26ರ ವಿಜಯಕ್ಕೆ ಶ್ರಮಿಸಿಧ ಯೋಧ - ಸುಬೇದಾರ್ ಏಕನಾಥ್ ಶೆಟ್ಟಿ

      ಪ್ರತಿ ಜುಲೈ 26 ರಂದು 'ಕಾರ್ಗಿಲ್ ವಿಜಯ್ ದಿವಸ್' ಆಚರಣೆ ಮಾಡಲಾಗುತ್ತದೆ. ಭಾರತೀಯರು ಎಂದೂ ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಒಂದು. ಕಾರ್ಗಿಲ್‌ ಯುದ್ಧ ಭಾರತದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು, ಅವರು ಆಕ್ರಮಿಸಿಕೊಂಡಿದ್ದ ನಮ್ಮ ಭೂ ಪ್ರದೇಶವನ್ನು ವಶಕ್ಕೆ ಪಡೆದ ದಿನವನ್ನು ನಾವೆಲ್ಲರೂ ಹೆಮ್ಮೆಯಿಂದ ಸ್ಮರಿಸುತ್ತೇವೆ.
     1999ನೇ ಇಸವಿಯ ಜುಲೈ 26ರಂದು ಭಾರತೀಯ ಸೈನಿಕರು 'ಅಪರೇಶನ್ ವಿಜಯ್ ' ಮೂಲಕ ಕಾರ್ಗಿಲ್‌-ದ್ರಾಸ್‌ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ 'ವಿಜಯ ದಿವಸ್' ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿದ ಆ ಕ್ಷಣಕ್ಕೆ ಇಂದಿಗೆ 24 ವರ್ಷ ತುಂಬುತ್ತದೆ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸುವ ದಿನವಿದು.

