ಭಾವ ಸ್ಪಂದನ 

     “ನಮ್ಮ ಪದ್ಮ ಯಾವ ಅಲಂಕಾರ ಮಾಡಿಕೊಂಡರೂ ಮುದ್ದಾಗಿ ಕಾಣುತ್ತಾಳೆ” ತಾಯಿ ರಾಗಿಣಿ, ಹೊಸ ಮಾದರಿಯ ಸ್ಕರ್ಟ್ ತೊಟ್ಟು ಹೊರಟ ಮಗಳ ಅಂದವನ್ನು ನೋಡಿ ಹೇಳಿಕೊಂಡರು. ಅಲ್ಲೆ ಕುಳಿತಿದ್ದ ಅವಳ ತಂಗಿ ಪಲ್ಲವಿ ಅಕ್ಕನ ಕಡೆಗೊಮ್ಮೆ ತಾಯಿಯ ಕಡೆಗೊಮ್ಮೆ ನೋಡಿದಳು. ಅಕ್ಕನ ಬಗ್ಗೆ ಪ್ರೀತಿ ಇದ್ದರೂ ಅವಳು ತನ್ನನ್ನು ಕಡೆಗಾಣಿಸುತ್ತಾಳೆ ಎಂದು ಬೇಸರ. ಹೇಳಿಕೊಳ್ಳಲಾಗದೆ ಸುಮ್ಮನೆ ಕುಳಿತಳು. ಪದ್ಮ ಈಗ ಇಂಜಿನಿಯರಿಂಗನ್ನು ಕೊನೆಯ ವರ್ಷದಲ್ಲಿ ಓದುತ್ತಿದ್ದಾಳೆ. ಓದಿನಲ್ಲಿ ಬಹಳ ಜಾಣೆ. ರೂಪ, ಯವ್ವನ, ವಿದ್ಯೆ ಎಲ್ಲವೂ ಇರುವ ಕಡೆ ಮನಸ್ಸು ಮದದಿಂದ ಕೂಡಿರುವುದರಲ್ಲಿ ಏನು ಆಶ್ಚರ್ಯ. 
ಪಲ್ಲವಿ ಸಾಧಾರಣ ರೂಪಿನ ಸಾಧಾರಣ ಹುಡುಗಿ. ಓದಿನಲ್ಲಿ ಜಾಣೆ ಅಲ್ಲದಿದ್ದರೂ ಕಷ್ಟಪಟ್ಟು ಓದಿ ಮುಂದೆ ಬರುತ್ತಿದ್ದಾಳೆ. ಈಗ ಅವಳು ಎರಡನೇ ಪಿಯುಸಿ ಕಾಮರ್ಸ್ ಕೋರ್ಸ್ ಅನ್ನು ಓದುತ್ತಿದ್ದಾಳೆ. 
     ಮನೆಯವರಿಗೆಲ್ಲ ಪದ್ಮ ಅಚ್ಚುಮೆಚ್ಚು. ಅವಳನ್ನು ಹೊಗಳುವುದೆಂದರೆ ಎಲ್ಲರಿಗೂ ಹೆಚ್ಚಿನ ಬಲಬಂದಂತೆ. ಪಲ್ಲವಿ ಎಲ್ಲರಲ್ಲಿ ತಾನು ಒಬ್ಬಳು. ಅಕ್ಕ ಮಾತ್ರ ಅವಳನ್ನು ತುಂಬಾ ಕೀಳಾಗಿ ಕಾಣುತ್ತಿದ್ದಳು. ಅವಳಿಗೇನು ಯಾವುದಾದರೂ ಸರಿಯೇ ಎನ್ನುವ ಧೋರಣೆಯಲ್ಲಿ ಒಳ್ಳೆಯ ಬಟ್ಟೆ ಸಾಮಾನು ಮೊಬೈಲು ಎಲ್ಲವನ್ನು ತಾನು ತೆಗೆದುಕೊಳ್ಳುವಳು. ಅವಳು ಬಿಟ್ಟಿದ್ದು ಪಲ್ಲವಿಗೆ. ಪಲ್ಲವಿ ಬೇಜಾರು ಮಾಡಿಕೊಳ್ಳದೆ ಎಲ್ಲವನ್ನು ಒಪ್ಪಿಕೊಳ್ಳುತ್ತಿದ್ದಳು. 
