ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ...

     ಶೌರ್ಯ, ಪರಾಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಚಿಲುಮೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾ ದೇಶಪ್ರೇಮಿ‌. ಕರುನಾಡಲ್ಲಿ ಬ್ರಿಟಿಷರನ್ನು ನಡುಗಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಿದಾನದ ದಿನವಿಂದು. ಗಣರಾಜ್ಯೋತ್ಸವದ ದಿನದಂದು ಇಡೀ ದೇಶದ ಜನರೇ ರಾಯಣ್ಣನನ್ನು ಸ್ಮರಿಸುತ್ತಾರೆ.
    ಕರುನಾಡಲ್ಲಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಧೀರನೆಂದರೆ ಅದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ರಾಣಿ ಕಿತ್ತೂರು ಚೆನ್ನಮ್ಮಳ ಬಂಟ ರಾಯಣ್ಣರ ಹೆಸರು ಕೇಳುತ್ತಿದ್ದರೆ ಬ್ರಿಟಿಷರ ಸದ್ದಡಗುತ್ತಿತ್ತು. ಇಂತಹ ವೀರನ ಹುಟ್ಟೂರು ಬೆಳಗಾವಿ ಜಿಲ್ಲೆ ಎಂಬುದೇ ಕನ್ನಡಿಗರಿಗೆ ಹೆಮ್ಮೆಯ ವಿಷಯ.
ರಾಯಣ್ಣನ ತಂದೆಯೂ ಪರಾಕ್ರಮಿ: 
  ರಾಯಣ್ಣನ ಹುಟ್ಟೂರು ಸಂಗೊಳ್ಳಿ. ಕಿತ್ತೂರಿನಿಂದ 14 ಕಿ.ಮೀ. ದೂರದಲ್ಲಿರುವ ಮಲಪ್ರಭಾ ನದಿಯ ದಡದಲ್ಲಿರುವ ಹಳ್ಳಿ. ಬರಮಪ್ಪ-ಕೆಂಚವ್ವ ದಂಪತಿಯ ಪುತ್ರನಾಗಿ 1798, ಆಗಸ್ಟ್ 15ರಂದು ರಾಯಣ್ಣ ಜನಿಸಿದರು. ರಾಯಣ್ಣನ ತಂದೆಯೂ ಪರಾಕ್ರಮದ ಮೂಲಕವೇ ಕಿತ್ತೂರು ರಾಜ ಮಲ್ಲಸರ್ಜನ ಪ್ರೀತಿಗೆ ಪಾತ್ರರಾಗಿದ್ದರು‌. 
       ಕಿತ್ತೂರು ಮೊದಲಿನಿಂದಲೂ ಸಂಪತ್ತಿನಿಂದ ಕೂಡಿದ್ದ ಸಿರಿವಂತ ಸಂಸ್ಥಾನವಾಗಿತ್ತು. ಇಂತಹ ಊರಿನ ಮೇಲೂ ಬ್ರಿಟಿಷರ ಕೆಂಗಣ್ಣು ಬಿದ್ದಿತು. ಕಿತ್ತೂರನ್ನು ಕಬಳಿಸುವ ಹುನ್ನಾರ ಮಾಡಿದ್ದ ಆಂಗ್ಲರಲ್ಲಿ, ರಾಯಣ್ಣ ನಡುಕ ಹುಟ್ಟಿಸಿದ್ದ. ಕಿತ್ತೂರು ಸಾಮ್ರಾಜ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕ್ರಾಂತಿವೀರ ರಾಯಣ್ಣ ತೊಡೆತಟ್ಟಿದ್ದ. ಹೀಗಿರುವಾಗಲೇ ರಾಯಣ್ಣ ಮೋಸದ ಬಲೆಗೆ ಬಿದ್ದು, ನೇಣುಗಂಬ ಏರಬೇಕಾಯಿತು. ನೇಣುಗಂಬ ಏರಿದ ನಂದಗಡ ಇದೀಗ ಪುಣ್ಯಸ್ಥಳವಾಗಿದೆ.
ಬ್ರಿಟಿಷರನ್ನು ಕಾಡಿದ ರಾಯಣ್ಣ: 
     ದೇಶದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯಕ್ಕಾಗಿ ಕಹಳೆ ಮೊಳಗಿದಾಗ, ದೊಡ್ಡ ದೊಡ್ಡ ರಾಜರುಗಳೇ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಸಾಧ್ಯವಾಗದೇ ಕಪ್ಪ ಕಾಣಿಕೆ ಕೊಟ್ಟು ಸುಮ್ಮನಾಗಿದ್ದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತನ್ನ ಸ್ನೇಹಿತರ ಜತೆ ಸೇರಿ ಬ್ರಿಟಿಷರನ್ನು ಇನ್ನಿಲ್ಲದಂತೆ ಕಾಡಿದ್ದ. ಗೆರಿಲ್ಲಾ ಯುದ್ಧತಂತ್ರ ಅರಿತಿದ್ದ ಶೂರ ರಾಯಣ್ಣನನ್ನ ನೇಣಿಗೇರಿಸಿದ ಜಾಗ ನಂದಗಡವೀಗ ಶೌರ್ಯ, ತ್ಯಾಗದ ಪ್ರತೀಕವಾಗಿದೆ. 
