ನಾನು ಚಿತ್ರ ಅಲ್ಲಾ!

     ಒಂದು ದಿನ ಬಹಳ ವರ್ಷಗಳಿಂದಲೂ ನಾನು ಹೋಗುತ್ತಿದ್ದ ವೈದ್ಯರ ಕ್ಲಿನಿಕ್ ಗೆ ಹೋಗಿದ್ದೆ. ಅಲ್ಲಿ ಸುಮಾರು ಜನ ನನಗಿಂತ ಮೊದಲೇ ಕಾಯುತ್ತಿದ್ದರು. ನಾನು ಸಹ ಒಂದು ಕುರ್ಚಿಯಲ್ಲಿ ಕುಳಿತು ಸುತ್ತಮುತ್ತ ಇದ್ದ ಜನಗಳು, ಮಕ್ಕಳು, ವೃದ್ಧರನ್ನು ಅವಲೋಕಿಸಿದೆ. ಯಾರು ಯಾರ ಜೊತೆಗೆ ಬಂದಿರಬಹುದು?  ಯಾರು ಸಹಾಯಕರಾಗಿ ಬಂದಿರಬಹುದು?  ನನ್ನ ಸರದಿ ಯಾವಾಗ ಬರಬಹುದು?  ಹೀಗೆ ಯೋಚಿಸುತ್ತಾ ಕುಳಿತೆ. ಮೊಬೈಲ್ ನೋಡುವುದಕ್ಕಿಂತ ಇದು ನನ್ನ ಮೆಚ್ಚಿನ ಸಮಯ ಕಳೆಯುವ ಬಗೆ. ಹೀಗೆ ನಾನು ಆಚೆ-ಈಚೆ ನೋಡುತ್ತಿದ್ದಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬ ಮಹಿಳೆ ದಿಢೀರನೆ ನನ್ನ ಹತ್ತಿರ ಬಂದು, “ನೀವು ಚಿತ್ರ ಅಲ್ವಾ? ನನಗೆ ಗೊತ್ತು ನೀವು ಚಿತ್ರ “ಅಂದಳು. ಆದರೆ ನನ್ನ ಹೆಸರು ಚಿತ್ರ ಅಲ್ಲ!! ಅಷ್ಟು ಅವಸರದಲ್ಲಿ ಹಠಾತ್ತಾಗಿ ಕೇಳಿದಾಗ ನನಗೆ ಏನೂ ತೋಚದೆ ಉತ್ತರ ಕೊಡಲಿಲ್ಲ. ಮೌನವನ್ನು ಹೌದು ಎಂದು ತಿಳಿದುಕೊಂಡಳು. ಅವಳು ಎಷ್ಟು ವಿಶ್ವಾಸದಿಂದ ನಾನೇ  ಚಿತ್ರ ಎಂದು ನಂಬಿದ್ದಳು ಅಂದರೆ ಅವಳು  “ಅಲ್ಲ “ ಎನ್ನುವ ನನ್ನ ಉತ್ತರವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. “ನೀವು ಜಯನಗರದಲ್ಲಿ ಇದ್ದಿರಿ ಅಲ್ವಾ?”  ಎಂದಳು.  