     ಈಗ ಸುಮಾರು ಒಂದು ವರ್ಷದಿಂದ ಪಲ್ಲವಿಗೆ ಇನ್ನೊಂದು ಸಮಸ್ಯೆ ಆರಂಭವಾಗಿತ್ತು. ಅವಳ ಕಣ್ಣಿನ ದೃಷ್ಟಿ ನಿಧಾನವಾಗಿ ಕಡಿಮೆ ಆಗುತ್ತಿತ್ತು. ಏನಾಗುತ್ತಿದೆ ನನಗೆ ಎಂದು ಅವಳಿಗೆ ಭಯವಾಗಿ ತಾಯಿಯ ಬಳಿ “ ಅಮ್ಮ ಯಾಕೋ ಸರಿಯಾಗಿ ಕಾಣುತ್ತಿಲ್ಲ ಮುಸುಕು ಮುಚ್ಚಿದಂತೆ ಆಗುತ್ತೆ” ಎಂದು ದುಃಖದಿಂದ ಹೇಳಿದಳು. ಅವರು ವೈದ್ಯರ ಬಳಿಗೆ ಕರೆದುಕೊಂಡು ಹೋದರು. ವೈದ್ಯರು ತಪಾಸಣೆ ಮಾಡಿ“ ನೋಡಮ್ಮ ನೀನು ಸ್ವಲ್ಪ ಧೈರ್ಯ ತಂದುಕೊಳ್ಳಬೇಕು. ಸಮಾಧಾನವಾಗಿ ನಾನು ಹೇಳುವುದನ್ನು ಕೇಳು” ಎಂದರು. ಪಲ್ಲವಿಯ ಎದೆ ಬಡಿತ ಅವಳ ಕಿವಿಗೆ ಕೇಳುತ್ತಿತ್ತು. ಏನು ಹೇಳುವರೋ ಎಂಬ ಭಯದಿಂದ ಮಾತನಾಡಲು ತೋರದೆ ತಲೆ ಆಡಿಸಿದಳು. “ ಇದು ಕುಂದುತ್ತಿರುವ ಕಣ್ಣು ಪೊರೆಯ ತೊಂದರೆ. ಮುಂದೆ ಒಂದೆರಡು ವರ್ಷಗಳಲ್ಲಿ ಪೂರ್ತಿ ದೃಷ್ಟಿಯನ್ನು ಕಳೆದುಕೊಳ್ಳುತ್ತೀರಿ. ಈಗ ಔಷಧಿಯನ್ನು ಪ್ರಾರಂಭಿಸುತ್ತೇನೆ. ಆದರೆ ಇದಕ್ಕೆ ಸರಿಯಾದ ಔಷಧಿ ಇಲ್ಲ” ಎಂದು ವಿವರಿಸಿದರು. ಇದನ್ನು ಕೇಳಿ ಅರಗಿಸಿಕೊಳ್ಳಲು ಪಲ್ಲವಿ ಮತ್ತು ಅವಳ ತಂದೆ ತಾಯಿಯರಿಗೆ ಸುಮಾರು ಸಮಯ ಹಿಡಿಯಿತು. “ ಬಂದದ್ದನ್ನು ಅನುಭವಿಸಬೇಕು ಧೈರ್ಯ ತಂದುಕೊ” ಎಂದು ಅವಳ ತಲೆ ಸವರಿ ಅಳುತ್ತಿದ್ದ ಪಲ್ಲವಿಯನ್ನು ತಂದೆ ಸಮಾಧಾನ ಮಾಡಲು ಪ್ರಯತ್ನಿಸಿದರು. 
       ಮುಂದೆ ಪಲ್ಲವಿಗೆ ಹೊಸದೊಂದು ಸವಾಲು ಎದುರಾಯಿತು. ಕಲಿತಿದ್ದನ್ನು ಮರೆತು ಕಣ್ಣಿಲ್ಲದೆ ಬದುಕಲು ಮರು ಕಲಿಕೆಯನ್ನು ಮಾಡಬೇಕಾಗಿತ್ತು. ಅವಳಿಗೆ ತಿಳಿದಿದ್ದ ನೋಟವನ್ನು ಕಾಣಲು ಕಣ್ಣು ಮಿಟಿಕಿಸಿ ನೋಡಿದರೆ ಬರೀ ಬಿಳಿ ಬಣ್ಣ ಕಣ್ಣ ಮುಂದೆ ಹರಡಿಕೊಳ್ಳುತ್ತಿತ್ತು. ಕೆಲವು ಸಲ ಅಲ್ಪಸ್ವಲ್ಪ ಕಾಣುತ್ತಿತ್ತು. ನಿಧಾನವಾಗಿ ಅವಳ ಮೇಲೆ ಕತ್ತಲೆ ಮುಚ್ಚಿಕೊಳ್ಳತೊಡಗಿತು. ಪಲ್ಲವಿ ದುಃಖವನ್ನೆಲ್ಲ ನುಂಗಿಕೊಂಡು ಛಲ ಬಿಡದೆ ಜೀವನವನ್ನು ಎದುರಿಸಲು ಪ್ರಯತ್ನಿಸಿದಳು. ಕಣ್ಣು ಕಾಣದೆ ಸಾಮಾನುಗಳನ್ನು ಎಡುವುತ್ತಾ ಇನ್ನೂ ಹೆಚ್ಚು ಅವಮಾನಕ್ಕೆ ಒಳಗಾಗುತ್ತಿದ್ದಳು. ತಂದೆ ತಾಯಿ ಕರುಣೆಯಿಂದ ಕಂಡರೆ ಪದ್ಮ “ಇದು ಅವಳ ಗ್ರಹಚಾರ ನಾನೇನು ಮಾಡಲಿ” ಎಂದು ಅವಳನ್ನು ನಿರ್ಲಕ್ಷಿಸಿ ತಾನೇ ಹೆಚ್ಚು ಎಂಬಂತೆ ಮೆರೆಯುತ್ತಿದ್ದಳು.  