  ರಾಯಣ್ಣನ ಜನ್ಮದಿನ ಹಾಗೂ ಪುಣ್ಯತಿಥಿಯನ್ನು ಸ್ಮರಣೋತ್ಸವ ಸಮಿತಿಯಿಂದ ಪ್ರತಿ ವರ್ಷ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಮೂಲಕ ರಾಯಣ್ಣನ ಹೋರಾಟ, ತ್ಯಾಗ, ಶೌರ್ಯದ ಬಗ್ಗೆ ಇಂದಿನ ಯುವಕರಿಗೆ ತಿಳಿಸುವ ಯತ್ನ ನಡೆದಿದೆ. ಅಲ್ಲದೇ ಸ್ವಾತಂತ್ರ್ಯ ದಿನದಂದು ಹಾಗೂ ಗಣರಾಜ್ಯೋತ್ಸವದಂದು ನಂದಗಡದಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ವಿಶೇಷ ದಿನಗಳು: 
 ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಾವಿರಾರು ಜನ ಪಾದಯಾತ್ರೆಯ ಮೂಲಕ ಇಲ್ಲಿಗೆ ಆಗಮಿಸುತ್ತಾರೆ. ರಾಯಣ್ಣನ ಹುಟ್ಟುಹಬ್ಬದಂದೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಜನವರಿ 26ರಂದು ನೇಣಿಗೇರಿದ ಪುಣ್ಯಸ್ಮರಣೆಯ ದಿನದಂದೇ ಗಣರಾಜ್ಯೋತ್ಸವವಾಗಿದೆ. ಹೀಗಾಗಿಯೇ ಈ ಎರಡೂ ಆಚರಣೆಗಳು ವಿಶೇಷ ಎನಿಸಿವೆ. ರಾಯಣ್ಣನ ಸ್ವಾಮಿನಿಷ್ಠೆ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟ ಇಂದಿಗೂ ಮಾದರಿಯಾಗಿದೆ.
ದಬ್ಬಾಳಿಕೆ ವಿರುದ್ಧ ಸಿಡಿದೆದ್ದ ರಾಯಣ್ಣ: 
 ಬಡವರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಆಂಗ್ಲ ದೊರೆಗಳ ವಿರುದ್ಧವೇ ರಾಯಣ್ಣ ಸಿಡಿದೆದ್ದಿದ್ದ. ಸ್ವತಃ ಅವನ ಜಮೀನನ್ನು ಕೂಡ ಕಿತ್ತುಕೊಳ್ಳಲಾಗಿತ್ತು. ಇದರಿಂದ ಕೈಕಟ್ಟಿ ಕುಳಿತುಕೊಳ್ಳದ ಸಂಗೊಳ್ಳಿ ರಾಯಣ್ಣ ತನ್ನದೇ ಒಂದು ಸಮರ್ಥ ತಂಡವನ್ನು ಕಟ್ಟಿದ. ಆಂಗ್ಲರ ದಬ್ಬಾಳಿಕೆಯ ವಿರುದ್ಧ, ಆಂಗ್ಲರ ಜೊತೆ ಕೈಜೋಡಿಸಿದ್ದ ಭೂಮಾಲೀಕರ ವಿರುದ್ಧ ತಿರುಗಿ ನಿಂತ. ಗೆರಿಲ್ಲಾ ತಂತ್ರಗಾರಿಕೆ ಬಳಸಿ ಭೂಮಾಲಿಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡ, ಅಲ್ಲದೆ, ಅವರಿಂದ ಕಿತ್ತುಕೊಂಡ ಹಣವನ್ನೂ ಬಡಬಗ್ಗರಿಗೆ ಹಂಚಿದ.
