ದೇವಸ್ಥಾನದಿಂದ ಅರೆ ಬಡಿಯುವರಾನಾದ ಕಿವಿಯ ಮೇಲೆ ಪುಂಕಾನುಪುಂಕವಾಗಿ ಬೀಳುತ್ತಿದೆ. ಮನೆಯಲ್ಲಿ ಹಂಡೆಗೆ ನೀರು ತುಂಬಿಸುವ ಕೆಲಸದಲ್ಲಿ ನಿರತನಾಗಿರುವ ರಾಮುವಿಗೆ ಅರೆ ಬಡಿಯುವ ಶಬ್ದ ಇಲ್ಲಿ ಇರಲು ಬಿಡುತ್ತಿಲ್ಲ, ಆತುರ ಆತುರವಾಗಿ ನೀರು ತುಂಬಿ ಒಂದೇ ಉಸಿರಿಗೆ ಓಡಿ ಗುಡಿ ತಲುಪಿದ, ಹೊರಡುವ ದೇವರನ್ನು ಅಲಂಕಾರ ಮಾಡಿ ಅದನ್ನು ಹೊರತಂದರು. ಕೆಳಗೆ ಹಲಗೆಗೆ ಹಾಕಿದ್ದ ಕಬ್ಬಿಣದ ಬಳೆಗಳ ಒಳಗೆ ಎರಡು ಬಿದಿರಿನ ಕಡ್ಡಿಗಳನ್ನು ತೂರಿಸಿ ನಾಲ್ಕು ಜನ ಅದನ್ನು ಹೊತ್ತುಕೊಂಡರು, ಹೂವು, ಗಂಧದ ಕಡ್ಡಿಯ ಸುವಾಸನೆ, ಕರ್ಪೂರದ ಪರಿಮಳ ರಾಮುವಿಗೆ ಒಂಥರಾ ಆಪ್ತಯೆಯ ಸೆಳೆತವನುಂಟು ಮಾಡುತ್ತಿತ್ತು. ಊರಿನ ಪ್ರಮುಖ ಬೀದಿಯಲ್ಲಿ ದೇವರು ಹೊರಟಿತು. ರಾಮು ಅದರ ಜೊತೆಯಲ್ಲಿ ಹೆಜ್ಜೆ ಹಾಕುತ ಹೊರಟ, ವಾದ್ಯದವರ ಪಕ್ಕದಲ್ಲೇ ಅವರನ್ನೇ ನೋಡುತಾ, ಮನೆಗಳ ಮುಂದೆ ಹೋದಾಗ ಹೆಂಗಸರು ಪೂಜೆ ಮಾಡುವಾಗ ಅವರು ಕೊಟ್ಟ ಕಾಯಿಯನ್ನು ದೇವರಿಗೆ ಮೂರು ಬಾರಿ ನೇವೆದಿಸಿ ಒಡೆಯುವುದು, ಕರ್ಪೂರ ಹಚ್ಚುವುದು ಎಲ್ಲರೂ ಇವನ ಹೆಸರು ಹಿಡಿದು ಕರೆಯುವುದು ರಾಮೂವಿಗೆ ಒಂದು ಐಡೆಂಟಿಟಿಯನ್ನು ತಂದು ಕೊಟ್ಟಿತ್ತು.