ಹೀಗೆ ಒಂದು ದಿನ ಪಲ್ಲವಿಯ ತಾಯಿಯ ಚಿಕ್ಕ ತಂಗಿ ಮಾಳವಿಕಾ ಅವರ ಮನೆಗೆ ಬಂದರು. ಅವರೊಡನೆ ಪಲ್ಲವಿಗೆ ತುಂಬಾ ಆತ್ಮೀಯವಾದ ಗೆಳೆತನ. ಪಲ್ಲವಿ ಅವರಿಗೆ “ಮಾಳು , ನನ್ನನ್ನು ಎಲ್ಲಾದರೂ ಹೊರಗೆ ಕರೆದುಕೊಂಡು ಹೋಗು”  ಎಂದು ಕೇಳಿದಳು. ಮಾಳವಿಕಾ ಒಪ್ಪಿ ಒಂದು ಆಟೋ ತಂದು ಅವರ ಮೆಚ್ಚಿನ ದರ್ಶಿನಿಗೆ ಕರೆದುಕೊಂಡು ಹೋದರು. ಒಂದು ದೋಸೆ ಮತ್ತು ಕಾಫಿಗೆ ಹೇಳಿ ಅವರಿಬ್ಬರು ಮಾತಿಗೆ ಕೂತರು. ಪಲ್ಲವಿಗೆ ತನ್ನ ಮನಸ್ಸನ್ನು ಬಿಚ್ಚಿಡಬೇಕಾಗಿತ್ತು ನನ್ನ ದುಃಖವನ್ನೆಲ್ಲ ಹೇಳಿಕೊಂಡಳು. “ ಈಗ ಕಣ್ಣು ಕಾಣಿಸದೆ ನಾನು ಬೇರೆಯವರಿಗೆ ಭಾರವಾಗಿದ್ದೇನೆ. ಪರಾವಲಂಬಿ ಅನಿಸುತ್ತಿದೆ” ಎಂದು ಕಣ್ಣಲ್ಲಿ ನೀರು ಹಾಕಿದಳು. ಅವಳ ನೋವನ್ನು ಕೇಳಿ ಮಾಳವಿಕಾ ಸಹ ನೊಂದಳು. ಹೇಗಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದಳು.“ ಯೋಚನೆ ಮಾಡಬೇಡ ಧೈರ್ಯವಾಗಿ ಎಲ್ಲವನ್ನು ಎದುರಿಸು. ನಿನ್ನ ಅಕ್ಕ ನಿನ್ನನ್ನು ನಿರ್ಲಕ್ಷಿಸಿದರೆ ಬೇಜಾರು ಮಾಡಿಕೊಳ್ಳಬೇಡ. ಭಗವಂತನಲ್ಲಿ ನಂಬಿಕೆ ಇಡು ಎಲ್ಲಾ ಸರಿ ಹೋಗುತ್ತದೆ. ನಿನ್ನ ಪ್ರಯತ್ನವನ್ನು ನೀನು ಬಿಡಬೇಡ” ಎಂದು ಪ್ರೀತಿಯಿಂದ ಸಮಾಧಾನದ ಮಾತುಗಳನ್ನು ಹೇಳಿದಳು. ನಂತರ ಬಹಳಷ್ಟು ಹೊತ್ತು ಹರಟೆ ಹೊಡೆದು ಮನೆಗೆ ಬಂದರು. 
      ಈ ವಿಷಯ ಮಾಳವಿಕಾ ಮರೆಯಲಿಲ್ಲ. ಅದರ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದರು. ಕೆಲವೇ ದಿನಗಳಲ್ಲಿ ಅವರಿಗೆ ಒಂದು ಹೊಸ ಜಾಗದ ಬಗ್ಗೆ ತಿಳಿಯಿತು. ಅದನ್ನು ಪೂರ್ತಿಯಾಗಿ ಓದಿಕೊಂಡು ಇದೇ ಪಲ್ಲವಿಗೆ ಸರಿ ಎನಿಸಿದಾಗ ಅವಳನ್ನು ಅಲ್ಲಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದಳು. 