ನಾನು  ಎಚ್ಚೆತ್ತು “ನಾವು ಜಯನಗರದಲ್ಲಿ ಯಾವಾಗಲೂ ಇರಲಿಲ್ಲ“ ಎಂದೆ. ಅದು ಅವಳಿಗೆ ಕೇಳಿಸಲೇ ಇಲ್ಲ. ಮುಂದೆ ನನಗೆ ನನ್ನ ಪರಿವಾರದವರ ಪರಿಚಯ ಮಾಡಲು ಪ್ರಾರಂಭಿಸಿದಳು. ನಿಮ್ಮ ತಂದೆ ರಾಮರಾಯರು ದೊಡ್ಡ ವೈದ್ಯರು ನಮ್ಮ ಮನೆಯ ಬಳಿಯೇ ನಿಮ್ಮ ಮನೆ ಇದ್ದುದು ಎಂದು ತಂದೆಯನ್ನು ಪರಿಚಯಿಸಿದಳು. ಇಂಜಿನಿಯರ್ ಆಗಿದ್ದ ನನ್ನ ತಂದೆ ಯಾವಾಗ ಅಷ್ಟು ಒಳ್ಳೆಯ ವೈದ್ಯರಾದರು ಎಂದು ಆಶ್ಚರ್ಯ ಪಡುತ್ತಿದ್ದಾಗ, ನಿಮ್ಮ ತಾಯಿ ರಾಧಮ್ಮ , ನಿಮ್ಮಣ್ಣ ಇದ್ದಾರಲ್ಲ ಅವರು ಈಗ ಏನು ಮಾಡುತ್ತಿದ್ದಾರೆ?“ ಎಂದು ಕೇಳಿದಳು. ಓಹೋ ನನಗೆ ಹೊಸದಾಗಿ ಅಣ್ಣಾ ಬೇರೆ ಸಿಕ್ಕಿದ.  ನನಗೆ ನನ್ನ ಬಗ್ಗೆ ನನಗಿಂತ ಹೆಚ್ಚು ತಿಳಿದು ನನಗೇ ಹೇಳುತ್ತಿರುವುದು ತಮಾಷೆ ಯಾಗಿತ್ತು. ನನಗೆ ಮರೆವು ಬಂದಿದೆ ಎಂದು ಏನಾದರೂ ತಿಳಿದು , ಅದಕ್ಕೆ ಆಸ್ಪತ್ರೆಗೆ ಬಂದೆ ಎಂದುಕೊಂಡಳಾ?, ಎಂದು ಅನಿಸಿತು. 
     ನನ್ನಂತೆ ಇರುವ ಇನ್ನೊಬ್ಬರು ಇರಬಹುದು ಆದರೆ ನನ್ನ ವಿಷಯ ನನಗೆ ತಿಳಿದಿಲ್ಲದ ರೀತಿ ಮಾತನಾಡುವುದು ಎಷ್ಟು ಸರಿ? ನನ್ನ ಆಶ್ಚರ್ಯ ಮತ್ತು ಕಕ್ಕಾಬಿಕ್ಕಿಯಾದ ಮುಖವನ್ನು ನೋಡಿಯಾದರೂ ನಾನು ತಪ್ಪು ಮಾಡುತ್ತಿದ್ದೇನೆ ಎಂದು ತಿಳಿಯಲಿಲ್ಲ. ನಾನು ಏನು ಹೇಳಿದರೂ, ಅಲ್ಲ ಎಂದು ತಲೆ ಆಡಿಸುತ್ತಿದ್ದರೂ ನೋಡಿಯೂ ನೋಡಿದಂತೆ ಮಾತು ಮುಂದುವರಿಸಿದಳು. ಒಮ್ಮೆಲೆ ಮನಸ್ಸಿಗೆ ಹೊಸ ವಿಷಯ ಹೊಳೆದಂತೆ “ನಾನು ಯಾರು ತಿಳಿಯಲಿಲ್ಲ ಅಲ್ಲವಾ?  