ದಂಡೆತ್ತಿ ಬಂದವರ ಹಿಮ್ಮೆಟ್ಟಿಸಿದ ಪಡೆ:
  ಕಪ್ಪ ಸಿಗದೇ ಕೋಪಗೊಂಡಿದ್ದ ಬ್ರಿಟಿಷರು ಅಕ್ಟೋಬರ್ 21, 1824ರಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದರು. ವೀರ ವನಿತೆ ರಾಣಿ ಚೆನ್ನಮ್ಮ ಕೋಟೆ ಬಾಗಿಲು ತೆರೆಯಿಸಿ ತನ್ನ ಪಡೆಯನ್ನು ಆಂಗ್ಲರ ಮೇಲೆ ಬಿಟ್ಟಳು. ದೊಡ್ಡ ಕಾಳಗವೇ ನಡೆದು ಹೋಯಿತು. ರಾಯಣ್ಣ, ಚೆನ್ನಬಸವಣ್ಣ, ಬಾಳಪ್ಪರ ಮುಂದಾಳತ್ವದಲ್ಲಿ ಕಿತ್ತೂರಿನ ಸೈನಿಕರು ಮುನ್ನುಗ್ಗಿದ್ದರು. ಈ ನಡುವೆ ಬಾಳಪ್ಪನ ಕೋವಿಯಿಂದ ಹಾರಿದ ಗುಂಡು ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯ ರುಂಡ ಉರುಳಿಸಿತು. ಸೈನಿಕನೊಬ್ಬ ಇದನ್ನು ತನ್ನ ಕತ್ತಿಗೆ ಸಿಕ್ಕಿಸಿ ಗೆಲುವಿನ ಚಿಹ್ನೆಯಂತೆ ಮೇಲೆತ್ತಿ ಹಿಡಿದ. ಹೆದರಿದ ಆಂಗ್ಲರ ಪಡೆ ಹಿಮ್ಮೆಟ್ಟಿತ್ತು. ರಾಯಣ್ಣ ಈ ಕಾಳಗದಲ್ಲಿ ತನ್ನ ಪರಾಕ್ರಮ ಮೆರೆದಿದ್ದ.
ಕೆಲ ಸಮಯದ ಬಳಿಕ ಕಿತ್ತೂರು ಚೆನ್ನಮ್ಮ ಆಂಗ್ಲರ ಸೆರೆಯಾದಳು. ರಾಯಣ್ಣ, ಚೆನ್ನಬಸವಣ್ಣನವರನ್ನು ಕೆಲಹೊತ್ತು ಸೆರೆಮನೆಯಲ್ಲಿಟ್ಟು, ನಂತರ ಬಿಡುಗಡೆಗೊಳಿಸಿದರು. ಆದರೆ ರಾಣಿ ಮಾತ್ರ ಸೆರೆಮನೆಯಲ್ಲೇ ಕೊನೆಯುಸಿರೆಳೆದಳು. ಈ ನಡುವೆ ರಾಯಣ್ಣ ಹೆಸರುವಾಸಿಯಾಗುವುದನ್ನು ಕಂಡು, ರಾಯಣ್ಣನನ್ನು ಮೆಟ್ಟಿನಿಲ್ಲಬೇಕೆಂದು ನಿರ್ಧರಿಸಿದ ಆಂಗ್ಲ ಅಧಿಕಾರಿಗಳು ಸಂಚು ಹೂಡಿ, ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಸಂಬಂಧಿಯಿಂದಲೇ ಮೋಸ: 
  ಇದಕ್ಕಾಗಿ ಅವರು ಬಳಸಿಕೊಂಡಿದ್ದು ರಾಯಣ್ಣನ ಸಂಬಂಧಿ ಲಕ್ಷ್ಮಣನನ್ನು. ರಾಯಣ್ಣ ಚೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಆಂಗ್ಲ ಸೈನಿಕರು ಆಕ್ರಮಣ ಮಾಡಿದಾಗ ರಾಯಣ್ಣನ ಖಡ್ಗ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ನೀಡೆಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ವಿಧಿಯಿಲ್ಲದೆ ರಾಯಣ್ಣ ಆಂಗ್ಲರ ಕೈವಶವಾಗಬೇಕಾಯಿತು.
 ಕೊನೆಗೆ 1831ರ ಜನವರಿ 26ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ರಾಯಣ್ಣನನ್ನು ಆಲದ ಮರಕ್ಕೆ ನೇಣಿಗೇರಿಸಿದರು. ಗಲ್ಲಿಗೇರಿಸುವ ಮುನ್ನ ಆಂಗ್ಲ ಅಧಿಕಾರಿಗಳು ನಿನ್ನ ಕಡೆಯ ಆಸೆ ಏನೆಂದು ಕೇಳಿದಾಗ, ‘ಭಾರತದಲ್ಲಿಯೇ ಮತ್ತೆ ಹುಟ್ಟಿ ಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು ಎಂದು ಸಿಂಹದಂತೆ ಗರ್ಜಿಸಿದ್ದರು! 

 

- ಗ್ಲೆನ್ ಗುಂಪಲಾಜೆ