ಸಾಂಪ್ರದಾಯಿಕ ಕಿನ್ನಾಳದ ಕರಕುಶಲ ಕಲೆ

    ಅನಾದಿ ಕಾಲದಿಂದಲೂ ಕಲೆ ಮನುಷ್ಯ ಜೀವನದ ಅವಿಭಾಜ್ಯ ಅಂಗ. ಭಾರತವು ವಿವಿಧ ಕಲೆ ಮತ್ತು ಸಾಂಸ್ಕೃತಿಕತೆಯ ತವರೂರು. ಭಾಷೆ, ಪ್ರಾದೇಶಿಕತೆ, ಧರ್ಮ, ಜಾತಿ ಮತ್ತು ಸೌಹಾರ್ದತೆ ಆಧಾರದ ಮೇಲೆ ಭಾರತದಲ್ಲಿ ವಿವಿಧ ಕಲಾಪ್ರಕಾರಗಳು ಪೌರಾಣಿಕ ಇತಿಹಾಸದಿಂದ ನಡೆದುಕೊಂಡು ಬಂದಿವೆ ಹಾಗೂ ಆಚರಣೆಯಲ್ಲಿವೆ. ನಾಡಿನ ಸಾಂಪ್ರದಾಯಿಕ ಕರಕುಶಲ ಕಲೆಗಳಲ್ಲಿ ಒಂದಾದ ಮತ್ತು ವಿಜಯನಗರ ಸಾಮ್ರಾಜ್ಯದ ಶ್ರೇಷ್ಟ ಅರಸ ಶ್ರೀ ಕೃಷ್ಣದೇವರಾಯನ ಪಂಚಪ್ರಾಣ ಕಲೆಯೆಂದೇ ಪ್ರಸಿದ್ದವಾದ ಕೊಪ್ಪಳ ಜಿಲ್ಲೆಯ ಕಿನ್ನಾಳದ ಕರಕುಶಲ ಕಲೆ.
    ಕರ್ನಾಟಕದಲ್ಲಿ ಚನ್ನಪಟ್ಟಣ ಗೊಂಬೆಗಳ ಮಾತ್ರವಲ್ಲದೆ ಇನ್ನೊಂದು ಸುಪ್ರಸಿದ್ದ ಗೊಂಬೆಗಳ ಕರಕುಶಲ ಕಲೆ ಕಿನ್ನಾಳದ ಗೊಂಬೆ ಕಲೆ. ಈ ಕಲೆಯ ಕುರಿತು ತಿಳಿದವರು ತುಂಬಾ ಕಡಿಮೆ ಎನಿಸಿದರೂ ಈ ಕಲೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಭಾರತದ ಸಾಂಪ್ರಾದಾಯಿಕ ಕಲೆಗಳಲ್ಲಿ ಭೌಗೋಳಿಕ ಚಿಹ್ನೆ ಪಡೆದಿರೋ ಹಲವಾರು ಕಲೆಗಳಲ್ಲಿ ಕಿನ್ನಾಳದ ಕಲೆ ಅಗಾಧವಾದ ಸಾಂಸ್ಕೃತಿಕ ಮತ್ತು ಶ್ರೀಮಂತಿಕೆಯನ್ನು ಹೊಂದಿದ್ದು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ೧೪೩೦ ರಿಂದ ೧೪೫೦ರ ಕಾಲಘಟ್ಟದಲ್ಲಿ ಉಚ್ಛಾçಯ ಸ್ಥಿತಿಯನ್ನು ತಲುಪಿತ್ತು ಎಂದು ಹೇಳಲಾಗುತ್ತದೆ. ಅಪ್ಪಟ ದೇಶಿಯ ಕಿನ್ನಾಳದ ಕಲೆಯಲ್ಲಿ, ಕಲಾವಿದನ ಕೈಚಳಕದಲ್ಲಿ ಅರಳಿರುವ ಗೊಂಬೆಗಳೇ ಕಲಾವಿದನ ತಾಳ್ಮೆ ಮತ್ತು ಪ್ರತಿಭೆಗೆ ಕೈಗನ್ನಡಿಯಾಗಿವೆ. ಕೊಪ್ಪಳ ನಗರದಿಂದ ಕೇವಲ ೧೨ ಕಿಮೀ ದೂರದಲ್ಲಿರುವ ಕಿನ್ನಾಳ ಗ್ರಾಮವು ಕಲೆಯ ನಗರವೆಂದೇ ಪ್ರಸಿದ್ದಿ ಪಡೆದಿದೆ.   