ನಾನು ವಿಮಲ, ನಿಮ್ಮ ಮನೆಗೆ ಬಂದು ನಿಮ್ಮ ಜೊತೆಯಲ್ಲಿ ಆಡುತ್ತಿದ್ದೆ “ ಎಂದಳು. ಸದ್ಯ ಒಂದು ಸರಿಯಾದ ಮತ್ತು ಬೇಕಾದ ಮಾಹಿತಿ ಕೊಟ್ಟಿದ್ದಕ್ಕೆ ಸಂತೋಷವಾಯಿತು. ನಾನು “ವಿಮಲಾ ನಾನು ಚಿತ್ರ ಅಲ್ಲ , ಜಯನಗರದಲ್ಲಿ ನಮ್ಮ ಮನೆ ಇಲ್ಲ “  ಎಂದೆ. ಅದಕ್ಕೆ ಅವಳು,“ ಇಲ್ಲ ನೀವು ಚಿತ್ರಾನೇ“  ಎನ್ನಬೇಕೇ?!  ಒಂದು ನಿಮಿಷ ಏನಾದರೂ ನನಗೆ ಅರುಳು ಮರುಳೋ ಇಲ್ಲ ಅವಳಿಗೊ ಎಂದು ಯೋಚಿಸುವಂತಾಯಿತು. ಮುಂದೆ“  ನಿಮ್ಮಜ್ಜಿ ನಮ್ಮ ಜೊತೆ ಚೌಕಾಬಾರ ಆಡುತ್ತಿದ್ದರು ಮತ್ತೆ ತಾತ ನಮಗೆಲ್ಲಾ ಕಥೆ ಹೇಳುತ್ತಿದ್ದರು“ ಎಂದಳು. ಅದು ಸರಿ ಎಲ್ಲಾ ಅಜ್ಜಿ ತಾತಂದಿರು ಪ್ರೀತಿಯಿಂದ ಮಾಡುವ ಕೆಲಸ ತಾನೆ ಅದು. ನನಗೆ ಅಜ್ಜಿ ತಾತಂದಿರು ಇದ್ದರು.  ಒಂದು ಮಾಹಿತಿ ಸರಿಯಾಗಿ ಹೇಳಿದೆ ಭೇಷ್ ಎಂದುಕೊಂಡೆ. ಆದರೆ ಹೆಸರು ಏನು ಎಂದು ಕೇಳಲೇ ಎಂದು ಯೋಚನೆ ಬಂತು.  ಮುಂದಿನ ಸಮಾಚಾರ ನಮ್ಮ ಮನೆ ಬದಲಾವಣೆ. “ಅಷ್ಟು ವರ್ಷ ಇದ್ದವರು ನೀವು ಮನೆ ಬದಲಾಯಿಸಿ ಹೋಗಿಬಿಟ್ಟಿರಿ. ಎಲ್ಲಿ ಎಂದು ಸರಿಯಾಗಿ ತಿಳಿಯಲಿಲ್ಲ . ನಿಮ್ಮನ್ನೆಲ್ಲ ಬಹಳ ಮಿಸ್ ಮಾಡಿದೆ, ಈಗ ಸಿಕ್ಕಿದಿರಿ“, ಎಂದಳು. ಓಹೋ ಹಾಗಾದರೆ ಇವಳು ಸುಲಭಕ್ಕೆ ಬಿಡುವುದಿಲ್ಲ ಎಂದಿತು ಮನಸ್ಸು. 
ಅಷ್ಟು ಹೊತ್ತಿಗೆ ಅವಳ ಸರದಿ ಬಂದು ಅವಳನ್ನು ಒಳಗೆ ಕರೆದರು.  “ಸ್ವಲ್ಪ ಇರಿ ನಿಮ್ಮ ಬಳಿ ತುಂಬಾ ಮಾತನಾಡಬೇಕು ಈಗ ಬಂದೆ“ ಎಂದು ಹೇಳಿ ಒಳಗೆ ಹೋದಳು. ಇಲ್ಲಿಂದ ಹೋಗಿಬಿಡಲೇ ಇದಾವ ಬೆನ್ನುಬಿಡದ ಭೂತ ಹಿಂದೆ ಬಿದ್ದಿದೆ ಎಂದುಕೊಂಡೆ.

