ಸಂಸ್ಕೃತಕ್ಕೆ ಎರಡನೆಯ ಜ್ಞಾನಪೀಠ ಪ್ರಶಸ್ತಿಯ ಗರಿ

     ಜ್ಞಾನಪೀಠ ಪ್ರಶಸ್ತಿಯು ಭಾರತೀಯ ಭಾಷೆಗಳ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ಸಾಹಿತಿಗೆ ನೀಡುವ ಪ್ರಶಸ್ತಿಯಾಗಿದೆ. 
     ಈ ಪ್ರಶಸ್ತಿಯನ್ನು ಕೇಂದ್ರ ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ಸಹ ಜನರಲ್ಲಿ ವ್ಯಾಪಕವಾಗಿ ಹರಡಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು

ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈ ಟ್ರಸ್ಟ್ ಇಂದ 1965 ರಲ್ಲಿ ಮಲಯಾಳಂ ಭಾಷೆಯ ಸಾಹಿತಿ ಜಿ. ಶಂಕರ್ ಕುರುಪ್ ಅವರಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ನೀಡಲಾಗಿತ್ತು.
     ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.
ಸಂಸ್ಕೃತ ಭಾಷಾ ಸಾಹಿತ್ಯದಲ್ಲಿ ಇಲ್ಲಿಯ ವರೆಗೆ ಪ್ರೊ. ಸತ್ಯವ್ರತ ಶಾಸ್ತ್ರಿ ಅವರು 2006 ರ ಜ್ಞಾನಪೀಠ ಪ್ರಶಸ್ತಿ ವಿಜೇತ ಪ್ರಥಮ ಸಾಹಿತಿ ಆಗಿದ್ದರು. ಸತ್ಯವ್ರತ ಶಾಸ್ತ್ರಿ ಸಂಸ್ಕೃತದ ಒಬ್ಬ ವಿದ್ವಾಂಸರು. ಅವರು ನವದೆಹಲಿಯ ಜವಾಹರಲಾಲ್ 
ನೆಹರು ವಿಶ್ವವಿದ್ಯಾನಿಲಯದಲ್ಲಿನ ಸಂಸ್ಕೃತ ಅಧ್ಯಯನದ ವಿಶೇಷ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದರು. ಅವರು ಸಂಸ್ಕೃತದಲ್ಲಿ ಅನೇಕ ಕಾವ್ಯಕೃತಿಗಳನ್ನು ರಚಿಸಿದ್ದಾರೆ. ಅರ್ಹವಾಗಿಯೇ ಇವರಿಗೆ 2006 ನೆಯ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು 2008 ನೆಯ ಇಸವಿಯಲ್ಲಿ ನೀಡಿ ಗೌರವಿಸಲಾಗಿತ್ತು. 
     ಈ ವರ್ಷ 2023 ರ ಸಾಲಿಗಾಗಿ ಸಂಸ್ಕೃತ ವಿದ್ವಾಂಸ ರಾಮಭದ್ರಾಚಾರ್ಯ ಅವರನ್ನು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉರ್ದು ಕವಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
     ಚಿತ್ರಕೂಟದಲ್ಲಿ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ರಾಮಭದ್ರಾಚಾರ್ಯರು ಹೆಸರಾಂತ ಹಿಂದೂ ಆಧ್ಯಾತ್ಮಿಕ ನಾಯಕ, ಶಿಕ್ಷಣತಜ್ಞ ಮತ್ತು ನಾಲ್ಕು ಮಹಾಕಾವ್ಯಗಳು ಸೇರಿದಂತೆ 240 ಕ್ಕೂ ಹೆಚ್ಚು ಗ್ರಂಥಗಳು ಮತ್ತು ಪಠ್ಯಗಳ ಬರಹಗಾರರಾಗಿದ್ದಾರೆ.
     ಇವರು ಹುಟ್ಟಿದ್ದು 1950ರಲ್ಲಿ. ಹುಟ್ಟೂರು ಉತ್ತರಪ್ರದೇಶದ ಜೌನ್‌ಪುರದ ಖಾಂಡಿ ಖುದ್‌ರ್‍ ಗ್ರಾಮದಲ್ಲಿ. ಎರಡು ತಿಂಗಳು ಶಿಶುವಾಗಿದ್ದಾಗಲೇ ಕಣ್ಣಿನಲ್ಲಿ ಟ್ರಕೋಮ (ರೆಪ್ಪೆಯ ಒಳಭಾಗದಲ್ಲಿ ಗುಳ್ಳೆಗಳು) ಕಾಣಿಸಿಕೊಂಡಿತು. ಹಳ್ಳಿ ವೈದ್ಯೆಯೊಬ್ಬರು ಕಣ್ಣಿಗೆ ಯಾವುದೋ ಮಿಶ್ರಣ ಹಾಕಿದ್ದರಿಂದ ಕಣ್ಣುಗಳು ಶಾಶ್ವತವಾಗಿ ನಿಸ್ತೇಜವಾದವು. ಅಲ್ಲಿಂದ ಅವರು ಶಾಶ್ವತ ಕುರುಡರಾದರು. ಆದರೆ ಛಲ ಮಾತ್ರ ಬಿಡಲಿಲ್ಲ. 
ರಮಾನಂದ ಪಂಥದ ಪ್ರಸ್ತುತ ನಾಲ್ವರು ಜಗದ್ಗುರು ರಮಾನಂದಾಚಾರ್ಯರಲ್ಲಿ ರಾಮಭದ್ರಾಚಾರ್ಯರು ಒಬ್ಬರು ಮತ್ತು 1982 ರಿಂದ ಈ ಸ್ಥಾನವನ್ನು ಹೊಂದಿದ್ದಾರೆ.
     ಇವರು 22 ಭಾಷೆಗಳನ್ನು ಮಾತನಾಡುವ ಬಹುಭಾಷಾ ಕೋವಿದರು. ರಾಮಭದ್ರಾಚಾರ್ಯರು ಸಂಸ್ಕೃತ, ಹಿಂದಿ, ಅವಧಿ ಮತ್ತು ಮೈಥಿಲಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಕವಿ ಮತ್ತು ಬರಹಗಾರರಾಗಿದ್ದಾರೆ.ನಾಲ್ಕು ಮಹಾಕಾವ್ಯಗಳು (ಸಂಸ್ಕೃತದಲ್ಲಿ ಎರಡು ಮತ್ತು ಹಿಂದಿಯಲ್ಲಿ ಎರಡು), ರಾಮಚರಿತಮಾನಸದ ಬಗ್ಗೆ ಹಿಂದಿ ವ್ಯಾಖ್ಯಾನ, ಅಷ್ಟಾಧ್ಯಾಯಿಯ ಬಗ್ಗೆ ಕಾವ್ಯಾತ್ಮಕ ಸಂಸ್ಕೃತ ವ್ಯಾಖ್ಯಾನ ಮತ್ತು ಪ್ರಸ್ಥಾನತ್ರಯಿ (ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು ಉಪನಿಷತ್ತುಗಳು) ವ್ಯಾಖ್ಯಾನ ಸೇರಿದಂತೆ 240 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. 
2015 ರಲ್ಲಿ ಅವರು ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದಿದ್ದರು.

 

-ಡಾ.ಪ್ರಸನ್ನಕುಮಾರ ಐತಾಳ್
ಮುಖ್ಯಸ್ಥರು, ಸಂಸ್ಕೃತ ಭಾಷಾ ವಿಭಾಗ,
ಎಸ್.ಡಿ.ಎಮ್. ಪದವಿಪೂರ್ವ ಕಾಲೇಜು, ಉಜಿರೆ