    1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ, ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್‌ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು.
     ಈ ಯುದ್ದದಲ್ಲಿ ಹೋರಾಡಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದವರಲ್ಲಿ ಸುಬೇದಾರ್ ಏಕನಾಥ್ ಶೆಟ್ಟಿ̤ ಕೂಡಾ ಒಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿವಾಸಿಯಾದ ಇವರು ಮಾಜಿ ಸೈನಿಕ ದಿವಂಗತ ಕೃಷ್ಣ ಶೆಟ್ಟಿ ಮತ್ತು ಸುನಂದಾ ದಂಪತಿಯ ಐವರು ಮಕ್ಕಳಲ್ಲಿ ನಾಲ್ಕನೆಯವರಾಗಿ 1965ರ ಜೂ. 30ರಂದು ಮಂಗಳೂರಿನ ಕುತ್ತಾರಿನಲ್ಲಿ ಜನಿಸಿದ್ದರು. ಪಿಯುಸಿ ಮುಗಿಸಿ 1985ರಲ್ಲಿ ಭೂ ಸೇನೆ (ಮದ್ರಾಸ್‌ ರೆಜಿಮೆಂಟ್‌)ಗೆ ಸೇರ್ಪಡೆಗೊಂಡು ತಮಿಳುನಾಡಿನ ವೆಲ್ಲಿಂಗ್‌ಟನ್‌ನಲ್ಲಿ ತರಬೇತಿ ಮುಗಿಸಿದರು. ನಂತರ ಶ್ರೀಲಂಕಾ, ಸಿಕ್ಕಿಂ, ಅರುಣಾಚಲ ಪ್ರದೇಶ, ಕಾಶ್ಮೀರ ಸಹಿತ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು. 1999ರಲ್ಲಿ ಮದ್ರಾಸ್‌ ರೆಜಿಮೆಂಟ್‌ನಲ್ಲಿ ನಾಯಕ್‌ ಹುದ್ದೆಗೆ ಪದೋನ್ನತಿ ಹೊಂದಿ 1999ರಲ್ಲಿ ನಡೆದ ಕಾರ್ಗಿಲ್‌ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಹಸ ಮೆರೆದು ಸೇನಾ ಪದಕ (ಆಪರೇಷನ್‌ ವಿಜಯ್‌) ಪಡೆದುಕೊಂಡು 2009 ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.
     ಯೋಧ ಏಕನಾಥ ಶೆಟ್ಟಿ ನಿವೃತ್ತರಾದ ಬಳಿಕ ಮೂರೇ ತಿಂಗಳಲ್ಲಿ ವಾಯುಸೇನೆಯ ಡಿಫೆನ್ಸ್ ಸೆಕ್ಯೂರಿಟಿ ಫೋರ್ಸ್ ಗೆ ಸೇರಿಕೊಂಡರು. ಕಣ್ಣೂರಿನಲ್ಲಿ ತರಬೇತಿ ಮುಗಿಸಿ ಕಾನ್ಪುರ, ಗೋವಾದಲ್ಲಿ ಸೇವೆ ಸಲ್ಲಿಸಿ, ಮುಂದಿನ  2 ವರ್ಷ ಪೋರ್ಟಬ್ಲೇರ್ನಲ್ಲಿ ಕಾರ್ಯನಿರ್ವಹಿಸಿದ್ದರು.
22 ಜುಲೈ 2016 ರಂದು ಬಂಗಾಳ ಕೊಲ್ಲಿಯಲ್ಲಿ ಆಪ್ ಕಾರ್ಯಾಚರಣೆಗೆಂದು ಹೊರಟ ಭಾರತೀಯ ವಾಯುಪಡೆಯ AN-32 ವಿಮಾನ ಬಂಗಾಳಕೊಲ್ಲಿ ಸಮುದ್ರದ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಡಿತಗೊಂಡಿತ್ತು. ಅದರಲ್ಲಿದ್ದ ಗುರುವಾಯನಕೆರೆಯ ಏಕನಾಥ ಶೆಟ್ಟಿ ಸೇರಿ 29 ಜನ ಸೈನಿಕರ ನಾಪತ್ತೆಯಾಗಿ, ಅವರ ಸುಳಿವು ಕೂಡಾ ಸಿಕ್ಕದೆ ಪ್ರಕರಣ ನಿಗೂಢವಾಗಿತ್ತು. ಬೆಳಗ್ಗೆ 8.30ಕ್ಕೆ ವಿಮಾನ ಹೊರಟಿದ್ದು, 9.12ಕ್ಕೆ ನಿಲ್ದಾಣದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್‌ಬ್ಲೇರ್‌ಗೆ ತಲುಪಬೇಕಿದ್ದ ವಿಮಾನ ಕಣ್ಮರೆಯಾಗಿರುವುದಾಗಿ ಮಧ್ಯಾಹ್ನ 1.50ಕ್ಕೆ ವಾಯುಸೇನೆ ಪ್ರಕಟಿಸಿತ್ತು. ದೇಶದ ವಾಯುಪಡೆಯ ಇತಿಹಾಸದಲ್ಲಿ ಒಂದು ವಿಮಾನ ನಾಪತ್ತೆಯಾಗಿದ್ದು ಅದೇ ಮೊದಲ ಬಾರಿಯಾಗಿತ್ತು. ವಾಯುಪಡೆ ವಿಮಾನದ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ನೋಡಿ ಕೆಲ ತಿಂಗಳ ನಂತರ ಅದರಲ್ಲಿದ್ದ ಎಲ್ಲಾ ಸೈನಿಕರನ್ನು ಹುತಾತ್ಮರೆಂದು ಘೋಷಿಸಿ ಅಕ್ಟೋಬರ್ 28, 2016ರಂದು ಅವರ ಸೇನಾ ಸಮವಸ್ತ್ರವನ್ನು ಸಕಲ ಸೇನಾ ಗೌರವಗಳೊಂದಿದೆ ಕುಟುಂಬಕ್ಕೆ ಒಪ್ಪಿಸಲಾಯಿತು. 
     ಆದರೆ ಇತ್ತಿಚಿಗೆ ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ಆ ವಿಮಾನಕ್ಕೆ ಹೋಲುವ ಕೆಲ ಅವಶೇಷಗಳು ಸಿಕ್ಕಿವೆ ಎಂದು ಮಾದ್ಯಮವೊಂದರಲ್ಲಿ ವರದಿಯಾಗಿತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಷ್ಟೇ. ಅದೇನೇ ಇರಲಿ, ಕಾರ್ಗಿಲ್‌ ಯುದ್ದದಲ್ಲಿ ಹೋರಾಡಿ, ವಿಜಯ ಪತಾಕೆಯನ್ನು ಹಾರಿಸಿ, ನಿವೃತ್ತಿಯನ್ನು ಹೊಂದಿ, ಭಾರತೀಯ ವಾಯುಪಡೆಗೆ ಮತ್ತೆ ಸೇರ್ಪಡೆಯಾದವರ ಸಾಲಿನಲ್ಲಿ ಸುಬೇದಾರ್ ಏಕನಾಥ್ ಶೆಟ್ಟಿ ಕೂಡ ಒಬ್ಬರು. ಅವರ ತ್ಯಾಗ ಬಲಿದಾನಕ್ಕೆ ನಾವೆಲ್ಲಾ ಒಂದು ಸಲಾಂ ಹೊಡೆಯುತ್ತಾ, ಕಾರ್ಗಿಲ್‌ ವಿಜಯಕ್ಕೆ ಕಾರಣಕರ್ತರಾದ ಸರ್ವರನ್ನು ಈ ವಿಜಯದಿವಸದಂದು ಸ್ಮರಿಸುತ್ತಾ, ನಮಿಸೋಣ. ಜೈ ಹಿಂದ್‌. 

 

-ಗ್ಲೆನ್‌ ಗುಂಪಲಾಜೆ