ಮಾರನೆಯ ದಿನ ಸಾಯಂಕಾಲ ಪಲ್ಲವಿಯ ಮನೆಗೆ ಬಂದು ಅವಳ ತಾಯಿಗೆ “ ಪಲ್ಲವಿಯನ್ನು ಇವತ್ತು ನಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಹೋಗುತ್ತೇನೆ” ಎಂದು ಕೇಳಿದರು. ಅಲ್ಲೇ ಇದ್ದ ಪದ್ಮ, ರಾತ್ರಿ ಅವಳ ಗೆಳತಿಯರು ಬರುತ್ತಿದ್ದುದರಿಂದ ಪಲ್ಲವಿಯನ್ನು ನಿವಾರಿಸಿಕೊಳ್ಳಲು ಇದೇ ಒಳ್ಳೆಯ ಉಪಾಯ ಎಂದು “ ಓ ಧಾರಳವಾಗಿ ಮಾಳಿ, ಅವಳು ಇಲ್ಲಿ ಇದ್ದರೆ ರಾತ್ರಿ ನನ್ನ ಸ್ನೇಹಿತರು ಬಂದಾಗ ನನಗೆ ಒಂದು ರೀತಿಯ ಮುಜುಗರ. ಅವಳಿಗೂ ಕಷ್ಟ ಅಲ್ವಾ? ಕರೆದುಕೊಂಡು ಹೋಗು”  ಎಂದಳು. ಇದನ್ನು ಕೇಳಿ ಎಲ್ಲರಿಗೂ ಬೇಜಾರಾದರೂ ಮಾಳವಿಕಾ ಇದು ಒಂದು ರೀತಿ ಒಳ್ಳೆಯದೇ ಆಯಿತು ಎಂದುಕೊಂಡು ಪಲ್ಲವಿಯೊಡನೆ ಹೊರಟರು. ನಂತರ ತಾಯಿ ಪದ್ಮಳನ್ನು “ ಏನು ಮಾತೂಂತ ಆಡ್ತಿಯಾ? ಆ ಹುಡುಗಿ ಬೇಜಾರು ಮಾಡಿಕೊಳ್ಳಲ್ಲವೇ” ಎಂದು ತರಾಟೆಗೆ ತೆಗೆದುಕೊಂಡರು. ಪದ್ಮ ಕೇಳಿಸದವಳ ಹಾಗೆ ಹೊರಟು ಹೋದಳು. 
ಮಾಳವಿಕಾ ಮತ್ತು ಪಲ್ಲವಿ ಒಂದು ಅಪರೂಪದ ಜಾಗಕ್ಕೆ ಬಂದರು. ಅಲ್ಲಿಯ ಅನುಭವ ಪಲ್ಲವಿಗೆ ತುಂಬಾ ಇಷ್ಟವಾಯಿತು. ಅದು ಅವಳಲ್ಲಿ ಉತ್ಸಾಹವನ್ನು ಆತ್ಮವಿಶ್ವಾಸವನ್ನು ತುಂಬಿತು. ಅದನ್ನು ಮಾಳವಿಕಾ ಜೊತೆಯಲ್ಲೂ ಹಂಚಿಕೊಂಡಳು. ಅವಳಿಗೂ ತುಂಬಾ ಸಂತೋಷವಾಯಿತು. ಅಂದು ರಾತ್ರಿ ಅವಳು ಸಂತೋಷದಿಂದ ಮನೆಗೆ ಬಂದಳು. 
 ಮಾರನೆಯ ಬೆಳಗ್ಗೆ ಮಾಳವಿಕಾ ಮತ್ತು ಪಲ್ಲವಿ ಇಬ್ಬರೂ ಅವಳ ತಂದೆ ತಾಯಿಯರ ಜೊತೆ ಮಾತನಾಡಿ ಆ ವಿಶೇಷವಾದ ಜಾಗದ ಬಗ್ಗೆ ಹೇಳಿದರು. ಇದರಿಂದ ಪಲ್ಲವಿಗೆ ಆಗುವ ಉಪಯೋಗ ವಿವರಿಸಿದರು. ತಂದೆ ತಾಯಿಯರನ್ನು ಪಲ್ಲವಿ ಆ ಜಾಗಕ್ಕೆ ಸೇರಿ ತರಬೇತಿ ಪಡೆದು ಅಲ್ಲಿ ಕೆಲಸಕ್ಕೆ ಸೇರಲು ಒಪ್ಪಿಗೆ ಕೇಳಿದರು. ತಂದೆ ತಾಯಿ ಇದು ಮಗಳ ಅಭಿವೃದ್ಧಿಗೆ ಉಪಯೋಗ ಎಂದು ತಿಳಿದು ಪಲ್ಲವಿ ಸಂತೋಷವಾಗಿರುವುದು ಮುಖ್ಯ ಅವಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿ ಅದಕ್ಕೆ ಒಪ್ಪಿಕೊಂಡರು. ಪಲ್ಲವಿ ಅಲ್ಲಿಗೆ ಸೇರಿದಳು. 
