆಹಾರವನ್ನು ಸಂಗ್ರಹಿಸಿ ಅದನ್ನು ತನ್ನ ಕೆಲಸದ ಸ್ಥಳಕ್ಕೆ ಸಾಗಿಸಿದರೆ, ಇನ್ನೊಂದು ಹೊಟ್ಟೆಯಲ್ಲಿ ಆಹಾರವನ್ನು ಕೊಂಡೊಯ್ದು ಮತ್ತೊಂದು ಇರುವೆಗೆ ನೀಡಲು ಸಂಗ್ರಹಿಸುತ್ತವೆ.
    ಜಗತ್ತಿನಲ್ಲಿ ಮನುಷ್ಯರಿಗಿಂತ ಇರುವೆಗಳ ಸಂಖ್ಯೆಯೇ ಹೆಚ್ಚಿದೆ. ಇದು ಹೇಗೆಂದರೆ ಒಂದು ತಕ್ಕಡಿಯಲ್ಲಿ ಜಗತ್ತಿನ ಎಲ್ಲ ಮನುಷ್ಯರನ್ನು ಮತ್ತು ಇರುವೆಗಳನ್ನು ಒಟ್ಟಿಗೇ ತೂಗಿದರೆ ಮನುಷ್ಯರು ಇರುವೆಗಳನ್ನು ತಲೆತಗ್ಗಿಸಿ ನೋಡಬೇಕಂತೆ. ಕಾರಣ ಮನುಷ್ಯರು ಕುಳಿತ ತಕ್ಕಡಿ ಕಡಿಮೆ ಭಾರದಿಂದ ಮೇಲಕ್ಕೆ ಹೋಗಿರುತ್ತದೆ. ಅದೇ ಇರುವೆಗಳು ಇರುವ ತಕ್ಕಡಿಯು ಹೆಚ್ಚು ಭಾರದಿಂದ ಕೆಳ್ಳಕ್ಕೆ ಹೋಗಿರುತ್ತದೆ ಅದಕ್ಕಾಗಿ ಮನುಷ್ಯನು ಇರುವೆಗಳಿರುವ ತಕ್ಕಡಿಯನ್ನಿ ಬಗ್ಗಿ ನೋಡಬೇಕಾಗುತ್ತದೆ. ಗಂಡು ಇರುವೆಗಳು ಮಿಲನಕ್ಕೆ ಮಾತ್ರ ಸೀಮಿತವಾಗಿದ್ದು, ರಾಣಿ ಇರುವೆಯ ಜೊತೆಗೆ ಮಿಲನದ ನಂತರ ಇವು ಸಾಯುತ್ತವೆ. ಆದರೆ ರಾಣಿ ಇರುವೆಗಳು ತುಂಬಾ ವರ್ಷ ಬದುಕಿ, ತಮ್ಮ ಜೀವಿತಾವಧಿಯಲ್ಲಿ ಲಕ್ಷಾಂತರ ಮರಿಗಳಿಗೆ ಜನ್ಮ ನೀಡುತ್ತವೆ. ಇರುವೆಗಳು ಒಮ್ಮೆ ಪರಸ್ಪರ ಹೊಡೆದಾಡಲು ಪ್ರಾರಂಭಿಸಿದರೆ ಒಂದು ಅಥವಾ ಎರಡೂ ಇರುವೆಗಳು ಸಾಯುವವರೆಗೂ ಮುಂದುವರಿಸುತ್ತವೆ.
    ಇರುವೆಯ ತಲೆಯಲ್ಲಿ ಹಲವು ಸ್ಪರ್ಶೇಂದ್ರಿಯಗಳಿದ್ದು, ನೊಣದಂತೆ ಸಂಕೀರ್ಣ ಕಣ್ಣುಗಳನ್ನು ಇವು ಹೊಂದಿರುತ್ತವೆ. ಈ ಸಂಕೀರ್ಣ ಕಣ್ಣು ಒತ್ತಾಗಿ ಜೋಡಿಸಲ್ಪಟ್ಟಿರುವ ಹಲವು ಸಣ್ಣಸಣ್ಣ ಮಸೂರಗಳಿಂದ ಕೂಡಿದ್ದು ಸುತ್ತಲಿನ ಅತಿ ಸೂಕ್ಷ್ಮವಾದ ಚಲನೆಗಳನ್ನೂ ಗುರುತಿಸುತ್ತವೆ. ಅಲ್ಲದೇ ಇರುವೆಯು ಎರಡು ಸರಳ ಕಣ್ಣುಗಳನ್ನು ತಲೆಯ ಮೇಲ್ಭಾಗದಲ್ಲಿ ಹೊಂದಿದ್ದು ಇವು ಬೆಳಕನ್ನು ಗ್ರಹಿಸುತ್ತವೆ. ಇರುವೆಗಳ ತಲೆಯ ಭಾಗದಲ್ಲಿ ಎರಡು ಫೀಲರ್ ಎಂದು ಕರೆಯಲ್ಪಡುವ ಗ್ರಾಹಕ ಕಡ್ಡಿಗಳನ್ನು (ಮೀಸೆ) ಹೊಂದಿದ್ದು, ಈ ಗ್ರಾಹಕಗಳು ರಾಸಾಯನಿಕಗಳನ್ನು ಗುರುತಿಸುವುದಲ್ಲದೇ ಈ ಮೀಸೆಗಳು ಸಂಪರ್ಕ ಸಾಧನವಾಗಿಯೂ ಬಳಸಲ್ಪಡುತ್ತವೆ.