     ಸುತ್ತಮುತ್ತ ಕುಳಿತಿದ್ದ ಜನರು ನಾನು ಏನು ಮಾಡಬಹುದು ?  ಇವಳು ಚಿತ್ರಾನಾ ಅಲ್ಲವಾ ಎಂದು ಯೋಚಿಸುತ್ತ, ಮುಂದೆ ನಡೆಯುವ ಹೊಸ ಅಂಕವನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದರು. ಅವಳು ವೈದ್ಯರನ್ನು ನೋಡಿ ಬರುವವರೆಗೂ ಏನು ನಿರ್ಧಾರವನ್ನು ತೆಗೆದುಕೊಳ್ಳುವುದು ಎಂದು ತಿಳಿಯಲಿಲ್ಲ. ಮನೆಯಲ್ಲಿ ಕೆಲಸಗಳನ್ನು ಬಿಟ್ಟು ಇಷ್ಟು ದೂರ ಬಂದಿರುವಾಗ ಇವಳಿಗೆ ಹೆದರಿ ಹಿಂದಿರುಗಿದರೆ ಮತ್ತೆ ಬಿಡುವು ಮಾಡಿಕೊಂಡು ಬರುವುದು ಕಷ್ಟ. ಇವಳ ನಂತರ ನನ್ನ ಸರದಿಯು ಬರುತ್ತದೆ. ಆಗ ಒಳಗೆ ಹೋಗಿ ತಪ್ಪಿಸಿಕೊಂಡು ಬಿಡಬಹುದು ಎಂದು ಸುಮ್ಮನೆ ಕುಳಿತೆ. ಅವಳು ಒಳಗೆ ಹೋಗಿ ಮಾತನಾಡುವಾಗ ಅವಳಿಗೆ ಜ್ಞಾನೋದಯ ಆಯಿತು ಎಂದು ಅನಿಸುತ್ತದೆ. ಸ್ವಲ್ಪ ಸಮಯದ ನಂತರ ಆಚೆ ಬಂದಳು.  ನನ್ನ ಸರದಿ ಬಂದಿರಲಿಲ್ಲ ನಾನು ಅಲ್ಲೆ ಕುಳಿತಿದ್ದೆ. ತಿರುಗಿ ನನ್ನ ಬಳಿಗೆ ಬಂದು,  “ಹಾಗಾದರೆ ನೀವು ಚಿತ್ರ ಅಲ್ಲ ಕ್ಷಮಿಸಿ ಅವರು ಇದೇ ತರಹ ಇದ್ದಾರೆ. ಇದೇ ಮುಖ,  ಇದೇ ಬಣ್ಣ ಅವರೆ ಎಂದು ತಿಳಿದು ಮಾತನಾಡಿದೆ. ಏನೂ ಅಂದುಕೊಳ್ಳಬೇಡಿ! “  ಎಂದು ಹೇಳಿ ನಾನು ಉತ್ತರಿಸುವ ಮುಂಚೆ ಅಲ್ಲಿಂದ ವೇಗವಾಗಿ ಹೊರಟು ಹೋದಳು. ತನ್ನ ತಪ್ಪಿನ ಅರಿವಾಗಿ ಅದರ ಜೊತೆಗೆ ಸುತ್ತಲಿನವರ ಮುಂದೆ ಮುಖಭಂಗವಾಗಿ ಅವರು ನಗಬಹುದೆಂದು ಅವಳು ಹಾಗೆ ಹೊರಟು ಹೋಗಿರಬಹುದು. ಕೊನೆಗೂ ನಾನು ʼಚಿತ್ರʼ ಅಲ್ಲ ಎಂದು ನನಗೆ ಅಲ್ಲದೆ ಅಲ್ಲಿದ್ದವರಿಗೆಲ್ಲಾ ತಿಳಿಯಿತು!. ಭಗವಂತ ಒಬ್ಬರಂತೆ ಏಳು ಜನರನ್ನು ಸೃಷ್ಟಿಸಿರುತ್ತಾನಂತೆ  ಬಹುಶಃ ಅದಿಕ್ಕೆ ಈ ಗೊಂದಲ ಆಗಿರಬಹುದು. ಅಷ್ಟು ಹೊತ್ತಿಗೆ ನನ್ನ ಸರದಿ ಬಂತು ನಾನು ಒಳಗೆ ಹೋದೆ.

 

-ಅಂಬಿಕ ರಾವ್ 
ಬೆಂಗಳೂರು