ಊರಿನಲ್ಲಿ ಹಬ್ಬಗಳಾದಾಗ, ಯಾರಿಗಾದರೂ ಕಾಯಿಲೆ ಬಂದಾಗ, ದೇವರಿಗೆ ಪುಣ್ಯ ಮಾಡಿಸುವಾಗ ದೇವರ ಜೊತೆಯಲ್ಲಿ ರಾಮೂವಿನ ಹಾಜರಿ ಗ್ಯಾರಂಟಿ, ದೇವರು ಹೊರಡಿಸುವ, ಕುಣಿಸುವ ಎಲ್ಲಾ ರೀತಿ ರುಜುವಾತುಗಳು ರಾಮುವಿಗೆ ಕರಗತವಾಗಿದ್ದವು, ದೇವರು ಹೊರಟಾಗ ಆ ದಿನ ರಾಮು ಶಾಲೆಗೆ ಚಕ್ಕರ್, ಮೊದ ಮೊದಲು ಉದಾಸೀನ ಮಾಡಿದ, ಮಗ ದೇವರೊಂದಿಗೆ ಇರುವುದನ್ನು ಖುಷಿ ಪಡುತ್ತಿದ್ದ ತಂದೆ ತಾಯಿಗಳು ನಂತರ ಯಾವಾಗ ಶಾಲೆಯ ಶಿಕ್ಷಕರು ಅವನನ್ನ ಹುಡುಕಿಕೊಂಡು ಮನೆಯ ಹತ್ತಿರ ಬರ ತೊಡಗಿದರೋ ರಜಾ ದಿನಗಳನ್ನು ಹೊರತುಪಡಿಸಿ ಉಳಿದಂತೆ ದೇವರ ಹೊರಟಾಗ ಶಾಲೆಗೆ ಹೋಗುವಂತೆ ಪೀಡಿಸತೊಡಗಿದರು, ದೇವರೊಂದಿಗೆ ಹೋಗದಂತೆ ಶಾಲೆಗೆ ಹೋಗುವಂತೆ ಒತ್ತಾಯ ಮಾಡತೊಡಗಿದರು, ಗಂಧದ ಕಡ್ಡಿ ಪರಿಮಳ, ದೇವರ ಪಲ್ಲಾರ, ದೇವರು ಹೊರಟಾಗ ಸೃಷ್ಟಿಯಾಗುತ್ತಿದ್ದ ಆ ಸನ್ನಿವೇಶ ಅವನ ತಲೆಯಲ್ಲಿ ಸುತ್ತತೊಡಗಿತು. ಶಾಲೆಯಲ್ಲಿನ ಅರ್ಥವಾಗದ ಗಣಿತ, ಇಂಗ್ಲೀಷ್ ಒಂದೇ ಕೊಠಡಿಯಲ್ಲಿ ನಿರ್ಬಂಧನ ವನ್ನು ನೆನೆದು ಅವನ ಸ್ವಾತಂತ್ರ್ಯವನ್ನು ಶಿಕ್ಷಕರು ಮತ್ತು ಪೋಷಕರು ಕಿತ್ತು ಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡಿ ಅವರನ್ನೆಲ್ಲಾ ದ್ವೇಷಿಸಿ ತೊಡಗಿದ, ಶಾಲೆಗೆ ಬರುವಂತೆ ಮನೆಯಿಂದ ಹೊರಡುವುದು ಹೊರಡುವ ದೇವರ ನೆನೆದು ದೇವಸ್ಥಾನಕ್ಕೆ ಹೋಗುವುದು ಶಿಕ್ಷಕರು ಮನೆಯ ಹತ್ತಿರ ಹುಡುಕಿ ಕೊಂಡು ಬರುವುದು, ರೂಢಿಗತ ಕೆಲಸವಾಯಿತು. ಮೊದ ಮೊದಲು ನಿರ್ಲಕ್ಷ್ಯ ಮಾಡಿದ್ದ ಪೋಷಕರಿಗೆ ಇವನ ದೇವರ ಹುಚ್ಚು ಚಿಂತೆಯಾಗತೊಡಗಿತು,ದೇವರು ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾನೆ, ನಮ್ಮನೆಲ್ಲಾ ಪೋರೆಯುತ್ತಾನೆ, ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ? ಎಂಬ ಜನಗಳ ಮಾತು, ಓದದಿದ್ದರೆ ಉದ್ದಾರ ಆಗಲ್ಲ , ಜೀವನ ಕಷ್ಟ ಎಂದು ದೇವರು ಹೋರುವವರನ್ನು ಉದಾಹರಣೆ ಕೊಡುತ್ತಿದ್ದ ಪೋಷಕರು, ಶಿಕ್ಷಣವೇ ಎಲ್ಲಾ ಸಮಸ್ಯೆಗೆ ಪರಿಹಾರ ಎಂಬ ಶಿಕ್ಷಕರ ಮಾತುಗಳು ಅವನ ತಲೆಯಲ್ಲಿ ವೈರುಧ್ಯವಾಗಿ, ಯಾವುದು ನಿಜ? ಯಾವುದು ಸುಳ್ಳು? ಎಂದು ಆಲೋಚನಗೆದೂಡಿತು, ಆಚೆ ಹೊರಡುವ ದೇವರು ಗುಡಿಮುಂದೆ ಕುಣಿಯುತ್ತಿತ್ತು... ಅರೆ ಬಡಿಯುವ ಶಬ್ದ ಅಲೆ ಅಲೆ ಯಾಗಿ ರಂಗೇರುತ್ತಿತ್ತು.......
- ಮಹೇಶ್ ಜಿ ಕಟ್ಟೆ
ಶಿಕ್ಷಕರು, ತಿಪಟೂರು