ಅಲ್ಲಿಂದ ಪಲ್ಲವಿಯ ಜೀವನದ ಹೊಸ ಅಧ್ಯಾಯ ಶುರುವಾಯಿತು. ಪ್ರತಿದಿನ ಎದ್ದು ಉತ್ಸಾಹದಿಂದ ತಯಾರಾಗುವಳು. ಅವಳಿಗೆ ಒಂದು ಆಟೋ ಗೊತ್ತು ಮಾಡಿದ್ದರು. ಪ್ರತಿದಿನ ತರಬೇತಿ ಪಡೆಯಲು ಹೋಗತೊಡಗಿದಳು. ಕೆಲವೇ ದಿನಗಳಲ್ಲಿ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಲು ಕಲಿತಳು. ಇದರಿಂದ ಆತ್ಮವಿಶ್ವಾಸ ಹೆಚ್ಚಾಯಿತು. ತನ್ನ ಅಂಗವೈಕಲ್ಯದ ಬಗ್ಗೆ ಕೀಳರಿಮೆ ಪಡುತ್ತಿರಲಿಲ್ಲ. 
ಇವಳಲ್ಲಾದ ಬದಲಾವಣೆ ತಂದೆ ತಾಯಿಗೆ ಹರ್ಷ ತಂದಿತು. ಪದ್ಮ ನೋಡಿಯೂ ನೋಡದಂತೆ  ಇದ್ದಳು. ಪಲ್ಲವಿ ಅಕ್ಕನ ಬಗ್ಗೆಯ ಪ್ರೀತಿಯಿಂದ ಅವಳನ್ನು ಮಾತನಾಡಿಸಲು ಪ್ರಯತ್ನಿಸುತ್ತಿದ್ದಳು. ಅವಳಾದರೂ ಉತ್ತರ ಕೊಟ್ಟರೆ ಕೊಟ್ಟಳು ಇಲ್ಲದಿದ್ದರೆ ಇಲ್ಲ!  
ಒಮ್ಮೆ ಕಾಲೇಜಿನಿಂದ ಬಂದ ಪದ್ಮ, ಪಲ್ಲವಿ ಅವಳು ಯಾವಾಗಲೂ ಕುಳಿತಿರುವ ಜಾಗದಲ್ಲಿ ಇಲ್ಲ ಎಂದು ಗಮನಿಸಿ. ತಾಯಿಯನ್ನು ಕೇಳಿದಳು. ರಾಗಿಣಿ “ ಅವಳು ಹೊರಗೆ ಹೋಗಿದ್ದಾಳೆ. ಈಗ.....” ಇಂದು ಮುಂದುವರಿಸುವ ಹೊತ್ತಿಗೆ, “ಸರಿಸರಿ” ಎಂದು ತನ್ನ ಲೋಕದಲ್ಲಿ ತಲ್ಲೀನಲಾದವಳು ಅದರ ಬಗ್ಗೆ ಗಮನ ಕೊಡಲಿಲ್ಲ. ಅವಳಿಗೆ ಇದರಿಂದ ತನ್ನ ಮತ್ತು ತಂಗಿಯ ಸಂಬಂಧದಲ್ಲಿ ಒಡಕು ಮೂಡಿದೆ. ಪ್ರೀತಿ ಸ್ನೇಹ ಮಾಯವಾಗಿದೆ ಎಂದು ಅನಿಸಲೇ ಇಲ್ಲ. ಪಲ್ಲವಿ ಬೇರೆಯವರ ಸಹಾಯದ ಮೇಲೆ ಬದುಕಬೇಕು, ತಾನೇ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಕ್ಕ ಯೋಚಿಸುತ್ತಿದ್ದಳು. ತಾನು ಅವಳಿಗಿಂತ ಉತ್ತಮ ಮಟ್ಟದಲ್ಲಿರುವೆ, ಇನ್ನೇನು ಕೆಲಸಕ್ಕೆ ಸೇರುವೆ ಎಂದುಕೊಳ್ಳುತ್ತಿದ್ದಳು. ಇದರಿಂದ ಪಲ್ಲವಿ ಬಹಳ ನೊಂದು ತಾಯಿಯ ಬಳಿ ಹೇಳಿಕೊಂಡು ದುಃಖಿಸುತ್ತಿದ್ದಳು. 
 ತಿಂಗಳು ಕಳೆಯುವ ಹೊತ್ತಿಗೆ ಪಲ್ಲವಿ ತರಬೇತಿ ಮುಗಿಸಿ ಕೆಲಸಕ್ಕೆ ಸೇರಿದಳು. ತಂದೆ ಆ ಜಾಗದ ಬಗ್ಗೆ ಕುತೂಹಲದಿಂದ “ಒಮ್ಮೆ ನಮ್ಮನ್ನು ಕರೆದುಕೊಂಡು ಹೋಗಿ ತೋರಿಸು” ಎಂದು ಪಲ್ಲವಿಯನ್ನು ಕೇಳುತ್ತಿದ್ದರು.  ಅವಳು“ ಕೆಲವೇ ದಿನಗಳಲ್ಲಿ ಕರೆದುಕೊಂಡು ಹೋಗುತ್ತೇನೆ” ಎನ್ನುತ್ತಿದ್ದಳು. 
