“ಟಗರು ಪಲ್ಯ” ಏನಿದು ವಿಚಿತ್ರ, ಟಗರು ಅಂದ್ರೆ ಎಲ್ಲಾರಿಗೂ ತಿಳಿದದ್ದೇ ಆದರೆ ಈ ಟಗರು ನಂತರ ಪಲ್ಯ ಏನುಕ್ಕೆ ಬರುತ್ತೇ ಅನ್ನುವ ಪ್ರಶ್ನೆ ಕಾಡುತ್ತಿದೆಯೇ, ಏನಿದು ಅಂತೀರಾ ಬನ್ನಿ ಹೆಳ್ತೇನೆ..
ಮಂಡ್ಯದ ಒಂದೂರಲ್ಲಿ ಗೌಡರ ಮಗಳ ಮದುವೆ ಸಂಭ್ರಮ. ಹುಡುಗ–ಹುಡುಗಿಗೆ ಮದುವೆ ನಿಶ್ಚಯ ಮಾಡುವ ಮೊದಲು ಊರ ದೇವಿಗೆ ಪೂಜೆ ನೀಡುವ ವಾಡಿಕೆ. ಬೆಳಗಿನ ಜಾವದಲ್ಲಿ ಊರಿನವರೆಲ್ಲ ದಟ್ಟ ಕಾಡಿನ ನಡುವಿನ ನದಿ ತೀರದಲ್ಲಿರುವ ದೇವಿಯ ತಾಣಕ್ಕೆ ಹೊರಡುವುದರಿಂದ ‘ಟಗರು ಪಲ್ಯ’ ಸಿನಿಮಾ ಪ್ರಾರಂಭವಾಗುತ್ತದೆ. ಟಗರು ಸತಾಯಿಸಿ ಸತಾಯಿಸಿ ತಲೆ ಒದರಿ, ಪೂಜೆ ಮುಗಿಯುವ ಹೊತ್ತಿಗೆ ಸಿನಿಮಾವೂ ಮುಗಿದಿರುತ್ತದೆ. ಮುಂಜಾನೆಯಿಂದ ಸಂಜೆಯೊಳಗೆ ನಡೆಯುವ ‘ಪಲ್ಯ’ದ ಸಣ್ಣ ಕಥೆಯನ್ನು ಹದವಾದ ಒಗ್ಗರಣೆಯೊಂದಿಗೆ ತೆರೆಯ ಮೇಲೆ ತರುವ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕ ಉಮೇಶ್. ಕೆ ಕೃಪ.
ಚಿತ್ರದಲ್ಲಿ ಊರಿನ ಜನರ ಮಾತು ಅವರು ಬಳಸುವಂತಹ ಭಾಷೆ ಎಲ್ಲಾವು ಮಂಡ್ಯ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಒಂದು ಪೇಟೆಯ ಸಂಬಂಧ ಊರಿಗೆ ಬಂದು ಮದುವೆಗೆ ಮುಂದಾದಾಗ ಆಗುವಂತಹ ಅಡಚಣೆಗಳ ಬಗ್ಗೆ ನಿರ್ದೇಶಕರು ಬಹಳ ಸೂಕ್ಷ್ಮವಾಗಿ ಬಿಂಬಿಸಿದ್ದಾರೆ. ಇನ್ನು ಚಿತ್ರದಲ್ಲಿ ಹಾಸ್ಯ ಪಾತ್ರಗಳ ಸಾಲುಗಳನ್ನೇ ನಿರ್ದೇಶಕರು ತಂಬಿದ್ದಾರೆ. ಪೂಜಾರಿ, ಬಾಣಸಿಗ, ಕೊರಗ ಹಿರಿಯ ನಾಗರೀಕ ಮತ್ತು ಕುಡುಕ ಯಾರೊಬ್ಬರೂ ನಮ್ಮನ್ನು ಚಿತ್ರ ಬೊರಾಗದಂತೆ ತೆಗೆದುಕೊಂಡು ಹೊಗುವುದರಲ್ಲಿ ಚಮತ್ಕಾರವನ್ನೇ ಮಾಡಿದ್ದಾರೆ.