ಆಟಿಕೆಗಳು, ಕರಕುಶಲ ವಸ್ತುಗಳು, ಬಣ್ಣ ಬಣ್ಣದ ವರ್ಣಚಿತ್ರಗಳು, ದೇವರ ಮೂರ್ತಿಗಳು, ಬೊಂಬೆಗಳು, ಬಗೆಬಗೆಯ ಕಲಾಕೃತಿಗಳು ಹಣ್ಣುಗಳು, ತರಕಾರಿಗಳು, ಛತ್ರಿ ಛಾಮರಗಳು ಸೇರಿದಂತೆ ವಿವಿಧ ರೀತಿಯ ನವರಾತ್ರಿಗೆ ಬೇಕಾಗುವ ದೇವತೆಗಳ ಮೂರ್ತಿಗಳನ್ನು ಕಿನ್ನಾಳದ ಕಲಾಪ್ರಕಾರದಲ್ಲಿ ಆಕರ್ಷಕ ರೀತಿಯಲ್ಲಿ ತಯಾರಿಸಲಾಗುತ್ತದೆ.
    ಈ ಕಲೆಯಲ್ಲಿ ಕಲಾಕೃತಿಗಳನ್ನು ತಯಾರಿಸುವ ವಿಧಾನವು ಮತ್ತು ಬಳಕೆಯ ವಸ್ತುಗಳು ವಿಶೇಷವಾದದ್ದು. ಅಪ್ಪಟ ನೈಸರ್ಗಿಕವಾಗಿ ಹಗುರವಾದ ಮರಗಳ ಕಟ್ಟಿಗೆ, ಹುಣಸೆ ಬೀಜ, ಮರದ ಪುಡಿ, ಸೆಣಬಿನ ಪುಡಿ ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿ ಗೊಂಬೆಗಳನ್ನ ಮತ್ತು ಕರಕುಶಲ ವಸ್ತುಗಳನ್ನ ತಯಾರಿಸಲಾಗುತ್ತೆ. ಕಿನ್ನಳಾದ ಗೊಂಬೆಗೆ ಹಾಕುವ ಬಣ್ಣವು ಸುಮಾರು ೫೦ ವರ್ಷಗಳ ಕಾಲ ಮಾಸದಿರುವುದರಿಂದ ಈ ಕಲೆಯ ಇನ್ನೊಂದು ವಿಶೇಷ. ಆನೆ, ಸಿಂಹ, ಹುಲಿ ಸೇರಿದಂತೆ ಹಲವು ಪ್ರಾಣಿಗಳು, ಪೌರಾಣಿಕ ಸಂದರ್ಭಗಳನ್ನು ಸೂಚಿಸುವ ವರ್ಣಚಿತ್ರಗಳು ಕಿನ್ನಾಳದ ಕಲೆಗಳಲ್ಲಿ ಕಾಣಬಹುದಾಗಿದೆ. ಸಹಜವಾಗಿ ಜೀವಂತವಾಗಿರುವ ಬೊಂಬೆಗಳೇ ಎನ್ನುವ ರೀತಿಯಲ್ಲಿ ನೋಡುಗರಿಗೆ ಭಾಸವಾಗುವುದಂತೂ ಸುಳ್ಳಲ್ಲ ಮತ್ತು ನೈಜತೆಯ ಹೂರಣವನ್ನು ನೀಡುತ್ತದೆ.