ತನ್ನ ಮೊದಲ ಸಂಬಳ ಪಡೆದು ಪಲ್ಲವಿ ಸಂತೋಷದಿಂದ ಮನೆಗೆ ಬಂದಳು. ಅಲ್ಲಿದ್ದ ತಂದೆ ತಾಯಿ ಅಕ್ಕನನ್ನು ಕುರಿತು “ ನಿಮಗೆಲ್ಲಾ ನಾಳೆ ರಾತ್ರಿ ಊಟ ಕೊಡಿಸಬೇಕು ಅಂತ ಇದ್ದೇನೆ. ಅದು ಒಂದು ವಿಶೇಷವಾದ ಜಾಗ. ದಯವಿಟ್ಟು ನೀವೆಲ್ಲ ಅಲ್ಲಿಗೆ ನಾಳೆ ಬನ್ನಿ” ಎಂದು ಆಹ್ವಾನಿಸಿ ಅದರ ವಿಳಾಸವನ್ನು ಹೇಳಿದಳು. ಎಲ್ಲರೂ ಒಪ್ಪಿದರು. 
     ಪಲ್ಲವಿ ಮೊದಲೇ ಹೋಗಿದ್ದರಿಂದ ಉಳಿದ ಮೂವರು ಆ ಜಾಗದ ವಿಳಾಸ ಹಿಡಿದು ಹೊರಟರು. ಅಲ್ಲಿ ಇಳಿದಾಗ ಅದೊಂದು ಊಟದ ರೆಸ್ಟೋರೆಂಟ್ ರೀತಿಯಲ್ಲಿ ಇತ್ತು. ಅದಕ್ಕೆ ಕತ್ತಲಿನಲ್ಲಿ ಸಂಭಾಷಣೆ ಎಂದು ಕರೆಯುತ್ತಿದ್ದರು. ಹೆಸರು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಅಲ್ಲಿದ್ದ ಸಹಾಯಕಿಯ ಬಳಿ ಹೆಸರು ನೊಂದಾಯಿಸಿಕೊಂಡರು. ಆಕೆ ಒಂದು ಬಟನ್ ಒತ್ತಿದಳು. ಒಳಗಿನ ಗಂಟೆ ಹೊಡೆದು ಕೊಂಡಾಗ ಅತಿಥಿಗಳ ಸಹಾಯಕಿಯಾಗಿ ಪಲ್ಲವಿ ಹೊರಗೆ ಬಂದಳು. ಬಂದವರು ಇವಳ ಕುಟುಂಬದವರೆಂದು ತಿಳಿದು ಮುಗುಳ್ನಕ್ಕಳು. ನಂತರ ಒಳಗೆ ಕರೆದುಕೊಂಡು ಹೋದಳು. 
ಒಳಗೆ ಬಂದ ಕೂಡಲೇ ಹೊರಗಿನ ಬಾಗಿಲು ಮುಚ್ಚಿತು. ಒಳಗೆ ಕಗ್ಗತ್ತಲು !!! 
ಸುತ್ತಲಿನ ಗುಸುಗುಸು ಶಬ್ದದಿಂದ ಸುತ್ತಲೂ ಜನರಿರುವುದು ತಿಳಿಯುತ್ತಿತ್ತು. ಪಲ್ಲವಿ ತಾಯಿಯ ಕೈಯನ್ನು ತೆಗೆದು ತನ್ನ ಭುಜದ ಮೇಲಿಟ್ಟುಕೊಂಡು, ಉಳಿದವರಿಗು ಹಾಗೆಯೇ ಭುಜ ಹಿಡಿಯಲು ಹೇಳಿದಳು. ಈಗ ಅವರು ಒಂದು ಸಾಲಿನಲ್ಲಿ ನಿಧಾನವಾಗಿ ಕತ್ತಲಿನಲ್ಲಿ ತಮ್ಮ ಮೇಜಿನ ಬಳಿಗೆ ನಡೆಯತೊಡಗಿದರು. ಪದ್ಮ ಎಲ್ಲರಿಗಿಂತ ಹೆಚ್ಚು ಹೆದರಿದ್ದಳು. ಆಗಾಗ ಕಿರಿಚುತ್ತಿದ್ದಳು. ಕತ್ತಲೆಯ ಪ್ರಯಾಣ ಮುಗಿಯದ ಪ್ರಯಾಣದಂತೆ ಭಾಸವಾಯಿತು. 