ಚಿತ್ರದ ನಿರೂಪಣೆ ಬಹಳ ಸಹಜವಾಗಿ, ಒಂದಿಡೀ ಊರನ್ನು ಕಣ್ಣಮುಂದೆ ಕಟ್ಟಿಕೊಡುವಂತಿರುವುದು ಚಿತ್ರದ ದೊಡ್ಡ ಸಕಾರಾತ್ಮಕ ಅಂಶ. ಊರಿನ ಗೌಡರಾಗಿ, ಮದುವೆ ಹುಡುಗಿಯ ಅಪ್ಪನಾಗಿ ರಂಗಾಯಣ ರಘು ನಟಿಸಿದ್ದಾರೆ. ಪತ್ನಿಯಾಗಿ ತಾರಾ ಜೊತೆಯಾಗಿದ್ದಾರೆ. ನಾಯಕ ನಾಗಭೂಷಣ್ ಗೌಡರ ಅಳಿಯ ‘ಚಿಕ್ಕ’ನಾಗಿ ಇಷ್ಟವಾಗುತ್ತಾರೆ. ಸಾಮಾನ್ಯವಾಗಿ ನಗಿಸುವ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ನಾಗಭೂಷಣ್ ಇಲ್ಲಿ ನಗಿಸುವುದಕ್ಕಿಂತ ಹೆಚ್ಚಾಗಿ ಭಾವುಕರಾಗಿ ನಟಿಸಿದ್ದಾರೆ. ಗೌಡರ ಮಗಳಾಗಿ ನಾಯಕಿ ಅಮೃತಾ ಪ್ರೇಮ್ ಕಾಣಿಸಿಕೊಂಡಿದ್ದು, ಮೊದಲ ಸಿನಿಮಾ ಎನ್ನಿಸದಷ್ಟು ಚೆನ್ನಾಗಿ ನಟಿಸಿದ್ದಾರೆ. ಮೊದಲ ಅರ್ದದಲ್ಲಿ ಇವರ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯ ನೀಡಿಲ್ಲ. ಕ್ಲೈಮ್ಯಾಕ್ಸ್ ವೇಳೆ ಮಗಳ ಮನದೊಳಗಿನ ತಳಮಳದ ಮಾತುಗಳೊಂದಿಗೆ ಕಣ್ಣಂಚಿನಲ್ಲಿ ನೀರು ತರಿಸುವ ನಟನೆ ಮಾಡಿದ್ದಾರೆ.
ರಂಗಾಯಣ ರಘು ಹಾಗೂ ತಾರಾ ಪಾತ್ರ ತಾವಾಗಿ ಆವರಿಸಿಕೊಂಡುಬಿಡುತ್ತಾರೆ. ಪೇಟೆಯ ಹುಡುಗನಾಗಿ ಬರುವ ವಾಸುಕಿ ವೈಭವ್ ಇಷ್ಟವಾಗುತ್ತಾರೆ. ಎಲ್ಲ ಕಲಾವಿದರು ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಾಸುಕಿ ವೈಭವ್ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಸೂಕ್ತವಾಗಿದೆ. ಇರುವ ಮಿತಿಯಲ್ಲಿ ದೃಶ್ಯಗಳನ್ನು ರಮಣೀಯವಾಗಿಸಲು ಛಾಯಾಗ್ರಾಹಕ ಎಸ್.ಕೆ.ರಾವ್ ಯತ್ನಿಸಿದ್ದಾರೆ. ಇನ್ನು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನಿಡುವ ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ನಿಂದ ನಿರ್ಮಾಣಗೊಂಡ ಪಕ್ಕಾ ಫ್ಯಾಮಿಲಿ ಚಿತ್ರವಾಗಿದೆ.
-ಗ್ಲೆನ್ ಗುಂಪಲಾಜೆ