    ಇನ್ನು ಕಿನ್ನಾಳದ ಕುಶಲಕರ್ಮಿಗಳನ್ನು ಚಿತ್ರಾಕಾರರೆಂದು ಕರೆಯಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಈ ಕಲೆಗಾರರಿಗೆ ವಿಪುಲವಾದ ಅವಕಾಶಗಳಿದ್ದವು. ತಮ್ಮ ಆಳ್ವಿಕೆಯ ಕಾಲದಲ್ಲಿ ರಾಜಮನೆತನದವರು ಕಲೆಯನ್ನು ಬೆಳೆಸಿಕೊಂಡು ಹಾಗೂ ಪೋಷಿಸಿಕೊಂಡು ಬಂದಿದ್ದರು. ಗೊಂಬೆಗಳನ್ನು ತಯಾರಿಸುವುದು ಮಾತ್ರವಲ್ಲದೆ ದೇವಾಲಯದ ಗೋಪುರಗಳ ನಿರ್ಮಾಣ ಹಾಗೂ ದೇವರ ಮೂರ್ತಿಗಳ ತಯಾರಿಕೆ, ರಥಗಳನ್ನು ತಯಾರಿಸುವ ಕೆಲಸಗಳನ್ನು ಮಾಡುತ್ತಿದ್ದರು.  
    ಆದರೆ ವಿಜಯನಗರ ಸಾಮ್ರಾಜ್ಯ ಪತನದ ನಂತರ ಕಿನ್ನಾಳ ಕಲೆಗೆ ಪ್ರೋತ್ಸಾಹದ ಕೊರತೆಯಿಂದ ಕಲಾಕಾರರ ಜೀವನ ದುಸ್ತರವಾಗಿ ಕಲೆ ಕುಂಠಿತವಾಯಿತು. ಬದುಕಿನ ಬಂಡಿ ಸಾಗಿಸಲು ಕಲಾವಿದರು ಅನಿವಾರ್ಯವಾಗಿ ದೇಶದ ವಿವಿಧ ಕಡೆಗಳಿಗೆ ವಲಸೆ ಹೋದರು ಎಂಬುದು ಇತಿಹಾಸಕಾರರ ಮಾತು. ನಂತರ ಹೈದ್ರಾಬಾದ್ ನಿಜಾಮರು, ನವಾಬರು ಹಾಗೂ ದೇಸಾಯಿಯವರ ಕಾಲಘಟ್ಟದಲ್ಲಿ ಕಲೆಗೆ ಜೀವ ತುಂಬಿದಂತಾಯಿತು ಎಂದು ಇತಿಹಾಸ ಹೇಳುತ್ತದೆ. ಈ ಹಿಂದೆ ನೂರಾರು ಕುಟುಂಬಗಳ ಕಲೆಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದವು ಆದರೆ ಈಗ ೬೭ ಕುಟುಂಬಗಳ ಇದ್ದು ಅದರಲ್ಲಿ ಕೇವಲ ೩೦ ಕುಟುಂಬಗಳು ಕಲೆಯಲ್ಲಿ ತಮ್ಮನ್ನ ತಾವು ತೋಡಗಿಸಿಕೊಂಡಿವೆ. ವಿಶೇಷವೆಂದರೆ ಕಿನ್ನಾಳದ ಶೈಲಿಯಲ್ಲಿ ತಯಾರಾದ ಕಲಾಕೃತಿಗಳು ಜಗತ್ತಿನ ಪ್ರತಿಷ್ಢಿತ ದೇಶಗಳಾದ ಲಂಡನ್, ಮಲೇಷ್ಯಾ, ಸಿಂಗಪೂರ್, ಜರ್ಮನಿ, ದುಬೈ ಮತ್ತು ಸ್ವಿಟ್ಜರ್‌ಲ್ಯಾಂಡ್ ಸೇರಿದಂತೆ ಹಲವು ದೇಶಗಳಿಗೆ ರಪ್ತಾಗುತ್ತಿವೆ. ಕಲೆಯೆಡೆಗೆ ಮೋಹಗೊಂಡು ಹಲವು ವಿದೇಶಿಗರು ಆಸಕ್ತಿಯಿಂದ ಕಲಿಯಲು ಕಿನ್ನಾಳಕ್ಕೆ ಬರುತ್ತಿದ್ದಾರೆ. ಇದರೊಂದಿಗೆ ಕಲೆಯನ್ನು ಮುಂದಿನ ಪೀಳಿಗೆ ಕೊಂಡ್ಯೊಯ್ಯಲೇಬೇಕೆಂಬ ನಿಟ್ಟಿನಲ್ಲಿ ಕಲಾವಿದರು ಶಾಲೆ ಕಾಲೇಜುಗಳಿಗೆ ತೆರಳಿ ಕಲೆಯನ್ನು ಪರಿಚಯಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಕಲೆಯ ಕುರಿತು ಅಭಿಮಾನ ಹಾಗೂ ಕಲೆಯ ಉಳಿವಿನೆಡೆಗೆ ತಾವು ಪಾಲುದಾರರಾಗಲು ಕಲಾವಿದರು ಪ್ರೋತ್ಸಾಹಿಸುತ್ತಿದ್ದಾರೆ.  