 ಕೊನೆಗೂ ಅಡೆತಡೆಗಳನ್ನು ಬಳಸಿಕೊಂಡು ಬಂದು ಅವರ ಮೇಜಿನ ಬಳಿಗೆ ಬಂದು ನಿಂತರು. ಪಲ್ಲವಿ ತಾಯಿಗೆ “ ಅಮ್ಮ ನೀವು ಇಲ್ಲಿ ಕುಳಿತುಕೊಳ್ಳಿ. ನಂತರ ಎರಡು ಕುರ್ಚಿ ಪಕ್ಕಕ್ಕೆ ಸರಿಯಿರಿ” ಎಂದು ಹೇಳಿ ತಾಯಿಗೆ ಕುಳಿತುಕೊಳ್ಳಲು ಸಹಾಯ ಮಾಡಿದಳು. ರಾಗಿಣಿ ಕೈತಡವುತ್ತಾ ಕುಳಿತು ಎರಡು ಕುರ್ಚಿ ಪಕ್ಕಕ್ಕೆ ಸೇರಿದಳು. ಅವರಾದ ಮೇಲೆ ಪದ್ಮ ಅವಳು ಕೈತಡವುತ್ತಾ ಕುಳಿತು ಮುಂದಿನ ಕುರ್ಚಿಗೆ ಸರಿದಳು. ಕೊನೆಗೆ ತಂದೆ ಕುಳಿತರು. ಎಲ್ಲರೂ ಕುಳಿತ ಮೇಲೆ ಪದ್ಮ ಕೈಚಾಚಿ ಎಷ್ಟು ದೂರದಲ್ಲಿದ್ದಾರೆ ಎಂದು ತಿಳಿಯಲು ಪ್ರಯತ್ನಿಸಿದಳು. ಕೈಗೆ ಎಟುಕುವಂತೆಯೇ ಇದ್ದರು ಇನ್ನೊಬ್ಬರ ಇರುವ ತಿಳಿಯುತ್ತಿರಲಿಲ್ಲ. 
      ಪಲ್ಲವಿ ಸಂತೋಷದಿಂದ ಮಾತನಾಡುತ್ತಿದ್ದಳು. ಉಳಿದವರು ಉಸಿರು ಬಿಗಿ ಹಿಡಿದವರಂತೆ ಕುಳಿತಿದ್ದರು. “ ಏನು ಊಟ ಮಾಡುತ್ತೀರಿ?” ಪಲ್ಲವಿ ಕೇಳಿದಳು. ಯಾರೂ ಉತ್ತರಿಸಲಿಲ್ಲ. ಆ ಗಾಢವಾದ ಕತ್ತಲೆ ಅವರನ್ನು ಆವರಿಸಿರುವಂತೆ ಕುಳಿತಿದ್ದರು. “ ತಟ್ಟೆಯ ಊಟ ಹೇಳುವೆ, ಅದರಲ್ಲಿ ಎಲ್ಲಾ ಬಗೆಯೂ ಇರುತ್ತದೆ” ಎಂದು ಪಲ್ಲವಿ ಹೇಳಿ ಹೋದಳು.
 ಕತ್ತಲೆಯಲ್ಲಿ ಮೂವರು ಮೂಕರಾಗಿ ಕುಳಿತಿದ್ದರು. ನಿಮಿಷಗಳು ವರ್ಷಗಳಂತೆ ಭಾಸವಾಯಿತು. ಕೊನೆಗೆ ಪಲ್ಲವಿ ಬಂದು “ಊಟ ಬಂದಿದೆ” ಎಂದಾಗ ಅವಳ ಧ್ವನಿ ಅವರಿಗೆ ಧೈರ್ಯದ ಒಂದು ಸಂದೇಶ ಕೊಟ್ಟಿತು.  ಎಲ್ಲಾ ತಟ್ಟೆಗಳನ್ನು ಅವರ ಮುಂದೆ ಇಡಲಾಯಿತು. ಅದರಲ್ಲಿದ್ದ ಅಡುಗೆಗಳನೆಲ್ಲಾ ವಿವರಿಸಿ ಪಲ್ಲವಿ “ಪ್ರದಕ್ಷಿಣಾಕಾರವಾಗಿ ಮೇಲಿನಿಂದ ತಿನ್ನಲು ಪ್ರಾರಂಭಿಸಿ . ಮಧ್ಯದಲ್ಲಿ ಕೈ ಇಟ್ಟರೆ ಕೆಲವು ಪದಾರ್ಥಗಳು ತಿನ್ನದೇ ಉಳಿಯಬಹುದು” ಎಂದು ತಿನ್ನುವ ರೀತಿ ವಿವರಿಸಿದಳು. ಎಲ್ಲಿ ಏನು ಬೀಳಿಸುವೆವೋ??!! , ಏನು ಚೆಲ್ಲುವೆವೋ ??!! ಊಟ ಬಾಯಿಗೆ ಹೋಗುತ್ತದೆಯೋ ??!! ಎಂದೆಲ್ಲಾ ಆತಂಕದಿಂದ ಯೋಚಿಸುತ್ತಾ ಮೂವರು ಊಟ ಮಾಡಿದರು. ಪಲ್ಲವಿ ಎಲ್ಲರನ್ನು ಮಾತನಾಡಿಸುತ್ತಿದ್ದರೂ “ ಹಾ , ಹೂಂ, ಹೌದು , ಸರಿ” ಅಷ್ಟರಲ್ಲಿ ಅವರ ಮಾತುಗಳು ಮುಗಿಯುತ್ತಿದ್ದವು.‌
 ಕಣ್ಣು ಕಾಣದವರಿಗೆ ಬೇರೆ ಇಂದ್ರಿಯಗಳು ಚುರುಕಾಗಿ ಇರುತ್ತದೆ ಎಂದು ಎಲ್ಲರೂ ಓದಿರುತ್ತಾರೆ. ಪಲ್ಲವಿಯ ತಂದೆ ತಾಯಿ ಮತ್ತು ಪದ್ಮಳಿಗೆ ಊಟದ ವಾಸನೆ ಆಗಲಿ,  ರುಚಿಯಾಗಲಿ ತಿಳಿಯಲಿಲ್ಲ. ಅವರ ಗಮನ ಕಷ್ಟಪಟ್ಟು ತಿನ್ನುವುದರಲ್ಲಿ ಇದ್ದಿದ್ದರಿಂದಲೋ ಏನೋ!! 