   ಇರುವೆಯ ದೇಹದಲ್ಲಿ ಅದರ ಕತ್ತು ಹಹಳ ಪ್ರಮುಖ ಭಾಗ. ಇರುವೆ ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುವ ಒಟ್ಟು ಭಾರವನ್ನು ಇದು ತಡೆದುಕೊಳ್ಳಬೇಕಾಗುತ್ತದೆ. ಇರುವೆಯ ಕತ್ತಿನಲ್ಲಿರುವ ಮೃದುವಾದ ಅಂಗಾಂಶವು ಇರುವೆಯ ದೇಹ ಮತ್ತು ತಲೆಯ ಗಡುಸಾದ ಹೊರಕವಚವನ್ನು ಜೋಡಿಸುತ್ತದೆ. ಇದರ ರಚನೆಯು ನಮ್ಮ ಕೈಬೆರಳುಗಳನ್ನು ಒಟ್ಟಿಗೆ ಗಟ್ಟಿಯಾಗಿ ಹೆಣೆದಾಗ ಇರುವಂತೆ ಇರುತ್ತವೆ. ‘ಕತ್ತು ಸರಿಯಾಗಿ ಕೆಲಸಮಾಡಲು ಈ ಹೆಣೆಯುವಿಕೆ ಮತ್ತು ವಿನ್ಯಾಸ ತುಂಬ ಪ್ರಾಮುಖ್ಯ. ಗಡುಸಾದ ಮತ್ತು ಮೃದುವಾದ ಅಂಗಾಂಶಗಳ ಈ ಹೆಣೆಯುವಿಕೆ (ತಲೆ ಮತ್ತು ದೇಹದ) ಜೋಡಣೆಯನ್ನು ಬಲಪಡಿಸುತ್ತದೆ ಮತ್ತು ಹೆಚ್ಚಿನ ಭಾರಗಳನ್ನು ಹೊತ್ತೊಯ್ಯಲು ಸಹಾಯ ಮಾಡುತ್ತದೆ’ ಎನ್ನುತ್ತಾರೆ ಒಬ್ಬ ಸಂಶೋಧಕರು. ಇರುವೆಯ ಕತ್ತು ಹೇಗೆ ಕೆಲಸ ಮಾಡುತ್ತದೆಂದು ಸ್ಪಷ್ಟವಾಗಿ ಅರ್ಥೈಸಿಕೊಂಡರೆ ಮಾನವನು ರೂಪಿಸುವ ಸ್ವಯಂಚಾಲಿತ ಯಂತ್ರಗಳಲ್ಲೂ ಬಹಳಷ್ಟು ಸುಧಾರಣೆಗಳನ್ನು ಮಾಡಬಹುದೆಂದು ಸಂಶೋಧಕರು ಹೇಳುತ್ತಾರೆ. 
ಸಹಬಾಳ್ವೆ, ವಿಸ್ಮಯದ ಸಂಪರ್ಕ ವ್ಯವಸ್ಥೆ, ಸಮರ್ಥ ಜೀವನ ಕೌಶಲ, ಈ ಮೂರೂ ಗುಣಗಳಿಗೆ ಇರುವೆಗಳು ಪ್ರತಿಮಾ ಸ್ವರೂಪಿ ಆಗಿದ್ದು, ಕೋಟ್ಯಂತರ ವರ್ಷಗಳಿಂದ ಬಾಳಿ ಬದುಕಿರುವ ಈ ಅಲ್ಪ ಗಾತ್ರದ ಜೀವಿಯು ಜೀವಜಗತ್ತಿನಲ್ಲಿ ಭಾರೀ ವೈವಿಧ್ಯತೆಯನ್ನು ಪಡೆದಿದೆ ಎಂದರೆ ತಪ್ಪಾಗಲಾರದು.