ಹೀಗೆ ಕಾಲಾಂತರದಲ್ಲಿ ಕಲೆಯನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ೨೦೧೩ರ ಗಣರಾಜ್ಯೋತ್ಸವದ ಪ್ರಯುಕ್ತ ಸ್ತಬ್ದಚಿತ್ರ ಪ್ರದರ್ಶನದಲ್ಲಿ ಕಿನ್ನಾಳ ಕಲೆಗೆ ಅವಕಾಶ ನೀಡಿ ಭಾರತೀಯರಿಗೆ ಕಿನ್ನಾಳ ಕಲೆ ಎನೆಂಬುದು ಇನ್ನು ಹತ್ತಿರವಾಯಿತು. 
   ಗ್ರಾಮೀಣ ಮಟ್ಟದಲ್ಲೇ ಕಲೆ  ಉಳಿಸಬೇಕು ಎಂಬ ನಿಟ್ಟಿನಲ್ಲಿ  ಕರ್ನಾಟಕ ಸರ್ಕಾರವು ಕೊಪ್ಪಳ ನಗರದ ಹತ್ತಿರದಲ್ಲಿ ಕಿನ್ನಾಳ ಆಟಿಕೆಗಳನ್ನು ತಯಾದಿಸಲು ಫ್ಯಾಕ್ಟರಿ ಸ್ಥಾಪನೆಗೆ ಶಂಕುಸ್ಥಾಪನೆ ಮಾಡಲಾಗಿದೆ. ಕರಕುಶಲ ವಸ್ತುಗಳನ್ನ ವಿದೇಶಕ್ಕೆ ರಫ್ತು ಮಾಡುವುದರ ಜತೆಗೆ ಸ್ಥಳೀಯ ಮಟ್ಟದ ಕಾರ್ಮಿಕ ವಲಯಕ್ಕೆ ಉದ್ಯೋಗ ನೀಡಬೇಕೆಂಬ ಉದ್ದೇಶದಿಂದ ಕಾರ್ಖಾನೆಯನ್ನು ತೆರೆಯಲಾಗಿದೆ. ಆಡಳಿತ ವರ್ಗದ ಪ್ರೋತ್ಸಾಹದೊಂದಿಗೆ ಪ್ರತಿಯೊಬ್ಬ ಭಾರತೀಯನು ಸಹಕಾರ, ಬೆಂಬಲ ನೀಡಿದಾಗ ಇಂತಹ ಸಾಂಪ್ರದಾಯಿಕ ಕಲೆಗಳ ಉಳಿವು ಸಾಧ್ಯ.  

 

-ವಿಜಯಕುಮಾರ ಹಿರೇಮಠ
  ಪತ್ರಿಕೋದ್ಯಮ ವಿದ್ಯಾರ್ಥಿ
  ಎಸ್‌ಡಿಎಂ ಕಾಲೇಜು, ಉಜಿರೆ