ಊಟದ ನಂತರ ಬಟ್ಟಲಿನಲ್ಲಿ ನೀರು ಮತ್ತು ನಿಂಬೆಹಣ್ಣು ಕೊಟ್ಟು ಕೈ ತೊಳೆಯಲು ಸಹಾಯ ಮಾಡಿದಳು. ಕೈ ವರೆಸಿಕೊಳ್ಳಲು ಬಟ್ಟೆ ಸಹ ಬಂತು. “ ಇನ್ನು ಹೊರಡೋಣ” ಎಂದಳು ಪಲ್ಲವಿ. “ಆದರೆ ಹಣ ಕೊಡಬೇಕಲ್ಲ?!!” ತಂದೆ ಕೇಳಿದರು. “ ಇಲ್ಲ ಇದು ನನ್ನ ಟ್ರೀಟ್!!” ನಗುತ್ತಾ ಪಲ್ಲವಿ ಹೇಳಿದಳು. 
 ಎಲ್ಲರನ್ನೂ ಎಬ್ಬಿಸಿ ಹಿಂದಿನಂತೆಯೇ ಸಾಲು ಮಾಡಿ ಹೊರಗೆ ಕರೆದುಕೊಂಡು ಹೋದಳು. ಬೆಳಕಿಗೆ ಬಂದಾಗ ಕಣ್ಣು ಬಿಡಲು ಸಾಕಷ್ಟು ಸಮಯವೇ ಬೇಕಾಯಿತು!! 
     ಪದ್ಮಳಿಗೆ ಪಲ್ಲವಿಯ ಜೀವನದಲ್ಲಿ ಒಂದು ಗಂಟೆ ಕಳೆದಂತೆ ಅನಿಸಿತು!!! ಎಷ್ಟು ಕಷ್ಟ ಇದ್ದರೂ ತನ್ನನ್ನು ಪ್ರೀತಿಸುವ , ಛಲ ಬಿಡದೆ ಏನಾದರೂ ಸಾಧಿಸಬೇಕು ಎಂದಿರುವ ತಂಗಿಯ ಬಗ್ಗೆ ಹೃದಯ ತುಂಬಿ ಬಂತು. ತಾನು ಎಂತಹ ತಪ್ಪು ಮಾಡಿದೆ ಎಂದು ಪದ್ಮಳಿಗೆ ಪಶ್ಚಾತಾಪವಾಯಿತು. 
ತಂದೆ ತಾಯಿ ಪಲ್ಲವಿಯ ಕೆಲಸವನ್ನೂ ಮತ್ತು ತಮ್ಮ ಕತ್ತಲಿನ ಅನುಭವದನ್ನು ಸಂತೋಷದಿಂದ ಹಂಚಿಕೊಳ್ಳುತ್ತಿದ್ದರು. ಪದ್ಮ ತಂಗಿಯ ಬಳಿಗೆ ಬಂದು ಅವಳನ್ನು ಬರ ಸೆಳೆದು ಒಪ್ಪಿದಳು. “ ತಂಗಿ ನನ್ನ ತಪ್ಪನ್ನು ಕ್ಷಮಿಸು ನಾನು ಇನ್ನು ಮುಂದೆ ನಿನ್ನ ಜೊತೆಗೆ ಒಳ್ಳೆಯ ರೀತಿಯಲ್ಲಿ ನಡೆದು ಕೊಳ್ಳುವೆ” ಎಂದು ಕೇಳಿಕೊಂಡಳು. ಎರಡು ಮನಸ್ಸುಗಳೂ ದೇಹದಂತೆ ಒಂದಾಗಿ ಸಂಬಂಧವು ಬೆಸೆಯ ತೊಡಗಿತು.

 

-ಅಂಬಿಕ ರಾವ್ 
ಬೆಂಗಳೂರು